ETV Bharat / state

15 ದಿನಗಳ ಅಂತರದಲ್ಲಿ ಇಬ್ಬರು ನಿಧನ.. ಸಾವಿನಲ್ಲೂ ಒಂದಾದ ರೈತ ಸಂಘದ ಗೆಳೆಯರು

author img

By

Published : Feb 2, 2023, 11:29 AM IST

Updated : Feb 2, 2023, 1:03 PM IST

ರೈತ ಸಂಘದ ಜೋಡೆತ್ತುಗಳಂತಿದ್ದ ಗೆಳೆಯರು ಇನ್ನಿಲ್ಲ - ಮಲ್ಲಪ್ಪ- ಬಸಪ್ಪ‌ ಸಾವಿನಲ್ಲೂ ಒಂದಾದ ಸ್ನೇಹಿತರು - ರೈತ ಸಂಘಕ್ಕೆ ನಷ್ಟ

Friends of the Farmers Union united in death
ಸಾವಿನಲ್ಲಿ ಒಂದಾದ ರೈತ ಸಂಘದ ಗೆಳೆಯರು

ಕುಷ್ಟಗಿ(ಕೊಪ್ಪಳ) : ಕಳೆದ ಜ.19ರಂದು ನಿವೃತ್ತ ಅರಣ್ಯಾಧಿಕಾರಿ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಪ್ಪ ಹವಾಲ್ದಾರ ಅಕಾಲಿಕ ಮರಣ ಹೊಂದಿದ್ದರು. ಈ ಬೆನ್ನಲ್ಲೇ , ಅದೇ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಸಪ್ಪ ಶಿವಲಿಂಗಪ್ಪ ಅಮ್ಮಣ್ಣನವರ್ ಫೆ.2ಕ್ಕೆ ನಿಧನರಾಗಿರುವುದು ರೈತ ಸಂಘಕ್ಕೆ ಭರಿಸಲಾಗದ ನಷ್ಟವಾಗಿದೆ. ರೈತ ಸಂಘದ ಅಧ್ಯಕ್ಷ ಮಲ್ಲಪ್ಪ ಹವಾಲ್ದಾರ ನಿಧನರಾಗಿ 15 ದಿನಗಳ ಅಂತರದಲ್ಲಿ ಪ್ರಧಾನ ಕಾರ್ಯದರ್ಶಿ ಬಸಪ್ಪ ಅಮ್ಮಣ್ಣನವರ್ ಕೊನೆಯುಸಿರೆಳೆದರು. ಈ ಮೂಲಕ ರೈತ ಸಂಘದ ಈ ಸ್ನೇಹಿತರು ಸಾವಿನಲ್ಲೂ ಒಂದಾಗಿದ್ದಾರೆ.

ಸರ್ಕಾರದ ಸೇವೆಯಿಂದ ನಿವೃತ್ತರಾದ ಬಳಿಕ ರೈತ ಸಂಘದಲ್ಲಿ ಕೆಲಸ : ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಮಲ್ಲಪ್ಪ ಹವಾಲ್ದಾರ ಅವರು ತಮ್ಮ ಸರ್ಕಾರಿ ವೃತ್ತಿಯಿಂದ ನಿವೃತ್ತರಾದ ನಂತರ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ರೈತರ ಸಮಸ್ಯೆಗಳಿಗೆ ಹೆಗಲು ಕೊಟ್ಟಿದ್ದರು. ಹಾಗೂ ಇವರೊಂದಿಗೆ ಬಸಪ್ಪ ಶಿವಲಿಂಗಪ್ಪ ಅಮ್ಮಣ್ಣನವರ್ ಉತ್ತಮ ಸ್ನೇಹಿತನಾಗಿ ರೈತ ಪರ ಹೋರಾಟಗಳಲ್ಲಿ ಜೊತೆಗಿದ್ದವರು.

ಪರಮಾಪ್ತನ ಅಗಲಿಕೆ ಬಳಿಕ ಮಾನಸಿಕವಾಗಿ ನೊಂದಿದ್ದ ಗೆಳೆಯ.. ಹೀಗೆ ಪರಮಾಪ್ತ ಸ್ನೇಹಿತರಂತಿದ್ದ ಮಲ್ಲಪ್ಪ- ಬಸಪ್ಪ‌ ಜೋಡೆತ್ತುಗಳಂತಿದ್ದರು. ಸ್ನೇಹಿತ ಅಧ್ಯಕ್ಷ ‌ಮಲ್ಲಪ್ಪ ಹವಾಲ್ದಾರ ಅಕಾಲಿಕ ನಿಧನದಿಂದ ಕಂಗಾಲಾಗಿದ್ದ ಪ್ರಧಾನ ಕಾರ್ಯದರ್ಶಿ ಬಸಪ್ಪ ಅಮ್ಮಣ್ಣನವರ್​ ಅವರು ಮಾನಸಿಕವಾಗಿ ಬಹಳ ನೊಂದಿದ್ದರು ಎನ್ನಲಾಗ್ತಿದೆ. ಇವರು ಅತಿಯಾದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರೂ ಸಹ ರೈತ ಸಂಘದಲ್ಲಿ ಸಕ್ರಿಯರಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರು.

