ETV Bharat / state

ತಂದೆ ಸ್ಮರಣಾರ್ಥ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ 1 ವರ್ಷದವರೆಗೆ ಉಚಿತ ಊಟದ ವ್ಯವಸ್ಥೆ ಕಲ್ಪಿಸಿದ ಮಗ

author img

By ETV Bharat Karnataka Team

Published : Dec 9, 2023, 10:54 AM IST

ಹಾವೇರಿಯ ಪವನ ಬಹದ್ದೂರ್​ ದೇಸಾಯಿ ಎಂಬುವರು ತಮ್ಮ ಅಗಲಿದ ತಂದೆ ಸ್ಮರಣಾರ್ಥ ಜಿಲ್ಲಾಸ್ಪತ್ರೆಯಲ್ಲಿ ಪ್ರತಿನಿತ್ಯ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ.

free meal
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಊಟದ ವ್ಯವಸ್ಥೆ

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಊಟದ ವ್ಯವಸ್ಥೆ

ಹಾವೇರಿ : ತಂದೆ ತೀರಿಕೊಳ್ಳುತ್ತಿದ್ದಂತೆ ಅವರ ನೆನಪಿಗಾಗಿ ಕೆಲ ಮಕ್ಕಳು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಕೆಲವರು ದೇವಸ್ಥಾನಗಳಲ್ಲಿ ಪ್ರಸಾದ ವಿತರಿಸಿದರೆ ಇನ್ನೂ ಕೆಲವರು ತಾವು ಕಲಿತ ಶಾಲೆಯಲ್ಲಿ ಪ್ರಥಮ ಸ್ಥಾನಗಳಿಸುವ ವಿದ್ಯಾರ್ಥಿಗಳಿಗೆ ಅಪ್ಪನ ಹೆಸರಿನಲ್ಲಿ ಬಹುಮಾನ ನೀಡುತ್ತಾರೆ. ಆದರೆ, ಹಾವೇರಿಯ ಪವನ ಬಹದ್ದೂರ್​ ದೇಸಾಯಿ ಅವರು ತಮ್ಮ ತಂದೆ ಸ್ಮರಣಾರ್ಥ ಜಿಲ್ಲಾಸ್ಪತ್ರೆಯಲ್ಲಿ ನಿತ್ಯ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದಾರೆ.

ಹೌದು, ದಿವಂಗತ ಕುಶ ಬಹದ್ದೂರ್​ ದೇಸಾಯಿ ಅವರ ಸ್ಮರಣಾರ್ಥ ಹಾವೇರಿ ಜಿಲ್ಲಾಸ್ಪತ್ರೆಗೆ ರೋಗಿಗಳ ಜೊತೆ ಬರುವ ಸಹಾಯಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದಾರೆ. ಈ ಉಚಿತ ಭೋಜನ ವ್ಯವಸ್ಥೆಯನ್ನು ಒಂದು ವರ್ಷಗಳ ಕಾಲ ನಡೆಸಲು ಮುಂದಾಗಿದ್ದಾರೆ. ಇದಕ್ಕಾಗಿ ಜಿಲ್ಲಾಸ್ಪತ್ರೆಯ ಹಿಂದೆ ಇರುವ ಆಕ್ಸಿಜನ್ ಪ್ಲಾಂಟ್ ಬಳಿ ಒಂದು ಚಿಕ್ಕದಾದ ಸೆಂಟರ್ ತೆರೆದು ಇಲ್ಲಿಗೆ ಬರುವ ರೋಗಿಗಳ ಸಹಾಯಕರಿಗೆ ಉಚಿತವಾಗಿ ಊಟ ನೀಡುತ್ತಿದ್ದಾರೆ.

ಬಡವರ ಕಷ್ಟ ನೋಡಿ ಈ ತೀರ್ಮಾನ: ಈ ಕುರಿತಂತೆ ಮಾತನಾಡಿದ ಪವನ ಬಹದ್ದೂರ್​ ದೇಸಾಯಿ, "ನಮ್ಮ ತಂದೆಯನ್ನು ಆಸ್ಪತ್ರೆಗೆ ಸೇರಿಸಿದಾಗ ಅಲ್ಲಿಯ ಬಡವರ ಸ್ಥಿತಿ ನೋಡಿದ್ದೆ. ಅದರಲ್ಲೂ ಸರ್ಕಾರಿ ಆಸ್ಪತ್ರೆಗಳಿಗೆ ಅಧಿಕ ಸಂಖ್ಯೆಯಲ್ಲಿ ಬಡವರು ಬರುತ್ತಾರೆ. ದೂರ ದೂರದ ಗ್ರಾಮಗಳಿಂದ ಆಗಮಿಸುವ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಸರಿಯಾದ ಊಟದ ವ್ಯವಸ್ಥೆ ಇರುವುದಿಲ್ಲ. ಹೊರಗೆ ಹೋಗಿ ಕ್ಯಾಂಟೀನ್​ಗಳಲ್ಲಿ ಊಟ ಮಾಡಲು ಹಣ ಇರುವುದಿಲ್ಲ. ಹೀಗಾಗಿ, ಅವರ ನೋವನ್ನು ನೋಡಿ ಈ ರೀತಿಯ ವ್ಯವಸ್ಥೆ ಕಲ್ಪಿಸಬೇಕು ಎಂದುಕೊಂಡು ಮಾಡಿದ್ದೇನೆ" ಎಂದರು.

