ETV Bharat / state

ಡಿಸಿಸಿ ಬ್ಯಾಂಕ್ ಸೂಪರ್​ಸೀಡ್ ಮಾಡಲು ಶಾಸಕ ತೆಲ್ಕೂರ ಒತ್ತಾಯ

author img

By

Published : Jun 10, 2020, 2:25 AM IST

ರೈತರ ಹಿತ ಕಾಪಾಡಿ, ನೆರವಿಗೆ ಬರಬೇಕಾಗಿದ್ದ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ಕಳೆದ 14 ವರ್ಷಗಳ ಅವಧಿಯಲ್ಲಿ ತೀರ ಕೆಳಮಟ್ಟದ ವ್ಯವಹಾರ ನಡೆಸಿದೆ ಎಂದು ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಹೇಳಿದರು.

MLA Rajkumar patil pressmet
ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ

ಸೇಡಂ: ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ (ಡಿಸಿಸಿ) ಅವ್ಯವಹಾರದ ಗೂಡಾಗಿದ್ದು, ಕೂಡಲೇ ಸೂಪರ್​ಸೀಡ್ ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಅವರು ಮುಖ್ಯಮಂತ್ರಿಗಳು ಮತ್ತು ಸಹಕಾರಿ ಸಚಿವರಿಗೆ ಒತ್ತಾಯಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಹಿತ ಕಾಪಾಡಿ, ನೆರವಿಗೆ ಬರಬೇಕಾಗಿದ್ದ ಡಿಸಿಸಿ ಬ್ಯಾಂಕ್ ಕಳೆದ 14 ವರ್ಷಗಳ ಅವಧಿಯಲ್ಲಿ ತೀರ ಕೆಳಮಟ್ಟದ ವ್ಯವಹಾರ ನಡೆಸಿದೆ. 400 ಕೋಟಿ ವ್ಯವಹಾರ ನಡೆಸಿ, ಅದರಲ್ಲಿ 350 ಕೋಟಿ ವಸೂಲಿ ಬಾಕಿ ಉಳಿಸಿಕೊಂಡಿದೆ. ಬರುವ ಜೂ.13ರಂದು ಆಡಳಿತ ಮಂಡಳಿಯ ಅವಧಿ ಮುಗಿಯಲಿದ್ದು, ಮುಂದೆ ಯಾವುದೇ ರೀತಿಯ ಚುನಾವಣೆ ನಡೆಸದೆ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿ, 15 ವರ್ಷಗಳ ಅವಧಿಯಲ್ಲಿ ಆದ ಅವ್ಯವಹಾರದ ಸಂಪೂರ್ಣ ತನಿಖೆ ನಡೆಸಬೇಕು. ಕಳೆದ ಅವಧಿಯಲ್ಲಿ ಆಡಳಿತ ನಡೆಸಿದವರನ್ನು ಮುಂದಿನ ಅವಧಿಯ ಚುನಾವಣೆಯಲ್ಲಿ ಪರಿಗಣಿಸಬಾರದು ಎಂದು ಆಗ್ರಹಿಸಿದರು.

ರಾಜ್ಯದ ಅನೇಕ ಡಿಸಿಸಿ ಬ್ಯಾಂಕ್​ಗಳು ಸುಮಾರು 3 ರಿಂದ 5 ಸಾವಿರ ಕೋಟಿ ರೂ.ಗಳ ವ್ಯವಹಾರ ನಡೆಸಿ ರೈತರಿಗೆ ಸಾಲ ಸೌಲಭ್ಯ ನೀಡಿ, ದೇಶದ ಬೆನ್ನೆಲುಬಾದ ರೈತನಿಗೆ ಸಹಕಾರಿಯಾಗಿದೆ. ಆದರೆ ಕಲಬುರಗಿಯ ಡಿಸಿಸಿ ಬ್ಯಾಂಕ್ ಮುಳುಗುವ ಹಂತಕ್ಕೆ ಬಂದು ನಿಂತಿದೆ. ಇದಕ್ಕೆಲ್ಲ ಮೂರು ಅವಧಿಯಲ್ಲಿ ಆಡಳಿತ ನಡೆಸಿದವರೇ ನೇರ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ಡಿಸಿಸಿ ಬ್ಯಾಂಕ್ ಪುನಶ್ಚೇನಕ್ಕೆ ಶಾಸಕ ತೆಲ್ಕೂರ ಒತ್ತಾಯ

ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳು ಮತ್ತು ಸಹಕಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಡಿಸಿಸಿ ಬ್ಯಾಂಕ್​ನಲ್ಲಾದ ಅವ್ಯವಹಾರದ ಸಂಪೂರ್ಣ ತನಿಖೆ ನಡೆಸಬೇಕು. ತನಿಖೆ ಪೂರ್ಣಗೊಂಡ ನಂತರವೇ ಚುನಾವಣೆ ನಡೆಸಬೇಕು ಮತ್ತು ಕಳೆದ ಮೂರು ಅವಧಿಯನ್ನು ಪೂರೈಸಿದ ಆಡಳಿತ ಮಂಡಳಿಯನ್ನು ಮುಂದಿನ ಚುನಾವಣೆಯಲ್ಲಿ ಪರಿಗಣಿಸಬಾರದು ಎಂದು ಕೋರಲಾಗಿದೆ. ವಿಶ್ವಬ್ಯಾಂಕ್, ನಬಾರ್ಡ್ ಬ್ಯಾಂಕ್ ಅಥವಾ ಸಹಕಾರಿ ಬಾಂಡ್​ಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ಕಲ್ಪಿಸುವಂತಾಗಬೇಕು. ಸರ್ಕಾರದಿಂದ 1 ಸಾವಿರ ಕೋಟಿ ವಿಶೇಷ ನೆರವು ನೀಡುವ ಮೂಲಕ ಬ್ಯಾಂಕ್ ಜೀವಂತವಾಗಿರಿಸಲು ಕಾಳಜಿ ವಹಿಸಬೇಕು ಎಂದು ಕೋರಿರುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಪ್ಪ ಕೊಳ್ಳಿ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.