ಶತಮಾನೋತ್ಸವ ಸಂಭ್ರಮದಲ್ಲಿ ಪಾರಂಪರಿಕ ಲಲಿತ ಮಹಲ್ ಹೋಟೆಲ್: ಇಲ್ಲಿದೆ ಭವ್ಯ ಅರಮನೆಯ ಇತಿಹಾಸ, ವೈಶಿಷ್ಟ್ಯತೆ

author img

By

Published : Nov 19, 2021, 4:13 PM IST

lalitha-mahal-palace

ಪಾಶ್ಚಿಮಾತ್ಯ ಶೈಲಿ ಹಾಗೂ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ವೈಭವೋಪೇತ ಲಲಿತ ಮಹಲ್ ಅರಮನೆ (Lalitha Mahal Palace) ಪ್ರವಾಸಿಗರ ಮೆಚ್ಚಿನ ಸ್ಥಳವಾಗಿದೆ. ರಾಷ್ಟ್ರಪತಿ ಅಬ್ದುಲ್ ಕಲಾಂ ಸೇರಿದಂತೆ ಇತರ ಗಣ್ಯರು ಉಳಿದುಕೊಂಡ ಸ್ಥಳ ಇದು.

ಮೈಸೂರು: ರಾಜಮನೆತನದವರು ನಿರ್ಮಿಸಿರುವ ಸಾಂಸ್ಕೃತಿಕ ನಗರಿಯ ಪಾರಂಪರಿಕ ಐಷಾರಾಮಿ ಹೋಟೆಲ್ ಲಲಿತ ಮಹಲ್​ಗೆ ಈಗ ಶತಮಾನೋತ್ಸವ (Centenary celebration of Lalitha Mahal Palace) ಸಂಭ್ರಮ.

lalitha mahal palace
ಲಲಿತ್ ಮಹಲ್ ಅರಮನೆಯ ಸೌಂದರ್ಯ

ಮೈಸೂರು ರಾಜಮನೆತನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ (Nalwadi Krishnaraja Wodeyar) ಅವರು 1921ರಲ್ಲಿ ಮೈಸೂರಿಗೆ ಆಗಮಿಸುತ್ತಿದ್ದ ವೈಸ್‌ರಾಯ್ ಹಾಗೂ ರಾಜಮನೆತನದ ಅತಿಥಿಗಳಿಗಾಗಿ ನಿರ್ಮಿಸಿದ ಅರಮನೆಗೆ ಈಗ 100 ವರ್ಷಗಳು ತುಂಬಿವೆ.

ಲಲಿತ ಮಹಲ್ ಅರಮನೆಯ ನಿರ್ಮಾಣ:

ಅರಮನೆ ನಿರ್ಮಾಣಕ್ಕೆ 1921ರ ನವೆಂಬರ್ 18 ರಂದು ಅಡಿಗಲ್ಲು ಹಾಕಲಾಗಿದೆ. ಈ ಪ್ಯಾಲೆಸ್​ನ ವಾಸ್ತುಶಿಲ್ಪಿ ಇ ಡಬ್ಲ್ಯೂ ಫ್ರಿಚಿ (E.W.Fritchi) ಎಂಬವರಾಗಿದ್ದು, ಅಡಿಪಾಯದ ಕಲ್ಲಿನ ಮೇಲೆ ಇವರ ಹೆಸರು ಕೆತ್ತಲಾಗಿದೆ.‌ ಈ ಅರಮನೆಯನ್ನು ಲಂಡನ್​ನಲ್ಲಿರುವ ಸೆಂಟ್ ಪೌಲ್ ಕ್ಯಾಥೆಡ್ರಲ್‌ನಂತೆ (ಆರಾಧನಾ ಮಂದಿರ) ನಿರ್ಮಿಸಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೂಚನೆಯಂತೆ ಇದು 13 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, 10 ವರ್ಷಗಳ ಸಮಯ ತೆಗೆದುಕೊಂಡಿದೆ.

