ETV Bharat / state

ಮಂಡ್ಯ: ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ ಖಂಡಿಸಿ ರೈತರ ಪ್ರತಿಭಟನೆ; ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಾಥ್‌

author img

By

Published : Aug 17, 2023, 7:29 PM IST

ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ಮಂಡ್ಯದ ರೈತರು ಖಂಡಿಸಿದ್ದು, ಪ್ರತಿಭಟನೆ ನಡೆಸಿದರು.

ಮಂಡ್ಯದಲ್ಲಿ ಪ್ರತಿಭಟನಾಕಾರರ ಹೋರಾಟ
ಮಂಡ್ಯದಲ್ಲಿ ಪ್ರತಿಭಟನಾಕಾರರ ಹೋರಾಟ

ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ ಖಂಡಿಸಿ ರೈತರ ಪ್ರತಿಭಟನೆ

ಮಂಡ್ಯ : ತಮಿಳುನಾಡಿಗೆ ಕಾವೇರಿಯಿಂದ ಹೆಚ್ಚುವರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಇಂದು ಜಿಲ್ಲೆಯಲ್ಲಿ ರೈತರು ಪ್ರತಿಭಟಿಸಿದ್ದಾರೆ. ಕಾವೇರಿಯಿಂದ ತಮ್ಮ ಪಾಲಿಗೆ ಬರಬೇಕಾದ ನೀರಿಗಾಗಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ. ಕಳೆದ ಹಲವು ದಿನಗಳಿಂದ ಕೆಆರ್​ಎಸ್ ಜಲಾಶಯದಿಂದ ಕಾವೇರಿ ನದಿಗೆ 5 ಸಾವಿರ ಕ್ಯೂಸೆಕ್​ ನೀರು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಈ ಮಧ್ಯೆ ತಮಿಳುನಾಡು ಸರ್ಕಾರ ತಗಾದೆ ತೆಗೆದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಹೀಗಾಗಿ ಜಲಾಶಯದಿಂದ ಕಾವೇರಿಯ ಮೂಲಕ 12,718 ಕ್ಯೂಸೆಕ್​ ನೀರು ಬಿಡುಗಡೆ ಮಾಡಲಾಗುತ್ತಿದೆ. ನಿನ್ನೆ ಬೆಳಗ್ಗೆ 9 ಸಾವಿರ ಕ್ಯೂಸೆಕ್​ ನೀರು ಬಿಡುಗಡೆ ಮಾಡಲಾಗಿತ್ತು. ಆದರೆ, ತಮಿಳುನಾಡು ಸರ್ಕಾರದ ಒತ್ತಡಕ್ಕೆ ಮಣಿದು ಹೆಚ್ಚುವರಿಯಾಗಿ 3 ಸಾವಿರ ಕ್ಯೂಸೆಕ್​ ನೀರು ಹರಿಬಿಡಲಾಗುತ್ತಿದೆ. ಇದಕ್ಕೆ ರೈತರು ಪ್ರತಿಭಟನೆಯ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ರೈತರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಕೆಆರ್​ಎಸ್ ಜಲಾಶಯ ಮಂಡ್ಯ ಜಿಲ್ಲೆಯ ರೈತರ ಜೀವನಾಡಿ. 124.80 ಅಡಿ ಗರಿಷ್ಠ ನೀರಿನ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 110.04 ಅಡಿ ನೀರು ಸಂಗ್ರಹವಿದೆ. ಟಿಎಂಸಿ ಲೆಕ್ಕದಲ್ಲಿ ಹೇಳುವುದಾದರೆ 49.452 ಸಂಗ್ರಹ ಸಾಮರ್ಥ್ಯವಿದ್ದು, ಸದ್ಯ 31.760 ಟಿಎಂಸಿ ನೀರಿದೆ. ಈ ಮಧ್ಯೆ ಜನ, ಜಾನುವಾರುಗಳು ಕುಡಿಯಲು, ಕೆಲವು ಬೆಳೆಗಳನ್ನು ಉಳಿಸಿಕೊಳ್ಳಲು ಕಟ್ ಪದ್ದತಿಯಂತೆ ನಾಲೆಗಳಿಗೆ ಹದಿನೈದು ದಿನ ನೀರು ಹರಿಸುವುದು ಮತ್ತು ನಂತರದ ಹದಿನೈದು ದಿನ ನೀರು ನಿಲ್ಲಿಸಲಾಗುತ್ತಿದೆ. ಅರೆ ಖುಷ್ಕಿ ಬೆಳೆಗಳನ್ನು ಮಾತ್ರ ಬೆಳೆಯುವಂತೆ ಈಗಾಗಲೇ ಕಾವೇರಿ ನೀರಾವರಿ ನಿಗಮ ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡು ಹೆಚ್ಚುವರಿ ನೀರು ಕೇಳುತ್ತಿರುವುದು ರಾಜ್ಯ ಸರ್ಕಾರಕ್ಕೆ ಸಂಕಷ್ಟ ತಂದಿದೆ.

