ETV Bharat / state

ಮಂಡ್ಯ: ಕಾವೇರಿ ನೀರು ಬಿಡುಗಡೆ ವಿರೋಧಿಸಿ ರೈತರಿಂದ ಪ್ರತಿಭಟನೆ, ಹಲವರು ಪೊಲೀಸ್ ವಶಕ್ಕೆ

author img

By ETV Bharat Karnataka Team

Published : Aug 22, 2023, 10:55 PM IST

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಮೈಸೂರು-ಬೆಂಗಳೂರು ಹೆದ್ದಾರಿ ತಡೆದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ತಮಿಳುನಾಡಿಗೆ ಕಾವೇರಿ ನೀರಿನ ಹಂಚಿಕೆ ಬಗ್ಗೆ ರೈತರಿಂದ ಪ್ರತಿಭಟನೆ..ವಶಕ್ಕೆ ಪಡೆದ ಪೊಲೀಸರು
ತಮಿಳುನಾಡಿಗೆ ಕಾವೇರಿ ನೀರಿನ ಹಂಚಿಕೆ ಬಗ್ಗೆ ರೈತರಿಂದ ಪ್ರತಿಭಟನೆ..ವಶಕ್ಕೆ ಪಡೆದ ಪೊಲೀಸರು

ತಮಿಳುನಾಡಿಗೆ ಕಾವೇರಿ ನೀರಿನ ಹಂಚಿಕೆ ಬಗ್ಗೆ ರೈತರಿಂದ ಪ್ರತಿಭಟನೆ..ವಶಕ್ಕೆ ಪಡೆದ ಪೊಲೀಸರು

ಮಂಡ್ಯ : ಕೆಆರ್​ಎಸ್​ ಅಣೆಕಟ್ಟೆಯಿಂದ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ಇಂದು ರೈತ ಸಂಘಟನೆಗಳು ಬೆಂಗಳೂರು - ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಪೊಲೀಸರು ಸುಮಾರು 50ಕ್ಕೂ ಹೆಚ್ಚಿನ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ಕೆಆರ್​ಎಸ್ ಜಲಾಶಯದಿಂದ ಕಳೆದ ಹಲವು ದಿನಗಳಿಂದ ಕಾವೇರಿ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಹೀಗಾಗಿ ಕಳೆದ ಹಲವು ದಿನಗಳಿಂದ ಜಿಲ್ಲೆಯ ಹಲವೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಮುಂದುವರೆದ ಭಾಗವಾಗಿ ಇಂದು ರೈತಸಂಘಗಳ ಕಾರ್ಯಕರ್ತರು ನೂತನ ದಶಪಥ ಹೆದ್ದಾರಿ ತಡೆದು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದರು.

ಮಂಡ್ಯ ತಾಲೂಕಿನ ಇಂಡುವಾಳು ಬಳಿ ಎತ್ತಿನಗಾಡಿಗಳ ಮೂಲಕ ನೂರಾರು ರೈತರು ಆಗಮಿಸಿದ್ದರು. ಇಂಡುವಾಳು ಬಳಿ ಬ್ಯಾರಿಕೇಡ್ ಹಾಕಿ ರೈತರನ್ನು ಪೊಲೀಸರು ತಡೆದರು. ಈ ವೇಳೆ ಹೈಡ್ರಾಮ ನಡೆಯಿತು. ಪ್ರತಿಭಟನೆಗೆ ಮುಂದಾದ ರೈತರನ್ನು ಹೆದ್ದಾರಿಗೆ ಬಾರದ ರೀತಿಯಲ್ಲಿ ಪೊಲೀಸರು ಅಡ್ಡಹಾಕಿದರು. ಪೊಲೀಸರೊಂದಿಗೆ ರೈತರು ಮಾತಿನ ಚಕಮಕಿ ನಡೆಸಿದ್ರು. ನೂಕಾಟ, ತಳ್ಳಾಟ ನಡೆಯಿತು. ನೂರಾರು ರೈತರನ್ನು ಪೊಲೀಸರು ವಶಕ್ಕೆ ಪಡೆದರು. ಪ್ರತಿಭಟನಾನಿರತರನ್ನು ವಶಕ್ಕೆ ಪಡೆದು ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಕರೆದುಕೊಂಡು ಹೋದರು. ಪೊಲೀಸರು ಹಾಗೂ ಸರ್ಕಾರದ ನಡೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದರು.

