ETV Bharat / state

ಶಿವರಾತ್ರಿ ಸಂಭ್ರಮ: ಬಿಸಿಲು ನಾಡಿನಲ್ಲಿ ಕಣ್ಮನ ಸೆಳೆದ ಕಡ್ಲೆಕಾಯಿ ಶಿವಲಿಂಗ

author img

By

Published : Feb 18, 2023, 1:21 PM IST

Updated : Feb 18, 2023, 2:05 PM IST

ಕಲಬುರಗಿಯಲ್ಲಿ ಮಹಾಶಿವರಾತ್ರಿ ಸಂಭ್ರಮ - ಕಣ್ಮನ ಸೆಳೆದ ಕಡ್ಲೆಕಾಯಿ ಶಿವಲಿಂಗ - ಕಣ್ತುಂಬಿಕೊಳ್ಳುತ್ತಿರುವ ಸಾವಿರಾರು ಭಕ್ತರು

kalaburagi
ಶಿವಲಿಂಗ

ಶಿವರಾತ್ರಿ ಸಂಭ್ರಮ: ಬಿಸಿಲು ನಾಡಿನಲ್ಲಿ ಕಣ್ಮನ ಸೆಳೆದ ಕಡ್ಲೆಕಾಯಿ ಶಿವಲಿಂಗ

ಕಲಬುರಗಿ: ಬಿಸಿಲ ನಾಡು ಕಲಬುರಗಿಯಲ್ಲಿ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಬೆಳಗ್ಗೆಯಿಂದಲೇ ಶಿವನ ದರ್ಶನ ಪಡೆಯಲು ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಸೇಡಂ ರಸ್ತೆಯ ಬ್ರಹ್ಮಕುಮಾರಿ ಆಶ್ರಮ ಅಮೃತ ಸರೋವರದಲ್ಲಿ ಕಡ್ಲೆಕಾಯಿಯಲ್ಲಿ ಅರಳಿದ ಬೃಹದಾಕಾರದ ಶಿವಲಿಂಗ ಈ ಬಾರಿ ಅತ್ಯಾಕರ್ಷಕವಾಗಿ ಕಣ್ಮನ ಸಳೆಯುತ್ತಿದ್ದು, ನಗರದ ಜನತೆ ಕಡ್ಲೆಕಾಯಿ ಶಿವಲಿಂಗವನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ಬ್ರಹ್ಮಕುಮಾರಿ ಆಶ್ರಮದ ಅಮೃತ ಸರೋವರದಲ್ಲಿ ಪ್ರತಿ ಶಿವರಾತ್ರಿ ಹಲವು ವೈಶಿಷ್ಟತೆಗಳಿಂದ ಶಿವನ ಆರಾಧನೆ ಮಾಡಲಾಗುತ್ತದೆ. ಪ್ರತಿ ಬಾರಿ ವಿಭಿನ್ನವಾಗಿ ಬೃಹತ್​ ಆಕಾರದ ಶಿವಲಿಂಗ ತಯಾರಿಸುವ ಮೂಲಕ ಗಮನ ಸೆಳೆಯುತ್ತಾರೆ. ಈ ಬಾರಿ ಕಡ್ಲೆಕಾಯಿಯಲ್ಲಿ 25 ಅಡಿ ಎತ್ತರದ ಶಿವಲಿಂಗ ತಲೆ ಎತ್ತಿದೆ‌.

ಉತ್ತರ ಕರ್ನಾಟಕದಲ್ಲಿ ಶೇಂಗಾ ಕಾಯಿ ಎಂದು ಕರೆಯಲಾಗುವ ಕಡ್ಲೆಕಾಯಿ ಈ ಭಾಗದ ರೈತರು ಬೆಳೆಯುವ ಪ್ರಮುಖ ಬೆಳೆಯಲ್ಲೊಂದು. ಹೀಗಾಗಿ ಬರೋಬ್ಬರಿ 8 ಕ್ವಿಂಟಾಲ್ ಶೇಂಗಾ ಕಾಯಿ ಬಳಕೆ ಮಾಡಿ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ‌. ಸ್ವತಃ ಆಶ್ರಮ ವಾಸಿಗಳೇ ಶೇಂಗಾ ಕಾಯಿಯ ಆಕರ್ಷಕ ಶಿವಲಿಂಗ ನಿರ್ಮಿಸಿದ್ದಾರೆ ಅನ್ನೋದು ಮತ್ತೊಂದು ಗಮನಾರ್ಹ ವಿಷಯ. ಶೇಂಗಾ ಕಾಯಿಗಳಿಗೆ ಬಣ್ಣಗಳನ್ನು ಸೇರಿಸಿ ಜತೆಗೆ ಅರಶಿಣ, ಕುಂಕುಮ ಮಿಶ್ರಿತವಾಗಿ ಶಿವಲಿಂಗವನ್ನು ಅಲಂಕಾರ ಮಾಡಲಾಗಿದ್ದು ನೋಡುಗರಿಗೆ ಭಕ್ತಿ-ಭಾವ ಉಕ್ಕಿಸುವಂತಿದೆ.

