ETV Bharat / state

ಸಾಲುಮರದ ತಿಮ್ಮಕ್ಕ ಉದ್ಯಾನವನವೀಗ ಪ್ರವಾಸಿಗರಿಗೆ ಅಚ್ಚುಮೆಚ್ಚು; ಇಲ್ಲಿವೆ 4,500ಕ್ಕೂ ಅಧಿಕ ಸಸಿಗಳು!

author img

By

Published : Aug 16, 2023, 11:01 PM IST

Updated : Aug 18, 2023, 1:32 PM IST

ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಸುಮಾರು 20ಕ್ಕೂ ಅಧಿಕ ಜಾತಿಯ 4 ಸಾವಿರದಿಂದ 4500 ಸಸಿಗಳನ್ನು ನೆಡಲಾಗಿದೆ.

ಹಾವೇರಿ
ಹಾವೇರಿ

ಸಾಲುಮರದ ತಿಮ್ಮಕ್ಕ ಉದ್ಯಾನವನವೀಗ ಪ್ರವಾಸಿಗರಿಗೆ ಅಚ್ಚುಮೆಚ್ಚು

ಹಾವೇರಿ : ಜಿಲ್ಲೆಯ ಬ್ಯಾಡಗಿ ತಾಲೂಕು ಮೋಟೆಬೆನ್ನೂರು ಬಳಿ ಇರುವ ಸಾಲುಮರದ ತಿಮ್ಮಕ್ಕ ಉದ್ಯಾನವನ ಇದೀಗ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿ ನಿರ್ಮಾಣಗೊಂಡಿರುವ ಉದ್ಯಾನವನ ಹಸಿರು ಹೊದ್ದು ನಿಂತಿದೆ.

ಸುಮಾರು 45 ಎಕರೆ ವಿಸ್ತೀರ್ಣದಲ್ಲಿರುವ ಉದ್ಯಾನವನದಲ್ಲಿ ಸಾವಿರಾರು ಬಗೆಯ ಗಿಡಗಳನ್ನು ನೆಡಲಾಗಿದೆ. ಮಿಯಾವಕಿ ಉದ್ಯಾನವನವನ್ನೂ ಇಲ್ಲಿ ನೋಡಬಹುದು. ಸುಮಾರು ಅರ್ಧ ಎಕರೆ ಜಾಗದಲ್ಲಿ 20ಕ್ಕೂ ಅಧಿಕ ಜಾತಿಯ 4 ಸಾವಿರದಿಂದ 4,500 ಸಸಿಗಳಿವೆ.

ಉದ್ಯಾನವನದ ಆರಂಭದಲ್ಲಿ ನೆಟ್ಟಿರುವ ಈ ಗಿಡಗಳು, ಇದೀಗ 10 ರಿಂದ 15 ಅಡಿಗಿಂತ ಎತ್ತರವಾಗಿ ಬೆಳೆದಿವೆ. ಮಿಯಾವಾಕಿ ಅರಣ್ಯದಲ್ಲಿ ಕಾಲುದಾರಿ ಇದ್ದು, ಅರಣ್ಯದ ಮಧ್ಯೆ ಹೋದರೆ ಸಾಕು ದಟ್ಟಾರಣ್ಯದಲ್ಲಿ ಬಂದಂತಹ ವಾತಾವರಣದ ಅನುಭವವಾಗುತ್ತದೆ. ಅಕಿರಾ ಮಿಯಾವಕಿ ಜಪಾನ್ ಮೂಲದವರು. ಇವರು ಸಸ್ಯಶಾಸ್ತ್ರಜ್ಞ. ನೈಸರ್ಗಿಕ ಅರಣ್ಯದ ಬಗ್ಗೆ ಅವರಿದ್ದ ಕಾಳಜಿಯಿಂದ ಅವರು ಕಂಡುಕೊಂಡ ಈ ಪದ್ದತಿಯೇ ಮಿಯಾವಕಿ ಅರಣ್ಯ. ಸ್ಥಳೀಯ ಮರಗಳು, ಮಣ್ಣು ಮತ್ತು ನೈಸರ್ಗಿಕ ಅರಣ್ಯದಿಂದ ಕಂಡುಕೊಂಡ ಮಾರ್ಗವೇ ಮಿಯಾವಕಿ ಪದ್ದತಿ. ಈ ಪದ್ದತಿಯ ಅರಣ್ಯೀಕರಣವನ್ನು ವಿಶ್ವದ ವಿವಿಧೆಡೆ ಪ್ರಯೋಗಿಸಲಾಗಿದೆ. ಅಂತಹ ಮಿಯಾವಕಿ ಅರಣ್ಯವನ್ನು ಇದೀಗ ಮೋಟೆಬೆನ್ನೂರು ಸಮೀಪದ ತಿಮ್ಮಕ್ಕ ಉದ್ಯಾನವದಲ್ಲಿ ಬೆಳೆಸಲಾಗಿದೆ.

