ETV Bharat / state

ಮಾಚನಾಳ ತಾಂಡದಲ್ಲಿ ಸಚಿವ ಅಶೋಕ್​ ಗ್ರಾಮ ವಾಸ್ತವ್ಯ: ₹1 ಕೋಟಿ ವಿಶೇಷ ಅನುದಾನ ಘೋಷಣೆ

author img

By

Published : Jan 18, 2023, 1:13 PM IST

ಮಾಚನಾಳ ತಾಂಡದ ಸರ್ವತೋಮುಖ ಪ್ರಗತಿಗಾಗಿ 1 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಲಾಗುವುದು- ಸಚಿವ ಆರ್​. ಅಶೋಕ್.​

Minister R Ashok grama vastavya
ಮಾಚನಾಳ ತಾಂಡದಲ್ಲಿ ಸಚಿವ ಆರ್​. ಆಶೋಕ್​ ಗ್ರಾಮ ವಾಸ್ತವ್ಯ

ಕಲಬುರಗಿ‌: ನಾಳೆ(ಜ.19) ಜಿಲ್ಲೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದು, ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಈ ಮಧ್ಯೆ ಮಂಗಳವಾರ ರಾತ್ರಿ ಕಂದಾಯ ಸಚಿವ ಆರ್. ಅಶೋಕ್​​ ಜಿಲ್ಲೆಯ ಮಾಚನಾಳ ತಾಂಡದಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದರು. ಪ್ರಧಾನಿಯವರ ಆಗಮನ ತಯಾರಿ ಒತ್ತಡ ಮಧ್ಯೆೆಯೂ ಸಚಿವರ ಗ್ರಾಮ ವಾಸ್ತವ್ಯಕ್ಕೆ ಅಧಿಕಾರಿಗಳು ತಯಾರಿ ಮಾಡಿಕೊಂಡಿದ್ದರು.

Minister R Ashok grama vastavya
ಸಚಿವ ಆರ್​. ಅಶೋಕ್​ಗೆ​​ ಸ್ವಾಗತ ಕೋರಿದ ತಾಂಡದ ಜನತೆ

ಅದ್ದೂರಿ ಸ್ವಾಗತ ಕೋರಿದ ತಾಂಡದ ಜನತೆ: ಕಲಬುರಗಿ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ಮಾಚನಾಳ ತಾಂಡ ಅಫಜಲಪುರ ಮುಖ್ಯ ರಸ್ತೆ ಬದಿಗೆ ಹೊಂದಿಕೊಂಡಿದೆ. ನಗರಕ್ಕೆ ಸಮೀಪದಲ್ಲಿದ್ದರೂ ತಾಂಡ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿಲ್ಲ. ಇಲ್ಲಿ ಹೊಸದಾಗಿ ನಿರ್ಮಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಚಿವ ಆರ್.ಅಶೋಕ್​​ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಅಲ್ಲಿನ ನಿವಾಸಿಗಳ ಸಮಸ್ಯೆ ಆಲಿಸಿದರು. ಮೊದಲ ಬಾರಿಗೆ ಪ್ರಭಾವಿ ಸಚಿವರೊಬ್ಬರು ಬರಲಿದ್ದಾರೆಂಬ ಸುದ್ದಿ ತಿಳಿದ ತಾಂಡದ ಜನತೆ ಅದ್ದೂರಿ ಸ್ವಾಗತ ಕೋರಿದರು.

Minister R Ashok grama vastavya
ಪೂರ್ಣ ಕುಂಭ ಹೊತ್ತ ಮಹಿಳೆಯರು

ಸಿಂಗರಿಸಿದ ಎತ್ತಿನ ಬಂಡಿಯಲ್ಲಿ ಮೆರವಣಿಗೆ: ಮಂಗಳವಾರ ಸಂಜೆ ತಾಂಡಕ್ಕೆ ಆಗಮಿಸಿದ ಸಚಿವರನ್ನು, ಅಫಜಲಪುರ ಮುಖ್ಯ ರಸ್ತೆಯ ಮಾಚನಾಳ ಕ್ರಾಸ್​ನಿಂದ ಗ್ರಾಮದ ನೂರಾರು ಯುವಕರು ಬೈಕ್ ರ‍್ಯಾಲಿ ಮೂಲಕ ಬರಮಾಡಿಕೊಂಡರು. ಬಸವನ ಗುಡಿಯವರೆಗೆ ಬೈಕ್ ರ‍್ಯಾಲಿಯಲ್ಲಿ ಆಗಮಿಸಿ ನಂತರ ಸಿಂಗರಿಸಿದ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ಗ್ರಾಮಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ಗ್ರಾಮದ ಸಂತ ಸೇವಾಲಾಲ ದೇವಾಲಯದವರೆಗೆ ಮೆರವಣಿಗೆ ಮಾಡಲಾಯಿತು. ನಾನಾ ಕಲಾ ತಂಡಗಳು ತಮ್ಮ ಕಲೆ ಪ್ರದರ್ಶಿಸಿದರು. ಜೆಸಿಬಿ ಮೂಲಕ ಹೂವಿನ ಸುರಿಮಳೆ ಸುರಿಸಲಾಯಿತು. ಲಂಬಾಣಿ ಸಾಂಪ್ರದಾಯಿಕ ವೇಷಭೂಷಣ ತೊಟ್ಟ ಮಹಿಳೆಯರು ಸಚಿವರಿಗೆ ಸ್ವಾಗತ ಕೋರಿದರು. ನೂರಾರು ಮಹಿಳೆಯರು ಪೂರ್ಣ ಕುಂಭದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಸಂತ ಸೇವಾಲಾಲ ಮಹಾರಾಜರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸಚಿವರು ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Minister R Ashok grama vastavya
ಮಾಚನಾಳ ತಾಂಡದಲ್ಲಿ ಸಚಿವ ಆರ್​. ಅಶೋಕ್​ ಗ್ರಾಮ ವಾಸ್ತವ್ಯ