ಕೆಆರ್​ಎಸ್‌ನಿಂದ ಕಾವೇರಿ ನದಿಗೆ ಹೆಚ್ಚುವರಿ ನೀರು ಬಿಟ್ಟಿರುವುದನ್ನು ಖಂಡಿಸಿ ಇವತ್ತು ಮಂಡ್ಯದ ವಿವಿಧೆಡೆ ಪ್ರತಿಭಟನೆ ನಡೆಸಲಾಯಿತು. ಜಲಾಶಯದ ಬಳಿ ಸೇರಿದ ರೈತರು ಪ್ರತಿಭಟನೆ ನಡೆಸಿ, ಅಧಿಕಾರಿಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯ ಜಿಲ್ಲಾಧಿಕಾರಿ ಕಚೇರಿ, ಶ್ರೀರಂಗಪಟ್ಟಣ, ಬೆಂಗಳೂರು-ಮೈಸೂರು ಹೆದ್ದಾರಿ ತಡೆದರು.

"ಸ್ಟ್ಯಾಂಡಿಂಗ್ ಕ್ರಾಪ್ ಅ​ನ್ನು ಗಣನೆಗೆ ತೆಗೆದುಕೊಂಡು ಮತ್ತು ಕುಡಿಯಲು ಎಷ್ಟು ನೀರು ಬೇಕು ಎಂಬುದನ್ನು ಗಣನೆಗೆ ತೆಗೆದುಕೊಂಡು ನೀರು ಬಿಡುತ್ತಿದ್ದಾರಾ?. ತೀರ್ಪಿನಲ್ಲಿರುವ ಡಿಸ್ಟ್ರೆಸ್ ನಿಯಮದ​ ಪ್ರಕಾರ, ಎಷ್ಟು ಪ್ರಮಾಣದ ನೀರನ್ನು ತಮಿಳುನಾಡಿಗೆ ಬಿಡಬೇಕು ಎಂಬುದರ ಆಧಾರದ ಮೇಲೆ ಸರ್ಕಾರ ಆದೇಶವನ್ನು ಕೊಟ್ಟಿದ್ದಾರಾ?. ಈಗ ಹದಿನೈದು ದಿವಸ ನೀರು ಬಿಟ್ಟು, ಇನ್ನು ಹದಿನೈದು ದಿವಸ ನೀರನ್ನು ನಿಲ್ಲಿಸುತ್ತೇವೆ ಎಂದಿದ್ದಾರೆ. ಇದು ಆಗಲ್ಲ, ಒಂದು ವೇಳೆ ನೀರು ನಿಲ್ಲಿಸಿದರೆ, ಬೆಳೆಗಳೆಲ್ಲ ಒಣಗಿ ಹೋಗುತ್ತವೆ. ರೈತರು ಈಗಾಗಲೇ ಬೆಳೆಗಳನ್ನು ನಾಟಿ ಮಾಡಿದ್ದಾರೆ. ನಮಗೆ ನೀರು ಬೇಕೇ ಬೇಕು. ಈ ವಿಷಯವನ್ನು ಇಟ್ಟುಕೊಂಡು ನಾವು ಪ್ರತಿಭಟನೆ ಮಾಡಿದ್ದೇವೆ" ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ಇದನ್ನೂ ಓದಿ: Cauvery Water: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.