ETV Bharat / state

'ನಾಲಾಯಕ್ ಮಗ ಇದ್ರೆ ಮನೆ ನಡೆಸಲು ಆಗುತ್ತಾ?': ಪ್ರಿಯಾಂಕ್ ಖರ್ಗೆ ವಾಗ್ದಾಳಿ

author img

By

Published : May 1, 2023, 12:34 PM IST

Updated : May 1, 2023, 7:58 PM IST

ರಾಮರಾಜ್ಯ ಕಟ್ಟುವ ಬಿಜೆಪಿ, ಕ್ರಿಮಿನಲ್​ಗಳಿಗೆ ಟಿಕೆಟ್​ ಕೊಟ್ಟು ಮತ ಪ್ರಚಾರ ನಡೆಸುತ್ತಿದೆ ಎಂದು ಪ್ರಿಯಾಂಕ್​ ಖರ್ಗೆ ಟೀಕಿಸಿದರು.

Priyank Kharge Pressmeet
ಪ್ರಿಯಾಂಕ್​ ಖರ್ಗೆ ಸುದ್ದಿಗೋಷ್ಠಿ

ಪ್ರಿಯಾಂಕ್​ ಖರ್ಗೆ ಸುದ್ದಿಗೋಷ್ಠಿ

ಕಲಬುರಗಿ: 'ಮನೆಯಲ್ಲಿ ನಾಲಾಯಕ್ ಮಗ ಇದ್ರೆ ಮನೆ ನಡೆಸಲು ಆಗುತ್ತಾ?' ಎಂದು ಕಲಬುರಗಿಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಅಂತೀರಲ್ಲ, ಇದು ಡಬಲ್ ಅಲ್ಲ ಟ್ರಬಲ್ ಇಂಜಿನ್ ಸರ್ಕಾರ. ನಾನು ಯಾರಿಗೂ ವೈಯಕ್ತಿಕವಾಗಿ ನಾಲಾಯಕ್ ಅನ್ನೋಲ್ಲ, ನಾಲಾಯಕ್ ಮಗ ಇದ್ರೆ ಮನೆ ಹೇಗೆ ನಡೆಯುತ್ತೆ ಅಂತಾ ಕೇಳ್ತಿದ್ದೇನೆ ಅಷ್ಟೇ ಎಂದರು.

ಪ್ರಧಾನಿ ಕಲಬುರಗಿಗೆ ಬಂದಾಗ 'ಬಂಜಾರಾ ಕಾ ಬೇಟಾ ಏಕ್ ದೆಹಲಿಮೇ ಬೈಠಾ ಹೈ' ಅಂತಾ ಹೇಳಿದ್ರು, ಇಂತಹ ನಾಲಾಯಕ್ ಮಗ ಇದ್ರೆ ಮನೆ ನಡೆಸಲು ಆಗುತ್ತಾ? ಎಂದು ಪರೋಕ್ಷವಾಗಿ ಮೋದಿಯನ್ನು ಟೀಕಿಸಿದರು. ಇದೇ ವೇಳೆ ಪ್ರಧಾನಿಗೆ ಪ್ರಶ್ನೆಗಳ ಸುರಿಮಳೆಗೈದ ಖರ್ಗೆ, ಮೋದಿ ರೋಡ್ ಶೋಗೆ ಜನ ಸೇರುತ್ತಾರೆ. ಅದರಲ್ಲಿ ಅನುಮಾನ ಇಲ್ಲ. ಆದರೆ ಅಲ್ಲಿ ಸೇರಿದ ಜನ, ಕೋಲಿ ಜನಾಂಗಕ್ಕೆ ಎಸ್​ಟಿ ಯಾವಾಗ ಕೊಡ್ತೀರಿ ಎಂದು ಕೇಳುತ್ತಾರೆ. ಅದಕ್ಕೆ ನಿಮ್ಮ ಉತ್ತರ ಏನು?.

