ETV Bharat / state

'ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚ ನನ್ನದು': ಜನಾರ್ದನ ರೆಡ್ಡಿ ಭರವಸೆ

author img

By

Published : Feb 18, 2023, 7:01 AM IST

Updated : Feb 18, 2023, 8:50 AM IST

ಮುಂಬರುವ ಚುನಾವಣೆಗಾಗಿ ಎಲ್ಲ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಕೆಆರ್​ಪಿಪಿ ಪಕ್ಷದ ಸ್ಥಾಪಕ ಜನಾರ್ದನ ರೆಡ್ಡಿಯವರು ಗಂಗಾವತಿಯ ಜನತೆಗೆ ಕೆಲವೊಂದು ಭರವಸೆಗಳನ್ನು ನೀಡಿ ಜನರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

gangavati
ಜನಾರ್ದನ ರೆಡ್ಡಿ ಭರವಸೆ

ಗಂಗಾವತಿ(ಕೊಪ್ಪಳ): "ನಿಮ್ಮ ಮಕ್ಕಳು ಯುಕೆಜಿಯಿಂದ ಪಿಜಿವರೆಗೂ ಓದುತ್ತಾರಾ? ಹಾಗಾದರೆ ಆ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ನಾನು ವೈಯಕ್ತಿಕವಾಗಿ ಆ ಮಕ್ಕಳ ಪಾಲಕರ ಅಕೌಂಟಿಗೆ ಹಾಕುತ್ತೇನೆ. ನಿವೇಶನ ಇದ್ದವರಿಗೆ ಮನೆ ಕಟ್ಟಿಸಿ ಕೊಡುವೆ. ಸೈಟ್ ಇಲ್ಲದವರಿಗೆ ಜಾಗ ಖರೀದಿ ಮಾಡಿ ಅವರಿಗೂ ಮನೆ ಕಟ್ಟಿಸಿಕೊಡುವೆ. ನಾನಾ ಸಮುದಾಯಗಳ ಪ್ರಮುಖರು ಬಯಸಿದ್ದಲ್ಲಿ ಅವರು ಸೂಚಿಸುವ ಸ್ಥಳದಲ್ಲಿಯೇ 100*50 ಸೈಜ್​ನಲ್ಲಿ ತಾಂತ್ರಿಕವಾಗಿ ಪರಿಶೀಲಿಸಿ ಸಕಲ ಸೌಲಭ್ಯಗಳಿರುವ ಹೈಟೆಕ್ ಸಮುದಾಯ ಭವನ, ಕಲ್ಯಾಣ ಮಂಟಪ ನಿರ್ಮಾಣ ಮಾಡಿ ಕೊಡಲು ಸಿದ್ಧನಿದ್ದೇನೆ" ಎಂಬ ಭರವಸೆಗಳನ್ನು ಕೆಆರ್​ಪಿಪಿ ಪಕ್ಷದ ಸ್ಥಾಪಕ, ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ನೀಡಿದ್ದಾರೆ.

ನಗರದ ಹಿರೇಜಂತಜಕಲ್, ಚಲುವಾದಿ ಓಣಿ, ತಾಲೂಕಿಮ ಬೆಣಕಲ್ ಗ್ರಾಮಗಳಲ್ಲಿ ಚುನಾವಣೆ ಪ್ರಚಾರ ಕಾರ್ಯ ನಡೆಸುತ್ತಿರುವ ಪಕ್ಷದ ಕಾರ್ಯಕ್ರಮದಲ್ಲಿ ಸೇರಿದ ಜನರನ್ನು ಉದ್ದೇಶಿಸಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯೂ ಆಗಿರುವ ಜನಾರ್ದನರೆಡ್ಡಿ, ಭರಪೂರ ಭರವಸೆಗಳನ್ನು ನೀಡುವ ಮೂಲಕ ಜನರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ.

