ETV Bharat / state

ಕೊಟ್ಟ ಸಾಲ ವಾಪಸ್ ಕೇಳಿದ್ರೇ ಸ್ಕೆಚ್ ಹಾಕಿದರು.. ₹20 ಲಕ್ಷ ಇನ್ಸೂರೆನ್ಸ್‌ ಮಾಡಿಸಿ ಕೊಲೆಗೈದ ಕಿರಾತಕರು!!

author img

By

Published : Jul 2, 2021, 1:55 PM IST

Updated : Jul 2, 2021, 2:03 PM IST

ಕೊಲೆಯ ಬಳಿಕ ಇನ್ಸುರೆನ್ಸ್ ರೂಪದಲ್ಲಿ ಬರುವ ಹಣವನ್ನು ಕೂಡ ಪಡೆದು ತನ್ನ ಲೈಫ್ ಸೆಟ್ಲ್ ಮಾಡಿಕೊಳ್ಳುವದಕ್ಕೆ ಪ್ಲ್ಯಾನ್ ಮಾಡಿದ್ದ ಹಂತಕ ಇದೀಗ ಜೈಲಲ್ಲಿ ಕಂಬಿ ಎಣಿಸುವಂತಾಗಿದೆ. ಆದ್ರೆ, ಸ್ನೇಹಿತನಿಗೆ ಸಹಾಯ ಮಾಡಲು ಹೋಗಿ ತನ್ನನ್ನೇ ನಂಬಿಕೊಂಡ ಕುಟುಂಬ ಬೀದಿಪಾಲು ಆಗಿದ್ದು ಮಾತ್ರ ದುರಂತ..

kanteppa
ಕೊಲೆಗೀಡಾದ ಕಂಠೆಪ್ಪ

ಕಲಬುರಗಿ : ಬದುಕು ಕಟ್ಟಿಕೊಳ್ಳಬೇಕು ಅಂತಾ ಆತ ಹಳ್ಳಿ ಬಿಟ್ಟು ಸಿಟಿ ಸೇರಿದ್ದ. ಸ್ನೇಹಿತ ಕಷ್ಟದಲ್ಲಿದ್ದಾನೆಂದು ತನ್ನ ಹೊಲವನ್ನೇ ಮಾರಿ ಸ್ನೇಹಿತನಿಗೆ ಹಣ ಕೊಟ್ಟ. ಆದರೆ, ಕೊಟ್ಟ ಹಣ ವಾಪಸ್ ಕೇಳಿದಾಗ ನಡೆದಿದ್ದು ಮಾತ್ರ ದುರಂತ. ಹಣ ಹಿಂದಿರುಗಿಸಬೇಕಾದ ಸ್ನೇಹಿತನ ಪ್ರಾಣವನ್ನೇ ತೆಗೆದ.

ಕೊಲೆಗೂ‌ ಮುನ್ನ ₹20 ಲಕ್ಷದ ಇನ್ಸೂರೆನ್ಸ್ ಮಾಡಿಸಿ ರಸ್ತೆ ಅಪಘಾತ ಎಂಬಂತೆ ಬಿಂಬಿಸಲು ಪ್ರಯತ್ನಿಸಿದ್ದ. ಸ್ನೇಹಿತನ ಕೊಲೆ ರೋಚಕ ಕಥೆಯ ಅಸಲಿಯತ್ತು ಇದೀಗ ಪೊಲೀಸರು ಬಯಲಿಗೆಳಿದಿದ್ದಾರೆ.

ಕಲಬುರಗಿ ಕೊಲೆ ಪ್ರಕರಣ

ಕಳೆದ ಏಪ್ರಿಲ್‌ 7ರಂದು ಕಲಬುರಗಿ ಹೊರವಲಯದ ಶಹಬಾದ್ ರಸ್ತೆಯಲ್ಲಿ ವ್ಯಕ್ತಿಯೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಮೃತಪಟ್ಟ ವ್ಯಕ್ತಿ ಯಾರೆಂದು ಪತ್ತೆ ಹಚ್ಚಿದ ಪೊಲೀಸರಿಗೆ ಆತ ಜೇವರ್ಗಿ ತಾಲೂಕಿನ ಗಂವ್ಹಾರ್ ಗ್ರಾಮದ ಕಂಠೆಪ್ಪ ಎಂದು ಗೊತ್ತಾಯಿತು.

