ETV Bharat / state

ಪತ್ನಿ ಅರುಣಾ ಲಕ್ಷ್ಮಿ ಗೆದ್ದರೆ ಬಳ್ಳಾರಿಯನ್ನು ರಾಜ್ಯದ ಎರಡನೇ ದೊಡ್ಡ ನಗರ ಮಾಡುವೆ: ಗಾಲಿ ಜನಾರ್ದನರೆಡ್ಡಿ

author img

By

Published : Apr 22, 2023, 9:18 PM IST

ನಾನು ಗಂಗಾವತಿಗೆ ಕಾಲಿಟ್ಟು ನೂರು ದಿನ ಆಗಿದೆ. ಗಂಗಾವತಿ ನಗರ, ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಆದ ಕಲ್ಪನೆ ಯೋಜನೆಗಳಿವೆ. ಕ್ಷೇತ್ರದಲ್ಲಿ ಐತಿಹಾಸಿಕ, ಧಾರ್ಮಿಕ ತಾಣಗಳನ್ನು ಗಮನದಲ್ಲಿಸಿ ಅಭಿವೃದ್ಧಿ ಅನುಷ್ಠಾನಕ್ಕೆ ತರುತ್ತೇನೆ:ಗಾಲಿ ಜನಾರ್ದನರೆಡ್ಡಿ ಭರವಸೆ

Gali Janardhana Reddy spoke to reporters.
ಗಾಲಿ ಜನಾರ್ದನರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಗಾಲಿ ಜನಾರ್ದನರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಗಂಗಾವತಿ(ಕೊಪ್ಪಳ): ಈ ಚುನಾವಣೆ ಬಳಿಕ ಬಳ್ಳಾರಿ ನಗರವನ್ನು ಬೆಂಗಳೂರು ಹೊರತುಪಡಿಸಿ ರಾಜ್ಯದ ಎರಡನೇ ಅತಿದೊಡ್ಡ ನಗರವನ್ನಾಗಿ ರೂಪಿಸಲು ಯೋಜನೆ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಮಾಜಿ ಸಚಿವ ಜಿ ಜನಾರ್ದನರೆಡ್ಡಿ ಹೇಳಿದರು. ನಗರದಲ್ಲಿ ಶನಿವಾರ ರಂಜಾನ್ ಹಬ್ಬದ ಪ್ರಯುಕ್ತ ಇಲ್ಲಿನ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರೊಂದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಾನು ಅಧಿಕಾರದಲ್ಲಿದ್ದ ವೇಳೆ ಬಳ್ಳಾರಿಯನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಮುಂದಿನ 20 ವರ್ಷದ ದೂರದೃಷ್ಟಿ ಇಟ್ಟುಕೊಂಡು ನನ್ನ ಅಧಿಕಾರದ ಅವಧಿಯಲ್ಲಿ ಬಳ್ಳಾರಿಯ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿತ್ತು. ಈ ಬಾರಿ ನನ್ನ ಪತ್ನಿ ಅರುಣಾ ಲಕ್ಷ್ಮಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರೆ ಬಳ್ಳಾರಿ ನಗರವನ್ನು ರಾಜ್ಯದ ಎರಡನೇ ಅತಿ ದೊಡ್ಡ ನಗರವನ್ನಾಗಿ ಮಾಡುತ್ತೇನೆ ಎಂದು ರೆಡ್ಡಿ ಭರಸವೆ ನೀಡಿದರು.

ನಾನು ಗಂಗಾವತಿಗೆ ಕಾಲಿಟ್ಟು ನೂರು ದಿನ ಆಗಿದೆ. ಗಂಗಾವತಿಯಲ್ಲಿ ಸಂಚರಿಸಿ ಇಡೀ ನಗರವನ್ನು ನೋಡಿದ್ದೇನೆ. ನಗರ, ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಆದ ಯೋಜನೆಗಳಿವೆ. ಕ್ಷೇತ್ರದಲ್ಲಿ ಐತಿಹಾಸಿಕ, ಧಾರ್ಮಿಕ ತಾಣಗಳನ್ನು ಗಮನದಲ್ಲಿಸಿರಿಕೊಂಡು ಅಭಿವೃದ್ಧಿ ಅನುಷ್ಠಾನಕ್ಕೆ ತರುತ್ತೇನೆ ಎಂದರು.

