ಕೋಲಾರ: ಪತಿ ತನ್ನ ಪತ್ನಿಯನ್ನು ಭೀಕರವಾಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ಒಂದು ಸಾವಿರಕ್ಕೂ ಹೆಚ್ಚು ಜನರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಯಾರ ಹೆಸರನ್ನೂ ಉಲ್ಲೇಖಿಸದೆ ಈ ಎಫ್ಐಆರ್ಗಳನ್ನು ದಾಖಲು ಮಾಡಲಾಗಿದೆ.
ಪ್ರಕರಣವೇನು?: ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ರಾಧಾ ಎಂಬಾಕೆಯನ್ನು ಪತಿ ನಾಗೇಶ್ ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದ. ಇದೇ ವೇಳೆ ಇತರೆ ಮೂವರ ವಿರುದ್ಧ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿ, ಹೋಟೆಲ್‌ವೊಂದರಲ್ಲಿ ಅವಿತುಕೊಂಡಿದ್ದ.
ಘಟನೆಯಿಂದ ರೊಚ್ಚಿಗೆದ್ದ ಆ ಗ್ರಾಮ ಹಾಗೂ ಅಕ್ಕಪಕ್ಕದ ಗ್ರಾಮಗಳ ಸುಮಾರು 1000ಕ್ಕೂ ಹೆಚ್ಚು ಗ್ರಾಮಸ್ಥರು ಗುಂಪು ಸೇರಿಕೊಂಡು, ಆರೋಪಿ ಅವಿತುಕೊಂಡಿದ್ದ ಹೋಟೆಲ್ ಮೇಲೆ ದಾಳಿ ಮಾಡಿದ್ದರು. ದೊಣ್ಣೆ, ಕಲ್ಲುಗಳನ್ನು ಹಿಡಿದು ಹಲ್ಲೆಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಆರೋಪಿ ಮಚ್ಚು, ಗ್ಯಾಸ್ ಸಿಲಿಂಡರ್ ಹಿಡಿದು, ಒಳಬಂದರೆ ಗ್ಯಾಸ್ ಸಿಲಿಂಡರ್ ತೆರೆದು ಬೆಂಕಿ ಹಚ್ಚುವುದಾಗಿ ಬೆದರಿಸಿದ್ದ.
ಜನರ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ಗ್ಯಾಸ್ ಸಿಲಿಂಡರ್ ಹಿಡಿದು ಬಂದು, ಆರೋಪಿ ನಾಗೇಶ್‌ನನ್ನು ನಮಗೆ ಒಪ್ಪಿಸಿ, ಆತನನ್ನು ಸ್ಥಳದಲ್ಲೇ ಕೊಲೆ ಮಾಡುವುದಾಗಿ ಹೇಳಿದ್ದರು. ಆತ ಗ್ಯಾಸ್ ಸಿಲಿಂಡರ್ ತೆರೆಯಲು ಪ್ರಯತ್ನಿಸಿದಾಗ ಪೊಲೀಸ್ ಸಿಬ್ಬಂದಿ ತಡೆದಿದ್ದರು. ಇನ್ನೊಬ್ಬ ಗ್ರಾಮಸ್ಥ, ಹೋಟೆಲ್ ಕಿಟಕಿ ಬಾಗಿಲಿಗೆ ಪೆಟ್ರೋಲ್ ಎಸೆದು ಬೆಂಕಿ ಹಚ್ಚಲು ಮುಂದಾಗಿದ್ದರು. ಅದನ್ನೂ ಕೂಡ ಪೊಲೀಸರು ತಡೆದಿದ್ದರು.
ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು, ನಾಗೇಶ್‌ನನ್ನು ವಶಕ್ಕೆ ಪಡೆದು ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಮನವೊಲಿಸಲು ಪ್ರಯತ್ನಿಸಿದ್ದರು. ಇದು ಫಲ ನೀಡದೇ ಇದ್ದಾಗ ಲಘು ಲಾಠಿ ಚಾರ್ಜ್ ನಡೆಸಿದ್ದಾರೆ. ಇದಕ್ಕೂ ಗ್ರಾಮಸ್ಥರು ಜಗ್ಗದ ಹಿನ್ನೆಲೆಯಲ್ಲಿ ಗಾಳಿಯಲ್ಲಿ ಏಳು ಸುತ್ತು ಗುಂಡು ಹಾರಿಸಿ ಅಶ್ರುವಾಯು ಸಿಡಿಸಿದ್ದರು. ನಂತರ ಪರಿಸ್ಥಿತಿ ಹತೋಟಿಗೆ ಬಂದಿತ್ತು.
ಆರೋಪಿ ನಾಗೇಶ್‌ನನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದಾಗ ಆತ ಪೊಲೀಸರ ಮೇಲೂ ಮಚ್ಚಿನಿಂದ ದಾಳಿ ಮಾಡಿದ್ದ. ಎಸ್ಪಿ ನಾರಾಯಣ್ ಸೇರಿದಂತೆ 10 ಮಂದಿ ಪೊಲೀಸರು ಗಾಯಗೊಂಡಿದ್ದರು. ಬಳಿಕ ಕಾಲು ಹಾಗೂ ಕೈಗೆ ಗುಂಡು ಹಾರಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ಗಾಯಾಳು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ಚಿಕಿತ್ಸೆ ಕೊಡಿಸಿದ್ದರು.
ಆರೋಪಿ ಮೇಲೆ ದಾಳಿ ಹಾಗು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ನಂಬಿಹಳ್ಳಿ ಗ್ರಾಮದ ಒಂದು ಸಾವಿರಕ್ಕೂ ಹೆಚ್ಚು ಗ್ರಾಮಸ್ಥರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಇದೀಗ ಬಂಧನ ಭೀತಿಯಿಂದಾಗಿ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೌಟುಂಬಿಕ ಕಲಹ : ಮಾರಕಾಸ್ತ್ರದಿಂದ ಹಲ್ಲೆಗೈದು ಪತ್ನಿ ಹತ್ಯೆಗೈದ ವ್ಯಕ್ತಿ.. ಕುಟುಂಬಸ್ಥರ ಮೇಲೂ ದಾಳಿ