ETV Bharat / state

ಮಳೆಗಾಲದಲ್ಲಿ ಪ್ರವಾಹ ಭೂ ಕುಸಿತವುಂಟಾದರೆ ತಕ್ಷಣ ಅಧಿಕಾರಿಗಳು ಸ್ಪಂದಿಸಿ ಕಾರ್ಯನಿರ್ವಹಿಸಬೇಕು: ಶಾಸಕ ಮಂತರ್​​​ಗೌಡ ಸೂಚನೆ

author img

By

Published : Jun 10, 2023, 8:58 PM IST

ಮುಂಗಾರು ಅವಧಿಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತಾಗಿ ಮಡಿಕೇರಿಯಲ್ಲಿ ವಿವಿಧ ಇಲಾಖಾಧಿಕಾರಿಗಳ ಸಭೆ ಶಾಸಕ ಡಾ ಮಂತರ್ ಗೌಡ ಅಧ್ಯಕ್ಷತೆಯಲ್ಲಿ ನಡೆಯಿತು.

meeting was presided over by MLA Mantar Gowda
ಮಡಿಕೇರಿಯಲ್ಲಿ ವಿವಿಧ ಇಲಾಖಾಧಿಕಾರಿಗಳ ಸಭೆ ಶಾಸಕ ಡಾ ಮಂತರ್ ಗೌಡ ಅಧ್ಯಕ್ಷತೆಯಲ್ಲಿ ನಡೆಯಿತು

ಮಡಿಕೇರಿ(ಕೊಡಗು): ಮಳೆಗಾಲದ ಅವಧಿಯಲ್ಲಿ ಪ್ರವಾಹ, ಭೂ ಕುಸಿತ ಉಂಟಾದಲ್ಲಿ ಕೂಡಲೇ ಘಟನಾ ಸ್ಥಳಕ್ಕೆ ಹೋಗಬೇಕು. ಗಾಳಿ, ಮಳೆಯಿಂದಾಗಿ ಗಿಡ-ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿ ವಿದ್ಯುತ್ ವ್ಯತ್ಯಯ, ಕುಡಿವ ನೀರಿನ ಸಮಸ್ಯೆಗಳಿಗೆ ಕಂದಾಯ, ಸೆಸ್ಕಾಂ, ಅರಣ್ಯ, ಲೋಕೋಪಯೋಗಿ, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಗಳು ಸಮನ್ವಯತೆಯಿಂದ ಸ್ಪಂದಿಸಿ ತಕ್ಷಣ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಡಾ ಮಂತರ್ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಮುಂಗಾರು ಅವಧಿಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತಾಗಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಳಜಿ ಕೇಂದ್ರಗಳಲ್ಲಿ ಸೂಕ್ತ ಮೂಲ ಸೌಕರ್ಯಗಳನ್ನು ಒದಗಿಸುವಂತಾಗಬೇಕು.

ಕಾಳಜಿ ಕೇಂದ್ರಕ್ಕೆ ಬರುವ ಜನರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಕುಡಿಯುವ ನೀರು ಸಮರ್ಪಕ ಸರಬರಾಜು ಮಾಡಬೇಕು ಎಂದು ಶಾಸಕರು ಹೇಳಿದರು.

ಕಾಳಜಿ ಕೇಂದ್ರಕ್ಕೆ ಬರುವ ಜನರಿಗೆ ಮಾನಸಿಕ ಧೈರ್ಯ ತುಂಬಲು ಆರೋಗ್ಯ ಇಲಾಖೆಯಿಂದ ಆಪ್ತ ಸಮಾಲೋಚಕರನ್ನು ನಿಯೋಜಿಸಬೇಕು. ಕಾಳಜಿ ಕೇಂದ್ರಗಳಿಗೆ ನಿಯೋಜಿಸಿರುವ ನೋಡಲ್ ಅಧಿಕಾರಿಗಳು ಯಾವುದೇ ಲೋಪದೋಷಗಳಾಗದಂತೆ ಎಚ್ಚರವಹಿಸಬೇಕು.

ಸೂಕ್ಷ್ಮ ಪ್ರದೇಶದಲ್ಲಿ ವಾಸಿಸುವ ಜನರನ್ನು ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಗುರುತಿಸಿರುವ ಸೂಕ್ಷ್ಮ ಪ್ರದೇಶದಲ್ಲಿನ ಜನರಿಗೆ ಕೂಡಲೇ ನೋಟಿಸ್ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ರಾಜಕಾಲುವೆ, ಚರಂಡಿಗಳಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗಲು ಹಾಗೂ ತಾತ್ಕಾಲಿಕವಾಗಿ ರಸ್ತೆಗಳ ಗುಂಡಿ ಮುಚ್ಚಲು ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ ಮಂತರ್ ಗೌಡ ಅವರು ಹೇಳಿದರು.