ಕಂಠೆಪ್ಪ ಗಂವ್ಹಾರ್ ಗ್ರಾಮದಲ್ಲಿ ತನ್ನ ಮೂರು ಎಕರೆ ಜಮೀನಿನಲ್ಲಿ ಹೆಂಡತಿ ಮಕ್ಕಳೊಂದಿಗೆ ಕೃಷಿ ಮಾಡಿಕೊಂಡಿದ್ದ. ಬಳಿಕ ಹಳ್ಳಿ ಬಿಟ್ಟು ಕಲಬುರಗಿ ಸಿಟಿ ಸೇರಿದ್ದ. ಕಲಬುರಗಿ ನಗರದ ನೃಪತುಂಗ ಕಾಲೋನಿಯಲ್ಲಿ ತನ್ನ ಸ್ನೇಹಿತನ ಮನೆಯಲ್ಲೆ ಬಾಡಿಗೆ ಮನೆ ಮಾಡಿಕೊಂಡು ಪೇಂಟಿಂಗ್ ಕೆಲಸ ಹಾಗೂ ಹೋಟೆಲ್​ಗಳಿಗೆ ಹಾಲು ಹಾಕುವ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ.

ನಾಳೆ ಊರಿಗೆ ಬರುತ್ತೇನೆ ಎಂದಿದ್ದ ಕಂಠೆಪ್ಪ : ಏಪ್ರಿಲ್ 7ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಪೇಂಟಿಂಗ್ ಕೆಲಸ ಮಾಡಿದ್ದ ಕಂಠೆಪ್ಪ, ಸಂಜೆ ಹಾಲು ಹಾಕೋಕೆ ಹೋಗಿದ್ದ. ಹೋಗುವ ಮುನ್ನ ಹೆಂಡತಿಗೆ ಕರೆ ಮಾಡಿ ನಾಳೆ ಊರಿಗೆ ಬರೋದಾಗಿ ಹೇಳಿದ್ದ. ಬಳಿಕ ಹಾಲು ಹಾಕೋದಕ್ಕೆ ಅಂತಾ ಶಹಬಾದ್ ರಸ್ತೆಯ ಕಡೆ ಹೋಗಿದ್ದಾಗ ದುಷ್ಕರ್ಮಿಗಳು ತಮ್ಮ ಪ್ಲಾನ್​​ ಪ್ರಕಾರ ಕೊಲೆ ಮಾಡಿ ಅಲ್ಲಿಂದ ಕಾಲು ಕಿತ್ತಿದ್ದರು. ಇತ್ತ ಗಂಡ ಮನೆಗೆ ಬರ್ತಾರೆ ಅಂತಾ ಕಾಯುತ್ತ ಕುಳಿತಿದ್ದ ಹೆಂಡತಿಗೆ ಗಂಡನ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಯಿತು.

ಹೆಂಡತಿ ಅನುಮಾನ‌ ನಿಜವಾಯ್ತು : ಕಂಠೆಪ್ಪನನ್ನು ಕೊಲೆ ಮಾಡಿದ ಬಳಿಕ ಅದನ್ನು ಅಪಘಾತ ಎಂಬಂತೆ ಬಿಂಬಿಸೋದಕ್ಕೆ ಕಿರಾತಕರು ಆತನ ಬೈಕ್ ರಸ್ತೆ ಪಕ್ಕದಲ್ಲಿ ಬಿಸಾಡಿ ಡ್ಯಾಮೇಜ್ ಮಾಡಿದ್ದರು. ಅಪಘಾತ ಆದಾಗ ಏನೆಲ್ಲ ಗಾಯ ಆಗುತ್ತೋ ಹಾಗೆ ಕಂಠೆಪ್ಪನ ಮೈ ಮೇಲೆ ಗಾಯಗಳನ್ನ ಮಾಡಿ ಅಲ್ಲಿಂದ ಪರಾರಿಯಾಗಿದ್ದರು. ಆದರೆ, ಇದು ಅಪಘಾತವಲ್ಲ ಕೊಲೆ ಎಂದು ಕುಟುಂಬಸ್ಥರು ಅನುಮಾನ ಪಟ್ಟು ಗುಲ್ಬರ್ಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸೋದಕ್ಕೆ ಮುಂದಾಗಿದ್ದರು.

Accused of murder case
ಕೊಲೆ ಪ್ರಕರಣದ ಆರೋಪಿಗಳು

ಕೊರೊನಾ ಹಿನ್ನೆಲೆ ತನಿಖೆ ತಡವಾಗಿತ್ತು, ಇದೀಗ ಕೊರೊನಾ ತಗ್ಗಿದ ಹಿನ್ನೆಲೆ ಪ್ರಕರಣ ಬೆನ್ನಟ್ಟಿದ ಪೊಲೀಸರು ಕಂಠೆಪ್ಪ ಬಾಡಿಗೆ ಇದ್ದ ಮನೆ ಮಾಲೀಕ ಮತ್ತು ಕಂಠೆಪ್ಪನ ಆತ್ಮೀಯ ಸ್ನೇಹಿತ ಯಶವಂತನನ್ನು ಕರೆತಂದು ತಮ್ಮ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಕೊಲೆಯ ಅಸಲಿಯತ್ತು ಬಯಲಿಗೆ ಬಂದಿದೆ.

ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಪ್ರಯತ್ನ : ಸ್ನೇಹಿತ ಯಶವಂತ ಎಂಬಾತ ಕಷ್ಟದಲ್ಲಿರುವ ಕಾರಣ ಕಂಠೆಪ್ಪ ತನ್ನ ಹೊಲ ಮಾರಾಟ ಮಾಡಿ ಕಷ್ಟದಲ್ಲಿದ್ದ ಯಶವಂತಗೆ ಆರು ಲಕ್ಷ ರೂಪಾಯಿ ಸಾಲ ಕೊಟ್ಟಿದ್ದ. ಕೆಲ ದಿನಗಳ ಬಳಿಕ ಹಣವನ್ನು ವಾಪಸ್ ನೀಡುವಂತೆ ಒತ್ತಾಯ ಮಾಡಿದ್ದ. ಆದ್ರೆ, ಹಣ ಹೊಂದಾಣಿಕೆ ಆಗದ ಕಾರಣ ಕಂಠೆಪ್ಪನ ಕೊಲೆ ಮಾಡೋದಕ್ಕೆ ಯಶವಂತ ಪ್ಲ್ಯಾನ್ ಮಾಡಿದ.

ಕೊಲೆಗೂ ಮುನ್ನ ಕಂಠೆಪ್ಪನ ಹೆಸರಿನಲ್ಲಿ 20 ಲಕ್ಷ ರೂಪಾಯಿಯ ಇನ್ಸುರೆನ್ಸ್ ಕೂಡ ಮಾಡಿಸಿದ್ದ. ಕೊಲೆ ಬಳಿಕ ಅಪಘಾತ ಎಂಬಂತೆ ಬಿಂಬಿಸಿ ಆ ಹಣವನ್ನ ಕೂಡ ಲಪಟಾಯಿಸೋಕೆ ಪ್ಲ್ಯಾನ್ ಮಾಡಿದ್ದ. ಆದ್ರೆ, ಇನ್ಸುರೆನ್ಸ್ ಹಣ ಬರುವ ಮುಂಚೆಯೇ ಯಶವಂತ, ರಮೇಶ್ ಹಾಗೂ ಯಲ್ಲಪ್ಪ ಮೂರು ಜನ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯನವರ ನೇತೃತ್ವದಲ್ಲೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೆ : ಡಾ. ಯತೀಂದ್ರ ಸಿದ್ದರಾಮಯ್ಯ

ಹಣ ನೋಡಿದ್ರೆ ಹೆಣ ಕೂಡ ಬಾಯಿ ತೆರೆಯುತ್ತೆ ಅಂತಾರೆ, ದುಡ್ಡಿನ ಮುಂದೆ ಎಲ್ಲಾ ಸಂಬಂಧಗಳು ನಶ್ವರ ಅನ್ನೋ ಮಾತು ಇಲ್ಲಿ ನಿಜವಾಗಿದೆ. ಕಷ್ಟ ಕಾಲದಲ್ಲಿ ಜಮೀನು ಮಾರಿ ಸ್ನೇಹಿತನ ಸಾಲ ತೀರಿಸಿ ಸ್ನೇಹಿತನಿಗೆ ನೆರವಾಗಿದ್ದ. ಆದರೆ, ಅದೇ ಸ್ನೇಹಿತ ಹಣ ನೀಡುವ ಬದಲಾಗಿ ಕೊಲೆ ಮಾಡಿದ.

ಕೊಲೆಯ ಬಳಿಕ ಇನ್ಸುರೆನ್ಸ್ ರೂಪದಲ್ಲಿ ಬರುವ ಹಣವನ್ನು ಕೂಡ ಪಡೆದು ತನ್ನ ಲೈಫ್ ಸೆಟ್ಲ್ ಮಾಡಿಕೊಳ್ಳುವದಕ್ಕೆ ಪ್ಲ್ಯಾನ್ ಮಾಡಿದ್ದ ಹಂತಕ ಇದೀಗ ಜೈಲಲ್ಲಿ ಕಂಬಿ ಎಣಿಸುವಂತಾಗಿದೆ. ಆದ್ರೆ, ಸ್ನೇಹಿತನಿಗೆ ಸಹಾಯ ಮಾಡಲು ಹೋಗಿ ತನ್ನನ್ನೇ ನಂಬಿಕೊಂಡ ಕುಟುಂಬ ಬೀದಿಪಾಲು ಆಗಿದ್ದು ಮಾತ್ರ ದುರಂತ.

Last Updated : Jul 2, 2021, 2:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.