ETV Bharat / state

PSI Scam: ಆರ್.ಡಿ ಪಾಟೀಲ್ ನ್ಯಾಯಾಲಯಕ್ಕೆ ಶರಣು, 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ

author img

By

Published : Jan 23, 2023, 9:50 PM IST

ಪಿಎಸ್​ಐ ನೇಮಕಾತಿ ಪರೀಕ್ಷೆ ಅಕ್ರಮ - ಪ್ರಮುಖ ಆರೋಪಿ ಆರ್.ಡಿ ಪಾಟೀಲ್​ ನ್ಯಾಯಾಲಯಕ್ಕೆ ಶರಣು - 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ

psi-scam-king-pin-rd-patil-surrendered-to-the-court
PSI Scam: ಆರ್.ಡಿ ಪಾಟೀಲ್ ನ್ಯಾಯಾಲಯಕ್ಕೆ ಶರಣು, 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ

ಕಲಬುರಗಿ : ಸಿಐಡಿ ಅಧಿಕಾರಿಗಳನ್ನು ತಳ್ಳಿ ಪರಾರಿಯಾಗಿದ್ದ ಪೊಲೀಸ್ ಸಬ್ ಇನ್ಸ್​ಪೆಕ್ಟರ್ (ಪಿಎಸ್ಐ) ಪರೀಕ್ಷೆ ಅಕ್ರಮದ ಪ್ರಮುಖ‌ ಆರೋಪಿ ಆರ್.ಡಿ. ಪಾಟೀಲ್ ಐದನೇ ಹೆಚ್ಚುವರಿ ಮತ್ತು ಜೆ‌ಎಂಎಫ್‌ಸಿ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಆರೋಪಿ ಆರ್.ಡಿ. ಪಾಟೀಲ್​ಗೆ ಬಂಧನದ ಭೀತಿ ಎದುರಾದ ಹಿನ್ನಲೆ ಸ್ವಯಂಪ್ರೇರಿತ ನ್ಯಾಯಾಲಯಕ್ಕೆ ಬಂದು‌ ಶರಣಾಗಿದ್ದಾನೆ.

14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ : ಪೊಲೀಸ್ ಸಬ್ ಇನ್ಸ್​ಪೆಕ್ಟರ್ ನೇಮಕಾತಿ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ, ಕಿಂಗ್‌ಪಿನ್ ಎಂದೇ ಹೇಳಲಾಗುತ್ತಿರುವ ಆರ್.ಡಿ.ಪಾಟೀಲ್‌‌ಗೆ (ರುದ್ರಗೌಡ ಪಾಟೀಲ್‌‌) ಎಂಟು ತಿಂಗಳ ನಂತರ ಕಳೆದ ಡಿಸೆಂಬರ್‌ನಲ್ಲಿ ನ್ಯಾಯಾಲಯ ಹತ್ತು ಹಲವು ಷರತ್ತುಗಳು ವಿಧಿಸಿ ಜಾಮೀನು ನೀಡಿತ್ತು. ಷರತ್ತುಗಳನ್ನು ಒಪ್ಪಿಕೊಂಡು ಹೊರಬಂದ ಆರೋಪಿ​​ ಷರತ್ತುಗಳನ್ನು‌ ಉಲ್ಲಂಘನೆ ಮಾಡಿದ್ದು, ವಿಚಾರಣೆಗೆ ಸಿಐಡಿ ಅಧಿಕಾರಿಗಳ‌ ಮುಂದೆ ಹಾಜರಾಗುತ್ತಿಲ್ಲ, ವಿಳಾಸ ನೀಡಿದ ಮನೆಯಲ್ಲಿ ಆರೋಪಿ ಸಿಗುತ್ತಿಲ್ಲ, ಮೊಬೈಲ್ ಸಂಖ್ಯೆ ಸ್ವಿಚ್ಆಫ್ ಇರುತ್ತಿದೆ. ನೋಟಿಸ್‌ಗೆ ಸ್ಪಂದನೆ ನೀಡುತ್ತಿಲ್ಲ ಎಂದು ಸಿಐಡಿ ಜಾಮೀನು ರದ್ದು ಕೋರಿ ನ್ಯಾಯಲಯ‌ಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ಇನ್ನೂ ಬಾಕಿ ಇತ್ತು.