lalitha mahal palace
ಲಲಿತ ಮಹಲ್ ಹೋಟೆಲ್

1974ರ ಸೆಪ್ಟೆಂಬರ್ 13ರಲ್ಲಿ ಲಲಿತ ಮಹಲ್ ಅರಮನೆಯನ್ನು ಉದ್ಘಾಟಿಸಲಾಯಿತು. ನಂತರ ಇದು ಪಾರಂಪರಿಕ ಹೋಟೆಲ್ ಆಗಿ ಪರಿವರ್ತನೆ ಆಗಿದೆ. ಮೈಸೂರು ನಗರದ ಹೊರಭಾಗದ ಚಾಮುಂಡಿ ಬೆಟ್ಟದ ತಪ್ಪಲಿ‌ನಲ್ಲಿ ಅರಮನೆ ಇದ್ದು, ಸುಮಾರು 40 ಎಕರೆ ವಿಸ್ತೀರ್ಣದಲ್ಲಿ ಚಾಚಿಕೊಂಡಿದೆ.‌ 2018 ರಿಂದ ರಾಜ್ಯ ಸರ್ಕಾರದ ಅಧೀನದಲ್ಲಿರುವ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಇದನ್ನು ನಿರ್ವಹಿಸುತ್ತಿದೆ‌.

ಲಲಿತ ಮಹಲ್ ಪ್ಯಾಲೇಸ್​ನ ವೈಶಿಷ್ಟ್ಯತೆ:

ಅರಮನೆ ಬಿಳಿ ಬಣ್ಣದ ಎರಡು ಮಹಡಿಗಳ ಕಟ್ಟಡವಾಗಿದ್ದು, ಗೋಳಾಕಾರದ ಗುಮ್ಮಟಗಳು, ದೊಡ್ಡ ಕೇಂದ್ರ ಗುಮ್ಮಟ ಮತ್ತು ಸಾಂಪ್ರದಾಯಿಕ ಕಂಭ‌ಗಳನ್ನು ಒಳಗೊಂಡಿದೆ. ಒಳಾಂಗಣವನ್ನು ಪರಿಶುದ್ಧವಾಗಿ ಹೊಳಪುಗೊಳಿಸಿದ ಅಮೃತಶಿಲೆ, ಬೀಟೆ ಮರದ ಪೀಠೋಪಕರಣಗಳು, ಭವ್ಯವಾದ ಮೆಟ್ಟಿಲುಗಳು, ಆಮದು ಮಾಡಿದ ರತ್ನಗಂಬಳಿಗಳು, ಸಂಕೀರ್ಣವಾದ ತೂಗು ದೀಪದ ಗೊಂಚಲುಗಳು ಮತ್ತು ಪರದೆಗಳಿಂದ ಅಲಂಕರಿಸಲಾಗಿದೆ.

lalitha mahal palace
ಲಲಿತ್‌ ಮಹಲ್ ಹೋಟೆಲ್ ಒಳಭಾಗ

ಮೇಲಿನ ಮಹಡಿಯಿಂದ ಸುಂದರ ನೋಟ ಕಾಣಸಿಗುತ್ತದೆ. ಸೆಂಟ್ರಲ್ ಹಾಲ್‌ನಲ್ಲಿ ರಾಜಮನೆತನದ ಸದಸ್ಯರ ಭಾವಚಿತ್ರಗಳು ಮತ್ತು ಮೈಸೂರಿನ ಇತಿಹಾಸವನ್ನು ಚಿತ್ರಿಸುವ ಕಲಾಕೃತಿಗಳಿವೆ. ಅಂತೆಯೇ, ಟಿಪ್ಪು ಸುಲ್ತಾನ್ ಮತ್ತು ಅವರ ಕುಟುಂಬದ ಜೀವನವನ್ನು ಚಿತ್ರಿಸುವ ಅಪರೂಪದ ಕಲಾಕೃತಿಗಳನ್ನು ಲಾಬಿ ಮತ್ತು ಅಕ್ಕಪಕ್ಕದ ಗೋಡೆಗಳಲ್ಲಿ ಕಾಣಬಹುದಾಗಿದೆ. ಇದರಲ್ಲಿ ಅತ್ಯಂತ ಐಷಾರಾಮಿ “ದಿ ವೈಸ್‌ರಾಯ್ ಸೂಟ್” ಸೇರಿದೆ. ಹಿಂದಿನ ನೃತ್ಯ ಕೋಣೆಯನ್ನು ವಿಶೇಷ ಉಪಾಹಾರ ಗೃಹವನ್ನಾಗಿ ಮರುರೂಪಿಸಲಾಗಿದೆ.

