ETV Bharat / state

ಬಜ್ಜಿ ತಿನ್ನಲು ಹೋಗಿದ್ದ ಯುವಕನಿಗೆ ಚೂರಿ ಇರಿತ: ಐವರ ವಿರುದ್ಧ ಪ್ರಕರಣ ದಾಖಲು

author img

By

Published : Jun 5, 2023, 3:51 PM IST

ಹುಟ್ಟುಹಬ್ಬ ಆಚರಣೆ ವೇಳೆ ಅನ್ಯ ಕೋಮಿನ ಯುವಕರ ಗುಂಪು, ಯುವಕನೊಬ್ಬನಿಗೆ ಚಾಕು ಇರಿದಿರುವ ಘಟನೆ ನಡೆದಿದೆ.

Etv Bharata-young-man-was-stabbed-in-nanjanagudu
ಬಜ್ಜಿ ತಿನ್ನಲು ಹೋಗಿದ್ದ ಯುವಕನಿಗೆ ಚೂರಿ ಇರಿತ: ಐವರ ವಿರುದ್ಧ ಪ್ರಕರಣ ದಾಖಲು

ಮೈಸೂರು: ಹುಟ್ಟುಹಬ್ಬ ಆಚರಣೆ ವೇಳೆ ಅನ್ಯ ಕೋಮಿನ ಯುವಕರ ಗುಂಪು, ಯುವಕನೊಬ್ಬನಿಗೆ ಚಾಕು ಇರಿದಿರುವ ಘಟನೆ ನಂಜನಗೂಡು ಪಟ್ಟಣದ ನೀಲಕಂಠನಗರದಲ್ಲಿ ನಡೆದಿದೆ. ಪ್ರಸಾದ್ ಚಾಕು ಇರಿತಕ್ಕೊಳಗಾದ ಯುವಕನಾಗಿದ್ದಾನೆ. ಸದ್ಯ ಯುವಕ ಮೈಸೂರಿನ ಕೆ. ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.

ಭಾನುವಾರ ರಾತ್ರಿ ನಂಜನಗೂಡು ಪಟ್ಟಣದ ನೀಲಕಂಠ ನಗರದ ಸರ್ಕಲ್​ನಲ್ಲಿ ‌ಏರಿಯಾದ ಹುಡುಗರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಚಾಕು ಇರಿತಕ್ಕೊಳಗಾದ ಯುವಕ ಬಜ್ಜಿಯನ್ನು ತಿನ್ನಲು ಮನೆಯಿಂದ ಸರ್ಕಲ್​ಗೆ ಬಂದಿದ್ದಾನೆ. ಯುವಕರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಿದ್ದಾರೆ.

ಈ ವೇಳೆ ಅಲ್ಲಿಗೆ ಬಂದ 5 ಜನ ಅನ್ಯ ಕೋಮಿನ ಯುವಕರು ಹುಟ್ಟುಹಬ್ಬ ಆಚರಿಸುತ್ತಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕ್ಯಾತೆ ತೆಗೆದಿದ್ದಾರೆ. ನಂತರ ಪ್ರಸಾದ್ ಎಂಬ ಯುವಕನಿಗೆ ಚಾಕುವಿನಿಂದ ಇರಿದು, ಹಣೆಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಪ್ರಕರಣ ಸಂಬಂಧ ಶೋಹೆಬ್, ಇಲ್ಲು, ಸಲ್ಮಾನ್, ಜಾಫರ್ , ಇಸ್ಮಾಯಿಲ್ ಎಂಬ ಐದು ಜನರ ವಿರುದ್ಧ ನಂಜನಗೂಡು ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆ ಕುರಿತು ಈಟಿವಿ ಭಾರತದೊಂದಿಗೆ ಚಾಕು ಇರಿತಕ್ಕೊಳಗಾದ ಯುವಕ ಪ್ರಸಾದ್ ಮಾತನಾಡಿ, ನಾನು ಬಜ್ಜಿ ತಿನ್ನಲೆಂದು ನೀಲಕಂಠ ನಗರದ ಸರ್ಕಲ್​ಗೆ ಹೋಗಿದ್ದೆ, ಅಲ್ಲಿ ನನಗೆ ಪರಿಚಯದ ಹುಡುಗರು ಹುಟ್ಟುಹಬ್ಬ ಆಚರಿಸುತ್ತಿದ್ದರು. ಕೇಕ್ ಕತ್ತರಿಸಿದ ಸಂದರ್ಭದಲ್ಲಿ ಯಾರೋ ಭಾರತ್ ಮಾತಾ ಕಿ ಜೈ ಎಂದು ಕೂಗಿದರು. ಆಗ ಅನ್ಯಕೋಮಿನ ಯುವಕರು ಅಲ್ಲೇ ಇದ್ದ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ.

