ETV Bharat / state

ಜೆಡಿಎಸ್ ಅಭ್ಯರ್ಥಿ - ಪೊಲೀಸ್ ಕಮಿಷನರ್ ನಡುವೆ ವಾಗ್ವಾದ: 8 ಮಂದಿ ವಿರುದ್ಧ ಪ್ರಕರಣ

author img

By

Published : Apr 8, 2023, 7:02 AM IST

ಕಲಬುರಗಿ ಜೆಡಿಎಸ್ ಅಭ್ಯರ್ಥಿ ಹಾಗೂ ಪೊಲೀಸ್ ಕಮಿಷನರ್ ನಡುವೆ ವಾಗ್ವಾದ - ರೋಜಾ ಠಾಣೆಯಲ್ಲಿ ಎಂಟು ಜನರ ವಿರುದ್ಧ ಪ್ರಕರಣ ದಾಖಲು.

Clash between JDS candidate and Police Commissioner
ಜೆಡಿಎಸ್ ಅಭ್ಯರ್ಥಿ-ಪೊಲೀಸ್ ಕಮಿಷನರ್ ನಡುವೆ ವಾಗ್ವಾದ

ಕಲಬುರಗಿ: ಉತ್ತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಸೀರ್ ಹುಸೇನ್‌ ಉಸ್ತಾದ ಹಾಗೂ‌ ಪೊಲೀಸ್ ಕಮಿಷನರ್ ಚೇತನ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಘಟನೆ ಸಂಬಂಧ ನಾಸೀರ್ ಹುಸೇನ್ ಉಸ್ತಾದ ಸೇರಿ 8 ಜನರ ವಿರುದ್ಧ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಸೀರ್ ಹುಸೇನ್ ಉಸ್ತಾದ ಎ1 ಆರೋಪಿ ಎಂದು ಹೆಸರಿಸಲಾಗಿದೆ. ಇನ್ನುಳಿದಂತೆ ಅಫ್ಜಲ್ ಮಹಿಮ್ಮದ್, ಶಫಿ ಪಟೇಲ್, ಮುದಾಸಿರ್, ಗೌಸ್ ಭಾಗವಾನ್, ಮಜರ್ ಲಾತೋರೆ, ತಲಾಹ್ ಮತ್ತು ಸೋಹೆಲ್ ಎಂಬುವರ ಮೇಲೆ ಪ್ರಕರಣ ದಾಖಲಿಸಿ ಮುಂದಿನ ಕಾನೂನು‌ ಕ್ರಮ ಕೈಗೊಳ್ಳಲಾಗಿದೆ.

ಪ್ರಕರಣದ ವಿವರ: ನಗರದ ಮುಸ್ಲಿಂ ಚೌಕ್‌ ಬಳಿ ಬೀದಿ ಬದಿ ವ್ಯಾಪಾರದಿಂದ ಟ್ರಾಫಿಕ್ ಜಾಮ್ ಆಗುತ್ತಿರುವ ಕುರಿತಾಗಿ ಬಂದಿದ್ದ ದೂರು ಆಧರಿಸಿ ರಸ್ತೆ ಇಕಟ್ಟು ಪ್ರದೇಶ ತೆರವುಗೊಳಿಸಿಲು ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಪೊಲೀಸ್ ಅಧಿಕಾರಿಗಳು ತೆರಳಿದಾಗ ಸ್ಥಳೀಯ ವ್ಯಾಪಾರಸ್ಥರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು.‌ ಈ ವೇಳೆ, ಸ್ಥಳಕ್ಕೆ ಆಗಮಿಸಿದ ಜೆಡಿಎಸ್ ಉತ್ತರ ಕ್ಷೇತ್ರದ ಅಭ್ಯರ್ಥಿ ನಾಸೀರ್ ಹುಸೇನ್ ಉಸ್ತಾದ ಹಾಗೂ ನಗರ ಪೊಲೀಸ್ ಆಯುಕ್ತ ಚೇತನ್ ಆರ್ ನಡುವೆ ಮಾತಿನ ಚಕಮಕಿ ನಡೆಯಿತು.