ರೂಪ್ಸಾ ಕಾಂಟ್ರ್ಯಾಕ್ಟ್ ಸಂಘ 40% ಬಗ್ಗೆ ನಿಮಗೆ ಪತ್ರ ಬರೆದಿದ್ದಾರೆ. ಆ ಪತ್ರ ಓದಲು ನಿಮಗೆ ಟೈಂ ಇರಲಿಲ್ವಾ? ನಿಮ್ಮಲ್ಲಿ ರೈತರ ಆತ್ಮಹತ್ಯೆ ಲಿಸ್ಟ್ ಇದೆಯಾ? ಮಾಡಾಳು ವಿರೂಪಾಕ್ಷಪ್ಪ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕರೂ ನೋಡಲು ನಿಮಗೆ ಟೈಂ ಇರಲಿಲ್ವಾ? ಮಲ್ಲಿಕಾರ್ಜುನ ಖರ್ಗೆ, ನನ್ನ ಬಗ್ಗೆ, ನೆಹರು ಬಗ್ಗೆ ಮಾತಾಡ್ತೀರಾ, ಮರಳಿ ನಿಮ್ಮ ಮೇಲೆ ಟೀಕೆಗಳು ಬಂದಾಗ ಸಹಿಸಿಕೊಳ್ಳಲು ನಿಮಗೆ ಆಗಲ್ಲ, ಟೀಕೆ ಸಹಿಸಿಕೊಳ್ಳದವರು ರಾಜಕೀಯ ಬಿಟ್ಟು ಬಿಡಬೇಕು.

ಕಲಬುರಗಿಯಲ್ಲಿ ರೈಲ್ವೇ ಡಿವಿಜನ್ ಏನಾಯ್ತು? ಇದರ ಬಗ್ಗೆ ಉತ್ತರ ಕೊಡಬೇಕು. ರಾಮರಾಜ್ಯ ಮಾಡುತ್ತೇವೆ. ಕ್ರಿಮಿನಲ್ ಹಿನ್ನೆಲೆ ಇರೋರಿಗೆ ಟಿಕೆಟ್ ಕೊಡಲ್ಲ ಅಂದಿದ್ರಲ್ಲ, ಈಗ ಮಕ್ಕಳ ಹಾಲಿನ ಪೌಡರ್ ಕದ್ದಿರೋರಿಗೆ ಟಿಕೆಟ್ ಕೊಟ್ಟಿದ್ದೀರಿ. ಇದಕ್ಕೆ ನಿಮ್ಮ ಸಮರ್ಥನೆ ಏನು? ಎಂದು ಕೇಳಿದ ಪ್ರಿಯಾಂಕ್ ಖರ್ಗೆ, ರೋಡ್ ಶೋ ಮಾಡೋದಕ್ಕೂ ಮುನ್ನ ಒಂದು ಸುದ್ದಿಗೋಷ್ಠಿ ಮಾಡಿ, ಮನ್ ಕೀ ಬಾತ್ ಮಾಡ್ತೀರಲ್ಲ, ಅದರಂತೆ ಜನ ಕೀ ಬಾತ್ ಆಗಲಿ ನೋಡೋಣ ಎಂದು ಸವಾಲು ಹಾಕಿದರು.

ಇದೇ ವೇಳೆ ರಾಜ್ಯ ಬಿಜೆಪಿ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದ ಖರ್ಗೆ, ಬಿಜೆಪಿ ನಾಯಕರ ಮೇಲೆ ನನಗೆ ಬಹಳ ಅನುಕಂಪ ಬರ್ತಿದೆ. ಕಲಬುರಗಿಯಲ್ಲಿ ನಾಯಕರು ಸತ್ತೋಗಿದ್ದಾರೆ. ಹಾಗಾಗಿ MLC ಎನ್. ರವಿಕುಮಾರ್ ಅವರಿಗೆ ಉಸ್ತುವಾರಿ ಕೊಟ್ಟಿದ್ದಾರೆ. ಕ್ರಿಮಿನಲ್‌ಗೆ ಟಿಕೆಟ್ ಕೊಟ್ಟು ಬಿಜೆಪಿಯವರು ಚಿತ್ತಾಪುರ ಜನರಿಗೆ ಅವಮಾನ ಮಾಡಿದ್ದಾರೆ. ಎಂಥ ವ್ಯಕ್ತಿಗೆ ಟಿಕೆಟ್ ಕೊಟ್ಟಿದ್ದೀರಾ? ಅವರ ಮೇಲೆ 40 ಕೇಸ್ ಇದೆ. ಅಕ್ಕಿ ಕಳ್ಳತನ, ಡೀಸೆಲ್ ಸಂಗ್ರಹಣೆ, ಶಾಂತಿ ಭಂಗ, ಹಾಲಿನ ಪೌಡರ್ ಕಳ್ಳತನ ಮಾಡ್ತಾರೆ.