ಆರೋಪಿಗಳ ಮನೆ ಮೇಲೆ ಇಡಿ ದಾಳಿ : ಇನ್ನೊಂದೆಡೆ ತುಮಕೂರಿನಲ್ಲಿ ದಾಖಲಾದ ಪಿಎಸ್ಐ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಆರ್.ಡಿ.ಪಾಟೀಲ್ ಬಂಧನಕ್ಕೆ‌ ಅರೆಸ್ಟ್ ವಾರೆಂಟ್ ಜಾರಿ ಆಗಿತ್ತು. ಈ ಹಿನ್ನಲೆ ವಾರೆಂಟ್ ಸಮೇತ ಆರೋಪಿ ಬಂಧನಕ್ಕೆ ಸಿಐಡಿ ಕಾಯುತಿತ್ತು. ಈ ಎಲ್ಲದರ ನಡುವೆ ಕಳೆದ ಗುರುವಾರದಂದು ಆರ್.ಡಿ. ಪಾಟೀಲ್ ತನ್ನ ಅಕ್ಕಮಹಾದೇವಿ ಕಾಲೋನಿಯ ಮನೆಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು, ಬೆಳ್ಳಂಬೆಳಗ್ಗೆ 6 ಗಂಟೆಗೆ ದಾಳಿ‌‌ ನಡೆಸಿ ರಾತ್ರಿ 11 ಗಂಟೆವರೆಗೆ ವಿಚಾರಣೆಗೆ ಒಳಪಡಿಸಿದ್ದರು. ಅವತ್ತಿನ ದಿನವೇ ಅಕ್ರಮದ ಇತರೆ ಆರೋಪಿಗಳಾದ‌ ಆರ್.ಡಿ.ಪಾಟೀಲ್ ಸಹೋದರ ಮಹಾಂತೇಶ ಪಾಟೀಲ, ಜ್ಞಾನಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿ, ಶಾಲೆಯ ಮುಖ್ಯಶಿಕ್ಷಕ ಕಾಶಿನಾಥ ಚಿಲ್ಲ ಮತ್ತು ಮಂಜುನಾಥ ಮೇಳಕುಂದಿಯ ಮನೆಗಳ ಮೇಲೆಯೂ ದಾಳಿ ಮಾಡಿದ್ದರು.

