ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕ್ಷೇತ್ರವನ್ನು ಕೊನೆಗೂ ಅಂತಿಮ ಮಾಡಿದ್ದಾರೆ. ಕೊಲಾರದಲ್ಲಿ ಇಂದು (ಸೋಮವಾರ) ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ತಮ್ಮ ಕ್ಷೇತ್ರವನ್ನು ಬಹಿರಂಗಪಡಿಸಿದ್ದಾರೆ. ಎಲ್ಲರೂ ಕೋಲಾರದಿಂದ ಸ್ಪರ್ಧೆ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಕೆ.ಹೆಚ್.ಮುನಿಯಪ್ಪ ಸೇರಿದಂತೆ ಎಲ್ಲರೂ ಒತ್ತಾಯ ಮಾಡಿದ್ದಾರೆ.
ಕ್ಷೇತ್ರದ ಜನರು ಮುಖ್ಯ. ಆಮೇಲೆ ನಾಯಕರುಗಳು. ಜನರ ಆಶೀರ್ವಾದ ಇದ್ದರೆ, ಮಾತ್ರ ರಾಜಕೀಯದಲ್ಲಿ ಉಳಿಯುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಆಗೋಲ್ಲ. ಕೆಲವು ದಿನಗಳ ಹಿಂದೆ ಕೋಲಾರಕ್ಕೆ ಬಂದಿದ್ದೆ. ಎಲ್ಲ ಕಡೆ ಕೋಲಾರ ಕ್ಷೇತ್ರದಿಂದ ನಿಲ್ಲಬೇಕೆಂದು ಒತ್ತಾಯ ಮಾಡಿದ್ದರು. ಹಾಗಾಗಿ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಅವರು ಹೇಳಿದರು. ಪಕ್ಷದಲ್ಲಿ ಶಿಸ್ತಿರಬೇಕು, ಹಾಗಾಗಿ ಹೈಕಮಾಂಡ್ ಒಪ್ಪಿಗೆ ನೀಡಬೇಕಾಗುತ್ತದೆ. ಎಲ್ಲರಿಗೂ ಇರುವ ರೀತಿ ನನಗೂ ಪ್ರಿವಲೇಜ್ ಇದೆ. ಹೀಗಾಗಿ ಹೈಕಮಾಂಡ್ ಹೇಳಿದ ಹಾಗೆ ನಡೆದುಕೊಳ್ಳಲಾಗುತ್ತದೆ. ತಪ್ಪು ಸಂದೇಶ ಹೋಗಬಾರದು. ನಾನು ಇಲ್ಲಿ ಸ್ಪರ್ಧೆ ಮಾಡಲು ತಯಾರಿದ್ದೇನೆ. ಆದರೆ, ಹೈಕಮಾಂಡ್ ತೀರ್ಮಾನ ಮಾಡಬೇಕು ಎಂದರು.
ನಾನು ಚಾಮುಂಡಿ ಕ್ಷೇತ್ರದಿಂದ ಐದು ಬಾರಿ ಶಾಸಕನಾಗಿದ್ದೆ. ಎರಡು ಬಾರಿ ವರುಣಾ, ಒಂದು ಬಾರಿ ಬಾದಾಮಿ ಕ್ಷೇತ್ರದಿಂದ ಗೆದ್ದಿರುವೆ. ಆಗದವರು ನನ್ನ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಇಲ್ಲ, ಕ್ಷೇತ್ರ ಹುಡುಕಾಟದಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ನನಗೆ ಹಳೇ ಕ್ಷೇತ್ರ ವರುಣಾದಿಂದಲೂ ನಿಲ್ಲಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಬಾದಾಮಿ ದೂರ ಆಗಿದೆ. ಬರಲು ಕಷ್ಟ ಎಂದಾಗ, ಬಾದಾಮಿ ಕ್ಷೇತ್ರದ ಜನರು ಹೆಲಿಕಾಪ್ಟರ್ ತೆಗೆದುಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದರು.