ಅರ್ಧ ಎಕರೆಯಲ್ಲಿ 4500 ಮರಗಳು ಬೆಳೆದು ನಿಂತರೆ, ಅದರ ವೈವಿಧ್ಯತೆ ವಿಭಿನ್ನವಾಗಿರಲಿದೆ. ಇನ್ನು ಉದ್ಯಾನವದಲ್ಲಿ ಚಿಟ್ಟೆ ಪಾರ್ಕ್ ಇದೆ. ಇಲ್ಲಿ ರಾಜ್ಯದಲ್ಲಿರುವ ಪ್ರಮುಖ ಪಾತರಗಿತ್ತಿಗಳ ಪಾತ್ರವನ್ನು ತಿಳಿಸಲಾಗಿದೆ. ಪಾತರಗಿತ್ತಿ ಸೆಲ್ಪ್ ಸ್ಪಾಟ್ ನಿರ್ಮಿಸಲಾಗಿದ್ದು, ಇಲ್ಲಿ ಪೋಟೋ ಕ್ಲಿಕ್ಕಿಸಿಕೊಳ್ಳಬಹುದು. ಉದ್ಯಾನವದಲ್ಲಿ ಮತ್ತೊಂದು ವಿಶೇಷತೆ ಅಂದರೆ ಇಲ್ಲಿ ಕ್ಯಾಕ್ಟಸ್ ಪಾರ್ಕ್ ನಿರ್ಮಿಸಲಾಗಿದೆ.

ಸುಮಾರು 90 ತಳಿಯ ಕ್ಯಾಕ್ಟಸ್‌ ಗಿಡಗಳನ್ನು ಇಲ್ಲಿ ನೆಡಲಾಗಿದೆ. ಅವುಗಳ ವೈಜ್ಞಾನಿಕ ನಾಮದೇಶ, ಅವುಗಳ ಪರಿಸರ ಸೇರಿದಂತೆ ವಿವಿಧ ವಿವರಗಳನ್ನು ತಿಳಿಸಲಾಗುತ್ತದೆ. ಇತ್ತೀಚಿಗೆ ರಾಜ್ಯದಲ್ಲಿ ಪ್ರಚುರಗೊಂಡಿರುವ ಡ್ರಾಗನ್ ಪ್ರುಟ್ಸ್ ಸಹ ಕ್ಯಾಕ್ಟಸ್‌ಗೆ ಸೇರಿದ ಸಸ್ಯ. ಚಿಕ್ಕಮಕ್ಕಳಿಗಾಗಿ ವಿವಿಧ ಆಟಿಕೆಗಳನ್ನು ಇಲ್ಲಿಡಲಾಗಿದೆ. ಚಿಣ್ಣರ ಜೋಕಾಲಿ, ಹಗ್ಗದಮೇಲೆ ನಡಿಗೆ, ಜಾರುಬಂಡಿ ತಿರುಗುಣಿ ಸೇರಿದಂತೆ ವಿವಿಧ ಆಟದ ಸಲಕರಣಿಗಳು ಮಕ್ಕಳಿಗೆ ಅಚ್ಚುಮೆಚ್ಚಾಗಿವೆ.

