ETV Bharat / state

ಕೊಡಗು: ಎರಡು ದಿನಗಳ ಹಿಂದೆ ಕಾಡಾನೆ ದಾಳಿಗೆ ಒಳಗಾಗಿದ್ದ ಕಾರ್ಮಿಕ ಸಾವು..

author img

By

Published : May 19, 2023, 5:02 PM IST

ಕಳೆದ ಎರಡು ದಿನಗಳ ಹಿಂದೆ ಕಾಡಾನೆ ದಾಳಿಗೆ ಒಳಗಾಗಿದ್ದ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

laborer-dies-in-wild-elephant-attack-in-kodagu
ಎರಡು ದಿನಗಳ ಹಿಂದೆ ಕಾಡಾನೆ ದಾಳಿಗೆ ಒಳಗಾಗಿದ್ದ ಕಾರ್ಮಿಕ ಸಾವು..

ಕೊಡಗು: ಜಿಲ್ಲೆಯಲ್ಲಿ ‌ಮಾನವ - ಕಾಡಾನೆ ಸಂಘರ್ಷ ಹೆಚ್ಚಾಗುತ್ತಿದ್ದು, ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರಿಯುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಕಾಡಾನೆ ದಾಳಿಗೆ ಒಳಗಾಗಿದ್ದ ಕಾರ್ಮಿಕನೊಬ್ಬ ಮೃತಪಟ್ಟಿರು ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮದಲ್ಲಿ ನಡೆದಿದೆ.

ಮಸ್ಕಲ್ ಕಾಫಿತೋಟದ ಕಾರ್ಮಿಕ ಬಾಬಿ(40) ಮೃತ ದುರ್ದೈವಿ, ಒಂದೇ ಕಾಡಾನೆ ಎರಡು ದಿನದ ಅಂತರದಲ್ಲಿ ದಾಳಿ ನಡೆಸಿದ್ದು, ದಾಳಿಯಿಂದ ಮತ್ತೊಬ್ಬ ಕಾರ್ಮಿಕ ಗಂಭೀರವಾಗಿ ಗಾಯಾಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಮಿಕ ಬಾಬಿ ಎರಡು ದಿನಗಳ ಹಿಂದೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆ ದಾಳಿಗೊಳಗಾಗಿದ್ದರು. ತೀವ್ರವಾಗಿ ಗಾಯಾಗೊಂಡಿದ್ದ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಸಿದ್ದಾಪುರ ಪಾಲಿಬೆಟ್ಟ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳು ಜನರಲ್ಲಿ ಆತಂಕ ಸೃಷ್ಟಿಸುತ್ತಿವೆ. ಕಾಫಿ ತೋಟದಲ್ಲಿ ಕೆಲಸ ಮಾಡಲು ಮತ್ತು ರಸ್ತೆಯಲ್ಲಿ ಸಂಚಾರ ಮಾಡಲು ಜನರು ಭಯಪಡುವಂತಾಗಿದ್ದು, ಗ್ರಾಮಸ್ಥರು ಜೀವ ಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅರಣ್ಯಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದು ಕಾಡಾನೆಯನ್ನು ಕಾಡಿಗಟ್ಟಲು ಪ್ರಯತ್ನಸುತ್ತಿದ್ದಾರೆ.

ಮೃತ ಕಾರ್ಮಿಕ ಮಗ ಮಾತನಾಡಿ, ಕಾಫಿ ತೋಟಕ್ಕೆ ಕೆಲಸಕ್ಕೆದ್ದು ತೆರಳಿದ್ದಾಗ ಕಾಡಾನೆ ದಾಳಿ ನಡೆಸಿದೆ, ಕಾಫಿ ಎಸ್ಟೇಟ್​ನಲ್ಲಿ ಯಾವುದೇ ಸೌಲಭ್ಯಗಳಿಲ್ಲ, ನಮ್ಮ ತಂದೆಗೆ ಇದು ಎರಡನೇ ಬಾರಿಗೆ ಕಾಡಾನೆ ದಾಳಿ ನಡೆಸಿರುವುದು. ಕಾಫಿ ತೋಟದಲ್ಲಿ ಕೆಲಸ ಮಾಡುವವರಿಗೆ ಯಾವುದೇ ರಕ್ಷಣೆ ಇಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆ ದಾಳಿ ಮಾಡಿದಾಗ ಬಂದು ಅವನ್ನು ಓಡಿಸುತ್ತಾರೆ ಅಷ್ಟೇ. ಮತ್ತೆ ಕಾಡಾನೆಗಳು ಅಲ್ಲಿಗೆ ಬರುತ್ತವೆ, ನಾವು ನಡೆದುಕೊಂಡು ಹೋಗುವ ಮಾರ್ಗದಲ್ಲೇ ಕಾಡಾನೆಗಳು ಬೀಡು ಬಿಟ್ಟಿರುತ್ತವೆ ಎಂದು ತಮ್ಮ ಅಳಲನ್ನು ತೊಡಿಕೊಂಡರು.

