ETV Bharat / state

ಶಾಲೆಯಲ್ಲಿ ಬೇರೆ ಯುವತಿಗೆ ಸ್ಯಾಲರಿ ಕೊಟ್ಟು ಮಕ್ಕಳಿಗೆ ಪಾಠ ಮಾಡಿಸಿದ ಆರೋಪ: ಸೇವೆಯಿಂದ ಶಿಕ್ಷಕ ಅಮಾನತು

author img

By

Published : Jul 12, 2023, 4:20 PM IST

ತಾವು ಕರ್ತವ್ಯಕ್ಕೆ ತೆರಳದೇ ಬೇರೊಬ್ಬ ಯುವತಿಗೆ ಸ್ಯಾಲರಿ ನೀಡಿ ಮಕ್ಕಳಿಗೆ ಪಾಠ ಮಾಡಿಸಿದ್ದಾರೆಂಬ ಆರೋಪದ ಮೇಲೆ ಶಿಕ್ಷಕರೊಬ್ಬರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

suspension-of-teacher-on-allegation-of-renting-for-woman-to-teach-children
ಯುವತಿಗೆ ಬಾಡಿಗೆ ನೀಡಿ ಮಕ್ಕಳಿಗೆ ಪಾಠ ಮಾಡಿಸಿದ ಆರೋಪ: ಸೇವೆಯಿಂದ ಶಿಕ್ಷಕನ ಅಮಾನತು

ಕಲಬುರಗಿ: ಚಿತ್ತಾಪುರ ತಾಲೂಕಿನ ಭಾಲಿ ನಾಯಕ್ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಮಹೇಂದ್ರ ಕೊಲ್ಲೂರ್ ಅವರನ್ನು ಕರ್ತವ್ಯಲೋಪ ಆರೋಪದಡಿ ಸೇವೆಯಿಂದ ಅಮಾನತು ಮಾಡಲಾಗಿದೆ. ಶಿಕ್ಷಕ‌ ಮಹೇಂದ್ರ ಕೊಲ್ಲೂರ್ ತಮ್ಮ ಬದಲಾಗಿ ಯುವತಿಯೊಬ್ಬಳಿಗೆ ಸ್ಯಾಲರಿ ನೀಡಿ ಮಕ್ಕಳಿಗೆ ಪಾಠ ಮಾಡಿಸಿದ್ದಾರೆಂಬ ಆರೋಪ ಕೇಳಿ ಬಂದ ಹಿನ್ನೆಲೆ ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಭಾಲಿ ನಾಯಕ್ ತಾಂಡಾದಲ್ಲಿ ಒಂದರಿಂದ ಐದನೇ ತರಗತಿವರಗೆ ಕಿರಿಯ ಪ್ರಾಥಮಿಕ ಶಾಲೆಯಿದ್ದು, ಶಾಲೆಯಲ್ಲಿ 18 ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳಿಗೆ ಪಾಠ ಮಾಡಲು ಇಬ್ಬರು ಶಿಕ್ಷಕರಿದ್ದಾರೆ. ಅದರಲ್ಲಿ ಮಹೇಂದ್ರ ಕೊಲ್ಲೂರ್ ಕೂಡಾ ಓರ್ವ ಶಿಕ್ಷಕರಾಗಿದ್ದಾರೆ. ಆದ್ರೆ ಇವರು ತಾವು ಮಾಡಬೇಕಾದ ಕೆಲಸವನ್ನು ಪದವಿ ಪಾಸಾದ ಯುವತಿಯಿಂದ ಮಾಡಿಸುತ್ತಿದ್ದರು. ಇದಕ್ಕೆ ಮಾಸಿಕ 6 ಸಾವಿರ ಹಣ ಕೊಡುತ್ತಿದ್ದರು ಎಂದು ಸ್ಥಳೀಯರು ಆರೋಪಿದ್ದರು.