ಮಳೆಯಿಂದಾಗಿ ರಸ್ತೆಗೆ ಅಡ್ಡಲಾಗಿ ಬೀಳುವ ಮರಗಳನ್ನು ಕೂಡಲೇ ತೆರವುಗೊಳಿಸಬೇಕು. ರಸ್ತೆಗಳಿಗೆ ಅಡ್ಡವಾಗಿ ಬೆಳೆದಿರುವ ಗಿಡಗಂಟಿಗಳನ್ನು ಕಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಆರೋಗ್ಯ ಇಲಾಖೆಯಿಂದ ಮಲೇರಿಯಾ, ಡೆಂಗೆ, ಚಿಕೂನ್ ಗುನ್ಯಾದಂತಹ ರೋಗಗಳು ಹರಡದಂತೆ ಎಚ್ಚರವಹಿಸಿ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇರಬೇಕು ಹಾಗೂ ಸಾರ್ವಜನಿಕರಿಗೆ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ಸಿಗಲು ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದರು.

ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಶಾಲಾ ಕಟ್ಟಡಗಳ ವರದಿ ನೀಡಬೇಕು ಮತ್ತು ಅಂತಹ ಕಟ್ಟಡಗಳಲ್ಲಿ ಮಕ್ಕಳಿಗೆ ಪಾಠ ಮಾಡಬಾರದು ಎಂದು ಅವರು ಹೇಳಿದರು. ಅಂಗನವಾಡಿಗಳಿಗೆ ಸಮಯಕ್ಕೆ ಸರಿಯಾಗಿ ಪೌಷ್ಟಿಕಾಂಶದ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡಬೇಕು ಎಂದು ಸಲಹೆ ನೀಡಿದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಶೇಖರ್ ಅವರು ಮಾತನಾಡಿ, ಈಗಾಗಲೇ ಗ್ರಾಪಂ ಮಟ್ಟದಲ್ಲಿ ಟಾಸ್ಕ್​ಫೋರ್ಸ್​ ಸಭೆ ನಡೆಸಲಾಗಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

19 ಶಾಲೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಶಾಲೆಗಳ ಮುಖ್ಯೋಪಾಧ್ಯಾಯರನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಪ್ರತಿ ಗ್ರಾಪಂ ವ್ಯಾಪ್ತಿ ಸಹಾಯವಾಣಿ ತೆರೆಯಲಾಗಿದ್ದು, ಸ್ಥಳೀಯವಾಗಿ ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ತಹಶಿಲ್ದಾರ್ ಕಿರಣ್ ಗೌರಯ್ಯ ಮಾತನಾಡಿ, ಸೂಕ್ಷ್ಮ ಪ್ರದೇಶದಲ್ಲಿ ವಾಸಿಸುವ ಜನರನ್ನು ಗುರುತಿಸಿ ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಎನ್‍ಡಿಆರ್​​​ಎಫ್ ಇನ್ಸ್​ಪೆಕ್ಟರ್ ಶಾಂತಿಲಾಲ್ ಜಾಟಿಯಾ ಅವರು 24 ಸಿಬ್ಬಂದಿಗಳನ್ನು ಒಳಗೊಂಡ ತಂಡವಿದ್ದು ಯಾವುದೇ ರೀತಿಯ ಸಮಸ್ಯೆಗಳಾದಲ್ಲಿ ಕೂಡಲೇ ಸ್ಪಂದಿಸಲಾಗುವುದು ಹಾಗೂ 24*7 ಲಭ್ಯವಿರುವುದಾಗಿ ಮಾಹಿತಿ ನೀಡಿದರು. ಸೆಸ್ಕ್ ಎಂಜಿನಿಯರ್ ವಿನಯ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್, ಇತರರು ಹಲವು ಮಾಹಿತಿ ನೀಡಿದರು. ತಹಶೀಲ್ದಾರ್ ಪ್ರಕಾಶ, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾ ಪಂ ಪಿಡಿಒಗಳು, ಇತರರು ಇದ್ದರು.

ಇದನ್ನೂಓದಿ:School uniform scam: ಶಾಲಾ ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಕಳಪೆ ಗುಣಮಟ್ಟದ ಬಟ್ಟೆ ಪೂರೈಕೆ: ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.