124.80 ಅಡಿ ಗರಿಷ್ಟ ಸಾಮರ್ಥ್ಯದ ಕೆಆರ್​ಎಸ್ ಜಲಾಶಯದಲ್ಲಿ ಇದೀಗ 104 ಅಡಿ ನೀರು ಮಾತ್ರ ಸಂಗ್ರಹವಿದೆ. ಆದರೆ, ಕಳೆದ ಹಲವು ದಿನಗಳಿಂದ 10 ರಿಂದ 12 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಹೀಗಾಗಿಯೇ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ನಿನ್ನೆ ಮಂಡ್ಯದ ಸಂಜಯ್ ಸರ್ಕಲ್​ನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತ್ತು. ಇದರ ಬೆನ್ನಲ್ಲೇ ಇವತ್ತು ರೈತ ಸಂಘಟನೆ ಕಾರ್ಯಕರ್ತರು ಹೆದ್ದಾರಿ ಬಂದ್ ಮಾಡಿ, ಹೆದ್ದಾರಿಯಲ್ಲಿಯೇ ಊಟ ತಯಾರಿಸಿ ಪ್ರತಿಭಟನೆಗೆ ಮುಂದಾಗಿದ್ದರು. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಮಂಡ್ಯ ಎಸ್​ಪಿ ಯತೀಶ್ ನೇತೃತ್ವದಲ್ಲಿ ಬಾರಿ ಪೊಲೀಸ್ ಬಂದೋಬಸ್ತ್​ ಮಾಡಲಾಗಿತ್ತು. ಇಂಡುವಾಳು ಬಳಿ ಹೆಜ್ಜೆ ಹೆಜ್ಜೆಗೂ ಪೊಲೀಸ್ ಸರ್ಪಗಾವಲು ಹಾಕಿ, ರೈತರು ಹೆದ್ದಾರಿಗೆ ಬಾರದ ರೀತಿಯಲ್ಲಿ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು. ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾದ ರೈತರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಲಾಗಿದೆ.

ಪ್ರತಿಭಟನೆಗೆ ಅವಕಾಶವಿಲ್ಲವೆಂದು ನೊಟೀಸ್ ಕೊಟ್ಟಿದ್ದೆವು: ಈ ಬಗ್ಗೆ ಎಸ್​ಪಿ ಯತೀಶ್ ಪ್ರತಿಕ್ರಿಯಿಸಿದ್ದು, ''ಇಂಡುವಾಳು ಬಳಿ ಕರ್ನಾಟಕ ರೈತ ಸಂಘದ ವತಿಯಿಂದ ರಸ್ತೆ ತಡೆ ನಡೆಸಿದ್ದಾರೆ. ಈಗಾಗಲೇ ನಾವು ಇದಕ್ಕೆ ಅವಕಾಶ ಇಲ್ಲ ಎಂದು ನೊಟೀಸ್​​ ಕೊಟ್ಟಿದ್ದೆವು. ಆದರೂ ಸುಮಾರು 50 ಕ್ಕಿಂತಲೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ಅವರನ್ನು ವಶಕ್ಕೆ ಪಡೆದಿದ್ದೇವೆ. ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ'' ಎಂದರು.

ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ವಿಚಾರ: ರಾಷ್ಟ್ರೀಯ ಹೆದ್ದಾರಿ ಬಂದ್​ಗೆ ಮುಂದಾದ ಮಂಡ್ಯ ರೈತರು... ತಡೆದ ಪೊಲೀಸರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.