ETV Bharat / state

8 ವರ್ಷಗಳ ಹಿಂದಿನ ನಾಪತ್ತೆ ಕೇಸ್​ಗೆ ಸುಳಿವು ನೀಡಿದ ಆ ಅನಾಮಿಕ ಕರೆ!

author img

By

Published : Dec 31, 2021, 5:17 PM IST

ಕೋಲಾರ ತಾಲೂಕು ವೇಮಗಲ್​ ಪೊಲೀಸ್​ ಠಾಣಾ ವ್ಯಾಪ್ತಿಯ ನರಸಾಪುರ ಗ್ರಾಮದ ಕೃಷ್ಣಮೂರ್ತಿ ಕೊಲೆಯಾದ ವ್ಯಕ್ತಿ. ರಾಜೇಶ್​, ಮುನಿಕೃಷ್ಣ, ನಾಗೇಶ್​ ಹಾಗೂ ದಾಸಪ್ಪ ಬಂಧಿತ ಆರೋಪಿಗಳು..

missing murder
ಕೊಲೆ ಮಾಡಿದ ಆರೋಪಿಗಳು

ಕೋಲಾರ : 8 ವರ್ಷಗಳ ಹಿಂದೆ(2013ರಲ್ಲಿ) ವ್ಯಕ್ತಿಯೊಬ್ಬ ನಿಗೂಢವಾಗಿ ಕಾಣೆಯಾಗಿದ್ದ. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಆ ವ್ಯಕ್ತಿಯನ್ನು ಹುಡುಕುವುದೇ ಸವಾಲಾಗಿತ್ತು.

ಆದರೆ, ಪೊಲೀಸ್​ ಠಾಣೆಗೆ ಬಂದ ಅನಾಮಿಕ ಕರೆ ನಾಪತ್ತೆಯಾದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಎಂದು ಮಾಹಿತಿ ನೀಡಿತ್ತು. ಇದರ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

ಕೋಲಾರ ತಾಲೂಕು ವೇಮಗಲ್​ ಪೊಲೀಸ್​ ಠಾಣಾ ವ್ಯಾಪ್ತಿಯ ನರಸಾಪುರ ಗ್ರಾಮದ ಕೃಷ್ಣಮೂರ್ತಿ ಕೊಲೆಯಾದ ವ್ಯಕ್ತಿ. ರಾಜೇಶ್​, ಮುನಿಕೃಷ್ಣ, ನಾಗೇಶ್​ ಹಾಗೂ ದಾಸಪ್ಪ ಬಂಧಿತ ಆರೋಪಿಗಳು.

ಪ್ರಕರಣ ಏನು?

ಕೋಲಾರ ತಾಲೂಕು ವೇಮಗಲ್​ ಪೊಲೀಸ್​ ಠಾಣಾ ವ್ಯಾಪ್ತಿಯ ನರಸಾಪುರ ಗ್ರಾಮದ ಕೃಷ್ಣಮೂರ್ತಿ ನಿರೂಷಾ ಎಂಬ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇದು ನಿರೂಷಾಳ ಗಂಡ ರಾಜೇಶ್​ನಿಗೆ ತಿಳಿದು ವಿಚ್ಚೇದನ ನೀಡಿದ್ದ. ಬಳಿಕ ನಿರೂಷ ಕೃಷ್ಣಮೂರ್ತಿ ಜೊತೆ ಸಹಬಾಳ್ವೆ ನಡೆಸುತ್ತಿದ್ದಳು.

ಕೊಲೆ ಮಾಡಿದ ಆರೋಪಿಗಳು
ಕೊಲೆ ಮಾಡಿದ ಆರೋಪಿಗಳು

ಇದೇ ವೇಳೆ ನಿರೂಷಾ ತನ್ನ ವಿಚ್ಛೇದಿತ ಪತಿ ರಾಜೇಶ್​ ಜೀವನಾಂಶ ನೀಡಬೇಕು ಎಂದು ಕೇಸ್​ ದಾಖಲಿಸಿದ್ದಳು. ಇದನ್ನು ತಿಳಿದ ಕೃಷ್ಣಮೂರ್ತಿ ಬರುವ ಜೀವನಾಂಶದಲ್ಲಿ ತನಗೂ ಅರ್ಧಪಾಲು ನೀಡಬೇಕು ಎಂದು ಪಟ್ಟು ಹಿಡಿದಿದ್ದ. ಇಲ್ಲವಾದಲ್ಲಿ ನಿನ್ನ ಮಕ್ಕಳನ್ನು ಹತ್ಯೆ ಮಾಡುವೆ ಎಂದು ಬೆದರಿಸಿದ್ದ.

