ETV Bharat / state

ರಾಜ್ಯಕ್ಕೆ ಇಂದು ರಾಹುಲ್ ಗಾಂಧಿ: ಕೋಲಾರ ಬೃಹತ್​ ಸಮಾವೇಶದಲ್ಲಿ ಭಾಗಿ

author img

By

Published : Apr 15, 2023, 10:12 PM IST

Updated : Apr 16, 2023, 8:17 AM IST

ಕೋಲಾರದಲ್ಲಿ ಕಾಂಗ್ರೆಸ್​​ ಭಾನುವಾರ ಬೃಹತ್​ ಸಮಾವೇಶ ಹಮ್ಮಿಕೊಂಡಿದ್ದು, ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

congress-leader-rahul-gandhi-address-gatherings-in-kolar-tomorrow
ಕೋಲಾರದಲ್ಲಿ ನಾಳೆ ಕಾಂಗ್ರೆಸ್​ ಬೃಹತ್​ ಸಮಾವೇಶ : ರಾಹುಲ್​ ಗಾಂಧಿ ಭಾಗಿ

ಕೋಲಾರದಲ್ಲಿ ಕಾಂಗ್ರೆಸ್​ ಬೃಹತ್​ ಸಮಾವೇಶ

ಕೋಲಾರ: ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಅವರು ಇಂದು ರಾಜ್ಯಕ್ಕೆ ಆಗಮಿಸಲಿದ್ದು, ಕೋಲಾರದಲ್ಲಿ ಹಮ್ಮಿಕೊಂಡಿರುವ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕೋಲಾರದಲ್ಲಿ ಮಾಡಿದ ಭಾಷಣದಿಂದ ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್, ಅಲ್ಲಿಂದಲೇ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ರಣಕಹಳೆ ಮೊಳಗಿಸಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆ ಕಾರ್ಯಕ್ರಮ ಆರಂಭವಾಗಲಿದೆ.

ಕಳೆದ ಲೋಕಸಭಾ ಚುನಾವಣಾ ವೇಳೆಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೋಲಾರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್​, ಮೋದಿ ಉಪನಾಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಕುರಿತು ದಾಖಲಾದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್​​ ಗಾಂಧಿಗೆ ಸೂರತ್​ ನ್ಯಾಯಾಲಯವು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೆ ಅವರನ್ನು ಲೋಕಸಭಾ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.

ಇದೀಗ ರಾಹುಲ್​ ಗಾಂಧಿ ಭಾಷಣ ಮಾಡಿ ಅನರ್ಹಕ್ಕೆ ಕಾರಣವಾದ ಸ್ಥಳದಲ್ಲೇ ಕಾಂಗ್ರೆಸ್​​ ಬೃಹತ್ ಸಮಾವೇಶ ನಡೆಸುತ್ತಿದೆ. ಇಂದು ಕೋಲಾರಕ್ಕೆ ಆಗಮಿಸಲಿರುವ ರಾಹುಲ್,​​ ಜೈ ಭಾರತ್​ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೂ ಕಾಂಗ್ರೆಸ್​ ಚಾಲನೆ ನೀಡಲು ಮುಂದಾಗಿದೆ. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆ. ನಾಳೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯನ್ನು ಪಕ್ಷದ ಮುಖಂಡರು ಹೊಂದಿದ್ದಾರೆ.

ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಪಕ್ಷದ ಜಿಲ್ಲಾ ಉಸ್ತುವಾರಿ ಎಂ.ಆರ್.ಸೀತಾರಾಂ ಸೇರಿದಂತೆ ಹಲವಾರು ನಾಯಕರು ಕಾರ್ಯಕ್ರಮದ ಸಿದ್ಧತೆಗಳನ್ನು ಶನಿವಾರ ಪರಿಶೀಲಿಸಿದರು.