Clash between JDS candidate and Police Commissioner
ದೂರು ಪ್ರತಿ

ಬಳಿಕ ನಾಸೀರ್ ಹುಸೇನ್ ನೇತೃತ್ವದಲ್ಲಿ ಸ್ಥಳೀಯರು ರಸ್ತೆ ಮೇಲೆ ದಿಢೀರ್ ಪ್ರತಿಭಟನೆ ನಡೆಸಿ ಪೊಲೀಸರ ನಡೆ ಖಂಡಿಸಿದ್ದರು. ರಂಜಾನ್ ಹಿನ್ನೆಲೆ ವ್ಯಾಪಾರಸ್ಥರು ತಮ್ಮ ನಿಗದಿತ ಪ್ರದೇಶಕ್ಕಿಂತ ಕೊಂಚ ಮುಂದೆ ಬಂದಿರುತ್ತಾರೆ. ಹಬ್ಬ ಮುಗಿದ ನಂತರ ಯಥಾಸ್ಥಿತಿಗೆ ಬರುತ್ತಾರೆ. ಅಲ್ಲಿಯವರೆಗೆ ಪೊಲೀಸರು‌ ಸಮಯವಕಾಶ ಕೊಡಬೇಕೆಂದು‌ ಆಗ್ರಹಿಸಿದರು. ಪ್ರತಿಭಟನೆಯಿಂದ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಈ‌ ಬಗ್ಗೆ ರೋಜಾ ಠಾಣೆಯ ಇನ್ಸ್​​ಪೆಕ್ಟರ್ ಮಹಾಂತೇಶ ಬಸಾಪೂರ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.

Clash between JDS candidate and Police Commissioner
ನಾಸೀರ್ ಹುಸೇನ್ ನೇತೃತ್ವದಲ್ಲಿ ಪ್ರತಿಭಟನೆ..

ತಮಿಳನಾಡಿನ ಇಬ್ಬರ ಬಂಧನ: ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರ್​​ಗಳ ಗ್ಲಾಸ್ ಒಡೆದು ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ‌ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬ್ರಹ್ಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ಕಲ್ಲಿಕುಡಿ ನಿವಾಸಿಗಳಾದ ರಾಜಾರಾಮ್ ಹಾಗೂ ಗೋಪಾಲ ಬಂಧಿತ ಆರೋಪಿಗಳು.

ರಾಜಾರಾಮ್ ವೃತ್ತಿಯಲ್ಲಿ ಚಾಲಕನಾಗಿದ್ದರೆ, ಗೋಪಾಲ ಕಂಪ್ಯೂಟರ್ ಸರ್ವಿಸ್ ಇಂಜಿನಿಯರ್ ಆಗಿದ್ದ. ಹಣದ ದುರಾಸೆಯಿಂದ ಇಬ್ಬರು ರೈಲಿನಲ್ಲಿ ಚೆನ್ನೈದಿಂದ ಹೊರಟು ಕರ್ನಾಟಕದ ಪ್ರಮುಖ ನಗರಗಳಲ್ಲಿ ಅಮಾಯಕರಂತೆ ಓಡಾಡಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ಕಾರ್‌ಗಳ ಗ್ಲಾಸ್ ಒಡೆದು ಬೆಲೆಬಾಳುವ ವಸ್ತು ಕದ್ದು ಪರಾರಿಯಾಗುತ್ತಿದ್ದರು. ರಾಯಚೂರು, ಕಲಬುರಗಿ‌ ಸೇರಿ‌ ರಾಜ್ಯದ ಹಲವಡೆ ಇವರ ಕೃತ್ಯದ ಬಗ್ಗೆ ಪ್ರಕರಣಗಳು ದಾಖಲಾಗಿವೆ. ಕಳೆದ ತಿಂಗಳು ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಕಳ್ಳತನ ಪ್ರಕರಣ ದಾಖಲಾಗಿದ್ದವು. ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ರಾಜ್ಯದ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು.

ಸದ್ಯ ಬ್ರಹ್ಮಪುರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಬಂಧಿತರಿಂದ ಕಳ್ಳತನ ಮಾಡಿದ್ದ ಲ್ಯಾಪ್​​ಟಾಪ್ ಸೇರಿದಂತೆ ಅನೇಕ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮತದಾರರಿಗೆ ತವಾ ಹಂಚಿಕೆ ಆರೋಪ; ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಡಿ.ಕೆ‌.ಸುರೇಶ್ ವಿರುದ್ಧ ಪ್ರಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.