ETV Bharat / state

ಕೊಪ್ಪಳ: ವೃದ್ಧನ ಮೇಲೆ ಹಲ್ಲೆ ಪ್ರಕರಣ, ಇಬ್ಬರ ಬಂಧನ

author img

By ETV Bharat Karnataka Team

Published : Dec 6, 2023, 6:40 PM IST

Updated : Dec 6, 2023, 6:51 PM IST

arrest-of-two-accused-in-the-case-of-old-man-assaulted-in-koppala
ಮುಸ್ಲಿಂ ವೃದ್ಧನ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Koppal assault case: ವೃದ್ಧನ ಮೇಲೆ ಹಲ್ಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಕೊಪ್ಪಳ ಎಸ್​ಪಿ ತಿಳಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಪ್ರತಿಕ್ರಿಯೆ

ಕೊಪ್ಪಳ: ಗಂಗಾವತಿ ನಗರದಲ್ಲಿ ಇತ್ತೀಚೆಗೆ ಧಾರ್ಮಿಕ ಘೋಷಣೆ ಕೂಗುವಂತೆ ಒತ್ತಾಯಿಸಿ ಹಲ್ಲೆ ಮಾಡಿದರು ಎಂದು ಮೆಹೆಬೂಬ್ ನಗರದ ಹುಸೇನಸಾಬ್ ಎಂಬ ವೃದ್ಧನ ನೀಡಿದ ದೂರಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಾಗರ್​ ಹಾಗೂ ನರಸಪ್ಪ ಬಂಧಿತರು.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ, "ವೃದ್ಧನಿಗೆ ಹಲ್ಲೆ ಮಾಡಿದ ಆರೋಪದಡಿ ಗಂಗಾವತಿಯ ಕುವೆಂಪು ಬಡಾವಣೆಯ ಸಾಫ್ಟ್‌ವೇರ್ ಇಂಜಿನಿಯರ್ ಸಾಗರ್​ ಶೆಟ್ಟಿ ಕಲ್ಕಿ ಹಾಗೂ ಕಲ್ಲಪ್ಪನ ಕ್ಯಾಂಪ್‌ನ ನರಸಪ್ಪ ದನಕಾಯರ ಎಂಬಿಬ್ಬರನ್ನು ಬಂಧಿಸಲಾಗಿದೆ‌. ಇದುವರೆಗೆ ಎಲ್ಲ ಆಯಾಮಗಳಿಂದ ತನಿಖೆ ಮಾಡಲಾಗಿದೆ. ವೃದ್ಧನಿಗೆ ಜೈ ಶ್ರೀರಾಮ್ ಹೇಳುವಂತೆ ಒತ್ತಡ ಹೇರಲಾಗಿದೆ ಎನ್ನುವ ಆರೋಪಕ್ಕೆ ಯಾವುದೇ ಆಧಾರ ಲಭಿಸಿಲ್ಲ. ಹುಸೇನಸಾಬ್ ಗಡ್ಡಕ್ಕೆ ಬೆಂಕಿ ಹಚ್ಚಲಾಗಿತ್ತು ಎನ್ನುವುದಕ್ಕೂ ದಾಖಲೆ ಲಭಿಸಿಲ್ಲ" ಎಂದರು.

"ಪಾನಮತ್ತರಾಗಿದ್ದ ಆರೋಪಿಗಳಿಗೆ ವೃದ್ಧ ಡ್ರಾಪ್ ನೀಡುವಂತೆ ಕೇಳಿಕೊಂಡಿದ್ದ. ಅವರು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುವಾಗ ನರಸಪ್ಪ ಮಧ್ಯದಲ್ಲಿ ಕುಳಿತಿದ್ದ ವೃದ್ಧನ ಟೋಪಿ ಜಗ್ಗಿದ್ದಾನೆ. ಇದಕ್ಕೆ ಕೋಪಗೊಂಡ ವೃದ್ಧ ಬೈದಿದ್ದಾರೆ. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಯುವಕರು ರೈಲ್ವೆ ಸೇತುವೆ ಬಳಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿ, ವೃದ್ಧನ ಜೇಬಿನಲ್ಲಿದ್ದ 250 ರೂಪಾಯಿ ಕಿತ್ತುಕೊಂಡಿದ್ದಾರೆ. ನಂತರ ಅಲ್ಲಿಂದ ಪರಾರಿಯಾಗಿದ್ದಾರೆ. ತಲೆಗೆ ಬಿಯರ್​ ಬಾಟಲಿಯಿಂದ ಹೊಡೆದಿದ್ದಾರೆ ಎಂದು ಹೇಳುತ್ತಿದ್ದಾರೆ, ಆ ರೀತಿ ಏನೂ ನಡೆದಿಲ್ಲ. ವೃದ್ಧನ ತಲೆಗೆ ಸಣ್ಣ ಗಾಯವೂ ಆಗಿಲ್ಲ. ಈ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮಾಡುತ್ತೇವೆ" ಎಂದು ಮಾಹಿತಿ ನೀಡಿದರು.

ಘಟನೆಯ ಹಿನ್ನಲೆ: ವೃದ್ಧ ಕೆಲಸದ‌ ನಿಮಿತ್ತ ಹೊಸಪೇಟೆಗೆ ಹೋಗಿ ನ.25ರಂದು ಮಧ್ಯರಾತ್ರಿ ಗಂಗಾವತಿಗೆ ಬಂದು ಮನೆಗೆ ಹೋಗಲು ಆಟೋ ನಿಲ್ದಾಣದ ಬಳಿ ಕಾಯುತ್ತಿದ್ದರು. ಆಗ ಬೈಕ್‌ನಲ್ಲಿ ಬಂದ ಯುವಕರು ಎಲ್ಲಿಗೆ ಹೋಗುತ್ತಿದ್ದಿಯಾ? ಎಂದು ಪ್ರಶ್ನಿಸಿದ್ದಾರೆ. ಬಲವಂತವಾಗಿ ಬೈಕ್ ಮೇಲೆ ಕೂಡಿಸಿಕೊಂಡು ಪಂಪಾನಗರ ಬಳಿ ಕರೆದುಕೊಂಡು ಹೋದರು ಎಂದು ವೃದ್ಧ ದೂರಿನಲ್ಲಿ ತಿಳಿಸಿದ್ದರು.

ಒಂದು ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಕೊಲೆ ಬೆದರಿಕೆ ಒಡ್ಡಿದ್ದಾರೆ. ಸಿದ್ದಿಕೇರಿಗೆ ಹೋಗುವ ಮಾರ್ಗದಲ್ಲಿನ ರೈಲ್ವೆ ಸೇತುವೆ ಕೆಳಗಡೆ ಕರೆದುಕೊಂಡು ಹೋಗಿ ಜೈ ಶ್ರೀರಾಮ್ ಎನ್ನುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ. ಗಡ್ಡಕ್ಕೆ ಬೆಂಕಿ ಹಂಚಿದ್ದಾರೆ ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದರು.

ಇದನ್ನೂ ಓದಿ: ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿ ಮುಸ್ಲಿಂ ಅಂಧ ವೃದ್ಧನ ಮೇಲೆ ಹಲ್ಲೆ: ದೂರು ದಾಖಲು

Last Updated :Dec 6, 2023, 6:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.