ETV Bharat / state

ಅಂಗವೈಕಲ್ಯತೆ ಮೀರಿ ಟೆನ್​ಪಿನ್ ಬೌಲಿಂಗ್​ನಲ್ಲಿ ರಾಷ್ಟ್ರಮಟ್ಟದ ಸಾಧನೆ!; ಸಾಧಕನಿಗೆ ಬೇಕಿದೆ ಸಹೃದಯರ ನೆರವು

author img

By

Published : Aug 11, 2023, 8:27 PM IST

ಥಾಯ್ಲೆಂಡ್‌​ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಟೆನ್‌ಪಿನ್ ಬೌಲಿಂಗ್ ಸ್ಪರ್ಧೆಗೆ ರಮೇಶ್​ ಜಾಧವ್​ ಆಯ್ಕೆ ಆಗಿದ್ದಾರೆ.

Ramesh Jadhav
ರಮೇಶ ಜಾಧವ್

ರಮೇಶ ಜಾಧವ್ ಹೇಳಿಕೆ

ಕಲಬುರಗಿ: ಆತ ದಿವ್ಯಾಂಗ ವ್ಯಕ್ತಿಯಾದ್ರೂ ಸಾಧನೆ ಮಾಡುವ ಹಪಿಹಪಿ, ಕನಸು ಕಂಡವನು. ದೈಹಿಕ ನ್ಯೂನತೆಗಳನ್ನೇ ಮೆಟ್ಟಿಲು ಮಾಡಿಕೊಂಡು ಕರ್ನಾಟಕ ದಿವ್ಯಾಂಗ ಕ್ರಿಕೆಟ್ ಟೀಂ ಸೇರಿ ವಿಶೇಷ ಸಾಧನೆ ಮಾಡಿರುವ ವ್ಯಕ್ತಿ. ಟೆನ್​ಪಿನ್ ಬೌಲಿಂಗ್​ನಲ್ಲಿಯೂ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಆಟವಾಡಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆ ತೋರಿಸಿ ಹೆಸರು ಮಾಡುವ ಸದಾವಕಾಶ ಗಿಟ್ಟಿಸಿಕೊಂಡಿದ್ದಾರೆ. ಥಾಯ್ಲಂಡ್​ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಟೆನ್‌ಪಿ‌ನ್ ಬೌಲಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ. ಆದರೆ ಆರ್ಥಿಕ ತೊಂದರೆಯಿಂದ ಅಲ್ಲಿಗೆ ಹೋಗಲು ಸಾಧ್ಯವಾಗದೆ ಉದಾರ ಮನಸುಗಳ ನೆರವು ನೋಡುತ್ತಿದ್ದಾರೆ.

ಸಾಧನೆ ಮಾಡಲು ಛಲ ಬೇಕು. ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಕಲಬುರಗಿಯ ಕೊರಂಟಿ ಹನುಮಾನ ತಾಂಡಾ ನಿವಾಸಿ ರಮೇಶ ಜಾಧವ್​ ನಿರೂಪಿಸಿ ತೋರಿಸಿಕೊಟ್ಟಿದ್ದಾರೆ. ಮೂಲತಃ ಚಿಂಚೋಳಿ ತಾಲೂಕಿನ ಚಿಕ್ಕನಿಂಗದಳ್ಳಿ ಗ್ರಾಮದ 26 ವರ್ಷ ವಯಸ್ಸಿನ ರಮೇಶ, ಆಡವಾಡುವ ವಯಸ್ಸಿನಲ್ಲಿ ಕೈ ಕಳೆದುಕೊಂಡು ದಿವ್ಯಾಂಗರಾಗಿದ್ದಾರೆ. ತಮ್ಮ 9 ವರ್ಷ ವಯಸ್ಸಿನಲ್ಲಿ ಮಳೆ ನೀರಿನಲ್ಲಿ ಕಾಲು ಜಾರಿ ಬಿದ್ದಿದ್ದಷ್ಟೇ ನೆಪ, ಮುಂದೆ ನಂಜಾಗಿ ಕೈ ಕಳೆದುಕೊಂಡರು. ಆದರೆ ಛಲ ಇದ್ದವನಿಗೆ ಸಾಧನೆಗೇನು ಅಡ್ಡಿ? ಎನ್ನುವ ಹಾಗೆ, ರಮೇಶ ತಮ್ಮ ಅಂಗವೈಕಲ್ಯತೆ ಮೆಟ್ಟಿ ನಿಂತು ಸಾಧನೆಯ ಶಿಖರವೇರುತ್ತಿದ್ದಾರೆ.