ಆದರೆ, ಈಗ ಮಾತು ಕೊಡುತ್ತೇನೆ, ಪ್ರತಿ ವಾರ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಕೂಡ ನನ್ನನ್ನು ಭೇಟಿ ಮಾಡಬಹುದು. ಲೀಡರ್ಗಳ ಮೂಲಕ ಬರಬೇಕೆಂದು ಏನಿಲ್ಲ. ಇದು ನನ್ನ ಸಂಪ್ರದಾಯ. ಸಾಮಾನ್ಯರಲ್ಲಿ ಸಾಮಾನ್ಯರು ಸಹ ನನ್ನ ಬಳಿ ನೇರವಾಗಿ ಬಂದು ಕಷ್ಟ ಸುಖ ಹೇಳಿಕೊಳ್ಳಬಹುದು. ನಿಮ್ಮೆಲ್ಲರ ಆಶೀರ್ವಾದಿಂದ ಶಾಸಕನಾದ ಮೇಲೆ ಕೋಲಾರಕ್ಕೆ ವಿಶೇಷ ಆಧ್ಯತೆ ನೀಡುತ್ತೇನೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿಯೇ ಹೆಚ್ಚಿಗೆ ವಿಶೇಷ ಆಧ್ಯತೆ ನೀಡುತ್ತೇನೆ. ಎತ್ತಿನಹೊಳೆ ಯೋಜನಯನ್ನ ನಾವು ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ ಮುಗಿಸುತ್ತೇವೆ. ಎಷ್ಟೇ ಕೋಟಿಯಾದ್ರೂ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುತ್ತೇವೆ. ಎಲ್ಲ ನೀರಾವರಿ ಯೋಜನೆಗಳನ್ನ ಕಾಲಬದ್ದವಾಗಿ ಮುಗಿಸುತ್ತೇವೆ. ಐದು ವರ್ಷದಲ್ಲಿ ರೈತರಿಗೆ ನೀರು ಕೊಡುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತದೆ.
ಬಿಜೆಪಿ ಬೇಗ ತೊಲಗಿದರೆ ಸಾಕು ಎಂದು ಕಾಯುತ್ತಿದ್ದಾರೆ. ಬಿಜೆಪಿ ಬಗ್ಗೆ ಎಚ್ಚರವಾಗಿರಿ, ಅದು ರೈತರು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಯುವಕರ ವಿರೋಧಿಯಾಗಿದೆ. ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಯಾವ ನಾಯಕರಿಗೂ ಮಾನ ಮಾರ್ಯಾದೆ ಇಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿಲ್ಲ, ಪಕೋಡ ಮಾಡಲಿ ಹೋಗಿ ಎನ್ನುತ್ತಿದ್ದಾರೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದಕ್ಕೂ ಮುನ್ನ ಕೋಲಾರಕ್ಕೆ ಆಗಮಿಸುತ್ತಿದ್ದಂತೆ ರಾಮಸಂದ್ರ ಗಡಿಯಲ್ಲಿ ಅದ್ಧೂರಿ ಸ್ವಾಗತ ಮಾಡಿದ ಕೈ ಕಾರ್ಯಕರ್ತರು, ಹೂವಿನ ಹಾರ ಹಾಕುವ ಮೂಲಕ ಜೈಕಾರ ಕೂಗಿದರು. ಅವರ ಆಗಮನ ಹಿನ್ನೆಲೆಯಲ್ಲಿ ರಸ್ತೆಯುದ್ಧಕ್ಕೂ ದೊಡ್ಡ ದೊಡ್ಡ ಫ್ಲೆಕ್ಸ್ ಹಾಕಿಲಾಗಿತ್ತು. ಅವುಗಳನ್ನು ನೋಡಿದ ಸಿದ್ದರಾಮಯ್ಯ, ಬಳಿಕ ನೇರವಾಗಿ ಕೆ.ಹೆಚ್.ಮುನಿಯಪ್ಪ ಅವರ ಮನೆಗೆ ತೆರಳಿದರು.
ಸಾಕಷ್ಟು ಕುತೂಹಲ ಬಳಿಕ ಇತ್ತೀಚೆಗೆಷ್ಟೇ ಕ್ಷೇತ್ರ ಆಯ್ಕೆ ಮಾಡದೇ ಅವರು ಸ್ಪರ್ಧೆಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ತಮ್ಮ ಕ್ಷೇತ್ರವನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ತಿಳಿಸಿ ಅರ್ಜಿ ಸಲ್ಲಿಸಿದ್ದರು. ಇಂದು ತಾವು ಸ್ಪರ್ಧೆ ಮಾಡಲಿರುವ ಕ್ಷೇತ್ರವನ್ನು ಬಹಿರಂಗಪಡಿಸುವ ಮೂಲಕ ಎಲ್ಲ ಕುತೂಹಲಕ್ಕೂ ತೆರೆ ಎಳೆದರು.
ಇದನ್ನು ಓದಿ: ಚುನಾವಣೆ ಹೊತ್ತಲ್ಲಿ ನನ್ನ ತೇಜೋವಧೆಗೆ ಬಿಜೆಪಿಯಿಂದ ಪುಸ್ತಕ: ಸಿದ್ದರಾಮಯ್ಯ