ETV Bharat / state

ಮೈಸೂರು: ಲಿಂಗಾಂಬುಧಿ ಸಸ್ಯ ಶಾಸ್ತ್ರೀಯ ತೋಟ‌ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Oct 25, 2023, 5:18 PM IST

ಮೈಸೂರಿನಲ್ಲಿ ಕರ್ನಾಟಕದ 4ನೇ ಸಸ್ಯ ಶಾಸ್ತ್ರೀಯ ತೋಟವನ್ನು ಬುಧವಾರ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

ಲಿಂಗಾಂಬುಧಿ ಸಸ್ಯ ಶಾಸ್ತ್ರೀಯ ತೋಟ‌
ಲಿಂಗಾಂಬುಧಿ ಸಸ್ಯ ಶಾಸ್ತ್ರೀಯ ತೋಟ‌

ಮೈಸೂರು: ಇಲ್ಲಿನ ರಾಮಕೃಷ್ಣ ನಗರದಲ್ಲಿರುವ ತೋಟಗಾರಿಕಾ ಇಲಾಖೆಯ ಲಿಂಗಾಂಬುಧಿ ಸಸ್ಯ ಶಾಸ್ತ್ರೀಯ ತೋಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ‌ ಉದ್ಘಾಟಿಸಿದ್ದಾರೆ. ಲಿಂಗಾಂಬುಧಿ ಸಸ್ಯ ಶಾಸ್ತ್ರೀಯ ತೋಟವು 15 ಎಕರೆ ವಿಸ್ತೀರ್ಣ ಹೊಂದಿದೆ. 2012ರಲ್ಲಿ ಇದರ ಕಾಮಗಾರಿ ಆರಂಭಗೊಂಡಿದ್ದು, 2023ರಲ್ಲಿ ಪೂರ್ಣಗೊಂಡಿದೆ.

ತೋಟದ ಒಟ್ಟಾರೆ ಅಭಿವೃದ್ಧಿ ಮತ್ತು ನಿರ್ವಹಣೆ ವೆಚ್ಚ 5.60 ಕೋಟಿ ರೂ. ಗಳಾಗಿದ್ದು, ಒಟ್ಟು 290 ಸಸ್ಯ ಪ್ರಭೇದಗಳನ್ನು ಇಲ್ಲಿ ಕಾಣಬಹುದು. ಬೆಂಗಳೂರಿನ ಲಾಲ್‌ಬಾಗ್ ಒಳಗೊಂಡಂತೆ ತೋಟಗಾರಿಕೆ ಇಲಾಖೆ ಅಭಿವೃದ್ಧಿಪಡಿಸಿರುವ ಕರ್ನಾಟಕದ ನಾಲ್ಕನೇ ಸಸ್ಯಶಾಸ್ತ್ರೀಯ ತೋಟ ಇದು. ಮೈಸೂರು ನಗರ ಮತ್ತು ಜಿಲ್ಲೆಯ ಪ್ರಪ್ರಥಮ ಸಸ್ಯ ಶಾಸ್ತ್ರೀಯ ತೋಟವೆಂಬ ಹೆಗ್ಗಳಿಕೆ ಈ ತೋಟಕ್ಕಿದೆ.

ದೇಶ, ವಿದೇಶದ ಸಸ್ಯ ಪ್ರಭೇದಗಳ ಪರಿಚಯವನ್ನು ಸ್ಥಳೀಯ ವಾತಾವರಣಕ್ಕೆ ಒಗ್ಗಿಸುವಿಕೆ, ಸಂರಕ್ಷಣೆ, ಸಸ್ಯಾಭಿವೃದ್ಧಿ ಮತ್ತು ಪ್ರಸರಣ ಕೈಗೊಳ್ಳುವುದು, ಸ್ಥಳೀಯ ಸಸ್ಯ ಪ್ರಭೇದಗಳು ಅಪರೂಪದ ಅಳಿವಿನಂಚಿನಲ್ಲಿರುವ ಹಾಗೂ ವಿನಾಶದ ಅಂಚಿನಲ್ಲಿರುವ ಸಸ್ಯ ಪ್ರಭೇದಗಳ ಪರಿಚಯ, ಸಂರಕ್ಷಣೆ ಮತ್ತು ಸಸ್ಯಾಭಿವೃದ್ಧಿಯೊಂದಿಗೆ ಪ್ರಾಣಿ ಮತ್ತು ಪಕ್ಷಿ ಸಂಕುಲಕ್ಕೆ ವಿಶೇಷ ಒತ್ತು ನೀಡುವುದು. ವಿವಿಧ ಸಸ್ಯ ಪ್ರಭೇದಗಳ ನಿಖರ ಗುರುತಿಸುವಿಕೆ ಮತ್ತು ದಾಖಲಾತಿಗಾಗಿ ಹರ್ಬೇರಿಯಂ ಸ್ಥಾಪಿಸುವುದು. ಸಸ್ಯ ಪ್ರಭೇದಗಳ ಸಮಗ್ರ ಮಾಹಿತಿ ದಾಖಲಿಸುವ ವೈಜ್ಞಾನಿಕ ಸಸ್ಯ ಕೇಂದ್ರವನ್ನಾಗಿಸುವುದು, ಸಸ್ಯ ಪ್ರಭೇದಗಳ ಬಗ್ಗೆ ಅಭ್ಯಸಿಸಲು ವಿದ್ಯಾರ್ಥಿಗಳು, ಪರಿಸರಪ್ರಿಯರು, ಸಸ್ಯ ಶಾಸ್ತ್ರೀಯ ಆಸಕ್ತರು, ಸಸ್ಯ ವರ್ಗೀಕರಣ ಆಸಕ್ತರಿಗೆ ವೈಜ್ಞಾನಿಕ ವೇದಿಕೆಯನ್ನು ಕಲ್ಪಿಸುವುದು ಈ ಸಸ್ಯ ಶಾಸ್ತ್ರೀಯ ತೋಟದ ಮೂಲ ಉದ್ದೇಶವಾಗಿದೆ.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ, ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ವಿಧಾನಸಭಾ ಶಾಸಕರಾದ ಜಿ.ಟಿ.ದೇವೇಗೌಡ, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಮತ್ತೊಂದೆಡೆ, ನಗರದ ಟಿ.ಕೆ.ಲೇಔಟ್​ನಲ್ಲಿರುವ ತಮ್ಮ ನಿವಾಸದಲ್ಲಿ​ ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುವ ವಿಚಾರದ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ, ಈ ಬಗ್ಗೆ ನನಗೆ ಗೊತ್ತಿಲ್ಲ. ಈ ಕುರಿತಂತೆ ನನ್ನೊಂದಿಗೆ ಡಿ.ಕೆ.ಶಿವಕುಮಾರ್ ಚರ್ಚೆ ಮಾಡಿಲ್ಲ. ನನಗೆ ಅವರ ಮೈಂಡ್​ನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ರಾಮನಗರದ ವಿಚಾರದಲ್ಲಿ ಅವರನ್ನೇ ಕೇಳಿ. ಗೊತ್ತಿಲ್ಲದ ವಿಚಾರಗಳ ಬಗ್ಗೆ ಹೆಚ್ಚಾಗಿ ಮಾತನಾಡಬಾರದು ಎಂದರು.

ಇದನ್ನೂ ಓದಿ: ರಾಮನಗರ ಬೆಂಗಳೂರಿಗೆ ಸೇರಿಸುವ ವಿಚಾರ ನನಗೆ ಗೊತ್ತಿಲ್ಲ : ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.