ಕಳೆದ 15 ದಿನಗಳಲ್ಲಿ ನಮ್ಮ ಸಂಘದ ತಾಲೂಕಾ ಘಟಕದ ಅಧ್ಯಕ್ಷ-ಪ್ರಧಾನ ಕಾರ್ಯದರ್ಶಿಯನ್ನು ಕಳೆದುಕೊಂಡಿರುವುದು ರೈತ ಸಂಘಕ್ಕೆ ತುಂಬಲಾರದ ನಷ್ಟ ಎಂಬ ಭಾವನೆ ಜಿಲ್ಲೆಯ ರೈತ ಮುಖಂಡರಲ್ಲಿ ಮೂಡಿದೆ. ನಮ್ಮ ತಂದೆ ನಿಧನರಾದಾಗ ದುಃಖವಾಗಿರಲಿಲ್ಲ. ಆದ್ರೆ ಕಳೆದ 15 ದಿನಗಳಲ್ಲಿ ಈ ಇಬ್ಬರು ಮುಖಂಡರನ್ನು ಕಳೆದುಕೊಂಡಿರುವುದು ನಮ್ಮ ರೈತ ಸಂಘಕ್ಕೆ ಭರಿಸಲಾಗದ ನಷ್ಟ ಉಂಟಾಗಿದೆ ಎಂದು ಜಿಲ್ಲಾ ಅಧ್ಯಕ್ಷ ನಜೀರಸಾಬ್ ಮೂಲಿಮನಿ ಶೋಕ ವ್ಯಕ್ತಪಡಿಸಿದ್ದಾರೆ.

ಬಾಲ್ಯ ಸ್ನೇಹಿತರು: ಮಲ್ಲಪ್ಪ ಹವಾಲ್ದಾರ ಹಾಗೂ ಬಸಪ್ಪ ಅಮ್ಮಣ್ಣನವರ್ ಬಾಲ್ಯ ಸ್ನೇಹಿತರು. ಮಲ್ಲಪ್ಪ ಹವಾಲ್ದಾರ ಅವರು ತಾಲೂಕಿನ ಕಾಟಾಪೂರದವರಾಗಿದ್ದು, ಬಸಪ್ಪ ಅಮ್ಮಣ್ಣನವರ್ ಅವರ ಸ್ವಗ್ರಾಮ ಯರಿಗೋನಾಳ. ಇವರಿಬ್ಬರು ಹೈಸ್ಕೂಲ್ ವಿದ್ಯಾಭ್ಯಾಸದಿಂದ ಸ್ನೇಹಿತರಾಗಿದ್ದರು. ಮಲ್ಲಪ್ಪ ಹವಾಲ್ದಾರ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರೆ, ಬಸಪ್ಪ ಅವರು ಗ್ರಾಪಂ ಪಿಡಿಓ ಆಗಿ ನಿವೃತ್ತರಾಗಿದ್ದರು. ಇಬ್ಬರಿಗೂ 65 ವರ್ಷ ವಯಸ್ಸಾಗಿತ್ತು. ನಿವೃತ್ತಿ ನಂತರವೂ ಕುಷ್ಟಗಿ ಪಟ್ಟಣದಲ್ಲಿ ನಿವೃತ್ತ ಜೀವನದೊಂದಿಗೆ ರೈತ ಸಂಘದಲ್ಲಿ ಸಕ್ರೀಯರಾಗಿದ್ದರು.

ಇಂದು ಅಂತ್ಯಕ್ರಿಯೆ: ಬಸಪ್ಪ ಅಮ್ಮಣ್ಣನವರ್ ಅವರ ಅಂತ್ಯಕ್ರಿಯೆ ಕುಷ್ಟಗಿ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಗುರುವಾರ ಮಧ್ಯಾಹ್ನ 2ಕ್ಕೆ ನಡೆಯಲಿದೆ.

ಇದನ್ನೂ ಓದಿ : ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿ, ಕನ್ನಡ ಶಾಲೆ ಉಳಿಸಬೇಕಿದೆ: ಹೊರಟ್ಟಿ

Last Updated : Feb 2, 2023, 1:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.