ಹಳೆಯದಾದ ಪಾರಂಪರಿಕ ಲಿಫ್ಟ್:

ಅರಮನೆಯ ಒಳ ಆವರಣದಲ್ಲಿರುವ ಪಾರಂಪರಿಕ ಹಾಗೂ ಅತ್ಯಂತ ಹಳೆಯದಾದ ಕೈಯಿಂದ ನಿರ್ವಹಿಸುವ ಲಿಫ್ಟ್​ನ್ನು ಇಂಗ್ಲೆಂಡ್​ನ ವೇಗುಡ್- ಓಟಿಸ್ ಕಂಪನಿಯಿಂದ 1921 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಮದು ಮಾಡಿಕೊಂಡರು.

lalitha mahal palace
ಭವ್ಯ ಅರಮನೆಯ ಒಳಾಂಗಣ ನೋಟ

ಅದರಂತೆಯೇ ಹಳೆಯದಾದ ಮತ್ತೊಂದು ಮೆಕ್ಯಾನಿಕಲ್ ಲಿಫ್ಟ್ ಕೂಡ ಇಲ್ಲಿದೆ. ಇದನ್ನು ಕೈಯಿಂದ ನಿರ್ವಹಣೆ ಮಾಡಬಹುದಾಗಿದೆ. ಈ ಲಿಫ್ಟ ​ನ್ನು ಪಾರಂಪರಿಕ ಉಪಕರಣ ಹಾಗೂ ವಾಸ್ತುಶಿಲ್ಪದ ವೈಶಿಷ್ಟ್ಯಗಳೊಂದಿಗೆ ದಿಗೂ ಹಾಗೆಯೇ ಸಂರಕ್ಷಿಸಲಾಗಿದೆ.

ಅರಮನೆಯು ಈಗ ರಾಜ್ಯ ಸರ್ಕಾರದ ಅಧೀನದಲ್ಲಿದ್ದರೂ ರಾಜರ ಆಡಳಿತದ ಕುರುಹು ಅಲ್ಲಿ ಕಾಣಸಿಗುತ್ತವೆ. ಮುಖಮಂಟಪದಲ್ಲಿ ರಾಜ ಲಾಂಛನಗಳು, ಮೈಸೂರು ರಾಜ ಮನೆತನದ ಚಿಹ್ನೆಗಳು ಅರಮನೆ ಒಳ ಆವರಣದಲ್ಲಿ ಕಾಣ ಸಿಗುತ್ತವೆ.

ಪ್ರವಾಸಿಗರ ಮೆಚ್ಚಿನ ಸ್ಥಳ:

ಪಾಶ್ಚಿಮಾತ್ಯ ಶೈಲಿ ಹಾಗೂ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ವೈಭವೋಪೇತ ಲಲಿತ ಮಹಲ್ ಅರಮನೆ ಪ್ರವಾಸಿಗರ ಮೆಚ್ಚಿನ ಸ್ಥಳವಾಗಿದೆ. ರಾಷ್ಟ್ರಪತಿ ಅಬ್ದುಲ್ ಕಲಾಂ ಸೇರಿದಂತೆ ಇತರ ಗಣ್ಯರು ಉಳಿದುಕೊಂಡ ಸ್ಥಳ ಇದಾಗಿದೆ‌.

lalitha mahal palace
ರಾತ್ರಿ ವೇಳೆ ಬೆಳಕಿನಿಂದ ಕಂಗೊಳಿಸುವ ಭವ್ಯ ಲಲಿತ ಮಹಲ್ ಹೋಟೆಲ್​

ಈ ಮಹಲ್​ನಲ್ಲಿ 54 ಐಷಾರಾಮಿ ಸೂಟ್​ಗಳಿದ್ದು, 22 ಹಳೆಯ ಕೊಠಡಿ ಹಾಗೂ 33 ಹೊಸದಾಗಿ ನಿರ್ಮಿಸಿರುವ ಕೊಠಡಿಗಳಿವೆ. ಈಜುಕೊಳ, ಟೆನಿಸ್ ಕೋರ್ಟ್, ಜಾಗಿಂಗ್ ಟ್ರ್ಯಾಕ್, ಹೆಲ್ತ್ ಕ್ಲಬ್ ಮತ್ತು ಇತರ ಸೌಲಭ್ಯಗಳಿವೆ. ಅತಿಥಿಗಳು ಹತ್ತಿರದ ಗಾಲ್ಫ್ ಕೋರ್ಸ್ ಅನ್ನು ಸಹ ಪ್ರವೇಶಿಸಬಹುದಾಗಿದೆ.‌ ಅಲ್ಲದೇ, ಚಾಮುಂಡಿ ಬೆಟ್ಟದ ವಿಹಂಗಮ ನೋಟವು ಕಾಣ ಸಿಗುವುದರಿಂದ ಪ್ರವಾಸಿಗರು ಇಲ್ಲಿ ತಂಗಲು ಬಯಸುತ್ತಾರೆ.

