ಕೆಕೆಆರ್​ಡಿಬಿಗೆ ರೂ‌.5000 ಕೋಟಿ ಬಿಡುಗಡೆ, ಮೂಗಿಗೆ ತುಪ್ಪ ಸವರಿದ ಸಿಎಂ : ಪ್ರಿಯಾಂಕ್ ಖರ್ಗೆ ಟೀಕೆ

author img

By

Published : Sep 18, 2022, 3:47 PM IST

kalyana-karnataka-amrit-mahitsav

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಈ ಹಿಂದೆ ಘೋಷಿಸಿದ್ದ 3,000 ಕೋಟಿಯೇ ಸರಿಯಾಗಿ ತಲುಪಿಲ್ಲ. ಇನ್ನು ಚುನಾವಣೆ ಹತ್ತಿರ ಇರುವಾಗ ನೀಡಿರುವ 5,000 ಕೋಟಿಯ ರೂ. ತಲುಪಲಿದೆಯೇ ಎಂದು ಲೇವಡಿ ಮಾಡಿದ್ದಾರೆ.

ಕಲಬುರಗಿ : ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ರೂ 5,000 ಕೋಟಿ ನೀಡುವುದಾಗಿ ನಿನ್ನೆ ಸಿಎಂ ಹೇಳಿ ಮೂಗಿಗೆ ತುಪ್ಪ ಸವರಿ ಹೋಗಿದ್ದಾರೆ. ಮುಂದೆ ಚುನಾವಣೆ ಬರುತ್ತಿದೆ. ಹಾಗಾಗಿ ಈ ಅನುದಾನ ಬಿಡುಗಡೆ ಅಸಾಧ್ಯ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಕೆಆರ್ ಡಿಬಿಗೆ ಘೋಷಿತ ಅನುದಾನ ರೂ‌ 3,000 ಕೋಟಿಯಲ್ಲಿ ಕೇವಲ ರೂ. 1,500 ಕೋಟಿ ಮಾತ್ರ ಬಿಡುಗಡೆ ಮಾಡಿ ಉಳಿದ ರೂ 1,500 ಕೋಟಿಯನ್ನು ಎಸ್​ಡಿಪಿನಲ್ಲಿ ಬಿಡುಗಡೆ ಮಾಡದೇ ಮಹಾತ್ವಾಕಾಂಕ್ಷೆ ತಾಲೂಕುಗಳೆಂದು ಮರುನಾಮಕರಣ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಆ ಅನುದಾನ ಹೆಡ್ ಆಫ್ ಅಕೌಂಟ್​ಗೆ ಬರುವುದಿಲ್ಲ. ಘೋಷಿತ ಅನುದಾನವನ್ನೇ ಸರಿಯಾಗಿ ಬಿಡುಗಡೆ ಮಾಡದ ಸಿಎಂ ಮತ್ತೆ ರೂ. 5,000 ಕೋಟಿ ನೀಡುವುದಾಗಿ ಹೇಳಿದ್ದಾರೆ ಎಂದರು.

ಐದು ಸಿಎಂಗಳ ಕೊಡುಗೆ ಏನು? : ಸ್ಥಳೀಯ ಮುಖಂಡರ ನಿರಾಸಕ್ತಿಯಿಂದ ಕಲಬುರಗಿಯಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಸಿಎಂ ಹೇಳಿದ್ದಾರೆ. ನಿಮ್ಮ ಅವಧಿಯಲ್ಲಿ ಐವರು ಸಿಎಂ ಕೊಟ್ಟಿದ್ದೀರಲ್ಲ, ನಿಮ್ಮ ಕೊಡುಗೆ ಏನಿದೆ? ನೀವು ನಿನ್ನೆ ಉದ್ಘಾಟನೆ ಮಾಡಿದ ಕಮೀಷನರ್ ಕಚೇರಿಗೆ ಅಡಿಗಲ್ಲು ಹಾಕಿದ್ದೇ ನಾನು. ನೀವು ಬಂದಿಳಿದ ವಿಮಾನ ನಿಲ್ದಾಣ ನಿರ್ಮಿಸಿದ್ದೇ ನಮ್ಮ ಅವಧಿಯಲ್ಲಿ. ನಿನ್ನೆ ನೀವು ಓಡಾಡಿದ ರಸ್ತೆ ನಿರ್ಮಾಣ ಮಾಡಿದ್ದೇ ನಾವು ಎಂದು ಪ್ರಿಯಾಂಕ್ ತಿರುಗೇಟು ನೀಡಿದರು.