ಮುಸ್ಲಿಂರೊಂದಿಗೆ ಉತ್ತಮ ಒಡನಾಟ: ನಾನು ಚಿಕ್ಕವನಿದ್ದಾಗಿನಿಂದಲೂ ನರೆ-ಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡವನು. ಅದರಲ್ಲೂ ಮುಸ್ಲಿಮರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡವನು. ನಾನು ಬಿಜೆಪಿಯಲ್ಲಿದ್ದರೂ ಕೂಡ ಬಳ್ಳಾರಿ ನಗರಪಾಲಿಕೆಯಲ್ಲಿ ಮೊದಲ ಬಾರಿಗೆ ಏಳು ಜನ ಮುಸ್ಲಿಮರನ್ನು ಆರಿಸಿಕೊಂಡು ಬಂದಿದ್ದೆವು. ಆ ಏಳು ಜನ ಗೆದ್ದ ಸಂಭ್ರಮಾಚರಣೆಯಲ್ಲಿ ಖುಷಿಯಿಂದ ಕುಣಿಯುತ್ತಿದ್ದಾಗ ಸುಷ್ಮಾ ಸ್ವರಾಜ್ ಕೂಡ ಅವರೊಂದಿಗೆ ಹೆಜ್ಜೆ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದರು.

ಬಳಿಕ ಬಳ್ಳಾರಿ ಮಹಾನಗರ ಪಾಲಿಕೆಯ 35ರಲ್ಲಿ 32 ಜನ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು. ಅದರಲ್ಲಿ 11 ಜನ ಮುಸ್ಲಿಮರು ನಮ್ಮೊಂದಿಗೆ ಇದ್ದರು. ನನ್ನ ಅಧಿಕಾರಾವಧಿಯಲ್ಲಿ ಮುಸ್ಲಿಮರಿಗೆ ಉಪಮೇಯರ್, ಜಿಲ್ಲಾ ಪಂಚಾಯತ್​ ಸದಸ್ಯ ಸ್ಥಾನ ಸೇರಿ ಸಾಕಷ್ಟು ಪ್ರಮುಖ ಸ್ಥಾನಗಳನ್ನು ನೀಡಿದ್ದೆ ಎಂದು ಜನಾರ್ದನರೆಡ್ಡಿ ಹೇಳಿದರು.

ಗಂಗಾವತಿಯಲ್ಲೂ ಮುಸ್ಲಿಮರು ನನ್ನೊಂದಿಗೆ ಅದೇ ವಿಶ್ವಾಸದಲ್ಲಿದ್ದಾರೆ. ರಾಷ್ಟ್ರೀಯ ಪಕ್ಷಗಳಿಗೆ ಸ್ಟಾರ್ ಪ್ರಚಾರಕರಿದ್ದಾರೆ. ಆದರೆ ನನಗೆ ನನ್ನ ಪಕ್ಷದ ನಾಯಕರು, ಕಾರ್ಯಕರ್ತರೇ ಸ್ಟಾರ್ ಪ್ರಚಾರಕರು. ಇವರು ಬಿಟ್ಟರೆ ನನಗೆ ಬೇರೆ ಯಾವುದೇ ಸ್ಟಾರ್ ಪ್ರಚಾರಕರು ಬೇಕಿಲ್ಲ ಎಂದು ರೆಡ್ಡಿ ತಿಳಿಸಿದರು.