ಸಿಐಡಿ ಅಧಿಕಾರಿಗಳನ್ನು ತಳ್ಳಿ ಪರಾರಿಯಾಗಿದ್ದ ಪಾಟೀಲ್​​ : ತೆಲಂಗಾಣ ಪಾಸಿಂಗ್ ಹೊಂದಿದ್ದ ಒಂದು ಟೆಂಪೋ ಟ್ರಾವೆಲ್ಲರ್ ಹಾಗೂ ಕಾರುಗಳಲ್ಲಿ ಆಗಮಿಸಿದ ಇ.ಡಿ ಅಧಿಕಾರಿಗಳು ಆರ್.ಡಿ. ಪಾಟೀಲ್‌ನನ್ನ ರಾತ್ರಿ 11 ಗಂಟೆವರೆಗೆ ವಿಚಾರಣೆ ನಡೆಸಿ ವಾಪಸ್ ಆಗಿದ್ದರು. ಈ ಬೆನ್ನಲ್ಲೇ ಬಂಧನದ ವಾರಂಟ್ ಜೊತೆಗೆ ಆರ್.ಡಿ.ಪಾಟೀಲ್‌ ಮನೆಗೆ ಸಿಐಡಿ ಅಧಿಕಾರಿಗಳು‌ ತೆರಳಿದಾಗ ನನಗೆ ಯಾವುದೇ ಅಕ್ರಮದ ಬಗ್ಗೆ ಗೊತ್ತಿಲ್ಲ. ಸುಮ್ಮನೆ ನನ್ನನ್ನು ಸಿಲುಕಿಸುತ್ತಿದ್ದಿರಿ ಎನ್ನುತ್ತಲೇ ಅಧಿಕಾರಿಗಳನ್ನ ತಳ್ಳಿ ಮನೆಯ ಇನ್ನೊಂದು ಬಾಗಿಲಿನಿಂದ ಪರಾರಿಯಾಗಿದ್ದಾನೆಂದು ಅಶೋಕ‌ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬಂಧನದ ಭೀತಿ ಹಿನ್ನಲೆ ನ್ಯಾಯಾಲಯಕ್ಕೆ ಶರಣು : ಇನ್ನು ಗುರುವಾರ ರಾತ್ರಿ ತಲೆ ಮರೆಸಿಕೊಂಡ‌ ಆರ್.ಡಿ‌.ಪಾಟೀಲ್ ಶನಿವಾರ ತಡರಾತ್ರಿ ಸಾಮಾಜಿಕ ಜಾಲತಾಣದಲ್ಲಿ ತಾನು‌ ಮಾತನಾಡಿದ ವಿಡಿಯೋವೊಂದನ್ನು ಹರಿಬಿಟ್ಟಿದ್ದ. ಈ ನೆಲೆದ ಕಾನೂನಿನ ಮೇಲೆ ನನಗೆ ಗೌರವವಿದೆ. ರಾಜಕೀಯ ಕುತಂತ್ರಿಗಳು ನನ್ನನ್ನು ಪಿಎಸ್ಐ ಹಗರಣದಲ್ಲಿ ಸಿಲುಕಿಸಿದ್ದಾರೆ. ನಾನು ತಪ್ಪು ಮಾಡಿಲ್ಲ. ತಲೆ‌‌ಮರೆಸಿಕೊಂಡಿಲ್ಲ‌‌ ಎಂದೆಲ್ಲ ಹೇಳಿ ಅಫಜಲಪುರ ಮತಕ್ಷೇತ್ರದ ಜನ ಹೇಳಿದರೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಇಂಗಿತ ವ್ಯಕ್ತಪಡಿಸಿದ್ದರು. ವಿಡಿಯೋ ಬಿಡುಗಡೆಯಾದ ಹಿನ್ನಲೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ಮತ್ತೊಂದು ನೋಟಿಸ್ ನೀಡಿದ್ದರು.

ಜಾಮೀನು ಷರತ್ತು ಉಲ್ಲಂಘನೆ, ಇ.ಡಿ. ಅಧಿಕಾರಿಗಳ ವಿಚಾರಣೆ, ಅರೆಸ್ಟ್ ವಾರೆಂಟ್, ಸಿಐಡಿ ಅಧಿಕಾರಿಗಳನ್ನು ತಳ್ಳಿ ಓಡಿ ಹೋಗಿದಕ್ಕೆ ಪ್ರಕರಣ‌ ದಾಖಲು, ವಿಚಾರಣೆಗೆ ಹಾಜರಾಗಲು ಮತ್ತೊಂದು ನೋಟಿಸ್, ಹೀಗೆ ಆರ್.ಡಿ. ಪಾಟೀಲ್‌ಗೆ ಬಂಧನದ ಭೀತಿ ಎದುರಾಗಿತ್ತು.‌ ಇಂದು ನ್ಯಾಯಾಲಯದ ಮುಂದೆ ಶರಣಾದ ಆರ್.ಡಿ.ಪಾಟೀಲ್​ರನ್ನು ಫೆ.6 ರವರೆಗೆ ನ್ಯಾಯಾಂಗ ವಶಕ್ಕೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಇದನ್ನೂ ಓದಿ : ಪಿಎಸ್ಐ ನೇಮಕಾತಿ ಅಕ್ರಮ: ಕಿಂಗ್‌ಪಿನ್‌ ಆರ್.ಡಿ.ಪಾಟೀಲ್‌ ವಿರುದ್ದ ಹೊಸ ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.