ಮಂಡ್ಯ: ತಮಿಳುನಾಡಿಗೆ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಮಾಡಿರುವುದನ್ನು ವಿರೋಧಿಸಿ ಮಂಡ್ಯ ಜಿಲ್ಲಾ ರೈತ ರಕ್ಷಣಾ ಸಮಿತಿ ಧರಣಿ ಆರಂಭಿಸಿದೆ. ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಮಾಜಿ ಸಚಿವರು, ಶಾಸಕರು, ರೈತರು, ಕನ್ನಡ ಪರ ಹೋರಾಟಗಾರರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಸೇರಿ ವಿವಿಧ ಸಂಘ - ಸಂಸ್ಥೆಗಳ ಮುಖಂಡರು ಧರಣಿ ನಡೆಸಿದರು.
'ಕಾವೇರಿ ನಮ್ಮದು, ರಕ್ತ ಕೊಟ್ಟರೂ ನೀರು ಬಿಡೆವು' ಎಂಬ ಘೋಷವಾಕ್ಯದೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ, ತಮಿಳುನಾಡು ಒತ್ತಡ ತಂತ್ರದ ಹಿನ್ನೆಲೆಯಲ್ಲಿ ಕಾವೇರಿ ನದಿ ನೀರು ಪ್ರಾಧಿಕಾರ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು ಎಂದು ಆದೇಶ ಮಾಡಿರುವುದು ಅವೈಜ್ಞಾನಿಕ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಜಲಾಶಯಗಳಿಂದ ನೀರು ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಿದರು. ತಕ್ಷಣವೇ ನೀರು ನಿಲ್ಲಿಸುವಂತೆ ಆಗ್ರಹಿಸಿದರು.
ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹವೇನು? ಮತ್ತೊಂದೆಡೆ, ಕಾವೇರಿ ಅಣೆಕಟ್ಟುಗಳಿಂದ ತಮಿಳುನಾಡಿಗೆ ಹರಿಬಿಡುತ್ತಿರುವ ನೀರನ್ನು ಕೂಡಲೇ ನಿಲ್ಲಿಸಿ ಎಂದು ಜಾತ್ಯತೀತ ಜನತಾದಳದ, ಶ್ರೀರಂಗಪಟ್ಟಣದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಹೊರ ಬೀಳುತ್ತಿದ್ದಂತೆ ಮಂಗಳವಾರ ರಾತ್ರಿಯಿಂದ ತಮಿಳುನಾಡಿಗೆ ನೀರು ಬಿಡಲಾಗಿದೆ. ಈ ಮೂಲಕ ಕಾವೇರಿ ಕೊಳ್ಳದ ರೈತರ ಹಿತ ಮರೆತಿರುವ ಸರ್ಕಾರ ಅನ್ನದಾತರಿಗೆ ದ್ರೋಹ ಮಾಡಿದೆ ಎಂದು ಹೇಳಿದರು. ಹತ್ತಕ್ಕೂ ಹೆಚ್ಚು ದಿನ ನಿರಂತರವಾಗಿ ನೀರು ಬಿಟ್ಟು ಕೆಆರ್ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಕುಸಿತ ಮಾಡಿದ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೆ ತಮಿಳುನಾಡಿಗೆ ನೀರು ಬಿಟ್ಟಿದೆ ಎಂದು ಕಿಡಿ ಕಾರಿದರು.
