ETV Bharat / state

Cauvery water crisis: ಮಂಡ್ಯದಲ್ಲಿ ತೀವ್ರಗೊಂಡ ಕಾವೇರಿ ಕಿಚ್ಚು.. ಹೆದ್ದಾರಿ ತಡೆದು ರೈತರ ಪ್ರತಿಭಟನೆ

author img

By ETV Bharat Karnataka Team

Published : Aug 29, 2023, 5:17 PM IST

ತಮಿಳುನಾಡಿಗೆ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್​ ನೀರು ಬಿಡುವಂತೆ ಕಾವೇರಿ ನಿಯಂತ್ರಣ ಸಮಿತಿ ನೀಡಿರುವ ಸೂಚನೆಯನ್ನು ಖಂಡಿಸಿ, ರೈತರು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮಂಡ್ಯದಲ್ಲಿ ಪ್ರತಿಭಟಿಸಿದರು.

ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ರೈತರು
ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ರೈತರು

ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ರೈತರು

ಮಂಡ್ಯ : ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕೆಂಬ ಕಾವೇರಿ ನಿಯಂತ್ರಣ ಸಮಿತಿಯ ಸೂಚನೆ ವಿರೋಧಿಸಿ ರೈತರು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಿದರು. ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ರೈತ ಸಂಘ ಮತ್ತು ಕನ್ನಡಪರ ಸಂಘಟನೆಗಳ ಆಶ್ರಯದಲ್ಲಿ ರೈತರು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು.

ಕಾವೇರಿ ನೀರು ನಿಯಂತ್ರಣ ಸಮಿತಿ, ಕಾವೇರಿ ನದಿ ನೀರು ಪ್ರಾಧಿಕಾರ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಆರ್​ಎಸ್ ಜಲಾಶಯದಲ್ಲಿ 113 ಅಡಿ ನೀರು ಇದ್ದಾಗ ಪ್ರತಿನಿತ್ಯ ಹತ್ತು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಜಲಾಶಯದಲ್ಲಿ 101 ಅಡಿ ನೀರು ಮಾತ್ರ ಉಳಿದಿದೆ. ಇದೀಗ ಕಾವೇರಿ ನಿಯಂತ್ರಣ ಸಮಿತಿ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿರುವುದು ಅವೈಜ್ಞಾನಿಕವಾಗಿದೆ. ರೈತರು ಬೆಳೆದಿರುವ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಹೊಸ ಬೆಳೆ ಬೆಳೆಯಲು ಸಹ ಸಾಧ್ಯವಾಗುತ್ತಿಲ್ಲ. ಕಟ್ಟು ಪದ್ಧತಿಯಲ್ಲಿ ನೀರು ಬಿಡುವುದಾಗಿ ಹೇಳಿದ ನೀರಾವರಿ ಇಲಾಖೆ ರೈತರ ಬೆಳೆ ರಕ್ಷಣೆಗೆ ಮುಂದಾಗಿಲ್ಲ. ಜನ ಜಾನುವಾರುಗಳಿಗೂ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಬಗ್ಗೆ ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು ಅವರು ಪ್ರತಿಕ್ರಿಯಿಸಿ, ಈಗಾಗಲೇ ಕೆಆರ್​ಎಸ್ ಜಲಾಶಯದ ಸಾಕಷ್ಟು ನೀರನ್ನು ತಮಿಳುನಾಡಿಗೆ ಬಿಟ್ಟಿದ್ದೇವೆ. ಈಗ ಪ್ರತಿದಿನ ಐದು ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂದರೆ ಸಾಧ್ಯವಿಲ್ಲದ ಮಾತು. ಈಗ ಬಿಸಿಲು ಅಧಿಕವಿರುವುದರಿಂದ ನೀರು ಆವಿಯಾಗುತ್ತಿದೆ. ನಾವು ಉಗ್ರ ಹೋರಾಟ ಮಾಡುತ್ತೇವೆ. ಸರ್ಕಾರದವರು ಏನು ಕಣ್ಣುಮುಚ್ಚಿಕೊಂಡು ಕುಳಿತಿದ್ದಾರಾ?. ಇವರ ಗ್ಯಾರಂಟಿ ಯೋಜನೆ ಬೇಡ. ನಮಗೆ ನಮ್ಮ ಕಾವೇರಿ ಬೇಕು ಎಂದು ಒತ್ತಾಯಿಸಿದ್ದಾರೆ.