ಸ್ಥಳೀಯ ಸಂಕೇತ್ ಪೂವಯ್ಯ ಮಾತನಾಡಿ, ಕಳೆದ 20 ವರ್ಷಗಳಿಂದ ಜನರ ಮತ್ತು ವನ್ಯ ಜೀವಿಗಳ ಸಂಘರ್ಷದಿಂದ ನೂರಾರು ಜನರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಇನ್ನು ಕಳೆದ ಎರಡು ದಿನಗಳ ಹಿಂದೆ ಕಾಡಾನೆ ದಾಳಿಗೆ ಒಳಗಾಗಿದ್ದ ಬಾಬಿ ಮೃತಪಟ್ಟಿದ್ದಾರೆ. ಶಾಸಕರು ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು, ಈಗಾಗಲೇ ಶಾಸಕರು ಮೃತನ ಕುಟುಂಬಸ್ಥರ ಜೊತೆ ಮಾತನಾಡಿ ಸಾಂತ್ವನ ಹೇಳಿದ್ದು, ಅರಣ್ಯ ಇಲಾಖೆಯಿಂದ ಮೃತನ ಕುಟುಂಬಕ್ಕೆ ಪರಿಹಾರವನ್ನು ನೀಡಲು ಆದೇಶವನ್ನು ಕೊಟ್ಟಿದ್ದಾರೆ. ತಕ್ಷಣ ಕಾಡಾನೆ ಕಾರ್ಯಾಚರಣೆ ಶುರು ಮಾಡಿವಂತೆ ಸೂಚಿಸಿದ್ದಾರೆ ಎಂದು ಹೇಳಿದರು.

ನಿತ್ಯ ನೂರಾರು ಕಿ. ಮೀ ನಡೆದಾಡುತ್ತಿದ್ದ ಆನೆಗಳು ಬದಲಾದ ಪರಿಸ್ಥಿತಿಯಿಂದ ನಾಡಿಗೆ ಲಗ್ಗೆ ಇಡುತ್ತಿವೆ. ನಾಡಿನಲ್ಲೇ ನೀರಿನ ಜೊತೆಗೆ ಆಹಾರವೂ ಸಿಗು ವುದರಿಂದ ಆನೆಗಳು ಮೇಲಿಂದ ಮೇಲೆ ನಾಡಿನತ್ತ ಧಾವಿಸುತ್ತಿವೆ. ಇದರಿಂದ ಕಾಡಾನೆ ಮತ್ತು ಮನುಷ್ಯರ ನಡುವೆ ಸಂಘರ್ಷ ಏರ್ಪಡುತ್ತಿದ್ದು, ಕಾಡಾನೆ ದಾಳಿಯಿಂದ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ರೈತರು ಬೆಳೆದಿದ್ದ ಬಾಳೆ, ಅಡಕೆ ಗಿಡಗಳು ನಾಶವಾಗುತ್ತಿವೆ. 20 ವರ್ಷಗಳಿಂದ ಬೆಳೆದಿದ್ದ ಕಾಫಿ ಗಿಡಗಳನ್ನು ಕಳೆದುಕೊಂಡ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈಗಲಾದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಎತ್ತೆಚ್ಚುಕೊಂಡು ಕಾಡಾನೆಗಳನ್ನು ನಾಡಿಗೆ ಬರುವುದನ್ನು ತಡೆಯಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ:ಘಟಪ್ರಭಾ ಎಡದಂಡೆ ಬಲದಂಡೆ ಕಾಲುವೆಗಳಿಗೆ ನೀರು ಹರಿಸುವಂತೆ ರೈತರ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.