ಗಂಗಾವತಿ: ಕಾರಟಗಿ ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ಆಗಸ್ಟ್ 12ರಂದು ನಡೆದಿದ್ದ ಗುಂಪು ಘರ್ಷಣೆ ಪ್ರಕರಣದ ಬಗ್ಗೆ ಮುಂಜಾಗ್ರತೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ಕಾರಣಕ್ಕೆ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವೆಂಟಿಗೋಡೆ ಆದೇಶಿಸಿದ್ದಾರೆ. ಇದೇ ವೇಳೆ, ಕಾರಟಗಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ರಾಮಯ್ಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷರಿಗೆ ಶಿಫಾರಸು ಮಾಡಿದ್ದಾರೆ.
ಬೂದಗುಂಪಾ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹುದ್ದೆಯ ಮೀಸಲಾತಿಗೆ ಸಂಬಂಧಿಸಿದಂತೆ ನಡೆದ ಘರ್ಷಣೆ ಪ್ರಕರಣದಲ್ಲಿ ಸುರೇಶ ಜೋಗೀನ್ ಮತ್ತು ಶ್ರೀಕಾಂತ್ ಎಂಬ ಇಬ್ಬರು ಕಾನ್ಸ್ಟೇಬಲ್ಗಳು ಅಮಾನತಾಗಿದ್ದಾರೆ. ಗ್ರಾಮದಲ್ಲಿ ಜರುಗಿದ ಗಲಾಟೆ ವಿಷಯದಲ್ಲಿ ಮುಂಜಾಗ್ರತೆವಹಿಸಿ, ಮಾಹಿತಿ ಸಂಗ್ರಹಿಸಿ, ಅಗತ್ಯ ಕ್ರಮ ಜರುಗಿಸುವಲ್ಲಿ ವಿಫಲರಾಗಿ ಕರ್ತವ್ಯಲೋಪ ತೋರಿಸಿದ್ದಕ್ಕಾಗಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಪೊಲೀಸ್ ಕಾನ್ಸ್‌ಟೇಬಲ್ ಅಮಾನತು (ಪ್ರತ್ಯೇಕ ಪ್ರಕರಣ): ರಾತ್ರಿ ಪಾಳಿಯಲ್ಲಿ ನಿದ್ರಿಸುತ್ತಿದ್ದ ಹೆಡ್ ಕಾನ್ಸ್‌ಟೇಬಲ್ ಹಾಗೂ ಕಾನ್ಸ್ಟೇಬಲ್ರನ್ನು ಕರ್ತವ್ಯಲೋಪದ ಆರೋಪದಡಿ ಅಮಾನತುಗೊಳಿಸಿ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್.ಗಿರೀಶ್ (ಜುಲೈ 11-2023) ಆದೇಶಿಸಿದ್ದರು. ಮಹದೇವಪುರ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಜಯರಾಮ್ ಎ.ಎನ್ ಹಾಗೂ ಕಾನ್ಸ್‌ಟೇಬಲ್ ಈರಪ್ಪ ಉಂಡಿ ಅಮಾನತಾದ ಪೊಲೀಸ್ ಸಿಬ್ಬಂದಿ ಎಂದು ತಿಳಿದುಬಂದಿದೆ.
ಜುಲೈ 9ರಂದು ರಾತ್ರಿ ಠಾಣೆಯ ಎಸ್ಎಚ್ಓ ಪ್ರಭಾರದಲ್ಲಿದ್ದಾಗ ಹೆಡ್ ಕಾನ್ಸ್‌ಟೇಬಲ್ ಜಯರಾಮ್ ಎ. ಎನ್ ಹಾಗೂ ಕಾನ್ಸ್‌ಟೇಬಲ್ ಈರಪ್ಪ ಉಂಡಿ ರಾತ್ರಿ ಪಾಳಿಯಲ್ಲಿದ್ದರು. ಗಸ್ತಿನಲ್ಲಿದ್ದ ಸಿಎಆರ್ (ನಗರ ಸಶಸ್ತ್ರ ಮೀಸಲು) ಡಿಸಿಪಿಯವರು ಠಾಣೆಗೆ ಭೇಟಿ ನೀಡಿದಾಗ ಸಿಬ್ಬಂದಿ ನಿದ್ರಿಸುತ್ತಿರುವುದು ಕಂಡು ಬಂದಿತ್ತು. ಅಲ್ಲದೆ ಠಾಣೆಯ ಸೆಂಟ್ರಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಹೆಸರನ್ನು ಕೇಳಿದಾಗ, 'ಯಾರು ಎಂಬುದು ಗೊತ್ತಿಲ್ಲ' ಎಂದು ಉತ್ತರಿಸಿರುವುದರಿಂದ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನ ಪ್ರದರ್ಶಿಸಿರುವ ಆರೋಪದಡಿ ಇಬ್ಬರು ಸಿಬ್ಬಂದಿಯನ್ನು ತಕ್ಷಣವೇ ಅಮಾನತುಗೊಳಿಸಿ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್. ಗಿರೀಶ್ ಆದೇಶ ಹೊರಡಿಸಿದ್ದರು.