ETV Bharat / state

ಕೆಲವು ಹಾಲಿ ಶಾಸಕರಿಗೆ ಟಿಕೆಟ್‌ ಕೈತಪ್ಪಬಹುದು: ಬಿ.ಎಸ್‌.ಯಡಿಯೂರಪ್ಪ

author img

By

Published : Mar 7, 2023, 1:44 PM IST

Updated : Mar 7, 2023, 2:34 PM IST

ಕೆಲವು ಹಾಲಿ ಶಾಸಕರಿಗೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್​ ಕೈ ತಪ್ಪಬಹುದು ಎನ್ನುವ ಹಿಂಟ್​ ನೀಡುವ ಮೂಲಕ ಶಾಸಕರಿಗೆ ಬಿಗ್​ ಶಾಕ್​ ನೀಡಿದ್ದಾರೆ ಯಡಿಯೂರಪ್ಪ.

Former CM B S Yediyurappa
ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ

ಕಲಬುರಗಿ: ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ಹಾಲಿ ಶಾಸಕರಿಗೆ ಟಿಕೆಟ್ ಕಟ್ ಆಗುವ ಸಾಧ್ಯತೆ ಬಗ್ಗೆ ಮಾಜಿ ಸಿಎಂ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಸುಳಿವು ನೀಡಿದ್ದಾರೆ. ಕಲಬುರಗಿಯ ಐವಾನ್-ಎ-ಶಾಹಿ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, ಹಾಲಿ ನಾಲ್ಕಾರು ಶಾಸಕರಿಗೆ ಟಿಕೆಟ್ ಕೈ ತಪ್ಪಬಹುದು, ಇನ್ನುಳಿದ ಹಾಲಿ ಶಾಸಕರಿಗೆ ಟಿಕೆಟ್ ಸಿಗುವ ಸಂಭವ ಹೆಚ್ಚಿದೆ ಎಂದು ಹೇಳಿದ್ದಾರೆ.

ಇದೇ ವೇಳೆ, ರಾಜ್ಯಾದ್ಯಂತ 140ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಎಲ್ಲೆಡೆ ಬಿಜೆಪಿ ಪರ ವಾತಾವರಣವಿದೆ. ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯಲ್ಲಿ ಜನ ಸೇರುತ್ತಿಲ್ಲ. ಮತ್ತೊಂದೆಡೆ, ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಾಕಷ್ಟು ಜನ ಸೇರುತ್ತಿದ್ದಾರೆ. ಇದು ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದರು.

ಇತ್ತೀಚೆಗೆ ನಡೆದ ತ್ರಿಪುರಾ, ಮೇಘಾಲಯ ಚುನಾವಣೆಯಲ್ಲಿ ಬಿಜೆಪಿ ಶಕ್ತಿ ಏನು ಎಂಬುದು ಸಾಬೀತಾಗಿದೆ. ಇದರ ಜೊತೆಗೆ ಕಾಂಗ್ರೆಸ್ ಅಡ್ರೆಸ್ ಕಳೆದುಕೊಂಡಿರುವುದು ಮತ್ತೊಮ್ಮೆ ದೃಢಪಟ್ಟಿದೆ ಎಂದು ಹೇಳಿದರು. ಇನ್ನು, ಸಚಿವ ವಿ.ಸೋಮಣ್ಣ ಹಾಗೂ ನಾರಾಯಣ ಗೌಡ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಅವರಷ್ಟೇ ಅಲ್ಲ ಯಾರೊಬ್ಬರೂ ಪಕ್ಷ ಬಿಡುವುದಿಲ್ಲ. ಬೇರೆ ಬೇರೆ ಪಕ್ಷದಿಂದ ಬಿಜೆಪಿಗೆ ಹಲವರು ಬರುವರಿದ್ದಾರೆ. ಬಿಜೆಪಿಗೆ ಯಾರಾದರೂ ಬರುವುದಾದರೆ ಮುಕ್ತ ಸ್ವಾಗತ ಎಂದು ಆಹ್ವಾನ ನೀಡಿದರು.

ರಾಜ್ಯದಲ್ಲಿ ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಮುಗಿದ ಬಳಿಕ ನಡೆಯುವ ಪಕ್ಷದ ಶಾಸಕಾಂಗ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದು ನಿರ್ಧಾರ ಆಗಲಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಇದೇ ವೇಳೆ ರಾಹುಲ್ ಗಾಂಧಿ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ ಬಿಎಸ್‌ವೈ, ವಿದೇಶಿ ನೆಲದಲ್ಲಿ ಭಾರತದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ವರ್ತನೆ ಸರಿಯಲ್ಲ ಎಂದರು. ಒಂದು ರಾಷ್ಟ್ರೀಯ ಪಕ್ಷದ ಪ್ರಮುಖ ನಾಯಕರಾಗಿ ಹೀಗೆ ದೇಶ ವಿರೋಧಿ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವಂಥದ್ದಲ್ಲ. ಕೂಡಲೇ ರಾಹುಲ್ ಗಾಂಧಿ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಮುಂದಿನ ಮುಖ್ಯಮಂತ್ರಿ ತಾವೇ ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಬಿಎಸ್‌ವೈ ಲೇವಡಿ ಮಾಡಿದರು. ಬಿಜೆಪಿ ಉಮೇದುವಾರರ ಮೊದಲ ಪಟ್ಟಿ ಆದಷ್ಟು ಬೇಗ ಪ್ರಕಟಗೊಳ್ಳಲಿದೆ. ತಮ್ಮ ಪುತ್ರ ವಿಜಯೇಂದ್ರ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಬಹುಶಃ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಸೂಚ್ಯವಾಗಿ ಹೇಳಿದರು.