ಚಲುವಾದಿ ಅಸ್ಪೃಶ್ಯರಲ್ಲ: ನಗರದ ಚಲುವಾದಿ ಓಣಿಯಲ್ಲಿ ಮಾತನಾಡಿದ ಅವರು, "ಚಲುವಾದಿಯು ಅಸ್ಪೃಶ್ಯ ಸಮುದಾಯವಲ್ಲ. ವಾಸ್ತವದಲ್ಲಿ ರೆಡ್ಡಿ ಸಮುದಾಯಕ್ಕೂ ಚಲುವಾದಿ ಸಮುದಾಯಕ್ಕೂ ಸಹಸ್ರಾರು ವರ್ಷಗಳ ಅವಿನಾಭಾವ ನಂಟಿದೆ" ಎಂದು ಭಾವನಾತ್ಮಕವಾಗಿ ಜನರನ್ನು ಸೆಳೆದರು. "ನಾನು ಮೊದಲ ಆದ್ಯತೆ ನೀಡುವುದು ಕೆಲಸಕ್ಕೆ, ಎರಡನೇಯದ್ದು ಸ್ವಚ್ಛತೆಗೆ. ಗಂಗಾವತಿಯ ಜನ ನನಗೆ ಶಾಸಕನಾಗುವ ಅವಕಾಶ ನೀಡಿದ್ದೇ ಆದಲ್ಲಿ ಇನ್ನು ಮುಂದೆ ಗಂಗಾವತಿಯಲ್ಲಿ ಸ್ಲಂ ಎಂಬ ಪದ ಇರದ ಹಾಗೆ ಮಾಡುತ್ತೇನೆ. ನಾನು ನುಡಿದಂತೆ ನಡೆಯುವ ವ್ಯಕ್ತಿ. ನಾನು ಹೇಳುವ ಮಾತುಗಳನ್ನು ನೀವು ಬೇಕಾದರೆ ರೆಕಾರ್ಡ್​ ಮಾಡಿಕೊಳ್ಳಿ. ನಾನು ನೀಡಿದ ಭರವಸೆಗಳನ್ನು ಚಾಚೂ ತಪ್ಪದೇ ಈಡೆರಿಸುತ್ತೇನೆ" ಎಂದರು.

ರೆಡ್ಡಿಗೆ ಅದ್ದೂರಿ ಸ್ವಾಗತ: ನಗರದ ವಾರ್ಡ್​ಗಳಲ್ಲಿ ಸಂಚರಿಸುತ್ತಿರುವ ರೆಡ್ಡಿಗೆ ಭರ್ಜರಿ ಸ್ವಾಗತ ಸಿಗುತ್ತಿದೆ. ಮುಖ್ಯವಾಗಿ ಯುವಕರೇ ಹೆಚ್ಚಾಗಿ ರೆಡ್ಡಿ ಪರ ಘೋಷಣೆ ಕೂಗುವುದು, ಕಾರ್ಯಕ್ರಮ ಆಯೋಜನೆ ಮಾಡುವುದು, ರ‍್ಯಾಲಿ ಆಯೋಜಿಸುವ ಕಾರ್ಯ ಮಾಡುತ್ತಿದ್ದಾರೆ. ರೆಡ್ಡಿ ಸಂಚರಿಸುತ್ತಿರುವ ವಾರ್ಡ್​ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಜನ ರೆಡ್ಡಿ ಸಮ್ಮುಖದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಅಲ್ಲದೇ ದೊಡ್ಡ-ದೊಡ್ಡ ಹೂವಿನ ಹಾರಗಳಿಂದ ರೆಡ್ಡಿಯನ್ನು ಅಭಿಮಾನಿಗಳು ಸ್ವಾಗತಿಸಿ ಗಮನ ಸೆಳೆಯುತ್ತಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ; ಮಹತ್ವದ ವಿಚಾರಗಳ ಚರ್ಚೆ

ಆಂಬ್ಯುಲೆನ್ಸ್​ ಸೇವೆ ಪ್ರಾರಂಭ: ತಾಲೂಕಿನ ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯವಾಗಿದ್ದ ಆಂಬ್ಯುಲೆನ್ಸ್ ಕೊರತೆ ಬಹು ದಿನಗಳ ಬಳಿಕ ಕೊನೆಗೂ ನೀಗಿದೆ. ಆರೋಗ್ಯ ಇಲಾಖೆಯು ಆನೆಗೊಂದಿಗೆ ಸೆಕೆಂಡ್ ಹ್ಯಾಂಡ್ ಆಂಬ್ಯುಲೆನ್ಸ್ ರವಾನಿಸುವ ಮೂಲಕ ರೋಗಿಗಳ ಸೇವೆಗೆ ನೆರವು ನೀಡಿದೆ. ಆದರೆ, ಆಂಬ್ಯುಲೆನ್ಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಪರಣ್ಣ ಮುನವಳ್ಳಿ, ರಾಜವಂಶಸ್ಥೆ ಲಲಿತಾರಾಣಿ ಮತ್ತು ಮಾಜಿಸಚಿವ ಜಿ. ಜನಾರ್ದನ ರೆಡ್ಡಿ ಅಭಿಮಾನಿಗಳು ಕ್ರೆಡಿಟ್​ಗಾಗಿ ಬಡಿದಾಡುತ್ತಿದ್ದಾರೆ.