ಸಿನಿ ದಿಗ್ಗಜರ ಮೆಚ್ಚಿನ ಸ್ಥಳ ಲಲಿತ ಮಹಲ್ ಪ್ಯಾಲೇಸ್

ಲಲಿತ ಮಹಲ್ ಪ್ಯಾಲೇಸ್ ಸಿನಿಪ್ರಿಯರ ಹಾಗೂ ದಿಗ್ಗಜರ ಮೆಚ್ಚಿನ ಸ್ಥಳವಾಗಿದ್ದು, ವಿವಿಧ ರಾಜ್ಯಗಳ, ಹಲವು ಭಾಷೆಗಳ ಚಿತ್ರೀಕರಣ ನಡೆದಿದೆ. 1985ರಲ್ಲಿ ನಿರ್ಮಾಣವಾದ ಅಮಿತಾಬ್​ ಬಚ್ಚನ್ ನಟನೆಯ ಮರ್ದ್, ಸಡಕ್, ತಮಿಳಿನ‌ ಹೆಸರಾಂತ ನಟ ತಲೈವಾ ರಜನಿಕಾಂತ್ ನಟನೆಯ ಲಿಂಗಾ, ತೆಲುಗು ನಟ ಪ್ರಭಾಸ್ ನಟನೆಯ ಅಡವಿ ರಾಮುಡು, ಯಶ್ ನಟಿಸಿದ್ದ ಕೆಜಿಎಫ್ ಸೇರಿ ನೂರಾರು ಚಿತ್ರಗಳು ಈ ಅರಮನೆಯಲ್ಲಿ ಚಿತ್ರೀಕರಣಗೊಂಡಿವೆ.

ನೂರರ ಸಂಭ್ರಮವನ್ನು ವಿಶಿಷ್ಠವಾಗಿ ಆಚರಿಸಲು ಸರ್ಕಾರ ಸಿದ್ಧತೆ

ನೂರು ವರ್ಷ ತುಂಬಿರುವ ಪಾರಂಪರಿಕ ಐಷಾರಾಮಿ ಹೋಟೆಲ್​ನ ಶತಮಾನೋತ್ಸವ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಈಗಾಗಲೇ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಅಧ್ಯಕ್ಷ ಎಂ. ಅಪ್ಪಣ್ಣ ವಿವರ ನೀಡಿದ್ದು, ಡಿಸೆಂಬರ್ ತಿಂಗಳಿನಲ್ಲಿ ಶತಮಾನೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಅಡ್ಡಿಬಂದಿದ್ದರಿಂದ ಶತಮಾನೋತ್ಸವ ಕಾರ್ಯಕ್ರಮವನ್ನು ಫೆಬ್ರವರಿ ತಿಂಗಳಿನಲ್ಲಿ ನಡೆಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಸಮಯ ಇರುವುದರಿಂದ ಲಲಿತಮಹಲ್ ಹೋಟೆಲ್ ಪಾರಂಪರಿಕವಾಗಿ ಇರುವ ಬಣ್ಣ ಮತ್ತು ಗಾರೆ ಕೆಲಸ ಮಾಡಲಾಗುವುದು. ಜೊತೆಗೆ ಪ್ಯಾಲೆಸ್​ ನಿರ್ಮಾಣ ಮಾಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯನ್ನು ಹೋಟೆಲ್ ಮುಂಭಾಗ ಸ್ಥಾಪಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಪೇಜಾವರ ಶ್ರೀಗಳ ವಿರುದ್ಧ ಹಂಸಲೇಖ ಹೇಳಿಕೆ‌ ವಿಚಾರ: ಬಸವನಗುಡಿ ಠಾಣೆಯಿಂದ‌ ನೋಟಿಸ್ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.