ಮಹೇಂದ್ರ ಕೊಲ್ಲೂರ್ ಅವರು ಕಳೆದ 20 ವರ್ಷಗಳಿಂದ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಭಾಲಿ ನಾಯಕ್ ತಾಂಡಾದಲ್ಲಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರಂತೆ. ಆದ್ರೆ ಅವರಿಗೆ ಕೈಕಾಲು ನೋವು ಸೇರಿದಂತೆ ಕೆಲ ಆರೋಗ್ಯ ಸಮಸ್ಯೆಗಳು ಇದ್ದವಂತೆ. ಹೀಗಾಗಿ ಕಳೆದ ಐದಾರು ತಿಂಗಳಿನಿಂದ ಯುವತಿಗೆ ಪಾಠ ಮಾಡುವ ಜವಾಬ್ದಾರಿ ನೀಡಿ, ಅವಳಿಗೆ ಪ್ರತಿ ತಿಂಗಳು ಆರು ಸಾವಿರ ಹಣ ನೀಡ್ತಿದ್ದರು ಎಂಬ ದೂರು ಸ್ಥಳೀಯರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಹೋಗಿತ್ತು.

ಶಿಕ್ಷಕ ಹೇಳಿದ್ದು ಹೀಗೆ.. ಈ ಆರೋಪವನ್ನು ಶಿಕ್ಷಕ ಮಹೇಂದ್ರ ಕೊಲ್ಲೂರ ತಳ್ಳಿಹಾಕಿದ್ದಾರೆ. ಯುವತಿ ಶಿಕ್ಷಣ ಪ್ರೇಮಿಯಾಗಿದ್ದು ಉಚಿತವಾಗಿ ಬಂದು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಅವರಿಗೆ ಹಣ ಕೊಡುತ್ತಿರುವ ಆರೋಪ ಸುಳ್ಳು, ನಾನು ಪ್ರತಿನಿತ್ಯ ಶಾಲೆಗೆ ಬಂದು ಪಾಠ ಮಾಡುತ್ತಿದ್ದೇನೆ. ಬೇಕಾದ್ರೆ ಹಾಜರಾತಿ‌ ಪುಸ್ತಕ ನೋಡಿ ಎನ್ನುತ್ತಿದ್ದಾರೆ.

ಯುವತಿ ಪ್ರತಿಕ್ರಿಯೆ: ಇನ್ನು ಈ ವಿಚಾರವಾಗಿ ಮಕ್ಕಳಿಗೆ ಕಳೆದ ಕೆಲ ತಿಂಗಳಿಂದ ಪಾಠ ಮಾಡಿದ್ದ ಯುವತಿ ಯುವತಿ ಪ್ರತಿಕ್ರಿಯಿಸಿ, ನಾನು ಹಣಕ್ಕಾಗಿ ಕೆಲಸ ಮಾಡಿಲ್ಲ. ಆದ್ರೆ ಸ್ವಯಂಪ್ರೇರಣೆಯಿಂದ ಪಾಠ ಮಾಡುತ್ತಿದ್ದೆ. ಹಣ ನೀಡಿ ನನ್ನನ್ನು ನಿಯೋಜನೆ ಮಾಡಿಲ್ಲ. ಎಸ್​ಡಿಎಂಸಿ ಅಧ್ಯಕ್ಷಕರು, ನಾನು ಬಂದು ಹೋಗಲು ಆಟೋ ಚಾರ್ಜ್ ಕೊಡ್ತೇನೆ ಅಂತ ಹೇಳ್ತಿದ್ದರು. ನಾನು ಕಳೆದ 15 ದಿನಗಳಿಂದ ಬಂದು ಆಗಾಗ ಮಕ್ಕಳಿಗೆ ಪಾಠ ಮಾಡಿದ್ದೇನೆ ಅಂತ ಹೇಳಿದ್ದಾರೆ.

ಪ್ರಕರಣ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ‌ ಮಾಡಿದ್ದರು. ಶಿಕ್ಷಕ ಮಹೇಂದ್ರ ಹಾಗೂ ಮುಖ್ಯ ಶಿಕ್ಷಕ ಸೇರಿದಂತೆ ಸಿಆರ್‌ಸಿ, ಬಿಆರ್​ಸಿ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದರು. ಆದ್ರೆ ಸ್ಪಷ್ಟೀಕರಣ ತೃಪ್ತಿಕರ ಇಲ್ಲದಿರುವ ಕಾರಣ ಇದೀಗ ಮಹೇಂದ್ರ ಅವರನ್ನು‌ ಸೇವೆಯಿಂದ ಅಮಾನತು ಮಾಡಿ‌‌ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣ: ತಹಶೀಲ್ದಾರ್ ಅಜಿತ್ ಕುಮಾರ್ ರೈ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.