ETV Bharat / state

ಗೃಹ ಜ್ಯೋತಿ ಯೋಜನೆಗೆ ಕಲಬುರಗಿಯಲ್ಲಿ ವಿದ್ಯುಕ್ತ ಚಾಲನೆ.. ಸಾಂಕೇತಿಕವಾಗಿ 10 ಜನರಿಗೆ ಶೂನ್ಯ ವಿದ್ಯುತ್ ಬಿಲ್ ವಿತರಣೆ

author img

By

Published : Aug 5, 2023, 8:54 PM IST

Updated : Aug 5, 2023, 9:13 PM IST

ಸಾಂಕೇತಿಕವಾಗಿ ಮಾದರಿ ಮನೆಗೆ ವಿದ್ಯುತ್ ದೀಪ ಬೆಳಗಿಸಿ ಮತ್ತು 10 ಜನರಿಗೆ ಶೂನ್ಯ ವಿದ್ಯುತ್ ಬಿಲ್ ನೀಡುವ ಮೂಲಕ ಗೃಹ ಜ್ಯೋತಿ ಯೋಜನೆಗೆ ಕಲಬುರಗಿಯಲ್ಲಿ ವಿದ್ಯುಕ್ತ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ.

gruha jyoti scheme
ಗೃಹ ಜ್ಯೋತಿ ಯೋಜನೆಗೆ ಕಲಬುರಗಿಯಲ್ಲಿ ವಿದ್ಯುಕ್ತ ಚಾಲನೆ.

ಗೃಹ ಜ್ಯೋತಿ ಯೋಜನೆಗೆ ಕಲಬುರಗಿಯಲ್ಲಿ ವಿದ್ಯುಕ್ತ ಚಾಲನೆ

ಕಲಬುರಗಿ: ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಜನತೆಗೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಮಾದರಿ‌‌ ಮನೆಗೆ ವಿದ್ಯುತ್ ಬೆಳಗಿಸಿ ಮತ್ತು ಸಾಂಕೇತಿಕವಾಗಿ 10 ಜನರಿಗೆ ಶೂನ್ಯ ವಿದ್ಯುತ್ ಬಿಲ್ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ ವಿದ್ಯುಕ್ತ ಚಾಲನೆ ನೀಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ, ಇಂಧನ ಸಚಿವ ಕೆ ಜೆ ಜಾರ್ಜ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ತಮ್ಮ ಸರ್ಕಾರದ ಸಾಧನೆ ಜೊತೆಗೆ ಪ್ರಧಾನಿ ಮೋದಿ ಹಾಗೂ ಬಿಜೆಪಿಗರ ವಿರುದ್ಧ ಕಾಂಗ್ರೆಸ್ ನಾಯಕರು ಹರಿಹಾಯ್ದರು.

ಹಾರ-ಸ್ಮರಣಿಕೆಗೆ ಕಡಿವಾಣ.. 26 ಲಕ್ಷ ಗ್ರಂಥಾಲಯದ ಪುಸ್ತಕ ಖರೀದಿಗೆ ಹಸ್ತಾಂತರ: ಗೃಹ ಜ್ಯೋತಿ‌ ಲೋಕಾರ್ಪಣೆಯಲ್ಲಿ ಹಾರ ತುರಾಯಿ ಸ್ಮರಣಿಕೆ ಕಾಣಿಸಲಿಲ್ಲ. ಗಣ್ಯರಿಗೆ ಹಾರ ತುರಾಯಿ, ಸ್ಮರಣಿಕೆ ನೀಡುವ ಬದಲಾಗಿ ಅದೇ ಹಣವನ್ನು ಗ್ರಾಪಂ ಗ್ರಂಥಾಲಯಗಳಾದ "ಅರಿವು ಕೇಂದ್ರಕ್ಕೆ" ಸ್ಪರ್ಧಾತ್ಮಕ ಪುಸ್ತಕ ಸೇರಿದಂತೆ ಮಕ್ಕಳ ಜ್ಞಾನಾರ್ಜನೆಯ ಪುಸ್ತಕ ಖರೀದಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಮಾದರಿಯಾಯಿತು. ವೇದಿಕೆ ಮೇಲಿದ್ದ ಗಣ್ಯರು ಜಿಲ್ಲಾ ಪಂಚಾಯತ್ ಸಿ.ಇ.ಒ ಭಂವಾರ ಸಿಂಗ್ ಮೀನಾ ಅವರಿಗೆ 26 ಲಕ್ಷ ರೂ.ಗಳ ಚೆಕ್ ಹಸ್ತಾಂತರಿಸಿದರು.

ಕೆಕೆಆರ್​ಡಿಬಿ 5,000 ಕೋಟಿ ರೂ. ಅನುದಾನ ಸಂಪೂರ್ಣ ಖರ್ಚಾಗಲಿ: ರಾಜ್ಯಸಭೆ ವಿಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ರಾಜ್ಯ ಸರ್ಕಾರ ಕೆಕೆಆರ್​​ಡಿಬಿ ಮಂಡಳಿಗೆ ಪ್ರಸಕ್ತ ಸಾಲಿನಲ್ಲಿ ಘೋಷಣೆ ಮಾಡಿದ 5,000 ಕೋಟಿ ರೂ. ಅನುದಾನ ಸಂಪೂರ್ಣವಾಗಿ ಇದೇ ವರ್ಷದಲ್ಲಿ ಖರ್ಚು ಮಾಡಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಂಬಂಧಿಸಿದ ಸಚಿವರು ನಿರಂತರ ಪ್ರಗತಿ ಪರಿಶೀಲನೆ ಮಾಡಬೇಕು. ಆಯವ್ಯಯದಲ್ಲಿ ಘೋಷಣೆಗೆ ಸೀಮಿತವಾಗದೇ ಪ್ರದೇಶದ ಅಭಿವೃದ್ಧಿಗೆ ಹಣ ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಪ್ರದೇಶದ ಸಚಿವರು ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಹೇಳಿದರು.

