ETV Bharat / state

ಫೆಬ್ರವರಿ 3ನೇ ವಾರದಲ್ಲಿ ಆನೆಗೊಂದಿ ಉತ್ಸವ, ಕೇಂದ್ರ ಗೃಹಸಚಿವ ಅಮಿತ ಶಾ ಚಾಲನೆ : ಶಾಸಕ ಪರಣ್ಣ ಮುನವಳ್ಳಿ

author img

By

Published : Jan 31, 2023, 5:29 PM IST

Updated : Jan 31, 2023, 6:06 PM IST

ಆನೆಗೊಂದಿ ಉತ್ಸವಕ್ಕೆ ಭರ್ಜರಿ ತಯಾರಿ- ಉತ್ಸವಕ್ಕೆ ಮೂರು ಕೋಟಿ ಅನುದಾನ ಸರ್ಕಾರದಿಂದ ಬಿಡುಗಡೆ-ಉತ್ಸವಕ್ಕೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಚಾಲನೆ- ಶಾಸಕ ಪರಣ್ಣ ಮುನವಳ್ಳಿ ಮಾಹಿತಿ

MLA Paranna Munavalli spoke to Etv Bharat
ಈಟಿವಿ ಭಾರತ ಜತೆಗೆ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ

ಶಾಸಕ ಪರಣ್ಣ ಮುನವಳ್ಳಿ

ಗಂಗಾವತಿ(ಕೊಪ್ಪಳ): ಫೆಬ್ರವರಿ ಮೂರನೇ ವಾರದಲ್ಲಿ ಆನೆಗೊಂದಿ ಉತ್ಸವ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಈಗಾಗಲೇ ಉತ್ಸವಕ್ಕೆ ಪೂರಕ ಸಿದ್ಧತೆ ನಡೆಯುತ್ತಿವೆ. ಉತ್ಸವಕ್ಕೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಆಗಮಿಸಿ ಚಾಲನೆ ನೀಡಲಿದ್ದಾರೆ ಎಂದು ಗಂಗಾವತಿ ಕ್ಷೇತ್ರದ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ಆನೆಗೊಂದಿ ಉತ್ಸವಕ್ಕೆ ಮೂರು ಕೋಟಿ ಅನುದಾನ: ನಗರದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಹಂಪಿ ಉತ್ಸವದಂತೆ ಆನೆಗೊಂದಿಯ ಉತ್ಸವವನ್ನೂ ಅದ್ಧೂರಿಯಿಂದ ಆಚರಿಸಲಾಗುವುದು. ಈಗಾಗಲೇ ರಾಜ್ಯ ಸರ್ಕಾರವು ಎರಡು ಕೋಟಿ ರೂಪಾಯಿ ಅನುದಾನ ನೀಡಿದೆ. ಜಿಲ್ಲಾ ಉಸ್ತುವಾರಿಯನ್ನು ಸಚಿವ ಆನಂದ ಸಿಂಗ್ ವಹಿಸಿಕೊಂಡಿರುವುದರಿಂದ ಪ್ರವಾಸೋದ್ಯಮ ಇಲಾಖೆಯೂ ಸಹ ಒಂದು ಕೋಟಿ ಹಣವನ್ನೂ ನೀಡುತ್ತಿದೆ. ಒಟ್ಟು ಮೂರು ಕೋಟಿ ಮೊತ್ತದಲ್ಲಿ ಆನೆಗೊಂದಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುವುದು ಎಂದು ತಿಳಿಸಿದರು.

160 ಕೋಟಿ ಮೊತ್ತದಲ್ಲಿ ಅಂಜನಾದ್ರಿ ಅಭಿವೃದ್ಧಿ : ವಿಶ್ವ ವಿಖ್ಯಾತ ಅಂಜನಾದ್ರಿ ದೇಗುಲಕ್ಕೆ ಬರುವ ಸಹಸ್ರಾರು ಭಕ್ತರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 120 ಕೋಟಿ ರೂಪಾಯಿ ಅನುದಾನ ನೀಡಿದೆ. ಈ ಅನುದಾನದಲ್ಲಿ ಕೈಗೊಳ್ಳಲಿರುವ ಕಾಮಗಾರಿಗಳಿಗೆ ಫೆ.14 ಅಥವಾ 15ರಂದು ಚಾಲನೆ ನೀಡಬೇಕಾಗಿತ್ತು. ಇದರ ಕುರಿತಾಗಿ ಈಗಾಗಲೇ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರವಾಸೋದ್ಯಮ ಖಾತೆಯ ಮಂತ್ರಿ ಆನಂದ ಸಿಂಗ್ ಫೆ.14-15ರಂದು ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವುದಾಗಿ ಹೇಳಿದ್ದರು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಲಹೆ ಮೇರೆಗೆ ಮುಂದೂಡಲಾಗಿದೆ ಎಂದರು.

ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ಮುಂದಕ್ಕೆ: ಹಂಪಿ ಉತ್ಸವಕ್ಕೆ ಬಂದು ಹೋಗಿರುವ ಬಸವರಾಜ ಬೊಮ್ಮಾಯಿ ಅವರು ತಕ್ಷಣಕ್ಕೆ ಮತ್ತೆ ಅಂಜನಾದ್ರಿಗೆ ಬರುವುದು ಕಷ್ಟ ಎಂಬ ಕಾರಣದಿಂದಾಗಿ ಒಂದೆರಡು ವಾರ ಅಂಜನಾದ್ರಿ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆಯನ್ನೂ ಮುಂದಕ್ಕೆ ಹಾಕಲಾಗಿದೆ ಎಂದು ಶಾಸಕ ಮಾಹಿತಿ ನೀಡಿದರು.