ಆನೆಗೊಂದಿಗೆ ಆಂಬ್ಯುಲೆನ್ಸ್ ತರುವಲ್ಲಿ ನಮ್ಮ ಕೊಡುಗೆ ಹೆಚ್ಚಿದೆ ಎಂದು ಬಿಜೆಪಿ, ಕಾಂಗ್ರೆಸ್ ಹಾಗೂ ಕೆಆರ್​ಪಿಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್​ ಪೋಸ್ಟ್​ ಮತ್ತು ವಾಟ್ಸ್​ಆ್ಯಪ್​ ​ಗ್ರೂಪ್​ಗಳಲ್ಲಿ ಪೋಸ್ಟ್ ಮೆಸೇಜ್ ಮಾಡುವ ಮೂಲಕ ಕಿತ್ತಾಟ ಆರಂಭಿಸಿದ್ದಾರೆ. ರಾಜಕೀಯ ನಾಯಕರ ಬೆಂಬಲಿಗರು, ಪಕ್ಷಗಳ ಕಾರ್ಯಕರ್ತರು ಏನೇ ಕಿತ್ತಾಡಿಕೊಂಡರೂ ಆನೆಗೊಂದಿ ಆಸ್ಪತ್ರೆಗೆ ಅದರಲ್ಲೂ ರೋಗಿಗಳನ್ನು ತುರ್ತು ಚಿಕಿತ್ಸೆಗಾಗಿ ಬೇರೆಡೆ ಸಾಗಿಸುವ ಸೇವೆಗೆ ಆಂಬ್ಯುಲೆನ್ಸ್ ಬಂದಿರುವುದಕ್ಕಾಗಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ರೆಡ್ಡಿಯಿಂದಲೇ ಆಂಬ್ಯುಲೆನ್ಸ್ ಭಾಗ್ಯ?: ಆನೆಗೊಂದಿ ಗ್ರಾಮದಲ್ಲಿ ಕೆಆರ್​ಪಿಪಿ ಪಕ್ಷದಿಂದ ಹಮ್ಮಿಕೊಂಡಿದ್ದ ರಥಯಾತ್ರೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಮಾಜಿಸಚಿವ ಜಿ. ಜನಾರ್ದನ ರೆಡ್ಡಿ, "ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಸೇವೆಗೆ ಆಂಬ್ಯುಲೆನ್ಸ್ ಇಲ್ಲದಿರುವುದು ಖೇದಕರ. ನಾನು ಅಧಿಕಾರಕ್ಕೆ ಬಂದರೆ ಇಲ್ಲಿನ ಆರೋಗ್ಯ ಕೇಂದ್ರವನ್ನು ಹೈಟೆಕ್ ಆಗಿ ಪರಿವರ್ತನೆ ಮಾಡುತ್ತೇನೆ. ಮಾತ್ರವಲ್ಲ, ಈಗಲೇ ನನ್ನ ಸ್ವಂತ ಖರ್ಚಿನಲ್ಲಿ ಒಂದಲ್ಲ, ಎರಡು ಆ್ಯಂಬುಲೆನ್ಸ್ ಕೊಡುತ್ತೇನೆ" ಎಂದು ಹೇಳಿದ್ದರು.

ಇದು ಸಹಜವಾಗಿ ಆಡಳಿತ ರೂಢ ಬಿಜೆಪಿ ಶಾಸಕರನ್ನು ಕೆರಳಿಸಿದಂತಿದ್ದು, ತಕ್ಷಣ (ಜ.16ರಂದು) ಆರೋಗ್ಯ ಸಚಿವ ಸುಧಾಕರ್​ಗೆ ಪತ್ರ ಬರೆದು ಆನೆಗೊಂದಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್ ನೀಡುವಂತೆ ಮನವಿ ಮಾಡಿದ್ದರು. ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕಿ ಗ್ರಾಮಸ್ಥರ ಪರವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಹತ್ತಾರು ಪತ್ರ ಬರೆದು ಆಂಬ್ಯುಲೆನ್ಸ್ ನೀಡುವಂತೆ ಮನವಿ ಮಾಡಿದ್ದರು. ಒಟ್ಟಾರೆ ಇದೀಗ ಗ್ರಾಮಕ್ಕೆ ಆಂಬ್ಯುಲೆನ್ಸ್​ ಬಂದಿದ್ದು, ಆಯಾ ಪಕ್ಷಗಳ ಕಾರ್ಯಕರ್ತರಲ್ಲಿ ಕಿತ್ತಾಟಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ₹402 ಕೋಟಿ ಹೆಚ್ಚುವರಿ ಬಜೆಟ್ ಮಂಡಿಸಿದ್ದೇವೆ, ಇದು ಆರ್ಥಿಕಾಭಿವೃದ್ಧಿ ತೋರಿಸುತ್ತದೆ: ಸಿಎಂ

Last Updated : Feb 18, 2023, 8:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.