ವಾರ್ಷಿಕ ಪ್ರತಿ ಕುಟುಂಬಕ್ಕೆ 60 ಸಾವಿರ ರೂ. ಸೌಲಭ್ಯ: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಮಾತನಾಡಿ, ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಈ ಪ್ರದೇಶಕ್ಕೆ 371ಜೆ ತಿದ್ದುಪಡಿ ರೂಪದಲ್ಲಿ ಈಗಾಗಲೇ ಬೆಳಕು ತಂದಿದ್ದಾರೆ. ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡವರ ಧ್ವನಿಯಾಗಿ ನಿಂತಿದ್ದೇವೆ. ಈ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 60 ಸಾವಿರ ರೂ. ಸೌಲಭ್ಯ ಸಿಗಲಿದೆ. ಬಡವರ ಹೊಟ್ಟೆಗೆ ಅನ್ನ, ಉಚಿತ ವಿದ್ಯುತ್, ಮಹಿಳೆಯರಿಗೆ ಪ್ರಯಾಣ ಉಚಿತ, 2,000 ರೂ. ಆರ್ಥಿಕ ಸಹಾಯ, ನಿರುದ್ಯೋಗಿ ಯುವಕರಿಗೆ ಯುವ ನಿಧಿ ಯೋಜನೆಯಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಕೆಲವರು ಮಾತನಾಡುತ್ತಾರೆ. ಆದರೆ ಕಾರ್ಪೋರೇಟ್ ಕಂಪನಿಗೆ ಕೋಟಿ‌ ಕೋಟಿ ಸಾಲ ಕೊಟ್ಟು ಅದನ್ನು ಮನ್ನಾ ಮಾಡಿದ್ರೆ ದೇಶ ದಿವಾಳಿ ಆಗಲ್ವಾ? ಎಂದು ವಾಗ್ದಾಳಿ ನಡೆಸಿದರು.

ಶಾಸಕ ಅಜಯಸಿಂಗ್ ಗೈರು: ಇಡಿ ರಾಜ್ಯಕ್ಕೆ ಕೊಡುಗೆ ಕೊಡುವ ಮಹತ್ವದ ಗೃಹಲಕ್ಷ್ಮೀ ಯೋಜನೆ ಕಲಬುರಗಿ ನಗರದಲ್ಲಿ ನಡೆದಿದ್ದು, ಈ ಭಾಗದ ಬಹುತೇಕ ಕಾಂಗ್ರೆಸ್ ಶಾಸಕರು ಪಾಲ್ಗೊಂಡಿದ್ದರು. ಆದ್ರೆ ಜೇವರ್ಗಿ ಶಾಸಕ ಅಜಯಸಿಂಗ್‌ ಮಾತ್ರ ಸಮಾರಂಭದಲ್ಲಿ ಕಾಣಿಸಿಕೊಳ್ಳಲಿಲ್ಲ. ಮೂರು ಬಾರಿ ಶಾಸಕರಾದ್ರೂ ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡು ಅಜಯ್ ಸಿಂಗ್ ವೇದಿಕೆಯಲ್ಲಿ ಕಾಣಿಸಿಕೊಳ್ಳದೆ ದೂರ ಉಳಿದಿರಬಹುದು ಎಂಬ ಮಾತುಗಳು ಸಮಾರಂಭದಲ್ಲಿ ಕೇಳಿಬಂದವು.

ಇಂಧನ ಸಚಿವ ಕೆ ಜೆ ಜಾರ್ಜ್, ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್​, ಪ್ರಿಯಾಂಕ್ ಖರ್ಗೆ, ಈಶ್ವರ್​ ಖಂಡ್ರೆ, ರಹೀಂ ಖಾನ್, ಶರಣಬಸಪ್ಪ ದರ್ಶನಾಪೂರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕರಾದ ಎಂ ವೈ ಪಾಟೀಲ, ಬಿ ಆರ್ ಪಾಟೀಲ, ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ಚೆನ್ನಾರೆಡ್ಡಿ ಕುನ್ನೂರ, ರಾಜಾ ವೆಂಕಟಪ್ಪ ನಾಯಕ್, ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ ಹುಮನಾಬಾದ್, ಅರವಿಂದ ಅರಳಿ, ತಿಪ್ಪಣ್ಣಪ್ಪ ಕಮಕನೂರ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇದನ್ನೂ ಓದಿ: ದೇಶವನ್ನು ದಿವಾಳಿ ಮಾಡಿದ್ದು ಮೋದಿ ಸರ್ಕಾರ ಹೊರತು ನಾವಲ್ಲ: ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

Last Updated : Aug 5, 2023, 9:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.