ಒಬ್ಬ ವ್ಯಕ್ತಿ ಚಾಕುವಿನಿಂದ ಇರಿದ, ಇನ್ನೊಬ್ಬ ಹಣೆಗೆ ಪಂಚ್ ಮಾಡಿದ. ಆಗ ನಾನು ಗಾಬರಿಯಿಂದ ನೆಲಕ್ಕೆ ಬಿದ್ದೆ. ತಕ್ಷಣ ನನ್ನನ್ನು ಆಸ್ಪತ್ರೆಗೆ ಸೇರಿಸಿದರು ಎಂದು ಮಾಹಿತಿ ನೀಡಿದರು. ಈ ಬಗ್ಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಪ್ರತಿಕ್ರಿಯಿಸಿ, ಈ ಘಟನೆ ಬಗ್ಗೆ ಕೆಲವು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಘಟನೆ ಕುರಿತು ತನಿಖೆ ನಡೆಸಲು ಐವರು ಸದಸ್ಯರ ಸಮಿತಿ ರಚಿಸಿದ ಬಿಜೆಪಿ: ಇನ್ನು ನಂಜನಗೂಡಿನಲ್ಲಿ ಭಾರತ್ ಮಾತಾಕಿ ಜೈ ಘೋಷಣೆ ಕೂಗಿದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕುರಿತು ಸಮಗ್ರ ತನಿಖೆ ನಡೆಸಲು ಐವರು ಸದಸ್ಯರ ಸಮಿತಿಯನ್ನು ರಾಜ್ಯ ಬಿಜೆಪಿ ರಚನೆ ಮಾಡಿದ್ದು, ಆದಷ್ಟು ಬೇಗ ವರದಿ ನೀಡುವಂತೆ ಸೂಚನೆ ನೀಡಿದೆ.

ನಂಜನಗೂಡಿನಲ್ಲಿ ಭಾರತ್ ಮಾತಾಕಿ ಜೈ ಘೋಷಣೆ ಕೂಗಿದವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಸಮಗ್ರ ತನಿಖೆ ನಡೆಸಿ ವರದಿ ನೀಡಲು ಬಿಜೆಪಿಯಿಂದ ತಂಡ ರಚನೆ ಮಾಡಲಾಗಿದೆ. ಇದಕ್ಕಾಗಿ ಐವರು ಸದಸ್ಯರ ತಂಡ ರಚನೆ ಮಾಡಲಾಗಿದ್ದು, ಮಾಜಿ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ, ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್ ಶ್ರೀವತ್ಸ, ಮಾಜಿ ಶಾಸಕ ಹರ್ಷವರ್ಧನ್ ಹಾಗೂ ಮಹೇಶ್ ಅವರನ್ನೊಳಗೊಂಡ ತಂಡಕ್ಕೆ ಶೀಘ್ರವೇ ವರದಿ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರು: ಕೇವಲ ಒಂದು ಹಾಡಿಗೆ ನಡೆದ ಗಲಾಟೆ... ಕೊಲೆಯಲ್ಲಿ ಅಂತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.