ಇನ್ನು ಉದ್ಯಾವನದಲ್ಲಿ ಧನ್ವಂತರಿ ವನ, ನವಗೃಹವನ ಸೇರಿದಂತೆ ಭಾರತೀಯ ಆಯುರ್ವೇದದ ಪ್ರಮುಖ ವನಸ್ಪತಿಗಳನ್ನು ಬೆಳೆಯಲಾಗುತ್ತಿದೆ. ಸಾಲುಮರದ ತಿಮ್ಮಕ್ಕ ಭಾವಚಿತ್ರದಿಂದ ಆರಂಭವಾಗುವ ಉದ್ಯಾನವದ ಸ್ವಾತಂತ್ರ ಹೋರಾಟಗಾರ ಮೈಲಾರಮಹದೇವಪ್ಪ ಭಾವಚಿತ್ರದೊಂದಿಗೆ ಮುಕ್ತಾಯವಾಗುತ್ತಿದೆ.

''ಈ ಉದ್ಯಾನವನ ರಾಣಿಬೆನ್ನೂರಿಗೆ ಸಮೀಪದಲ್ಲಿದೆ. ವಿಕೇಂಡ್​ನಲ್ಲಿ ಮಕ್ಕಳನ್ನು ಕರೆದುಕೊಂಡು ಇಲ್ಲಿಗೆ ಬರಬಹುದು. ಇಲ್ಲಿ ಔಷಧಿಯ ಸಸ್ಯಗಳು, ಪ್ರಾಣಿಗಳ ಡಯಾಗ್ರಾಮ್ಸ್​ಗಳನ್ನು ಎಲ್ಲವನ್ನೂ ಹೆಸರಿನಲ್ಲಿ ಹಾಕಿದ್ದಾರೆ. ಇಲ್ಲಿ ಒಳ್ಳೆಯ ಪರಿಸರವಿದೆ. ಇಲ್ಲಿಗೆ ಬಂದರೆ ಬಿಟ್ಟುಹೋಗುವುದಕ್ಕೆ ಮನಸ್ಸಾಗುತ್ತಿಲ್ಲ'' ಅಂತಾರೇ ಗೃಹಿಣಿ ತನುಜಾ.

ಪ್ರವಾಸಿಗರ ಅಚ್ಚುಮೆಚ್ಚಿನ ತಾಣ: ''ಈ ಉದ್ಯಾನವನ್ನು 2021ರ ಜುಲೈನಲ್ಲಿ ನಿರ್ಮಾಣ ಮಾಡಿದ್ದೇವೆ. ಇಲ್ಲಿ ಸುಮಾರು 15ರಿಂದ 20 ಜಾತಿಯ 4500ಕ್ಕೂ ಹೆಚ್ಚಿನ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಸಾಲುಮರದ ತಿಮ್ಮಕ್ಕ ಉದ್ಯಾನವನವೀಗ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಇಲ್ಲಿ ನೆಟ್ಟಿರುವ ಎಲ್ಲಾ ಸಸ್ಯಗಳು ಕಡಿಮೆ ಅವಧಿಯಲ್ಲಿ ಅತ್ಯಂತ ಸದೃಢವಾಗಿ ಬೆಳೆದುನಿಂತಿವೆ'' ಎಂದು ಅರಣ್ಯಪಾಲಕ ಗಣೇಶ ಬೊಮ್ಮನಳ್ಳಿ ತಿಳಿಸಿದ್ದಾರೆ.

ಇದನ್ನೂ ಓದಿ: ಬರಡು ಭೂಮಿಯಲ್ಲಿ ಹಸಿರುಮಯ ಸುಂದರ ಉದ್ಯಾನವನ

Last Updated : Aug 18, 2023, 1:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.