ತಾಲೂಕು, ಜಿಲ್ಲೆ, ರಾಜ್ಯ ಹೀಗೆ ಹಂತ-ಹಂತವಾಗಿ ಹೆಸರು ಮಾಡುತ್ತಾ ಈಗ ರಾಜ್ಯ ದಿವ್ಯಾಂಗ ಕ್ರಿಕೆಟ್ ಟೀಂನಲ್ಲಿ ಸ್ಥಾನ ಪಡೆದಿದ್ದಾರೆ. 2019ರಿಂದ ರಾಜ್ಯ ದಿವ್ಯಾಂಗ ಕ್ರಿಕೆಟ್ ಟೀಂನಲ್ಲಿ ಆಟವಾಡ್ತಿದ್ದಾರೆ. ಇದರ ಜೊತೆಗೆ ಕಳೆದ ಮೂರು ವರ್ಷಗಳಿಂದ ಟೆನ್‌ಪಿನ್ ಬೌಲಿಂಗ್ ಕರಗತ ಮಾಡಿಕೊಂಡು ಇದರಲ್ಲಿಯೂ ಸಾಧನೆಯ‌ ಮೆಟ್ಟಿಲು ಹತ್ತುತ್ತಿದ್ದಾರೆ. ಹತ್ತಾರು ಪದಕ, ಪ್ರಶಸ್ತಿಗಳನ್ನು ತಮ್ಮ ಮೂಡಿಗೇರಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಆಗಸ್ಟ್​ 5ರಂದು ನಡೆದ ನ್ಯಾಷನಲ್ ಪ್ಯಾರಾ ಅಥ್ಲೆಟಿಕ್ಸ್ ಟೆನ್​ಪಿನ್ ಬೌಲಿಂಗ್ ಆಟದಲ್ಲಿ‌ ಪಾಲ್ಗೊಂಡು ರಾಷ್ಟ್ರಮಟ್ಟದ ಬೆಳ್ಳಿ ಪದಕ ಪಡೆದಿದ್ದಾರೆ. ಥಾಯ್ಲೆಂಡ್ ದೇಶದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಟೆನ್‌ಪಿನ್ ಬೌಲಿಂಗ್ ಸ್ಪರ್ಧೆಗೂ ಆಯ್ಕೆ ಆಗಿದ್ದಾರೆ. ಆದರೆ ಕಡುಬಡತನ ಇವರ ಸಾಧನೆಗೆ ಅಡ್ಡಿ ಆಗುತ್ತಿದೆ. ಅಪ್ಪ ಇಲ್ಲ, ಅಮ್ಮ‌ ಹಾಗೂ ಓರ್ವ ಸಹೋದರ ಹಳ್ಳಿಯಲ್ಲಿ ಕೂಲಿ ಕೆಲಸ ಮಾಡ್ತಿದ್ದಾರೆ. ದಿವ್ಯಾಂಗರಾದ ರಮೇಶ, ಮಡದಿ ಒಂದು‌ ಮಗು ಜೊತೆ ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ‌. ಹೀಗಿರುವಾಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಥಾಯ್ಲೆಂಡ್​ಗೆ ಹೋಗೋದು ಹೇಗೆ? ಎಂದು ಚಿಂತಿಸುವಂತಾಗಿದೆ.

"ಥಾಯ್ಲೆಂಡ್‌ಗೆ ಹೋಗಿ ಬರಲು ಹಾಗೂ ಅಲ್ಲಿನ ಖರ್ಚು ವೆಚ್ಚ ಸೇರಿ‌ ಸುಮಾರು 5 ರಿಂದ 6 ಲಕ್ಷ ರೂ ಹಣ ಬೇಕಂತೆ. ಆರ್ಥಿಕವಾಗಿ ಸಬಲರಲ್ಲದ ರಮೇಶ ಸಹೃದಯಿಗಳಲ್ಲಿ ನೆರವಿನ ಹಸ್ತಚಾಚಲು ಮನವಿ ಮಾಡಿದ್ದಾರೆ. ವ್ಯಾಪಾರಿ ಉದ್ಯಮಿಗಳು, ಜನಪ್ರತಿನಿಧಿಗಳು ಕ್ರಿಕೆಟ್ ಪ್ರೇಮಿಗಳು, ಜನಸಾಮಾನ್ಯರು ಸೇರಿ ಆರ್ಥಿಕ ಸಹಾಯ ಮಾಡಿದರೆ ಮುಂದಿನ‌ ಸಾಧನೆಗೆ ದಾರಿದೀಪವಾಗಲಿದೆ" ಅಂತಾರೆ ರಮೇಶ ಜಾಧವ್.

ನೆರವು ನೀಡಲಿಚ್ಛಿಸುವವರು ರಮೇಶ್ ಜಾಧವ್ ಅವರ 9844936664 ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು.

ಇದನ್ನೂ ಓದಿ: ವಿಶ್ವ ಕುಬ್ಜರ ಕ್ರೀಡಾಕೂಟ: ಸಾಲ ಮಾಡಿ ಜರ್ಮನಿಗೆ ಹೋಗಿದ್ದ ಬೆಳಗಾವಿ ಕುವರಿ ಮುಡಿಗೆ ಮೂರು ಪದಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.