ನಿಮಗೆ ಮಾನ ಮರ್ಯಾದೆ ಇಲ್ವಾ? ಇಂತಹ ವ್ಯಕ್ತಿಗೆ ಟಿಕೆಟ್ ಕೊಟ್ಟಿದ್ದೀರಿ. ಮಣಿಕಂಠ ರಾಠೋಡ್​ನಂತಹ ಕ್ರಿಮಿನಲ್​ಗಳ ಕಾಲಿಗೆ ಬೀಳೋದು ಯಾಕೆ? ಖುದ್ದು ಸಿಎಂ ಬೊಮ್ಮಾಯಿ ಬರ್ತಾರೆ ಕ್ರಿಮಿನಲ್ ಪರ ಪ್ರಚಾರ ಮಾಡಿ ಓಟು ಕೇಳ್ತಾರೆ. ಇದು ಎಂಥ ದುರ್ದೈವದ ಸಂಗತಿ.‌ ಇನ್ನೊಂದೆಡೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಬಂದು ಪ್ರಚಾರ ಮಾಡಿದ್ದಾರೆ. ಇಷ್ಟೊಂದು ಜನ ಬಂದು ಚಿತ್ತಾಪುರ ಕ್ಷೇತ್ರದಲ್ಲಿ ಪ್ರಚಾರ ಮಾಡ್ತಿದ್ದೀರಲ್ಲ ನಾನು ಅಷ್ಟೊಂದು ಸ್ಟ್ರಾಂಗ್ ಇದ್ದೀನಾ? ಎಂದು ಚೇಡಿಸಿದರು.

ಮಾತೆತ್ತಿದರೆ ರಾಮ ರಾಜ್ಯ ಕಟ್ಟುತ್ತೇವೆ ಎನ್ನುವ ನೀವು ಚಿತ್ತಾಪುರದಲ್ಲಿ ಯಾವ ಮರ್ಯಾದಾ ಪುರುಷೋತ್ತಮನಿಗೆ ಟಿಕೆಟ್ ಕೊಟ್ಟಿದ್ದೀರಾ? ರಾಮ ರಾಜ್ಯ ಅಂತಾ ಹೇಳುತ್ತಾ ರಾವಣ ರಾಜ್ಯ ಕಟ್ಟೋದಕ್ಕೆ ಮುಂದಾಗಿದ್ದಿರಾ? ಎಂದು ಕೇಳಿದರು. ಎನ್.ರವಿಕುಮಾರ್ ವಿರುದ್ಧ ಕೂಡಾ ತೀವ್ರ ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ, ರವಿಕುಮಾರ ಅವರೇ ನೀವು ಟಿಕೆಟ್ ಮಾರಾಟ ಮಾಡಿಕೊಂಡಿದ್ದೀರಾ ಅಂತಾ ನಿಮ್ಮ ಬಿಜೆಪಿಯವರೇ ಮಾತಾಡಿಕೊಳ್ತಿದ್ದಾರೆ. ರವಿಕುಮಾರ್ ಅವರಿಗೆ ಒಂದು ಗ್ರಾಂ.ಪಂ ನಲ್ಲಿ ನಿಂತು ಗೆಲ್ಲುವ ಯೋಗ್ಯತೆ ಇಲ್ಲ. ತಾಕತ್ತು, ಧಮ್ ಇದ್ರೆ ಗ್ರಾಮ ಪಂಚಾಯತಿ ಎಲೆಕ್ಷನ್ ನಿಂತು ಗೆದ್ದು ತೋರಿಸಲಿ ಅಂತಾ ಜಗದೀಶ ಶೆಟ್ಟರ್ ಹೇಳಿದ್ದಾರೆ. ಗೆದ್ದು ತೋರಿಸಿ ನೋಡೋಣ, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಅಂತೀರಲ್ಲ, ಇದು ಟ್ರಬಲ್ ಇಂಜಿನ್ ಸರ್ಕಾರ, ಬಿಜೆಪಿ MLC ಎನ್ ರವಿಕುಮಾರ್ ವಿರುದ್ಧ ಪ್ರಿಯಾಂಕ್ ಖರ್ಗೆ ಟೀಕಾಸಮರ ನಡೆಸಿದರು.

ಇದನ್ನೂ ಓದಿ: ಕಾಂಗ್ರೆಸ್​ನಿಂದ ನನಗೆ ಧಮ್ಕಿ.. ಶಿವನ ಕೊರಳಿಗೆ ನಾಗಸರ್ಪವೇ ಶೋಭೆ.. ಜನತೆಯೇ ಈಶ್ವರ ಸ್ವರೂಪಿ: ಮೋದಿ

Last Updated : May 1, 2023, 7:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.