ನಿಯಂತ್ರಣ ಸಮಿತಿ, ಪ್ರಾಧಿಕಾರ ಯಾರೇ ಆದೇಶ ಹೊರಡಿಸಿದರೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಮುಖಂಡರಾದ ಪಿ. ಆರ್ ರಮೇಶ್, ಶಂಕರ್ ಬಾಬು, ಪಾಂಡು, ಕೆಂಪೇಗೌಡ ನೇತೃತ್ವ ವಹಿಸಿದ್ದರು.

ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟಿಸಿದ ರೈತರು: ತಮಿಳುನಾಡಿಗೆ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನಿಯಂತ್ರಣ ಸಮಿತಿ ಸೂಚಿಸಿರುವುದನ್ನು ವಿರೋಧಿಸಿ ಕೆ.ಆರ್.ಎಸ್ ಬಳಿ ರೈತರು ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟಿಸಿದರು. ರೈತ ಮುಖಂಡ ಕೆ. ಎಸ್ ನಂಜುಂಡೇಗೌಡ, ಭೂಮಿತಾಯಿ ಹೋರಾಟ ಸಮಿತಿ‌ ಅಧ್ಯಕ್ಷ ಕೃಷ್ಣೇಗೌಡ ನೇತೃತ್ವದಲ್ಲಿ‌ ಜಲಾಶಯದ ಎದುರು ನೂರಾರು ರೈತರು ಬಾಯಿ ಬಡಿದುಕೊಳ್ಳುವ ಮೂಲಕ ಪ್ರತಿಭಟಿಸಿ, ಕರ್ನಾಟಕ ರಾಜ್ಯದ ರೈತರಿಗೆ ಆಗುತ್ತಿರುವ ನಿರಂತರ ಅನ್ಯಾಯ ಸಹಿಸಲು ಅಸಾಧ್ಯ ಎಂದರು.

ತಮಿಳುನಾಡಿಗೆ 15 ದಿನಗಳವರೆಗೆ ಪ್ರತಿದಿನ 5000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂಬ ಆದೇಶ ಅವೈಜ್ಞಾನಿಕ ನಿರ್ಣಯವಾಗಿದೆ. ರಾಜ್ಯದಲ್ಲಿ ಬರಗಾಲದ ಸನ್ನಿವೇಶ ಸೃಷ್ಟಿಯಾಗಿ, ಕುಡಿಯುವ ನೀರಿಗೂ‌ ಹಾಹಾಕಾರ ಎದುರಾಗಿದ್ದರೂ ತಮಿಳುನಾಡಿಗೆ ನೀರು ಬಿಡಬೇಕೆಂದು ಹೇಳಿರುವುದು ಸರಿಯಲ್ಲ ಎಂದರು.

ಕಾವೇರಿ ನಿಯಂತ್ರಣ ಸಮಿತಿ ಹಾಗೂ ಇಲ್ಲಿನ ವಾಸ್ತವತೆಯನ್ನು ನ್ಯಾಯಾಲಯ ಮತ್ತು ಸಮಿತಿಗೆ ಮನದಟ್ಟು ಮಾಡಿಕೊಡದ ರಾಜ್ಯ ಸರ್ಕಾರ, ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ತಮಿಳುನಾಡಿಗೆ ನೀರು, ಕರ್ನಾಟಕಕ್ಕೆ ನೇಣು': ಮಂಡ್ಯದಲ್ಲಿ ರೈತರ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.