ತಾಂಡ ಅಭಿವೃದ್ಧಿಗೆ ಒಂದು ಕೋಟಿ ರೂ. ಅನುದಾನ: ಗ್ರಾಮ ವಾಸ್ತವ್ಯದಲ್ಲಿ ಮಾಚನಾಳ, ಕಾಡನಾಳ, ಕಡಣಿ, ಮಳನಿ, ಮೇಳಕುಂದಿ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು. 5 ಗ್ರಾಮಗಳ 92 ಫಲಾನುಭವಿಗಳಿಗೆ ಸಚಿವರು ಪಿಂಚಣಿ ಪತ್ರವನ್ನು ವಿತರಣೆ ಮಾಡಿದರು. ಬಳಿಕ ಮಾತನಾಡಿದ ಸಚಿವ ಆರ್​. ಅಶೋಕ್​ ಕಳೆದ 72 ವರ್ಷಗಳಿಂದ ಸ್ವಂತ ಸೂರಿಲ್ಲದೆ, ನಿರಂತರವಾಗಿ ತುಳಿತಕ್ಕೆ ಒಳಗಾಗಿರುವ ತಾಂಡ ನಿವಾಸಿಗಳಿಗೆ ಹಕ್ಕು ಪತ್ರ ನೀಡುವ ಮೂಲಕ ರಾಜ್ಯ ಸರ್ಕಾರ ಹೊಸ ಜೀವನ ಕಲ್ಪಿಸಿದೆ ಎಂದರು. ರಾಜ್ಯದಲ್ಲಿ 3218 ಮಜರೆ, ಆಡಿ, ತಾಂಡ, ಸೇರಿದಂತೆ ಯಾವದಕ್ಕೂ ದಾಖಲೆಯಿಲ್ಲ. ಹೀಗಾಗಿ ಈ ಗ್ರಾಮಗಳಿಗೆ ಕಂದಾಯ ಗ್ರಾಮಗಳಾಗಿ ಮಾಡುವ ಮಹತ್ವದ ಕೆಲಸವನ್ನು ನಾನು ನನ್ನ ಇಲಾಖೆ ವತಿಯಿಂದ ಮಾಡುತ್ತಿದ್ದು, ಇದನ್ನು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಂದ ಕೊಡಿಸಲು ಸಿದ್ದವಾಗಿದ್ದೇವೆ. ರಾಜ್ಯದ 1 ಲಕ್ಷ 2 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ಸಬ್​​ರಿಜಿಸ್ಟರ್ ಆಫೀಸ್​​ನಲ್ಲಿ ದಾಖಲೆ ಮಾಡಿ ಕೊಡುತ್ತೇವೆ. ವಿಶೇಷವಾಗಿ ಮಾಚನಾಳ ತಾಂಡ ಅಭಿವೃದ್ಧಿಗಾಗಿ ಒಂದು ಕೋಟಿ ರೂ. ವಿಶೇಷ ಅನುದಾನ ನೀಡುವುದಾಗಿ ಸಚಿವ ಅಶೋಕ್ ಭರವಸೆ ನೀಡಿದರು.

Minister R Ashok grama vastavya
ಸಚಿವ ಆರ್​. ಅಶೋಕ್​ಗೆ​​ ಸ್ವಾಗತ ಕೋರಿದ ತಾಂಡದ ಜನತೆ

ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಮಾತನಾಡಿ, ಕಂದಾಯ ಸಚಿವರ ಗ್ರಾಮ ವಾಸ್ತವ್ಯ ರಾಜ್ಯದಲ್ಲಿ ಇತಿಹಾಸ ಸೃಷ್ಟಿ ಮಾಡಿದೆ. ಇಡೀ ಭಾರತದಲ್ಲಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಪತ್ರಗಳನ್ನು ನೀಡಿದ್ದಾರೆ. ಬಂಜಾರ ಸಮುದಾಯವು ಈ ನೆಲಕ್ಕೆ ತನದೇ ಆದ ಅಸ್ಮಿತೆಯನ್ನು ನೀಡಿದೆ. ಈ ಸಮುದಾಯ ಈ ನಾಡಿನ ರಾಜ ಪರಂಪರೆಯನ್ನು ಗೌರವಿಸಿದೆ ಎಂದರು. ಇದೆ ವೇಳೆ ಸಚಿವರಿಗೆ ಅನೇಕರು ಮನವಿ ಪತ್ರ ಸಲ್ಲಿಸಿ ತಮ್ಮ ಬೇಡಿಕೆಗೆ ಈಡೇರಿಸಲು ಮನವಿ ಮಾಡಿದರು. ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ತರಹೇವಾರಿ ಭೋಜನ ಸಿದ್ದಪಡಿಸಲಾಗಿತ್ತು.

ಇದನ್ನೂ ಓದಿ: ತುಮಕೂರಿನ ಮಾಯಸಂದ್ರ ಗ್ರಾಮದಲ್ಲಿ ವಾಸ್ತವ್ಯ ಹೂಡಲಿರುವ ಸಚಿವ ಆರ್.ಅಶೋಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.