ಈ ವಿಷಯವನ್ನು ನಿರೂಷಾ ತನ್ನ ವಿಚ್ಛೇದಿತ ಪತಿ ರಾಜೇಶ್​ಗೆ ತಿಳಿಸಿದ್ದಾಳೆ. ರಾಜೀ ಸಂಧಾನಕ್ಕಾಗಿ ಕೃಷ್ಣಮೂರ್ತಿಯನ್ನು ಕರೆದು ಬುದ್ಧಿ ಹೇಳಿದಾಗ ಒಪ್ಪದ ಕೃಷ್ಣಮೂರ್ತಿಯನ್ನು ಆರೋಪಿಗಳಾದ ರಾಜೇಶ್​, ಮುನಿಕೃಷ್ಣ, ನಾಗೇಶ್​ ಹಾಗೂ ದಾಸಪ್ಪ ಅವನನ್ನು ಅಪಹರಿಸಿ​ ತುಮಕೂರು ಜಿಲ್ಲೆಯ ಪಟ್ಟನಾಯಕನಹಳ್ಳಿ ಪೊಲೀಸ್​ ಠಾಣೆ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಡೀಸೆಲ್​ ಸುರಿದು ಕೊಲೆ ಮಾಡಿದ್ದರು.

ಇತ್ತ ತನ್ನ ಗಂಡ ನಾಪತ್ತೆಯಾಗಿದ್ದಾನೆ ಎಂದು ಕೃಷ್ಣಮೂರ್ತಿ ಪತ್ನಿ ರೂಪಾ ಕೋಲಾರದ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾದ ವ್ಯಕ್ತಿಯನ್ನು 2013 ರಿಂದಲೂ ಹುಡುಕಾಡುತ್ತಿದ್ದರು.

ಸುಳಿವು ನೀಡಿದ ಅನಾಮಿಕ ಕರೆ

ಇತ್ತೀಚೆಗೆ ವೇಮಗಲ್​ ಪೊಲೀಸ್​ ಠಾಣೆಗೆ ಅನಾಮಿಕರೊಬ್ಬರು ಕರೆ ಮಾಡಿ ನಾಪತ್ತೆಯಾದ ಕೃಷ್ಣಮೂರ್ತಿಯನ್ನು ಕೊಲೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದ. ಇದರ ಬೆನ್ನತ್ತಿದ ಪೊಲೀಸರು ನಿರಾಷಾಳ ವಿಚ್ಚೇದಿತ ಗಂಡ ರಾಜೇಶ್​, ಆತನ ಬಾವ ಮುನಿಕೃಷ್ಣ, ನಿರೂಷಾಳ ಅಣ್ಣ ನಾಗೇಶ್​, ಹಾಗೂ ನಿರೂಷಾ ಸಂಬಂಧಿ ದಾಸಪ್ಪರನ್ನು ಪೊಲೀಸರು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಕೃಷ್ಣಮೂರ್ತಿಯನ್ನು ತಾವೇ ಕೊಲೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಮೃತ ಕೃಷ್ಣಮೂರ್ತಿಯ ಪತ್ನಿ ರೂಪಾ ಹಾಗೂ ತಾಯಿ ರತ್ನಮ್ಮ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ವೈದ್ಯಕೀಯ ಪರೀಕ್ಷೆಯಲ್ಲಿ ಫೇಲ್​.. ಆತ್ಮಹತ್ಯೆಗೆ ಶರಣಾದ ಮೆಡಿಕಲ್​​ ವಿದ್ಯಾರ್ಥಿನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.