ETV Bharat / state

ಸಾಹಿತ್ಯ ಸಮ್ಮೇಳನಕ್ಕೆ ಸ್ಥಳ ನಿಗದಿ, ಲಾಂಛನದಲ್ಲಿ ಸ್ವಲ್ಪ ಮಾರ್ಪಾಡು: ಮಹೇಶ್ ಜೋಷಿ

author img

By

Published : Nov 23, 2022, 7:40 PM IST

ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ಜರುಗಲಿದೆ. ನಗರದ ಪ್ರಾದೇಶಿಕ ಸಾರಿಗೆ ಇಲಾಖೆಯ ಕರಿಬಸವೇಶ್ವರ ದೇವಸ್ಥಾನದ ಬಳಿ ಇರುವ ಸ್ಥಳದಲ್ಲಿ ನಡೆಸಲಾಗುವುದು. ಆದ್ರೆ ಲಾಂಛನದಲ್ಲಿ ಸ್ವಲ್ಪ ಮಾರ್ಪಾಡು ಆಗಲಿದೆ ಎಂದು ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಹೇಳಿದ್ದಾರೆ.

ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ
ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ

ಹಾವೇರಿ: ಮಧುರ ಮಧುರ ಮುಂಜುಳ ಗಾನದಂತೆ ಸಾಹಿತ್ಯ ಸಮ್ಮೇಳನದಲ್ಲಿ ನಾವಾಡುವ ನುಡಿಯೇ ಕನ್ನಡ ನುಡಿ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಒಂದು ಭಾಗವಾಗಿ ನಟ ಪುನೀತ್​ ರಾಜ್​ಕುಮಾರ್‌ಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಮಾಡಲಾಗುವುದು. ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿದೇಯಕ ಚಳಿಗಾಲದ ಅಧಿವೇಶನದಲ್ಲಿ ಕಾನೂನಾಗಲಿದ್ದು, ಅದರ ವಿಜಯೋತ್ಸವವನ್ನ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಚರಿಸುವುದಾಗಿ ಮಹೇಶ್ ಜೋಷಿ ತಿಳಿಸಿದರು.

ಸಿಎಂ ಜೊತೆ ಮಾತುಕತೆ: ಈ ಕುರಿತಂತೆ ಹಿರಿಯ ಕಾದಂಬರಿಕಾರ ಎಸ್ ಎಲ್ ಭೈರಪ್ಪ ಮತ್ತು ವಿವಿಧ ಮುಖಂಡರ ನಿಯೋಗ ಶೀಘ್ರದಲ್ಲಿ ಸಿಎಂ ಭೇಟಿ ಮಾಡಲಿದೆ. ಇದೇ ವೇಳೆ ಭುವನೇಶ್ವರಿ ಭಾವಚಿತ್ರ ವಿಚಾರವಾಗಿ ಮಾತನಾಡಿದ ಅವರು, ಭಾವಚಿತ್ರ ಸಮಿತಿ ಶಿಪಾರಸ್ಸು ಮಾಡಿದೆ. ಆದರೆ ಅಂತಿಮವಾಗಿಲ್ಲ. ಗದಗ ಜಿಲ್ಲೆ ಜಕ್ಕಲಿಯಲ್ಲಿರುವ ಅಂದಾನಪ್ಪ ದೊಡ್ಡಮೇಟಿ ಮನೆಯಲ್ಲಿರುವ ಭುವನೇಶ್ವರಿ ಚಿತ್ರದ ಬಗ್ಗೆ ಒಲುವು ತೋರಿಸಿದ ಮಹೇಶ್ ಜೋಷಿ, ಈ ಕುರಿತಂತೆ ಸಿಎಂ ಜೊತೆ ಮಾತನಾಡುವುದಾಗಿ ಹೇಳಿದರು.

ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ವಿವರಣೆ

ಇದನ್ನೂ ಓದಿ: ಕನ್ನಡವೇ ತಾಯಿ, ಬೇರೆ ಭಾಷೆಗಳು ಚಿಕ್ಕಮ್ಮ-ದೊಡ್ಡಮ್ಮ ಹೊರತು ಅವು ಹೆತ್ತವ್ವನಂತಾಗಲು ಸಾಧ್ಯವಿಲ್ಲ.. ಡಾ. ಮಹೇಶ್​ ಜೋಶಿ

ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಗೆ ಇಷ್ಟು ದಿನ ಒಂದು ಹೆಸರು ಇಡಲಾಗುತ್ತಿತ್ತು. ಆದರೆ ಹಾವೇರಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ವೇದಿಕೆಗೆ ಕನಕ, ಶರೀಫ ಮತ್ತು ಸರ್ವಜ್ಞ ಹೆಸರು ಇಡಲಾಗುವುದು. ಸಾಹಿತ್ಯ ಸಮ್ಮೇಳನದ ಹಿನ್ನೆಲೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಿಂದ ಭುವನೇಶ್ವರಿ ರಥೋತ್ಸವ ಹೊರಡಿಸಲಾಗುತ್ತದೆ ಎಂದು ಜೋಷಿ ಮಾಹಿತಿ ನೀಡಿದರು.

ರಥೋತ್ಸವಕ್ಕೆ ಚಾಲನೆ: ಡಿಸೆಂಬರ್ 1 ರಿಂದ ಭುವನಗಿರಿಯಿಂದ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಈ ರಥದಲ್ಲಿ ಕನ್ನಡಕ್ಕಾಗಿ ದುಡಿದವರು ಪ್ರಶಸ್ತಿ ಭಾಜನರ ಭಾವಚಿತ್ರಗಳು ಇರಲಿವೆ. ರಾಜ್ಯದ 31 ಜಿಲ್ಲೆಗಳಲ್ಲಿ ಸಂಚರಿಸುವ ರಥ ಜನವರಿ 1 ರಂದು ಹಾವೇರಿ ಪ್ರವೇಶ ಮಾಡಲಿದೆ. ಜನವರಿ 6 ರಂದು ಸಾಹಿತ್ಯ ಪರಿಷತ್‌ನ ಮೆರವಣಿಗೆಯಲ್ಲಿ ರಥ ಪಾಲ್ಗೊಳ್ಳಲಿದೆ ಎಂದು ಜೋಷಿ ವಿವರಿಸಿದರು.

ಸಾಹಿತ್ಯ ಸಮ್ಮೇಳನ ಹಾವೇರಿಯ ಟಿಎಂಇಎ ಕಾಲೇಜ್ ಮುಂದಿನ ಸ್ಥಳದಲ್ಲಿ ಬಿಟ್ಟು ಪ್ರಾದೇಶಿಕ ಸಾರಿಗೆ ಇಲಾಖೆಯ ಕರಿಬಸವೇಶ್ವರ ದೇವಸ್ಥಾನದ ಬಳಿ ಇರುವ ಸ್ಥಳದಲ್ಲಿ ನಡೆಸುತ್ತಿದ್ದೇವೆ. ಸಮ್ಮೇಳನದ ಲಾಂಛನ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಆದರೆ ಮತ್ತೆ ಮಾರ್ಪಾಡು ಮಾಡಲಾಗಿದೆ ಎಂದು ಹೊಸ ಲಾಂಛನವನ್ನು ಜೋಷಿ ಬಿಡುಗಡೆ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.