ETV Bharat / state

ಚಲುವರಾಯಸ್ವಾಮಿ, ಸುರೇಶ್ ಗೌಡ ನನಗೆ ರಾಜಕೀಯ ಬದ್ಧ ವೈರಿಗಳು: ಮಾಜಿ ಸಂಸದ ಶಿವರಾಮೇಗೌಡ

author img

By

Published : Apr 26, 2022, 11:42 AM IST

ಚಲುವರಾಯಸ್ವಾಮಿ, ಸುರೇಶ್ ಗೌಡ ನನಗೆ ರಾಜಕೀಯ ಬದ್ಧ ವೈರಿಗಳು. ಏಕಕಾಲದಲ್ಲಿ ಬದ್ಧ ವೈರಿಗಳನ್ನು ಸೋಲಿಸುವ ಅವಕಾಶ ನನಗೆ ಈಗ ಬಂದಿದೆ ಎಂದು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಹೇಳಿದರು.

Former MP Shivarame Gowda
ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ

ಮಂಡ್ಯ: ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಹೈವೋಲ್ವೇಜ್ ಕ್ಷೇತ್ರವಾದ ಮಂಡ್ಯದ ನಾಗಮಂಗಲದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಜೆಡಿಎಸ್‌ನಿಂದ ಉಚ್ಚಾಟನೆಗೊಂಡ ಬಳಿಕ ಮಾಜಿ ಸಂಸದ ಎಲ್.ಆರ್​​ ಶಿವರಾಮೇಗೌಡ ಅವರು ರೆಬೆಲ್ ಆಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಲು ಪಕ್ಷೇತರವಾಗಿ ಸ್ಪರ್ಧಿಸಲು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.

ನಿತ್ಯ ಕ್ಷೇತ್ರ ಪ್ರವಾಸ ಮಾಡುವ ಮೂಲಕ ಪ್ರಚಾರ ಆರಂಭಿಸಿರುವ ಶಿವರಾಮೇಗೌಡ, ನಾಗಮಂಗಲದಲ್ಲಿ ಟಿಕಾಣಿ ಹೂಡಲು ಗೃಹ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವ ಮೂಲಕ ಸ್ಪರ್ಧೆ ಖಚಿತ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಹಳ್ಳಿ ಹಳ್ಳಿಗಳಲ್ಲೂ ಬೆಂಬಲಿಗರ ಪಡೆ ಸಂಘಟಿಸಿ ದಳಪತಿಗಳಿಗೆ ಸೆಡ್ಡು ಹೊಡೆಯಲು ತೀರ್ಮಾನಿಸಿದ್ದಾರೆ.

ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ

ಇಂದು ನಾಗಮಂಗಲದಲ್ಲಿ ಮಾತನಾಡಿದ ಅವರು ಚಲುವರಾಯಸ್ವಾಮಿ, ಸುರೇಶ್ ಗೌಡ ನನಗೆ ರಾಜಕೀಯ ಬದ್ಧ ವೈರಿಗಳು. ಏಕಕಾಲದಲ್ಲಿ ಬದ್ಧ ವೈರಿಗಳನ್ನು ಸೋಲಿಸುವ ಅವಕಾಶ ನನಗೆ ಈಗ ಬಂದಿದೆ. ನಾನು ಈಗ ಫ್ರೀ ಬರ್ಡ್, ನನಗೆ ಪಕ್ಷ ಸೂಟ್ ಆಗಲ್ಲ ಅಂತಾ ಜನರೇ ಹೇಳಿದ್ದಾರೆ. ಪ್ರತಿ ಹಳ್ಳಿಯಲ್ಲಿ ಕಾಂಗ್ರೆಸ್ - ಜೆಡಿಎಸ್ ಎರಡು ಪಕ್ಷದ ಕಾರ್ಯಕರ್ತರೂ ಬೆಂಬಲ ನೀಡುತ್ತಿದ್ದಾರೆ. ಪಕ್ಷೇತರವಾಗಿ ಸ್ಪರ್ಧೆ ಮಾಡುವ ನಿರ್ಧಾರವಾಗಿದೆ ಎಂದರು.

ನನ್ನ ಸ್ಪರ್ಧೆ ಕೆಲವರಿಗೆ ಲಾಭ ಆಗಬಹುದು ಎಂದು ತಿಳಿದಿದ್ದಾರೆ. ನಾನು ಚೆಲುವರಾಯಸ್ವಾಮಿ, ಸುರೇಶ್ ಗೌಡ ಇಬ್ಬರ ಮತವನ್ನು ಪಡೆಯುತ್ತೇನೆ. ಪ್ರತಿ ಊರಲ್ಲೂ ಮೂರು ಗುಂಪು ರಚಿಸುತ್ತೇನೆ. ಅವರಿಬ್ಬರಂತೆ ನನ್ನ ಗುಂಪು ಇರುವಂತೆ ಮಾಡುತ್ತೇನೆ. ಅವರ ಗುಂಪು ಇಲ್ಲದಿದ್ದರೂ, ನನ್ನ ಪರವಾದ ಗುಂಪು ಇರಲೇಬೇಕು. ಈ ಕ್ಷೇತ್ರ ಬಿಟ್ಟು ಹೋಗಲ್ಲ ಎಂಬ ಸಂದೇಶ ಸಾರುವ ಉದ್ದೇಶದಿಂದಲೇ ನಾನು ಇಲ್ಲಿ ಮನೆ ಮಾಡುತ್ತಿರುವುದು. ಚುನಾವಣೆ ಮುಗಿಯುವವರೆಗೂ ನಿದ್ದೆ ಮಾಡುವುದಿಲ್ಲ, ಹೋರಾಟ ನಿರಂತರ ಎಂದು ಹೇಳಿದರು.

ಹೆಚ್.ಡಿ ಕುಮಾರಸ್ವಾಮಿ, ದೇವೇಗೌಡರ ವಿರುದ್ಧ ಅಸಮಾಧಾನ ಇಲ್ಲ. ನಮ್ಮವರೇ ಕೆಲವರು ನನ್ನ ವಿರುದ್ಧ ಹುನ್ನಾರ ನಡೆಸಿದರು. ಅವರ ಹುನ್ನಾರಕ್ಕೆ ನಾನು ಖೆಡ್ಡಾಕ್ಕೆ ಬಿದ್ದಿದ್ದೇನೆ. ಕುಮಾರಸ್ವಾಮಿ ಅವರು ಈ ಕುರಿತು ಯೋಚಿಸಬಹುದಿತ್ತು. ಆದರೆ ಅವರು ತಕ್ಷಣ ಉಚ್ಚಾಟನೆ ತೀರ್ಮಾನ ಮಾಡಿ ಬಿಟ್ಟರು. ಅವರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ನಾಗಮಂಗಲದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಸಾರಾಸಗಟಾಗಿ 7 ಪರ್ಸೆಂಟ್​​ ಕಮಿಷನ್ ಪ್ರತಿ ಕೆಲಸದಲ್ಲೂ ಇದೆ. ಶಾಸಕರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಶಿವರಾಮೇಗೌಡ ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ: ದಿ. ಮಾದೇಗೌಡರ ಅವಹೇಳನ: ಶಿವರಾಮೇಗೌಡರನ್ನು ಪಕ್ಷದಿಂದ ಹೊರಹಾಕಲು ಹೆಚ್​​ಡಿಕೆ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.