ಎರಡು ಬಾರಿ ಮುಂದೂಡಕೆಯಾಗಿದ್ದ ಸಭೆ: ಈ ಮೊದಲು ಏಪ್ರಿಲ್ 5 ರಂದು ಜೈ ಭಾರತ್ ಸಮಾವೇಶ ನಿಗದಿಯಾಗಿತ್ತು. ಆದ್ರೆ ಕಾರಣಾಂತರಗಳಿಂದ ಏಪ್ರಿಲ್ 9ಕ್ಕೆ ಮುಂಡೂಲ್ಪಟ್ಟಿತ್ತು. ಆ ಬಳಿಕ ಏಪ್ರಿಲ್ 16ಕ್ಕೆ ನಿಗದಿಪಡಿಸಲಾಗಿತ್ತು.

ರಮೇಶ್​ ಕುಮಾರ್​ ಜೊತೆ ಮುಖಂಡರ ಮಾತುಕತೆ : ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ನಿರಾಕರಣೆ ಹಿನ್ನಲೆಯಲ್ಲಿ‌ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮುನಿಸಿಕೊಂಡಿದ್ದರು. ಜೊತೆಗೆ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್​​ ಸಿಂಗ್ ಸುರ್ಜೇವಾಲ ಮತ್ತು ಭೈರತಿ ಸುರೇಶ ಅವರು‌ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮಕ್ಕೆ‌ ಹೆಲಿಕಾಪ್ಟರ್ ಮೂಲಕ ಶನಿವಾರ ಆಗಮಿಸಿ, ಸುಮಾರು 2 ಗಂಟೆಗಳ ಕಾಲ ರಮೇಶ್ ಕುಮಾರ್ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದರು. ಬಳಿಕ ನಮ್ಮಲ್ಲಿ‌ ಯಾವುದೇ ರೀತಿಯ ಮುನಿಸು ಇಲ್ಲ. ರಾಹುಲ್ ಗಾಂಧಿ ಕಾರ್ಯಕ್ರಮದ ಕುರಿತು ಚರ್ಚೆ ನಡೆಸಲು ಬಂದಿರುವುದಾಗಿ ತಿಳಿಸಿದ್ದರು.

ಅಲ್ಪಸಂಖ್ಯಾತ ಮುಖಂಡರ ಆಕ್ರೋಶ : ಕಾಂಗ್ರೆಸ್‌ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಡಿ.ಕೆ ಶಿವಕುಮಾರ್ ವಿರುದ್ಧ ಅಲ್ಪಸಂಖ್ಯಾತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟು ದಿನ‌ ಸಿದ್ದರಾಮಯ್ಯ ಹೆಸರು ಹೇಳಿ ನಮಗೆ ಮೋಸ ಮಾಡಲಾಗಿದೆ. ಒಂದು ವೇಳೆ ಸಿದ್ದರಾಮಯ್ಯಗೆ ಟಿಕೆಟ್ ಕೊಡದಿದ್ದರೆ ಅಲ್ಪಸಂಖ್ಯಾತರರಿಗೆ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಬಂಡಾಯ ಅಭ್ಯರ್ಥಿಯನ್ನು ಹಾಕುವುದಾಗಿ ಶನಿವಾರ ಎಚ್ಚರಿಕೆ ‌ನೀಡಿದ್ದರು.

ಕಾಂಗ್ರೆಸ್​​ ಜೈ ಭಾರತ್ ಕಾರ್ಯಕ್ರಮ ಹೆಸರಿನಲ್ಲಿ ರಾಹುಲ್​ ಗಾಂಧಿಯವರನ್ನು ಮುಂದಿಟ್ಟುಕೊಂಡು ಅವರ ಅನರ್ಹತೆಯ ವಿಚಾರವನ್ನೇ ದಾಳವಾಗಿ ಹೂಡಿ ಮತದಾರರನ್ನು ಸೆಳೆಯಲು ತಂತ್ರ ನಡೆಸುತ್ತಿದೆ. ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ನಿರಾಕರಣೆ ವಿಚಾರವಾಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು ಹೈಕಮಾಂಡ್ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : ಮನವೊಲಿಕೆ ಕಥೆ ಮುಗಿದು ಹೋಗಿದೆ: ಇವತ್ತೇ ಅಂತಿಮ ತೀರ್ಮಾನ- ಶೆಟ್ಟರ್​

Last Updated : Apr 16, 2023, 8:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.