ಕೆಕೆಆರ್​ಡಿಬಿಗೆ ರೂ‌5000 ಕೋಟಿ ಬಿಡುಗಡೆ ವಿಚಾರ ಮೂಗಿಗೆ ತುಪ್ಪ ಸವರಿದ ಸಿಎಂ

ನಿಮ್ಮ ಶಾಸಕರ ಸಾಧನೆ ಏನು? : ಯುಪಿಎ ಅವಧಿಯಲ್ಲಿ ಮಂಜೂರಾಗಿದ್ದ ರೈಲ್ವೆ ವಲಯ, ನಿಮ್ಸ್​, ಜವಳಿ ಪಾರ್ಕ್, ಏಮ್ಸ್, ಮೇಕ್ ಇನ್ ಇಂಡಿಯಾ, ಇಎಸ್ ಐ ಮೇಲ್ದರ್ಜೆಗೆ ಏರಿಸುವ ಯೋಜನೆಗಳೆಲ್ಲ ಏನಾದವು?. ಕಲಬುರಗಿ ಸಂಸದ ಉಮೇಶ್ ಜಾಧವ್​ ಈ ಮೂರು ವರ್ಷದಲ್ಲಿ ಏನು ಮಾಡಿದ್ದಾರೆ?. ಮೋದಿ ಅವರ ಮನ್ ಕಿ ಬಾತ್​ನ್ನು ಕನ್ನಡದಲ್ಲಿ ಅನುವಾದ ಮಾಡಿ ಹೇಳಿದ್ದು ಹಾಗೂ ಕೇಂದ್ರಿಯ ವಿವಿಯನ್ನು ಆರ್​ಎಸ್​ಎಸ್ ಕೇಂದ್ರವನ್ನಾಗಿ ಪರಿವರ್ತನೆ ಮಾಡುತ್ತಿರುವುದೇ ಇವರ ಸಾಧನೆಯಾಗಿದೆ ಎಂದು ಲೇವಡಿ ಮಾಡಿದರು.

ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ಮೇಲ್ಸೇತುವೆ ಹಾಗೂ ಕೆಳ ಸೇತುವೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಗುತ್ತಿಗೆದಾರರ ಬಳಿ ಹಣವಿದ್ದರೆ ಕಾಮಗಾರಿ ಮುಂದುವರೆಸಲಿ, ಎರಡು ವರ್ಷದ ನಂತರ ಬಿಲ್ ಮಾಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇದೇನಾ ಅಭಿವೃದ್ಧಿ ಎಂದರೆ ಎಂದು ಖರ್ಗೆ ಪ್ರಶ್ನಿಸಿದರು.

ಕಲಬುರಗಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿ ಮಾಡುವುದಾಗಿ ಬೊಮ್ಮಾಯಿ ಹೇಳಿದ್ದಾರೆ. ಕೊನೆ ಪಕ್ಷ ಇಲ್ಲಿನ ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ಭಾಷಣ ತಯಾರು ಮಾಡಿಕೊಳ್ಳಬೇಕಿತ್ತು. ನಿರಾಣಿ ಅವರು ಮಿಷನ್ 20/20 ಎನ್ನುತ್ತಾರೆ. 2019 ರಲ್ಲಿ ಕೊರೆದ ಕೊಳವೆ ಬಾವಿಗಳ ಬಿಲ್ ಪಾವತಿಯಾಗಿಲ್ಲ. ಇನ್ನು, ಅಂತರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಅಭಿವೃದ್ಧಿ ಮಾಡುತ್ತಾರೆ ಎಂದು ಪ್ರಿಯಾಂಕ್ ಕಿಡಿಕಾರಿದರು.

ಭ್ರಷ್ಟಾಚಾರ ನಡೆದಿದ್ದರೆ ತನಿಖೆ ನಡೆಸಿ : ರಾಜ್ಯದಲ್ಲಿ‌ ಒಟ್ಟು 2,50,000 ಹುದ್ದೆಗಳು ಖಾಲಿ ಇದ್ದು ಅವುಗಳಲ್ಲಿ 20,000 ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿವೆ. ಇದಕ್ಕೆ ಉತ್ತರ ಕೊಡಿ ಎಂದರೆ ಮಾತು ಬದಲಿಸಿ ಕಾಂಗ್ರೆಸ್ ಕಾಲದಲ್ಲಿಯೂ ಭ್ರಷ್ಟಾಚಾರ ನಡೆದಿತ್ತು ಎಂದು ಹೇಳುತ್ತಾರೆ. ಭ್ರಷ್ಟಾಚಾರ ನಡೆದಿದ್ದರೆ, ತನಿಖೆ ಮಾಡಿಸಿ ತಪ್ಪಿತಸ್ಥರನ್ನು ಜೈಲಿಗೆ ಹಾಕಿಸಿ ಎಂದು ಅವರು ಸಿಎಂಗೆ ಸವಾಲು ಹಾಕಿದರು.

ಇದನ್ನೂ ಓದಿ : ನಾವು ಮಾಡಿದ ಕಾರ್ಯಗಳಿಂದ ಬೇರೆಯವರು ಪ್ರಚಾರ ಪಡೆಯುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.