ಪ್ರಧಾನಿ ಮೋದಿ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಏಕವಚನದಲ್ಲಿ ಮಾತಾಡ್ತಿರೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬಿಎಸ್‌ವೈ ಮಲ್ಲಿಕಾರ್ಜುನ ಖರ್ಗೆ ಜವಾಬ್ದಾರಿ ಸ್ಥಾನದಲ್ಲಿರೋರು, ಮೋದಿ ಬಗ್ಗೆ ಹಗುರವಾಗಿ ಮಾತಾಡೋದು ಶೋಭೆ ತರುವಂತಹದ್ದಲ್ಲ. ಮೋದಿಯನ್ನ ಇಡೀ ವಿಶ್ವವೇ ಕೊಂಡಾಡುತ್ತಿದೆ. ಅಂತಹ ನಾಯಕತ್ವ ಬೇಕು ಅಂತಾ ಅಪೇಕ್ಷೆ ಪಡುತ್ತಿದ್ದಾರೆ. ಮೋದಿ ಬಗ್ಗೆ ಖರ್ಗೆ ಅಂತಹ ನಾಯಕರು ಹಗುರವಾಗಿ ಮಾತಾಡ್ತಾರೆ ಅಂದ್ರೆ ಎಷ್ಟರ ಮಟ್ಟಿಗೆ ಸರಿ‌? ಅವರೇ ಯೋಚನೆ ಮಾಡಬೇಕು. ಮೋದಿ ಬಗ್ಗೆ ಹಗುರವಾಗಿ ಮಾತಾಡದಂತೆ ಖರ್ಗೆ ಅವರಿಗೆ ನಾನು ವಿನಂತಿಸಿಕೊಳ್ಳುತ್ತೇ‌‌ನೆ ಬಿಎಸ್‌ವೈ ಹೇಳಿದರು.

ವಿಜಯಸಂಕಲ್ಪ ರಥಯಾತ್ರೆ ಪ್ರಾರಂಭ: ಕಲಬುರಗಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಶಹಬಾದ್​ನಲ್ಲಿ ಬಿಜೆಪಿ ವಿಜಯಸಂಕಲ್ಪ ರಥಯಾತ್ರೆ ಪ್ರಾರಂಭಗೊಂಡಿದೆ. ಯಡಿಯೂರಪ್ಪ ನೇತೃತ್ವದಲ್ಲಿ ವಿಜಯ ಯಾತ್ರೆ ನಡೆದಿದ್ದು, ಶಾಹಬಾದ್ ಪಟ್ಟಣದಲ್ಲಿ ಬೃಹತ್ ರೋಡ್ ಶೋ ಮಾಡಲಾಗುತ್ತಿದೆ. ಬೈಕ್ ರ‌್ಯಾಲಿ, ಜೆಸಿಬಿ ಮೂಲಕ ಹೂವು ಸುರಿದು ಬಿಎಸ್​ವೈಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಶಹಬಾದ್ ಪಟ್ಟಣದ ಬಸವೇಶ್ವರ ಪುತ್ತಳಿಗೆ ಬಿಎಸ್​ವೈ ಮಾಲಾರ್ಪಣೆ ಮಾಡಿ ಬೃಹತ್ ರೋಡ್ ಶೋ ಆರಂಭಿಸಿದ್ದಾರೆ. ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ್ ನೇತೃತ್ವದಲ್ಲಿ ರೋಡ್ ಶೋ ನಡೆದಿದ್ದು, ಬಿಎಸ್​ವೈಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಾಥ್ ನೀಡಿದ್ದಾರೆ. ಯಾತ್ರೆಯಲ್ಲಿ ಸಹಸ್ರಾರು ಜನ ಭಾಗಿಯಾಗಿದ್ದಾರೆ. ವಿಜಯಸಂಕಲ್ಪ ಯಾತ್ರೆ ಮೂಲಕ ಬಿಜೆಪಿ ಶಕ್ತಿ ಪ್ರದರ್ಶನ ಮಾಡುತ್ತಿದೆ.

ಇದನ್ನೂ ಓದಿ: ಬಿಜೆಪಿಯನ್ನು ಭ್ರಷ್ಟ ಜನತಾ ಪಾರ್ಟಿ ಎನ್ನಬೇಕು: ಸುರ್ಜೆವಾಲಾ ಲೇವಡಿ

Last Updated :Mar 7, 2023, 2:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.