ETV Bharat / state

ನಾವು ಹೋರಾಟ ಮಾಡೋಕೆ‌ ಶುರು ಮಾಡಿದ್ರೆ ಸಿಎಂ ಎಲ್ಲೂ ಓಡಾಡೋಕೆ ಆಗಲ್ಲ: ಸಿದ್ದರಾಮಯ್ಯ

author img

By

Published : Aug 18, 2022, 5:28 PM IST

Updated : Aug 18, 2022, 11:00 PM IST

ನಾವು ಹೋರಾಟ ಮಾಡೋಕೆ‌ ಶುರು ಮಾಡಿದ್ರೆ ಸಿಎಂ ಎಲ್ಲೂ ಓಡಾಡೋಕೆ ಆಗಲ್ಲ. ನಮ್ಮ ಕಾರ್ಯಕರ್ತರು ಬೀದಿಗಿಳಿದ್ರೆ ಬಿಜೆಪಿಯವರಿಗೆ ಕೊಡಗಿನಲ್ಲೇ ತಿರುಗಾಡೋಕೆ ಆಗಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಕೊಡಗು: ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದೆ. ರಾಜ್ಯದಲ್ಲಿ 5 ಲಕ್ಷದ 23 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. ಇವತ್ತಿನವರೆಗೆ ಸರ್ವೇ ಮಾಡಿ ಪರಿಹಾರ ಕೊಡುವ ಪ್ರಯತ್ನವನ್ನು ಸರ್ಕಾರ ಮಾಡಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿದರು

ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಳೆಹಾನಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೊಡಗಿನಲ್ಲಿ ಮಳೆಹಾನಿ ಆದ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದೇನೆ. 2018, 19, 20ರಲ್ಲಿ ಆದ ಮಳೆಯ ಹಾನಿಗೆ ಸರ್ಕಾರ ಇನ್ನೂ ಕೂಡ ಪರಿಹಾರ ನೀಡಿಲ್ಲ. ಸೇತುವೆ ತಡೆಗೋಡೆಗಳನ್ನು ತೀರಾ ಕಳಪೆಯಾಗಿ ಮಾಡಿದ್ದಾರೆ. ಅದಕ್ಕೆ ಅವೆಲ್ಲಾ ಹೀಗಾಗಿವೆ ಎಂದರು.

ಸಿದ್ದರಾಮಯ್ಯ ಭೇಟಿಗೆ ಬಿಜೆಪಿ, ಹಿಂದೂಪರ ಸಂಘಟನೆ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರು ಕಾರ್ಯಕರ್ತರನ್ನ ಬಿಟ್ಟು ಪ್ರತಿಭಟನೆ ಮಾಡಿಸುತ್ತಾರೆ. ಈ ಬಾರಿ ಕೊಡಗಿನಲ್ಲಿ ಎರಡೂ ಕಡೆ ಕಾಂಗ್ರೆಸ್ ಗೆಲ್ಲುತ್ತೆ ಅಂತ ಬಿಜೆಪಿ ಹತಾಶರಾಗಿ ಹೀಗೆ ಪ್ರತಿಭಟನೆ ಮಾಡಿದ್ದಾರೆ. ನಮಗೆ ಮೊಟ್ಟೆ ಎಸೆಯೋಕೆ ಬರಲ್ವಾ? ನಾವು ಅಲ್ಲಿಂದಲೇ ಪ್ರತಿಭಟನೆ ಮಾಡಿಕೊಂಡು ಬಂದಿರೋದು. ನಾವು ಹೋರಾಟ ಮಾಡೋಕೆ‌ ಶುರು ಮಾಡಿದ್ರೆ ಸಿಎಂ ಎಲ್ಲೂ ಓಡಾಡೋಕೆ ಆಗಲ್ಲ. ನಮ್ಮ ಕಾರ್ಯಕರ್ತರು ಬೀದಿಗಿಳಿದ್ರೆ ಬಿಜೆಪಿಯವರಿಗೆ ಕೊಡಗಿನಲ್ಲೇ ತಿರುಗಾಡೋಕೆ ಆಗಲ್ಲ ಎಂದು ಸಿದ್ದರಾಮಯ್ಯ ಎಚ್ಚರಿಕೆ ರವಾನಿಸಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿದರು

ಟಿಪ್ಪು ವಿಚಾರನೂ ಇಲ್ಲ, ಏನೂ ಇಲ್ಲ. ಟಿಪ್ಪು ಜಯಂತಿ ಆದ್ಮೇಲೆ ನಾನು ಕೊಡಗಿಗೆ ಬಂದಿಲ್ವಾ? ಕಳಪೆ ಕೆಲಸ ನನಗೆ ಗೊತ್ತಾಗದಿರಲಿ ಅಂತ ಮಾತ್ರ ಪ್ರತಿಭಟನೆ ಮಾಡಿಸಿದ್ದಾರೆ ಎಂದು ಹರಿಹಾಯ್ದರು.