ಇದನ್ನೂ ಓದಿ: ಶಿವರಾತ್ರಿಯ ಸಂಭ್ರಮ: ಮರಳು ಶಿಲ್ಪಗಳ ಮೂಲಕ ಭಕ್ತಿ ಸಮರ್ಪಿಸಿದ ಕಲಾವಿದರು

ಮಹಾ ಶಿವರಾತ್ರಿ ಬ್ರಹ್ಮಕುಮಾರಿ ಆಶ್ರಮದಲ್ಲಿ ಪ್ರತಿ ವರ್ಷವು ಸಡಗರದಿಂದ ಆಚರಣೆ ಮಾಡಲಾಗುತ್ತದೆ. ಕಳೆದ ಶಿವರಾತ್ರಿಗಳಲ್ಲಿ ತೆಂಗಿನಕಾಯಿ, ತೊಗರಿ ಕಾಳು, ಮುತ್ತು, ಅಡಕೆ ಹೀಗೆ ಒಂದೊಂದು ಬಾರಿ ಒಂದೊಂದು ರೀತಿಯಲ್ಲಿ ವಿಶಿಷ್ಟವಾಗಿ ಶಿವಲಿಂಗವನ್ನು ನಿರ್ಮಾಣ ಮಾಡಲಾಗಿತ್ತು. ಇನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ ಆಚರಣೆ ಮಾಡಲಾಗುತ್ತಿರುವ ಹಿನ್ನೆಲೆ ಅಮೃತ ಸರೋವರ ಆವರಣದ 12 ಜ್ಯೋತಿರ್ಲಿಂಗಗಳಿಗೆ ಸಿರಿಧಾನ್ಯ, ನಾಣ್ಯ, ಕಲ್ಲು ಸಕ್ಕರೆ, ಗೋಡಂಬಿ ಹೀಗೆ ಡಿಫರೆಂಟ್ ಆಗಿ ಶಿವಲಿಂಗವನ್ನು ಅಲಂಕರಿಸಿರುವುದು ವಿಶೇಷ.

ಇನ್ನು ಕಡ್ಲೆಕಾಯಿ ಶಿವಲಿಂಗವನ್ನು ಫೆ.18 ರಿಂದ ಹತ್ತು ದಿನಗಳ ಕಾಲ ಭಕ್ತರ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಒಂದೆಡೆ ಬೃಹದಾಕಾರದ ಶಿವಲಿಂಗ, ಇನ್ನೊಂದಡೆ ಜ್ಯೋತಿರ್ಲಿಂಗ ದರ್ಶನಕ್ಕೆ ಜನೋಸ್ತಮವೇ ಹರಿದು ಬರುತ್ತಿದೆ. ಅಂದಾಜು 50 ಸಾವಿರ ಜನ ಶಿವರಾತ್ರಿ ದಿನವಾದ ಇಂದು ಅಮೃತ ಸರೋವರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

ಶಿವರಾತ್ರಿ ವಿಶೇಷ: ಇಂದು ನಾಡಿನೆಲ್ಲೆಡೆ ಶಿವರಾತ್ರಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶಿವನ ನೆನೆಯುತ್ತಾ ಉಪವಾಸವಿದ್ದು ಆತನ ಆರಾಧನೆ ಮಾಡುವುದು ಹಿಂದೂಗಳಲ್ಲಿ ಮೊದಲಿನಿಂದಲೂ ಬಂದಿರುವ ಪದ್ಧತಿ. ಈ ದಿನದಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹಿಸುವುದಾಗಿ ಸ್ವತಃ ಶಿವನೇ ಜಗನ್ಮಾತೆ ಪಾರ್ವತಿ ದೇವಿಯ ಬಳಿ ಹೇಳಿಕೊಂಡಿರುವುದಾಗಿ ಶಿವ ಪುರಾಣ ತಿಳಿಸುತ್ತದೆ. ಜೊತೆಗೆ ಶಿವ-ಪಾರ್ವತಿ ವಿವಾಹವಾದ ಪವಿತ್ರ ದಿನ ಇದಾಗಿದೆ. ಹಿಮವಂತನ ಮಗಳು ಪಾರ್ವತಿ ದೇವಿ ಶಿವರಾತ್ರಿ ದಿನದಂದು ರಾತ್ರಿ ಇಡೀ ಶಿವನಾಮ ಪಠಿಸುತ್ತಾ ತಪಸ್ಸು ಮಾಡಿ ಪರಮಾತ್ಮನನ್ನು ಮೆಚ್ಚಿಸಿ ವಿವಾಹವಾದರು ಎಂಬುದಾಗಿ ಕಥೆಗಳು ಹೇಳುತ್ತವೆ.

ಇದನ್ನೂ ಓದಿ: ಮಹಾಶಿವರಾತ್ರಿ ಹಿನ್ನೆಲೆ ಮಾದಪ್ಪನ ಬೆಟ್ಟದಲ್ಲಿ ಜನಸಾಗರ: ಸಾಲೂರು ಮಠದಿಂದ ಭಕ್ತರಿಗೆ ಮುದ್ದೆ - ಬಸ್ಸಾರು ಪ್ರಸಾದ

Last Updated : Feb 18, 2023, 2:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.