ETV Bharat / state

ಪಿಎಸ್‌ಐ ಅಕ್ರಮ : 'ಕೈ' ಮುಖಂಡನ ಸೋದರನ ಬಂಧನ.. ಮಹಾಂತೇಶ್​ಗೆ ಕರೆ ಮಾಡಿ ಬಲೆಗೆ ಬಿದ್ದ ಆರ್‌ ಡಿ ಪಾಟೀಲ್‌!

author img

By

Published : Apr 23, 2022, 2:01 PM IST

Updated : Apr 23, 2022, 2:25 PM IST

ಶುಕ್ರವಾರ ಬಂಧನಕ್ಕೊಳಗಾದ ಅಫಜಲಪುರ ಬ್ಲಾಕ್‌ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್‌‌ನ ಸಹೋದರ ಆರ್‌.ಡಿ.ಪಾಟೀಲ್​ ಎಂಬಾತನನ್ನೂ ಸಿಐಡಿ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಈ ಮೂಲಕ ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಬಂಧಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ
ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ

ಕಲಬುರಗಿ : ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ‌ ಮತ್ತೋರ್ವ ಪ್ರಮುಖ ಆರೋಪಿಯನ್ನು ಸಿಐಡಿ ವಶಕ್ಕೆ ಪಡೆದಿದೆ. ಪಕ್ಕದ‌ ಮಹಾರಾಷ್ಟ್ರದ ಸೋಲಾಪುರದಲ್ಲಿ ತಲೆ ಮರೆಸಿಕೊಂಡಿದ್ದ ಕಿಂಗ್​ಪಿನ್​ ಆರ್.ಡಿ.ಪಾಟೀಲ್​ ಎಂಬಾತನನ್ನು ಪತ್ತೆ ಮಾಡಿರುವ ಸಿಐಡಿ ಅಲ್ಲಿಗೆ ತೆರಳಿ ಬಂಧಿಸಿದೆ.

ಈ ಆರ್‌.ಡಿ.ಪಾಟೀಲ್ ಶುಕ್ರವಾರ ಬಂಧನಕ್ಕೊಳಗಾದ ಅಫಜಲಪುರ ಬ್ಲಾಕ್‌ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್‌‌ನ ಸಹೋದರ. ಮಹಾಂತೇಶ್​ಗೆ ಆರ್‌.ಡಿ.ಪಾಟೀಲ್‌ ಕರೆ‌ ಮಾಡಿದ್ದ ಆಧಾರದ ಮೇಲೆ ಸಿಐಡಿ ಪೊಲೀಸರು ಲೋಕೇಷನ್‌ ಪತ್ತೆ ಹೆಚ್ಚಿದ್ದು, ಈತ ಮಹಾರಾಷ್ಟ್ರದ ಸೋಲಾಪುರ ಬಳಿ ಇರುವುದು ಗೊತ್ತಾಗಿದೆ.

ಹೀಗಾಗಿ, ಈತನ ಬಂಧನಕ್ಕೆ ನಿನ್ನೆಯೇ ಸಿಐಡಿ ತಂಡ ಮಹಾರಾಷ್ಟ್ರದಲ್ಲಿ ಬೀಡುಬಿಟ್ಟಿತ್ತು. ಅಂತೆಯೇ ಆರೋಪಿಯನ್ನು ಇಂದು‌ ಬಂಧಿಸಿ ಕಲಬುರಗಿಗೆ ಕರೆ ತರಲಾಗಿದೆ. ಇತ್ತ, ಆರ್‌.ಡಿ.ಪಾಟೀಲ್‌ ಮತ್ತು ಮಹಾಂತೇಶ ಪಾಟೀಲ್‌‌ ಸಹೋದರರ ನೇತೃತ್ವದಲ್ಲಿ ಇಂದು ಅಫಜಲಪುರ ಪಟ್ಟಣದಲ್ಲಿ 101 ಜೋಡಿಯ ಸಾಮೂಹಿಕ ವಿವಾಹ ಆಯೋಜನೆ ಮಾಡಲಾಗಿತ್ತು. ಈ ಸಾಮೂಹಿಕ ವಿವಾಹದಲ್ಲಿ ಆರ್.ಡಿ.ಪಾಟೀಲ್ ಪಾಲ್ಗೊಳ್ಳಬಹುದೆಂದು ಇಲ್ಲಿಯೂ ಸಿಐಡಿ ಕಣ್ಗಾವಲು ಇಟ್ಟಿತ್ತು.

ಶುಕ್ರವಾರ ಬಂಧಿತನಾಗಿರುವ ಮಹಾಂತೇಶ ಪಾಟೀಲ್​ನನ್ನು ಜಿಲ್ಲಾ ನ್ಯಾಯಾಲಯಕ್ಕೆ ಸಿಐಡಿ ಪೊಲೀಸರು ಇಂದು ಹಾಜರುಪಡಿಸಿದ್ದರು. ಈ ಇಬ್ಬರು ಸಹೋದರರು ಪಿಎಸ್ಐ ಪರೀಕ್ಷಾರ್ಥಿಗಳಿಗೆ ಬ್ಲೂಟೂತ್ ಡಿವೈಸ್ ಮೂಲಕ ಅಕ್ರಮವಾಗಿ ಪರೀಕ್ಷೆ ಬರೆಸಿರುವ ಆರೋಪವಿದೆ. ಆರ್‌.ಡಿ.ಪಾಟೀಲ್ ಬಂಧನದಿಂದ ಒಟ್ಟಾರೆ ಬಂಧಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ : ಸ್ಫೋಟಕ ಆಡಿಯೋ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ

Last Updated : Apr 23, 2022, 2:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.