ಮಗನಿಗೆ ಟಿಕೆಟ್ ಕೊಡಿಸುತ್ತಾರೆ ಅಷ್ಟೇ: ಯಡಿಯೂರಪ್ಪರಿಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಅವತ್ತು ವಯಸ್ಸಾಯ್ತು ಅಂತ ತೆಗೆದು ಈಗ ದೊಡ್ಡ ಹುದ್ದೆ ಅಂತಾರಲ್ವಾ? ಅವರ ವಯಸ್ಸು ಹಿಂದೆ ಹೋಯ್ತಾ? ಯಡಿಯೂರಪ್ಪರನ್ನು ಸಮಾಧಾನ ಮಾಡಲು, ಚುನಾವಣೆಗಾಗಿ ಹೀಗೆ ಮಾಡಿದ್ದಾರೆ. ಇರೋ ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಮತ್ತೆ ಮುಖ್ಯಮಂತ್ರಿ ಮಾಡುತ್ತಾರಾ‌? ಹೆಚ್ಚು ಅಂದ್ರೆ ಯಡಿಯೂರಪ್ಪ ಅವರ ಮಗನಿಗೆ ಟಿಕೆಟ್ ಕೊಡಿಸುತ್ತಾರೆ ಅಷ್ಟೇ ಎಂದು ಹೇಳಿದರು.

ಗಲಾಟೆಗೆ ಈಶ್ವರಪ್ಪನೇ ನೇರ ಕಾರಣ: ಶಾಸಕ ಶಿವರಾಜ್ ಪಾಟೀಲ್ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಬೇಕು ಎಂದಿರುವ ವಿಚಾರವಾಗಿ ಮಾತನಾಡಿ, ಅವನು ಮೂರ್ಖ, ಮಾನಸಿಕ ಅಸ್ವಸ್ಥ, ಕರ್ನಾಟಕ ಏಕೀಕರಣದ ಬೆಲೆ ಗೊತ್ತಾ ಅವನಿಗೆ? ಮೊನ್ನೆಯ ಶಿವಮೊಗ್ಗದ ಗಲಾಟೆಗೆ ಈಶ್ವರಪ್ಪನೇ ನೇರ ಕಾರಣ. ಮುಂದಿನ‌ ಚುನಾವಣೆಯಲ್ಲಿ ನಾನು‌ ಸ್ಪರ್ಧೆ ಮಾಡಿಯೇ ಮಾಡುತ್ತೇನೆ, ಡೌಟೇ ಬೇಡ ಎಂದು ತಿಳಿಸಿದರು.

ಸರ್ಕಾರ ಜೀವದಲ್ಲೇ ಇಲ್ಲ: ಸರ್ಕಾರ ತಳ್ಳಿಕೊಂಡು‌ ಹೋಗುತ್ತಿದ್ದೇವೆ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆ‌ ವಿಚಾರವಾಗಿ ಪ್ರತಿಕ್ರಿಯಿಸಿ, ಮಾಧುಸ್ವಾಮಿ ಸತ್ಯ ಹೇಳಿದ್ದಾರೆ. ರಾಜ್ಯದಲ್ಲಿ ಸರ್ಕಾರ ಇಲ್ಲವೇ ಇಲ್ಲ. ವೀಕ್ ಚೀಫ್​ ಮಿನಿಸ್ಟರ್ ಇದ್ದಾರೆ. ಸರ್ಕಾರ ಜೀವದಲ್ಲೇ ಇಲ್ಲ. ಇನ್ನೆಲ್ಲಿ ನಡೆಯೋದು? ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಓದಿ: ಗ್ರಾ.ಪಂ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಸಹಾಯಕ ವೃಂದದ ನೇರ ನೇಮಕಾತಿಗೆ ತಡೆ

Last Updated :Aug 18, 2022, 11:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.