ಒಳರೋಗಿಗಳ ಬಳಿ ತೆರಳುವ ಜಿಲ್ಲಾಸ್ಪತ್ರೆ ಸಿಬ್ಬಂದಿ ಮಧ್ಯಾಹ್ನ 12 ಗಂಟೆಯಿಂದ ಒಂದು ಗಂಟೆಯವರೆಗೆ ರೋಗಿಗಳನ್ನು ಭೇಟಿಯಾಗುತ್ತಾರೆ. ಒಳರೋಗಿಗಳ ಜೊತೆ ಸಹಾಯಕರಾಗಿ ಬಂದವರು ಊಟದ ವ್ಯವಸ್ಥೆ ಮಾಡಿಕೊಂಡು ಬಂದಿದ್ದಾರಾ?, ಇಲ್ಲವೋ ಎಂದು ವಿಚಾರಿಸಿ ಅವರಿಗೆ ಟೋಕನ್ ನೀಡಲಾಗುತ್ತದೆ. ಯಾರಿಗೆ ಅಗತ್ಯ ಇರುವುದೋ ಅವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಈ ರೀತಿ ಟೋಕನ್ ಕೊಟ್ಟು ಉಚಿತ ಊಟದ ವ್ಯವಸ್ಥೆ ಮಾಡಿರುವ ಬಗ್ಗೆ ರೋಗಿಗಳ ಸಹಾಯಕರಿಗೆ ತಿಳಿಸಲಾಗುತ್ತೆ. ನಂತರ 1 ಗಂಟೆಯಿಂದ 2 ಗಂಟೆಯವರೆಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ.

ಸೋಮವಾರ, ಮಂಗಳವಾರ, ಗುರುವಾರ ಮತ್ತು ಶುಕ್ರವಾರ ಅನ್ನ ಸಾಂಬಾರ್ ಮತ್ತು ಉಪ್ಪಿನಕಾಯಿ ನೀಡಲಾಗುತ್ತದೆ. ಶನಿವಾರ ಉಪ್ಪಿಟ್ಟು ಮತ್ತು ಕೇಸರಿಬಾತ್ ನೀಡಲಾಗುತ್ತದೆ. ಬುಧವಾರ ಬಿಸಿಬೇಳೆ ಬಾತ್, ಕಿಚಡಿ ಅಥವಾ ಪಲಾವ್​ಗಳಲ್ಲಿ ಒಂದನ್ನು ನೀಡಲಾಗುತ್ತದೆ. ಉಳಿದಂತೆ ಸರ್ಕಾರಿ ರಜಾದಿನಗಳಂದು ಉಚಿತ ಊಟದ ವ್ಯವಸ್ಥೆ ಇರುವುದಿಲ್ಲ. ನಿತ್ಯ ನೂರು ಟೋಕನ್ ನೀಡಲಾಗುತ್ತದೆ. ಊಟಕ್ಕೆ ಬರುವವರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸಹ ಮಾಡಲಾಗಿದೆ.

ಇದನ್ನೂ ಓದಿ : ಒಂದು ದಿನವೂ ಒಲೆ ಹಚ್ಚದೆಯೇ ಹಸಿದವರ ಹೊಟ್ಟೆ ತುಂಬಿಸುತ್ತಿದೆ ಈ ರೊಟ್ಟಿ ಬ್ಯಾಂಕ್​..!

ಊಟದ ಶುಚಿ ಮತ್ತು ರುಚಿ ಅತ್ಯುತ್ತಮವಾಗಿದ್ದು, ಈ ರೀತಿ ಉಚಿತ ಭೋಜನದ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಬಡರೋಗಿಗಳ ಸಂಬಂಧಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗೆ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಸ್ಥಾಪನೆ ಮಾಡಿದರೆ ಬಡವರಿಗೆ ಅನುಕೂಲವಾಗುತ್ತದೆ ಎಂದಿದ್ದಾರೆ.

ಸದ್ಯಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಸಿಬ್ಬಂದಿ ಇದನ್ನು ನೋಡಿಕೊಳ್ಳುತ್ತಿದ್ದಾರೆ. ದೇಸಾಯಿ ಸ್ಥಾಪನೆ ಮಾಡಿರುವ ಅದಮ್ಯ ಫೌಂಡೇಶನ್, ಚೇತನ ಪೌಂಡೇಶನ್ ಮತ್ತು ಜಿಲ್ಲಾಸ್ಪತ್ರೆಯ ಸಹಯೋಗದಲ್ಲಿ ಈ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆ ಒಂದು ವರ್ಷಗಳ ಕಾಲ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.