ETV Bharat / state

ವಾಟ್ಸಾಪ್ ಮೂಲಕ ವಿಡಿಯೋ, ಸಂದೇಶ ರವಾನೆ: ಕೊಡಗಿನಲ್ಲಿ ಎರಡು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು

author img

By

Published : Mar 31, 2023, 9:02 PM IST

ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೂರು ದಿನದಲ್ಲಿ ಕೊಡಗಿನಲ್ಲಿ 2 ಪ್ರಕರಣ ದಾಖಲಾಗಿದೆ.

ಕೊಡಗಿನಲ್ಲಿ ಎರಡು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು
ಕೊಡಗಿನಲ್ಲಿ ಎರಡು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು

ಕೊಡಗು: ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೂರು ದಿನದಲ್ಲಿ ಕೊಡಗಿನಲ್ಲಿ 2 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಮಡಿಕೇರಿ ಕ್ಷೇತ್ರದ ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿ ಮಂತರ್​ಗೌಡ ಹಾಗೂ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ವಿ ಪಿ ಶಶಿಧರ್‌ಗೆ ಕಾರಣ ಕೇಳಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಗುರುವಾರ ನೋಟಿಸ್​ ಜಾರಿ ಮಾಡಿದ್ದಾರೆ.

ಮಂತರ್​ಗೌಡ ಅವರು ಸಾಮಾಜಿಕ ಜಾಲತಾಣ ವಾಟ್ಸಾಪ್ ಮೂಲಕ ಪಕ್ಷದ ಚಿಹ್ನೆಯನ್ನು ಬಳಸಿ ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿಯ ಕುರಿತು ಶುಭಾಶಯವನ್ನು ಕೋರಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಆರೋಪವನ್ನು ಎದುರಿಸುತ್ತಿದ್ದಾರೆ.

ಹೀಗಾಗಿ, ಸಾಮಾಜಿಕ ಜಾಲತಾಣ ವಾಟ್ಸಾಪ್ ಮೂಲಕ ಪಕ್ಷದ ಚಿಹ್ನೆ ಬಳಸಿ ರಾಮನವಮಿಗೆ ಶುಭ ಕೋರಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕೆ ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ಅಡಿಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ನಿಮ್ಮ ಮೇಲೆ ಏಕೆ‌ ಕಾನೂನು ಕ್ರಮ ಜರುಗಿಸಬಾರದೆಂದು ಕಾರಣ ಕೇಳಿ ಚುನಾವಣಾಧಿಕಾರಿ ನೋಟಿಸ್ ನೀಡಿದ್ದಾರೆ.

ಲಿಖಿತ ಸಮಜಾಯಿಷಿ ನೀಡುವಂತೆ ಸೂಚನೆ: ಅಲ್ಲದೆ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ವಿ ಪಿ ಶಶೀಧರ್‌ ಅವರು ಆಡ್ಮಿನ್ ಆಗಿರುವ ವಾಟ್ಸ್ಆಪ್​ವೊಂದರ ಮೂಲಕ ಯಾವುದೇ ಪೂರ್ವಾನುಮತಿ ಪಡೆಯದೇ ರಾಜಕೀಯ ಪ್ರೇರಿತ ವಿಡಿಯೋ ತುಣುಕು ಹಂಚಿಕೊಂಡ ವಿಚಾರವಾಗಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವ ನಿಮ್ಮ ಮೇಲೆ ಏಕೆ ಕಾನೂನು ಕ್ರಮ ಜರುಗಿಸಬಾರದು ಎಂದು ಕಾರಣ ಕೇಳಿ 24 ಗಂಟೆಯೊಳಗೆ ಲಿಖಿತ ಸಮಜಾಯಿಷಿ ನೀಡುವಂತೆ ಮಡಿಕೇರಿ ವಿಧಾನಸಭಾ ಚುನಾವಣಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಕೊಡಗು ಎರಡು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು
ಕೊಡಗು ಎರಡು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು

ಶಾಸಕ ಎಂ ಪಿ ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲು: ಇನ್ನೊಂದೆಡೆ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದ ಮರುದಿನವೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಶಾಸಕ ಎಂ. ಪಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಗುರುವಾರ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಸ್ವಸಹಾಯ ಗುಂಪುಗಳಿಗೆ ಸರ್ಕಾರದ ಚೆಕ್ ವಿತರಣೆ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ಕೆಲ್ಲೂರು ಗ್ರಾಮದಲ್ಲಿರುವ ತಮ್ಮ ನಿವಾಸಕ್ಕೆ ಶಾಸಕರು ಎಲ್ಲ ಸ್ವಸಹಾಯ ಗುಂಪುಗಳ ಮಹಿಳೆಯರನ್ನು ಆಹ್ವಾನಿಸಿದ್ದರು.

ನೀತಿ ಸಂಹಿತೆ ಜಾರಿಯಾಗಿದ್ದರೂ ಅನೇಕ ಜನರು ಶಾಸಕರ ನಿವಾಸದಲ್ಲಿ ಸೇರಿದ್ದರು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಚುನಾವಣಾ ಆಯೋಗದ ತಂಡ ಭೇಟಿ ನೀಡಿ ಪರಿಶೀಲಿಸಿದೆ. ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಹಿನ್ನೆಲೆ ಎಂ. ಪಿ ಕುಮಾರಸ್ವಾಮಿ ವಿರುದ್ಧ ತಾಲೂಕು ಚುನಾವಣಾ ಅಧಿಕಾರಿ ಪಿ. ರಾಜೇಶ್ ಮೂಡಿಗೆರೆ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಯಾವುದೇ ಚುನಾವಣಾ ಪ್ರಚಾರ ನಡೆಸಿಲ್ಲ: 'ಮಹಿಳಾ ಸಂಘಗಳಿಗೆ ಚೆಕ್ ವಿತರಣೆ ಮಾಡಬೇಕೆಂದು ಎರಡು ದಿನಗಳ ಹಿಂದೆ ಸಂಬಂಧಿಸಿದ ಅಧಿಕಾರಿಗಳಿಗೆ ಚೆಕ್ ತರಲು ತಿಳಿಸಿದ್ದೆ. ಆದರೆ ದಿಢೀರ್ ಎಂಬಂತೆ ಬುಧವಾರ ನೀತಿ ಸಂಹಿತೆ ಜಾರಿಯಾಯಿತು. ಕಾರ್ಯಕ್ರಮ ರದ್ದುಗೊಳಿಸಿರುವ ಬಗ್ಗೆ ನಿನ್ನೆಯೇ ಅನೇಕ ಸ್ವಸಹಾಯ ಸಂಘಗಳಿಗೆ ತಿಳಿಸಲಾಗಿತ್ತು. ಕೆಲವರಿಗೆ ಮಾಹಿತಿ ಸಿಗದೇ ಬೆಳಗ್ಗೆ ನನ್ನ ನಿವಾಸಕ್ಕೆ ಆಗಮಿಸಿದರು. ದೂರದೂರಿನಿಂದ ಬಂದವರಿಗೆ ಉಪಹಾರ ನೀಡಲಾಯಿತು. ಯಾವುದೇ ಚುನಾವಣೆ ಪ್ರಚಾರ ನಡೆಸಿಲ್ಲ' ಎಂದು ಶಾಸಕ ಎಂ ಪಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ : ನೀತಿ ಸಂಹಿತೆ ಉಲ್ಲಂಘನೆ: ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.