ಅಮಿತ ಶಾ ಆಗಮನ: ಅಂಜನಾದ್ರಿಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಭೇಟಿ ನೀಡಲಿರುವ ಹಿನ್ನೆಲೆ ಫೆಬ್ರವರಿ ಮೂರು ಮತ್ತು ನಾಲ್ಕನೇ ವಾರದಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಇದೇ ಸಮಯದಲ್ಲಿ ಆನೆಗೊಂದಿ ಉತ್ಸವ ಜರುಗಲಿದೆ. ಆನೆಗೊಂದಿ ಉತ್ಸವಕ್ಕೆ ಶಾ ಚಾಲನೆ ನೀಡಲಿದ್ದಾರೆ. ಒಂದೊಮ್ಮೆ ಆಮಿತ ಶಾ ಆನೆಗೊಂದಿ ಉತ್ಸವಕ್ಕೆ ಚಾಲನೆ ನೀಡಿದ್ದಲ್ಲಿ ಇತಿಹಾಸದಲ್ಲಿ ಈ ಬಾರಿಯ ಆನೆಗೊಂದಿ ಉತ್ಸವ ದಾಖಲೆಯಾಗಿ ಉಳಿದುಕೊಳ್ಳಲಿದೆ. ಹೀಗಾಗಿ ಎರಡು ಕಾರ್ಯಕ್ರಮಗಳನ್ನು ಒಟ್ಟಿಗೆ ಮಾಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಸ್ಪಷ್ಟಪಡಿಸಿದರು.

ಕೆಕೆಡಿಬಿಯಿಂದ 40 ಕೋಟಿ: ಚಿಕ್ಕರಾಂಪುರದಲ್ಲಿರುವ ಅಂಜನಾದ್ರಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈಗಾಗಲೇ 120 ಕೋಟಿ ಬಿಡುಗಡೆ ಮಾಡಿದೆ. ಕಲ್ಯಾಣ ಕರ್ನಾಟಕದ ಪ್ರದೇಶ ಅಭಿವೃದ್ಧಿ ಮಂಡಳಿಯಿಂದಲೂ 40 ಕೋಟಿ ಮೊತ್ತದ ಅನುದಾನ ಬಿಡುಗಡೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

160 ಕೋಟಿ ಮೊತ್ತದಲ್ಲಿ ಅಭಿವೃದ್ಧಿ: ಒಟ್ಟು 160 ಕೋಟಿ ಮೊತ್ತದಲ್ಲಿ ನಾನಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಫೆ. 10ರಿಂದ 24ರವರೆಗೆ ರಾಜ್ಯ ಸರ್ಕಾರದ 2023-24ನೇ ಸಾಲಿನ ಮುಂಗಡ ಅಯವ್ಯಯದ ಅಧಿವೇಶನವಿದೆ. ಈ ಅಧಿವೇಶನ ಮುಗಿದ ಬಳಿಕ ಸಾಲು ಸಾಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಅಂಜನಾದ್ರಿ ಸ್ವರೂಪಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ: ಅಂಜನಾದ್ರಿಯಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವಸತಿ ಸಮುಚ್ಛಯ ನಿರ್ಮಾಣ, ಯಾತ್ರೆ ನಿವಾಸ, ರಸ್ತೆ, ಶೌಚಾಲಯಗಳಿಂದ ಅಂಜನಾದ್ರಿ ಮೂಲ ಸ್ವರೂಪ ಮತ್ತು ನೈಸರ್ಗಿಕ ಸಂಪನ್ಮೂಲಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ ಕೈಗೊಳ್ಳಲಾಗುವುದು. ಈ ಬಗ್ಗೆ ಸ್ಥಳೀಯರಿಗೆ ಯಾವುದೇ ಆತಂಕ ಬೇಡ ಎಂದು ಶಾಸಕರು ಅಭಯ ನೀಡಿದರು.

ಭೂಮಿ ನೀಡುವ ವಿಚಾರದಲ್ಲಿ ಕೆಲವರಲ್ಲಿ ಗೊಂದಲ ನಿರ್ಮಾಣವಾಗಿದೆ. ಈ ಬಗ್ಗೆ ಎರಡು-ಮೂರು ಬಾರಿ ಈಗಾಗಲೇ ರೈತರೊಂದಿಗೆ ಚರ್ಚೆ ನಡೆಸಲಾಗಿದೆ. ನೈಸರ್ಗಿಕ ಸ್ವರೂಪಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿಗೆ ತಮ್ಮ ತಕರಾರು ಇಲ್ಲ ಎಂದು ರೈತರು ಈಗಾಗಲೇ ಹೇಳಿದ್ದಾರೆ. ಯಾರಿಗೂ ತೊಂದರೆಯಾಗದಂತೆ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಶಾಸಕ ಮುನವಳ್ಳಿ ಭರವಸೆ ನೀಡಿದರು.

ಇದನ್ನೂಓದಿ:ಹಿಂದೂ ಧರ್ಮ ಟೀಕಿಸುವವರು ತಾಕತ್ತಿದ್ದರೆ ಹಿಂದೂಗಳ ಮತ ಬೇಡ ಅನ್ನಲಿ: ಕಟೀಲ್ ಸವಾಲು

Last Updated : Jan 31, 2023, 6:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.