ಕಣ್ಣೀರ ಕತೆ 12 ವರ್ಷದ ಹಿಂದೆಯೇ ಮುಗಿದು ಹೋಗಿದೆ: ಜನಾರ್ದನ ರೆಡ್ಡಿ

author img

By

Published : Jan 11, 2023, 9:35 PM IST

former-minister-janardhan-reddy-statement

56ನೇ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಸಚಿವ ಜನಾರ್ದನ ರೆಡ್ಡಿ - ನಾನು ಇನ್ನು ಕಣ್ಣೀರು ಹಾಕುವುದಿಲ್ಲ - ಕ್ಷೇತ್ರವನ್ನ ಇತರರಿಗೆ ಮಾದರಿ ಆಗುವಂತೆ ಅಭಿವೃದ್ದಿ ಮಾಡುತ್ತೇನೆ

ಕಣ್ಣೀರ ಕತೆ 12 ವರ್ಷದ ಹಿಂದೆಯೇ ಮುಗಿದು ಹೋಗಿದೆ : ಜನಾರ್ದನ ರೆಡ್ಡಿ

ಗಂಗಾವತಿ : ನಾನು ಇಂದು ಕಣ್ಣೀರು ಹಾಕುವ ಪ್ರಯತ್ನ ಮಾಡುವುದಿಲ್ಲ. ನಾನು ಕಣ್ಣೀರು ಹಾಕುವ ಕತೆ 12 ವರ್ಷದ ಹಿಂದೆಯೇ ಮುಗಿದು ಹೋಗಿದೆ. ಈಗ ಏನಿದ್ದರೂ ರೆಡ್ಡಿ ಏನು ಎಂಬದನ್ನು ತೋರಿಸಿ ಕೊಡುವ ಕಾಲ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು.

ತಮ್ಮ 56ನೇ ಜನ್ಮದಿನದ ನಿಮಿತ್ತ ಪಕ್ಷದ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೈಲಿನಿಂದ ನನಗೆ ಬಿಡುಗಡೆಯಾದ ಬಳಿಕ ನಾನು ಬೆಂಗಳೂರಿನಲ್ಲಿದ್ದೆ. ಆದರೆ ಬೆಂಗಳೂರು ನನಗೆ ಬೇಜಾರಾಗಿತ್ತು. ಬಯಲುಸೀಮೆ ಅದರಲ್ಲೂ ಬಳ್ಳಾರಿ - ಗಂಗಾವತಿ ಪ್ರದೇಶಕ್ಕೆ ಬಂದ ಬಳಿಕ ನನಗೆ ಹೆಚ್ಚು ಶಕ್ತಿ ಬಂದಿದೆ. 2023ರಲ್ಲಿ ನನಗೆ ಇಲ್ಲಿನ ಜನ ಒಂದು ಅವಕಾಶ ಕೊಡಲಿದ್ದಾರೆ. 2023ರ ಬಳಿಕ ಕ್ಷೇತ್ರ ಹೇಗಾಗುತ್ತದೆ ಎಂದು ಇಲ್ಲಿನ ಜನರೇ ನೋಡಲಿದ್ದಾರೆ ಎಂದರು.

ಮಾದರಿಯಾಗುವಂತೆ ಅಭಿವೃದ್ಧಿ ಕೈಗೊಳ್ಳುತ್ತೇನೆ: 2028ಕ್ಕೆ ಮತ್ತೆ ಚುನಾವಣೆಗೆ ನಿಂತಾಗ 2023ರ ಕ್ಷೇತ್ರದಲ್ಲಾದ ಬದಲಾವಣೆ ಗುರುತಿಸಿ ನನ್ನನ್ನು ಮತ್ತೆ ಆಯ್ಕೆ ಮಾಡುವಂತೆ ಕ್ಷೇತ್ರವನ್ನು ಇತರರಿಗೆ ಮಾದರಿಯಾಗುವಂತೆ ಅಭಿವೃದ್ಧಿ ಮಾಡಿ ತೋರಿಸುತ್ತೇನೆ. ನನ್ನ ಜನ್ಮ ದಿನದಂದೇ ಬಳ್ಳಾರಿಯಲ್ಲಿ ನನ್ನ ಪತ್ನಿ ಅರುಣಾಲಕ್ಷ್ಮಿ ಮತ್ತು ಪುತ್ರಿ ಬ್ರಹ್ಮಿಣಿ ಕಾರ್ಯಕ್ರಮ ಆಯೋಜಿಸುವ ಮೂಲಕ ನನ್ನ ಅನುಪಸ್ಥಿತಿ ಕಾರ್ಯಕರ್ತರಿಗೆ ಕಾಡದಂತೆ ಮಾಡಿದ್ದಾರೆ ಎಂದರು.

