ETV Bharat / state

ಅಮರನಾಥ ಯಾತ್ರೆ: ಕಲಬುರಗಿಯ ಬಬಲಾದ ಶ್ರೀ ಸೇರಿ 55 ಮಂದಿ ಸುರಕ್ಷಿತ

author img

By

Published : Jul 9, 2022, 2:31 PM IST

ಅಮರನಾಥ ಯಾತ್ರೆಗೆ ತೆರಳಿರುವ ಕಲಬುರಗಿ ಜಿಲ್ಲೆಯ ಮೂರು ಪ್ರತ್ಯೇಕ ತಂಡದಲ್ಲಿರುವ ಎಲ್ಲ 55 ಜನರು ಸುರಕ್ಷಿತವಾಗಿದ್ದಾರೆ.

kalaburagi-swamiji-and-other-55-pilgrims-safe-in-amaranath
ಅಮರನಾಥ ಯಾತ್ರೆ: ಕಲಬುರಗಿಯ ಬಬಲಾದ ಶ್ರೀ ಸೇರಿ 55 ಮಂದಿ ಸುರಕ್ಷಿತ

ಕಲಬುರಗಿ: ಅಮರನಾಥ ಯಾತ್ರೆಗೆ ತೆರಳಿರುವ ಬಬಲಾದ ಮಠದ ಶ್ರೀಗಳು ಸೇರಿ 14 ಜನ ಭಕ್ತರ ತಂಡ, ಮೇಘ ಸ್ಫೋಟ ಸ್ಥಳದ ಬಳಿ ತೆರಳಿದ್ದ ಗಾಣಗಾಪುರದ 11 ಜನ ಭಕ್ತರು ಮತ್ತು ಕಲಬುರಗಿಯ 30 ಜನರ ತಂಡ ಸೇರಿ ಎಲ್ಲ 55 ಜನರು ಸುರಕ್ಷಿತವಾಗಿದ್ದಾರೆ. 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಯಾತ್ರಾರ್ಥಿಗಳು ತಮಗೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.

ಅಫಜಲಪುರ ತಾಲೂಕಿನ ಗಾಣಗಾಪುರದ 11 ಜನ ನಿವಾಸಿಗಳು ಜುಲೈ 3ರಂದು ಕಲಬುರಗಿಯಿಂದ ಅಮರನಾಥ ಯಾತ್ರೆಗೆ ಹೋಗಿದ್ದರು. ನಿನ್ನೆ ಸಂಜೆ ಅಮರನಾಥದ ಶಿವಲಿಂಗ ದರ್ಶನ ಪಡೆದಿದ್ದು, ಹೆಚ್ಚಿನ ಮಳೆ ಆರಂಭವಾದ ಹಿನ್ನೆಲೆ ತಕ್ಷಣ ನಡೆದುಕೊಂಡು ಸುರಕ್ಷಿತ ಸ್ಥಳಕ್ಕೆ ಸೇರಿದ್ದಾಗಿ ಮಾಹಿತಿ ನೀಡಿದ್ದಾರೆ.

ಅದರಂತೆ ಅಮರನಾಥ ದರ್ಶನಕ್ಕೆ ತೆರಳಿದ ಕಲಬುರಗಿ ತಾಲೂಕಿನ ಬಬಲಾದ ಶ್ರೀಗಳು ಸೇರಿ 14 ಜನರ ಭಕ್ತರ ತಂಡ ಸುರಕ್ಷಿತವಾಗಿದೆ. ಬಬಲಾದ ಶ್ರೀ ಗುರುಪಾದಲಿಂಗ ಮಹಾ ಶಿವಯೋಗಿಗಳು ತಮ್ಮ ಭಕ್ತ ಸಮೂಹದೊಂದಿಗೆ ಕಳೆದ ಸೋಮವಾರ ಕಲಬುರಗಿಯಿಂದ ಅಮರನಾಥ್ ದರ್ಶನಕ್ಕೆ ತೆರಳಿದ್ದರು. ಇದೀಗ ಶ್ರೀಗಳು ಅಮರನಾಥದಿಂದ ವೈಷ್ಣವಿ ಮಂದಿರದತ್ತ ಪ್ರವಾಸ ಕೈಗೊಂಡಿದ್ದಾಗಿ ಶ್ರೀಗಳು ಹೇಳಿದ್ದಾರೆ.

Kalaburagi Swamiji and other 55 pilgrims safe in Amaranath
ಅಮರನಾಥ ಯಾತ್ರೆಗೆ ತೆರಳಿದವರು

ಕಲಬುರಗಿ ನಗರದ 30 ಜನರುಳ್ಳ ಮತ್ತೊಂದು ತಂಡ ಕಳೆದ ಸೋಮವಾರ ಅಮರನಾಥ ಯಾತ್ರೆಗೆ ತೆರಳಿದ್ದು, ವೈಷ್ಣವಿ ದೇವಿ ದರ್ಶನ ಮುಗಿಸಿ ಅಮರನಾಥ ಶಿವಲಿಂಗ ದರ್ಶನಕ್ಕೆ ತೆರಳುವಾಗ ಮೇಘ ಸ್ಫೋಟ ಹಿನ್ನೆಲೆ ಮಾರ್ಗಮಧ್ಯೆ ಜಮ್ಮುವಿನಲ್ಲಿ ಬಿಎಸ್ಎಫ್‌ನವರು ತಡೆದು, ಮರಳಿ ಊರಿಗೆ ತೆರಳುವಂತೆ ಕಳುಹಿಸಿ ಕೊಟ್ಟಿದ್ದಾರೆ. ಆತಂಕದ ನಡುವೆ ಹೇಗಾದರೂ ದರ್ಶನ ಪಡೆಯಬೇಕೆಂದರೂ ಬಿಎಸ್‌ಎಫ್​ನವರು ವಾಹನಗಳನ್ನು ಪಾರ್ಕಿಂಗ್ ಸಹ ಮಾಡಲು ಬಿಡದೆ ವಾಪಸ್ ಕಳಿಸಿದ್ದಾರೆಂದು ತಂಡದಲ್ಲಿರುವ ವೀರೇಶ ಎಂಬುವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ನಾಪತ್ತೆಯಾಗಿದ್ದ ಸುಬೇದಾರ್ ತಿಂಗಳ ಬಳಿಕ ಪತ್ತೆ.. ಖಿನ್ನತೆಯಿಂದ ಹಳೆಯದೆಲ್ಲ ಮರೆವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.