ಸಂಸದೆ ಸಮಲತಾ ಅಂಬರೀಶ್ ವಿರುದ್ಧ ಕಿಡಿ - ಕಟ್ಟೆ ಬಿರುಕಿನ ಬಗ್ಗೆ ಇರುವ ಆಸಕ್ತಿ, ನೀರು ಖಾಲಿಯಾಗ್ತಿರೋದರ ಬಗ್ಗೆ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಸಂಸದರು ಹೋರಾಟದ ನೇತೃತ್ವ ವಹಿಸಬೇಕಿತ್ತು. ಆದರೆ ಬರ್ತ್ ಡೇ ಆಚರಿಸಿಕೊಂಡು, ಕೇಕ್ ತಿನ್ನಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಫೈವ್ ಸ್ಟಾರ್ ಹೋಟೆಲ್ನಲ್ಲಿ ಬರ್ತ್ ಡೇ ಆಚರಿಸುವುದರಲ್ಲಿ ಬ್ಯುಸಿ ಇದ್ದಾರೆ. ಎಂಪಿ ಅವರು ಕೇವಲ ಕ್ವಾರಿಗಳ ವಿಚಾರದಲ್ಲಿ ಧ್ವನಿ ಎತ್ತಿದ್ರು. ರೈತರ ಪರ ನಿಲ್ಲಬೇಕಾದ ವೇಳೆ ಬರ್ತ್ ಡೇ ಆಚರಿಸಿಕೊಳ್ಳುತ್ತಾ ಬ್ಯುಸಿ ಆಗಿದ್ದಾರೆ. ಇಂತಹ ನಡವಳಿಕೆ ನಿಜಕ್ಕೂ ಆಶ್ಚರ್ಯ ತಂದಿದೆ. ಇವರನ್ನು ಗೆಲ್ಲಿಸಿದ ಜನರೀಗ ಯಾಕಾದ್ರೂ ಗೆಲ್ಲಿಸಿದ್ವಿ? ಅಂತಿದ್ದಾರೆ ಎಂದು ತಿಳಿಸಿದರು.
ಯಾವುದೇ ಸರ್ಕಾರಗಳು ನೀರು ಬಿಟ್ಟಿಲ್ಲ ಅಂತಲ್ಲ, ಎಲ್ಲ ಸರ್ಕಾರಗಳು ನೀರು ಬಿಟ್ಟಿವೆ. ಮುಖ್ಯಮಂತ್ರಿ ಆಗಿದ್ದಾಗ ಎಸ್.ಎಂ ಕೃಷ್ಣ ಪಾದಯಾತ್ರೆ ನಡೆಸಿ ನೀರು ಬಿಟ್ಟ ನಿದರ್ಶನ ಇದೆ. ಆದರೆ, ಈ ಬಾರಿ ಸರ್ಕಾರ ತಾಳ್ಮೆ ವಹಿಸದೇ ಏಕಾಏಕಿ ನೀರು ಬಿಡುಗಡೆ ಮಾಡಿದೆ. ಸ್ವಲ್ಪ ದಿನ ಕಾದಿದ್ದರೆ ನೀರು ಉಳಿಸಬಹುದಿತ್ತು. ಯಾರನ್ನೂ ಕೇಳದೇ ರೈತರ ವಿರೋಧದ ನಡುವೆಯೂ ನೀರು ಬಿಟ್ಟು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ಕಣ್ಣಿಗೆ ಬಟ್ಟೆ ಕಟ್ಟಿ ಕಾವೇರಿಗಾಗಿ ನಡಿಗೆ: ಅಹೋರಾತ್ರಿ ಧರಣಿ, ಮಂಡ್ಯದಲ್ಲಿ ಭುಗಿಲೆದ್ದ ಕಾವೇರಿ ಕಿಚ್ಚು
ಕಾವೇರಿಕೊಳ್ಳದ ಜಲಾಶಯಗಳಿಂದ ಬಿಡುಗಡೆ ಮಾಡಿರುವ ನೀರನ್ನು ಶುಕ್ರವಾರ ಸಂಜೆಯೊಳಗೆ ನಿಲ್ಲಿಸದಿದ್ದರೆ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಸಿದರು. ರೈತ ವಿರೋಧಿಯಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಹೋರಾಟ ನಡೆಸುವ ಮೂಲಕ ಜಾ.ದಳ ಕಾವೇರಿಗೆ ಹೋರಾಟಕ್ಕೆ ಮುನ್ನುಡಿಯಾಗಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಡಾ.ಅನ್ನದಾನಿ, ಸುರೇಶ ಗೌಡ, ಕೆ.ಟಿ ಶ್ರೀಕಂಠೇಗೌಡ, ರಾಮಚಂದ್ರ, ಡಿ. ರಮೇಶ್ ಇತರರು ಉಪಸ್ಥಿತರಿದ್ದರು.