ರಾಜಕೀಯವಾಗಿ ನನ್ನನ್ನು ಮುಗಿಸಲು, ನಾನು ಸಂಪಾದಿಸಿದ್ದ ಎರಡು ಸಾವಿರ ಕೋಟಿ ಮೊತ್ತದ ಹಣವನ್ನು ಅಕ್ರಮ ಸಂಪಾದನೆ ಎಂದು ಆರೋಪ ಹೊರಿಸಿದರು. ಅಲ್ಲದೇ ಇಡೀ ಹಣವನ್ನು ಕೇಂದ್ರೀಯ ತನಿಖಾ ತಂಡ ವಶಕ್ಕೆ ಪಡೆದುಕೊಂಡಿದೆ ಎಂದು ಹೇಳಿದರು.

ಹೈಕೋರ್ಟ್​ನಲ್ಲಿ ನನ್ನ ಪರವಾಗಿ ತೀರ್ಪು ಬಂದಿದೆ : ರಾಜ್ಯದ ಹೈಕೋರ್ಟ್​ನಲ್ಲಿ ನನ್ನ ಪರವಾಗಿ ತೀರ್ಪು ಬಂದಿದೆ. ಆ ಎರಡು ಸಾವಿರ ಕೋಟಿ ಈಗ ನಾಲ್ಕು ಸಾವಿರ ಕೋಟಿಯಾಗಿದೆ. ಆದರೆ, ತನಿಖಾ ತಂಡ ಇದೀಗ ಸುಪ್ರೀಂ ಮೆಟ್ಟಿಲೇರಿದೆ. ಅಲ್ಲೂ ನನಗೆ ಗೆಲುವು ಸಿಗಲಿದೆ. ನಾನು ಕಷ್ಟಪಟ್ಟು ಸಂಪಾದನೆ ಮಾಡಿದ್ದ ಹಣ ಶೀಘ್ರ ನನಗೆ ಸಿಗಲಿದೆ ಎಂದು ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ನಾನು ಮಂತ್ರಿಯಾಗಿದ್ದಾಗ ಬಳ್ಳಾರಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ 900 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. 2008ರಲ್ಲಿ ಸರ್ಕಾರ ಬಂದ ಮೇಲೆ ಕಲಬುರಗಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾದೆ ಎಂದರು.

ನನ್ನನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ: ಈ ಭಾಗದ ಪ್ರವಾಸಕ್ಕೆ ಎಂದು ಬರುವ ಪ್ರವಾಸಿಗರಿಗೆ ಅನುಕೂಲವಾಗಲಿ ಎಂಬ ಉದ್ದೇಶ ನನ್ನದಾಗಿತ್ತು. ಈ ಯೋಜನೆಗಳ ಮೂಲಕ ರೆಡ್ಡಿ ದೊಡ್ಡಮಟ್ಟಕ್ಕೆ ಬೆಳೆಯುತ್ತಾರೆ ಎಂದು ಭಾವಿಸಿ ರಾಜಕೀವಾಗಿ ನನ್ನ ಏಳ್ಗೆ ಬಯಸದವರು ಇದನ್ನು ತಡೆದರು. ನನ್ನ ಕನಸುಗಳನ್ನು ನಿಲ್ಲಿಸುವ ಯೋಚನೆ ಮಾಡಿದರು. ನಾನು ಯಾವುದಕ್ಕೂ ಎದೆಗುಂದಿಲ್ಲ. ಬಸವಣ್ಣನವರಂತಹವರಿಗೆ ಅನೇಕ ಕಷ್ಟ ಕೊಟ್ಟರು. ಇನ್ನು ನಾನು ಸಾಮಾನ್ಯ ಮನುಷ್ಯ, ಇಲ್ಲಿ ಯಾರ ಹೆಸರು ತೆಗೆದುಕೊಂಡು ಯಾರ ಬಗ್ಗೆಯೂ ಮಾತನಾಡುವುದಿಲ್ಲ ಎಂದು ರೆಡ್ಡಿ ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಕುಟುಕಿದರು.

ಫೇಸ್​ಬುಕ್​, ಟ್ವಿಟರ್ ಹ್ಯಾಕ್ : ನನ್ನ ಫೇಸ್​ಬುಕ್, ಟ್ವಿಟರ್​ ಖಾತೆಗಳಲ್ಲಿ ಲಕ್ಷಾಂತರ ಜನ ಹಿಂಬಾಲಕರು ಇರುವುದನ್ನು ಕಂಡು ಸಾಮಾಜಿಕ ಜಾಲತಾಣಗಳ ಖಾತೆ ಸ್ಥಗಿತಗೊಳಿಸಿದ್ದಾರೆ. ಆಸ್ತಿಗಳನ್ನೇ ಜಪ್ತಿ ಮಾಡುವ ಪ್ರಯತ್ನ ಮಾಡುತ್ತಿರುವಾಗ ಫೇಸ್ ಬುಕ್ ಜಪ್ತಿ ಮಾಡುವುದರಲ್ಲಿ ಆಶ್ಚರ್ಯವೇನಿಲ್ಲ. ಆಸ್ತಿಗಳನ್ನು ಜಪ್ತಿ ಮಾಡಿದರೆ ಈ ಜನಾರ್ದನರೆಡ್ಡಿ ಏನು ಮಾಡುತ್ತಾರೆ ಎಂದು ಯಾರೂ ಚಿಂತೆ ಮಾಡಬೇಡಿ. ಅಂದು ಎರಡು ಸಾವಿರ ಕೋಟಿ ಜಪ್ತಿ ಮಾಡಿದ್ದರು. ಈಗ ನಾಲ್ಕು ಸಾವಿರ ಕೋಟಿ ಆಗಿದೆ. ಕೆಳಗಿನ ಕೋರ್ಟ್​ನಲ್ಲಿ ನಾನು ಗೆದ್ದಿರುವೆ. ಈಗ ಅವರು ಮೇಲಿನ ಕೋರ್ಟ್​ಗೆ ಹೋಗಿದ್ದಾರೆ.

ಸತ್ಯ ಹೇಳಿ ಉಸಿರು ಬಿಡುವೆ : ನಾನು ಯಾರ ಜೇಬಿಗೂ ಕೈಹಾಕದೇ, ಲಂಚ ತೆಗೆದುಕೊಳ್ಳದೇ ಸ್ವಂತ ವ್ಯಾಪಾರದಿಂದ ಸಂಪಾದನೆ ಮಾಡಿದ್ದೇನೆ. ನಾನು ಸತ್ಯದ ಹಾದಿಯಲ್ಲಿಯೇ ಜೀವನ ಮಾಡುತ್ತಿರುವೆ. ಇಂದಲ್ಲ ನಾಳೆ ಸತ್ಯ ಏನು ಎಂಬುದು ಜಗತ್ತಿಗೆ ಗೊತ್ತಾಗುತ್ತದೆ. ಆ ಸತ್ಯ ಗೊತ್ತುಪಡಿಸಿಯೇ ನಾನು ಉಸಿರು ಬಿಡುವೆ ಎಂದು ಜನಾರ್ದನರೆಡ್ಡಿ ಇದೇ ವೇಳೆ ಘೋಷಣೆ ಮಾಡಿದರು.

ಗಂಗಾವತಿ ತಾಲೂಕಿನ ಜಗದ್ವಿಖ್ಯಾತ ಅಂಜನಾದ್ರಿಯನ್ನು ಹಿಂದುಗಳ ಪರಮ ಪವಿತ್ರ ತಾಣಗಳಾಗಿರುವ ತಿರುಪತಿ ಮತ್ತು ಅಯೋಧ್ಯೆಯ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ತೋರಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಪ್ರಕಟಿಸಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ : ಡಿ ಕೆ ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.