ETV Bharat / state

ಮಂಡ್ಯದಲ್ಲಿ ಓರ್ವ ವೃದ್ಧನಿಗೆ ಕೋವಿಡ್ ಪಾಸಿಟಿವ್; ಆರೋಗ್ಯ ಇಲಾಖೆ ಅಲರ್ಟ್

author img

By ETV Bharat Karnataka Team

Published : Dec 19, 2023, 10:59 PM IST

ಮಂಡ್ಯ ಜಿಲ್ಲೆಯಲ್ಲಿ ಹಲವು ತಿಂಗಳ ಬಳಿಕ ಒಂದು ಕೋವಿಡ್​ ಪ್ರಕರಣ ದೃಢಪಟ್ಟಿದೆ.

ಜಿಲ್ಲಾಸ್ಪತ್ರೆ
ಜಿಲ್ಲಾಸ್ಪತ್ರೆ

ಡಿಎಚ್‌ಒ ಡಾ. ಕೆ.ಮೋಹನ್

ಮಂಡ್ಯ: ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಾದ ಬೆನ್ನಲ್ಲೆ ಇದೀಗ ರಾಜ್ಯದಲ್ಲೂ ಆತಂಕ ಶುರುವಾಗಿದೆ. ಕೋವಿಡ್ ಮುಕ್ತವಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಹಲವು ತಿಂಗಳ ಬಳಿಕ ಒಂದು ಪ್ರಕರಣ ದೃಢಪಟ್ಟಿದೆ. ಮದ್ದೂರು ಪಟ್ಟಣದ 75 ವರ್ಷದ ವ್ಯಕ್ತಿಯೊಬ್ಬ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಈತನಿಗೆ ಜಿಲ್ಲಾಸ್ಪತ್ರೆಯ ಪ್ರತ್ಯೇಕ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚೆಗೆ ಜ್ವರ, ಉಸಿರಾಟದ ಸಮಸ್ಯೆ, ಮಲಬದ್ಧತೆ, ಹೊಟ್ಟೆ ನೋವು, ಜಠರ-ಕರುಳಿನ ತೊಂದರೆಯಿಂದಾಗಿ ಇವರು ಮಂಡ್ಯ ಮಿಮ್ಸ್​ಗೆ ದಾಖಲಾಗಿದ್ದರು. 14ರಂದು ಇವರಿಗೆ ಕೋವಿಡ್ ರ‍್ಯಾಪಿಡ್ ಟೆಸ್ಟ್ ಮಾಡಿಸಲಾಗಿತ್ತು. ಅದರಂತೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಮಿಮ್ಸ್​ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಇವರ ಕುಟುಂಬದ ನಾಲ್ವರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದ್ದು, ಎಲ್ಲರ ವರದಿಗಳು ನೆಗೆಟಿವ್ ಎಂದು ಬಂದಿದೆ. ಆದಾಗ್ಯೂ ನಾಲ್ವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಅವರ ಮನೆಯಲ್ಲೇ ಹೋಂ ಕ್ವಾರಂಟೈನ್​​ನಲ್ಲಿ ಇರಿಸಲಾಗಿದೆ. ಸೋಂಕಿತ ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಆದರೂ ಸೋಂಕಿಗೆ ಒಳಗಾಗಿದ್ದಾರೆ. ಅವರ ಮನೆಯ ನಾಲ್ವರು ಸದಸ್ಯರಿಗೆ ಕೋವಿಡ್ ನೆಗೆಟಿವ್ ವರದಿ ಬಂದಿದೆ ಎಂದು ಡಿಎಚ್‌ಒ ಡಾ. ಕೆ.ಮೋಹನ್ ತಿಳಿಸಿದ್ದಾರೆ.

ನೆರೆಯ ರಾಜ್ಯದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆ ರಾಜ್ಯದಲ್ಲಿಯೂ ಅಲರ್ಟ್ ಮಾಡಲಾಗಿದೆ. ಅದರಂತೆ ಜಿಲ್ಲೆಯಲ್ಲಿಯೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ಮಿಮ್ಸ್ ಸೇರಿದಂತೆ ತಾಲೂಕು ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ವ್ಯವಸ್ಥೆ, ಆಕ್ಸಿಜನ್ ಫ್ಲಾಂಟ್‌ಗಳನ್ನು ಪರಿಶೀಲಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 30 ಹಾಸಿಗಳ ಎರಡು ವಾರ್ಡ್​ಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಲಾಗಿದೆ. ಪ್ರಕರಣಗಳಿಗೆ ಅನುಗುಣವಾಗಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲು ಆಸ್ಪತ್ರೆಯನ್ನು ಸಹ ಸಜ್ಜುಗೊಳಿಸಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ರಾಮನಗರದಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ..ಭಯಬೇಡ ಎಂದ ಡಿಎಚ್​ಒ

ರಾಮನಗರ ಜಿಲ್ಲೆಯಲ್ಲಿಯೂ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾಗಿದೆ. ಬೈರಮಂಗಲ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ‌ ನಡೆದ ಕೋವಿಡ್ ಸೋಂಕು ತಪಾಸಣೆ ವೇಳೆ ಓರ್ವ ವಿದ್ಯಾರ್ಥಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.

ಸೋಂಕು ಪತ್ತೆಯಾದ ನಿಟ್ಟಿನಲ್ಲಿ ವಿದ್ಯಾರ್ಥಿಯನ್ನು ಎರಡು ದಿನಗಳ ಕಾಲ ಐಸೋಲೇಶನ್​ಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿಯ ರಕ್ತ ಪರೀಕ್ಷೆ ವರದಿ ಬಂದ ನಂತರ ಹೆಚ್ಚಿನ ಮಾಹಿತಿ ದೊರೆಯಬೇಕಿದೆ ಎಂದು ರಾಮನಗರ ಡಿಎಚ್​ಒ ನಿರಂಜನ್ ಮಾಹಿತಿ ಕೊಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.