ETV Bharat / state

ಮೈಸೂರು: ಅಜ್ಜಿಯ ತಿಥಿಗೆ ಬಂದಿದ್ದ ಕುಟುಂಬಸ್ಥರು.. ನಾಲೆಯಲ್ಲಿ ಮುಳುಗಿ ಅಪ್ಪ, ಅಮ್ಮ, ಮಗಳು ಸಾವು

author img

By ETV Bharat Karnataka Team

Published : Oct 1, 2023, 8:24 AM IST

Updated : Oct 1, 2023, 12:45 PM IST

ದಂಪತಿ ಮತ್ತು ಮಗಳು ನಾಲೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸರಗೂರು ತಾಲೂಕಿನ ಚಂಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೈಸೂರಲ್ಲಿ ಕೆರೆಯಲ್ಲಿ ಮುಳುಗಿ ಸಾವು
ಮೈಸೂರಲ್ಲಿ ಕೆರೆಯಲ್ಲಿ ಮುಳುಗಿ ಸಾವು

ಮೈಸೂರು: ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋಗಿ, ತಂದೆ ತಾಯಿ ಸೇರಿದಂತೆ ಮೂವರು ನೀರುಪಾಲಾಗಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಸರಗೂರು ತಾಲೂಕಿನ ಚಂಗೌಡನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.

ಮೃತರನ್ನು ಚಂಗೌಡನಹಳ್ಳಿ ಗ್ರಾಮದ ಮಹಮ್ಮದ್ ಕಪಿಲ್ (42), ಶಾವರಭಾನು (35), ಶಾಹೀರಾಭಾನು (20) ಎಂದು ಗುರುತಿಸಲಾಗಿದೆ. ಚಂಗೌಡನಹಳ್ಳಿ ಮೂಲದ ಇವರು ಬೆಂಗಳೂರಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ವಾಸವಾಗಿದ್ದರು. ತಮ್ಮ ಕುಟುಂಬದ ಅಜ್ಜಿಯೊಬ್ಬರ ತಿಥಿ ಕಾರ್ಯಕ್ಕಾಗಿ ಗ್ರಾಮಕ್ಕೆ ಬಂದಿದ್ದರು. ತಿಥಿ ಕಾರ್ಯ ಮುಗಿಸಿ ಶನಿವಾರ ನುಗು ಜಲಾಶಯದ ಬಲದಂಡೆ ನಾಲೆಯಲ್ಲಿ ಕೈ ಕಾಲು ತೊಳೆಯಲು ಹೋದಾಗ ದುರ್ಘಟನೆ ನಡೆದಿದೆ.

ನಾಲೆಯಲ್ಲಿ ಕೈ ಕಾಲು ತೊಳೆದುಕೊಳ್ಳುವಾಗ ಶಾಹೀರಾಭಾನು ಮೊದಲಿಗೆ ಕಾಲು ಜಾರಿ ಬಿದ್ದಿದ್ದರು. ಇದನ್ನು ನೋಡಿದ ತಂದೆ ಮಹಮ್ಮದ್ ಕಪೀಲ್ ಮತ್ತು ತಾಯಿ ಶಾವರಭಾನು ಅವರು ಮಗಳ ರಕ್ಷಣೆಗೆ ನಾಲೆಗಿಳಿದಿದ್ದರು. ಆದರೆ ನೀರಿನ ರಭಸಕ್ಕೆ ಸಿಲುಕಿ ಮೂವರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಸರಗೂರು ಠಾಣೆ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿ, ನಾಲೆಯಿಂದ ಮೂವರ ಮೃತದೇಹಗಳನ್ನು ಹೊರಕ್ಕೆ ತೆಗೆದರು. ಸರಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಿಂದ ತಿಥಿಗೆ ಬಂದಿದ್ದ ಅಪ್ಪ, ಅಮ್ಮ ಮತ್ತು ಮಗಳು: ಮಹಮ್ಮದ ಕಪಿಲ್, ಶಾವರಭಾನು ದಂಪತಿಯು ಮಗಳು ಶಾಹೀರಾಭಾನು ಜೊತೆ ಬೆಂಗಳೂರಿನ ಜಯನಗರದಲ್ಲಿ ವಾಸವಾಗಿದ್ದರು. ತಮ್ಮ ಕುಟುಂಬದ ಅಜ್ಜಿಯ ತಿಥಿ ಕಾರ್ಯಕ್ಕಾಗಿ ಬೆಂಗಳೂರಿನಿಂದ ಗ್ರಾಮಕ್ಕೆ ಆಗಮಿಸಿದ್ದರು. ಶನಿವಾರ ತಿಥಿ ಕಾರ್ಯ ಮುಗಿಸಿ ನಾಲೆಯಲ್ಲಿ ಮುಖ ತೊಳೆದುಕೊಳ್ಳುವಾಗ ದುರಂತ ಸಂಭವಿಸಿದೆ. ಮೂವರನ್ನು ಕಳೆದಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ.

ಇದನ್ನೂ ಓದಿ: ಶಿವಮೊಗ್ಗ: ತುಂಗಾ ನದಿಯಲ್ಲಿ ಮೀನು‌ ಹಿಡಿಯಲು ಹೋದ ಇಬ್ಬರು ಯುವಕರು‌ ನೀರುಪಾಲು

ದಾವಣಗೆರೆಯಲ್ಲಿ ತಂದೆ-ಮಗ ನೀರುಪಾಲು: ಪಿಕ್​ನಿಕ್​ಗೆ ಬಂದಿದ್ದ ತಂದೆ, ಮಗ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂನಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆ ಕಳೆದ ವಾರ ನಡೆದಿತ್ತು. ಮಿಟ್ಲಕಟ್ಟೆ ಗ್ರಾಮದ ಚಂದ್ರು (42), ಶೌರ್ಯ(9) ಮೃತರು. ರಜೆ ಹಿನ್ನೆಲೆಯಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ಚಂದ್ರು ಡ್ಯಾಂ ನೋಡಲು ಬಂದಿದ್ದರು. ಈ ವೇಳೆ ಇಬ್ಬರು ಮಕ್ಕಳು ಈಜಲು ತೆರಳಿದ್ದಾಗ ನೀರಿನ ಸುಳಿಗೆ ಸಿಲುಕಿದ್ದರು. ಆಗ ಚಂದ್ರು ಓರ್ವ ಪುತ್ರನನ್ನು ರಕ್ಷಿಸಿದ್ದರು. ಇನ್ನೊಬ್ಬನ ರಕ್ಷಣೆ ವೇಳೆ ಅವರು ಕೂಡ ಮುಳುಗಿದ್ದರು.

Last Updated : Oct 1, 2023, 12:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.