ಹಾದಿ ಬೀದಿಯಲ್ಲಿ ಟೀಕಿಸುವವರಿಗೆ ಪ್ರತಿಕ್ರಿಯೆ ನೀಡಲ್ಲ: ಹಾದಿ-ಬೀದಿಯಲ್ಲಿ ಹೋಗುವವರ ಟೀಕೆ-ಟಿಪ್ಪಣಿಗಳಿಗೆ ಪ್ರತಿಕ್ರಿಯೆ ನೀಡಲಾರೆ. ಚುನಾವಣೆ ಬಳಿಕವೂ ನಾನು ನಗರದಲ್ಲಿ ಇರುತ್ತೇನೆ. 2028ರ ಚುನಾವಣೆಯಲ್ಲಿ ಗಂಗಾವತಿಯನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡು ಪಕ್ಷವನ್ನು ಸ್ವತಂತ್ರವಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ತರುತ್ತೇನೆ ಎಂದು ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಟಪಾಲ್ ಗಣೇಶ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯಿಸಿದ ರೆಡ್ಡಿ, ಅವರೊಬ್ಬ ಕೇರಾಫ್ ಫುಟ್ಪಾತ್, ಅಂಥವರ ಬಗ್ಗೆ ಮಾತನಾಡಿದರೆ ಮಾಧ್ಯಮ, ಜನರಿಗೆ ಅವಮಾನ ಮಾಡಿದಂತೆ. ಕೆಲವರು ರಾಜಕೀಯವನ್ನೇ ಆಧರಿಸಿ ಬದುಕು ನಡೆಸುತ್ತಿದ್ದಾರೆ. ಆದರೆ ನನ್ನ ವಿಚಾರದಲ್ಲಿ ಅದು ಇಲ್ಲ. ನನಗೆ ರಾಜಕೀಯ ಆಧಾರವಲ್ಲ. ಆದರೆ ನಾನು ರಾಜಕೀಯ ಎಂದರೆ ಅಭಿವೃದ್ಧಿ ಎಂದು ಪರಿಗಣಿಸಿದವನು. ಕ್ಷೇತ್ರದ ಪ್ರತಿಯೊಂದು ಮನೆ, ವ್ಯಕ್ತಿಯೂ ಅಭಿವೃದ್ಧಿಯಾಗಬೇಕು ಎಂಬುದು ರಾಜಕೀಯ ಎಂದು ರೆಡ್ಡಿ ವ್ಯಾಖ್ಯಾನಿಸಿದರು.

ಇಕ್ಬಾಲ್ ಅನ್ಸಾರಿ ಆರೋಪಕ್ಕೆ ರೆಡ್ಡಿ ಟಾಂಗ್​: ನಾನು ಜೈಲಿಗೆ ಹೋಗಿ ಬಂದಿದ್ದೇನೆಂದು ವ್ಯಕ್ತಿಯೊಬ್ಬರು (ಇಕ್ಬಾಲ್ ಅನ್ಸಾರಿ) ಆರೋಪ ಮಾಡಿರುವುದು ಸರಿ. ಆದರೆ ನಿಮ್ಮದೇ ಪಕ್ಷದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಪರಿಸ್ಥಿತಿ ಇಂದು ಏನು..? ಅಷ್ಟೇ ಏಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಕತೆ ಏನು ಎಂದು ಕೆಆರ್​ಪಿಪಿ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನರೆಡ್ಡಿ ಪ್ರಶ್ನಿಸಿದರು.

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮಾಡಿದ್ದ ಟೀಕೆಗೆ ಶನಿವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮತ್ತ ಒಂದು ಬೆರಳು ತೋರಿಸಬಹುದು. ಆದರೆ ಮಿಕ್ಕ ಬೆರಳುಗಳು ನಿಮ್ಮತ್ತ ತೋರಿಸುತ್ತವೆ ಎಂಬುದನ್ನು ಮರೆಯಬಾರದು. ಜೈಲಿಗೆ ಹೋಗಿ ಬಂದವರೆಲ್ಲರೂ ಅಪರಾಧಿಗಳು, ಆರೋಪಿಗಳು ಎಂದಲ್ಲ. ಆದರೆ ಯಾವ ಕಾರಣಕ್ಕೆ ಜೈಲಿಗೆ ಹೋಗಿದ್ದರು ಎನ್ನುವುದನ್ನು ಮನಗಾಣಬೇಕು. ಇಂದಿನ ದಿನಗಳಲ್ಲಿ ಚುನಾಯಿತ ಪ್ರತಿನಿಧಿಗಳು ಜೈಲಿಗೆ ಹೋಗಿ ಬರುತ್ತಿರುವುದು ಸಹಜವೇ ಆಗಿದ್ದರೂ, ಯಾವ ಕಾರಣಕ್ಕೆ ಜೈಲು ಎಂಬುದನ್ನು ಅರಿಯಬೇಕು ಎಂದು ಅನ್ಸಾರಿಗೆ ಕಿವಿಮಾತು ಹೇಳಿದರು.

ಇದನ್ನೂಓದಿ:ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿರುವುದರಿಂದ ಪಕ್ಷಕ್ಕೆ ಯಾವುದೇ ಧಕ್ಕೆ ಇಲ್ಲ: ಶಂಕರ ಪಾಟೀಲ ಮುನೇನಕೊಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.