ಹಾವೇರಿ : ಸರ್ಕಾರಿ ಸಾರಿಗೆ ಬಸ್ನಿಂದ ಬಿದ್ದು ಶಾಲಾ ಬಾಲಕಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಕುಸನೂರು ಗ್ರಾಮದ ಬಳಿ ಸೋಮವಾರ ಬೆಳಗ್ಗೆ ನಡೆದಿದೆ. ಮೃತ ಬಾಲಕಿಯನ್ನು ಮಧು ಚಕ್ರಸಾಲಿ (13) ಎಂದು ಗುರುತಿಸಲಾಗಿದೆ. ಬಾಲಕಿಯು ವಾಸನ ಗ್ರಾಮದಿಂದ ಕುಸನೂರು ಗ್ರಾಮದಲ್ಲಿರುವ ಪ್ರೌಢಶಾಲೆಗೆ ಆಗಮಿಸುವ ವೇಳೆ ಈ ಘಟನೆ ಸಂಭವಿಸಿದೆ.
ಬಸ್ ಜನರಿಂದ ತುಂಬಿದ್ದ ಕಾರಣಕ್ಕಾಗಿ ಬಾಲಕಿ ಬಾಗಿಲ ಬಳಿಯೇ ನಿಂತಿದ್ದಳು. ಅಲ್ಲದೆ ರಸ್ತೆ ಕೂಡ ಹದಗೆಟ್ಟಿತ್ತು ಎಂದು ಹೇಳಲಾಗಿದೆ. ಈ ವೇಳೆ ಬಾಗಿಲಿನ ಬಳಿ ನಿಂತಿದ್ದ ಬಾಲಕಿ ಆಯತಪ್ಪಿ ಕೆಳ ಬಿದ್ದು ಸಾವನ್ನಪ್ಪಿದ್ದಾಳೆ. ಗಂಭೀರ ಗಾಯಗೊಂಡ ಬಾಲಕಿಯನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಸಹ ಚಿಕಿತ್ಸೆಗೆ ಸ್ಪಂದಿಸದೆ ಮೃತಳಾಗಿದ್ದಾಳೆ. ಮೃತ ಬಾಲಕಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಫ್ಐಆರ್ನಲ್ಲಿ, ಸಾರಿಗೆ ಬಸ್ ಚಾಲಕ ನಿರ್ಲಕ್ಷ್ಯತನದಿಂದ ವೇಗವಾಗಿ ಬಸ್ ಚಲಾಯಿಸಿದ್ದರಿಂದ ಬಸ್ನ ಮುಂಭಾಗದ ಬಾಗಿಲಿನಲ್ಲಿ ನಿಂತಿದ್ದ ಬಾಲಕಿ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ಇದರಿಂದ ಗಂಭೀರ ಗಾಯಗೊಂಡ ಬಾಲಕಿಯನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ ಎಂದು ದೂರಲಾಗಿದೆ.
ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ : ಕೆಎಸ್ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಸಾವನ್ನಪ್ಪಿ, ಮೂವರು ಗಂಭೀರ ಗಾಯಗೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಇಲ್ಲಿನ ಮೈಸೂರು - ಹುಣಸೂರು ಹೆದ್ದಾರಿಯ ಬನ್ನಿಕುಪ್ಪೆ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ : Murder in Bengaluru: ಡಬಲ್ ಬಾಡಿಗೆ ಕೇಳಿದ ಆಟೋ ಚಾಲಕ.. ಪ್ರಶ್ನಿಸಿದ ಪ್ರಯಾಣಿಕನ ಕೊಲೆ
ಮೃತರನ್ನು ಹುಣಸೂರು ತಾಲೂಕಿನ ತಟ್ಟೆಕೆರೆ ಗ್ರಾ.ಪಂ. ವ್ಯಾಪ್ತಿಯ ನಿಲುವಾಗಿಲು ಗ್ರಾಮದ ಗ್ರಾ.ಪಂ ಸದಸ್ಯ ಲೇ. ಚಿಕ್ಕೇಗೌಡರ ಪುತ್ರ ಭಾಸ್ಕರ್(42) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಪತ್ನಿ ರಮ್ಯ, ತಾಯಿ ಸಾವಿತ್ರಮ್ಮ, ಪುತ್ರ ಚರಿತ್ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ತಕ್ಷಣ ಸ್ಥಳೀಯ ಗ್ರಾಮಸ್ಥರು ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಗಾಯಾಳುಗಳನ್ನು ಮೈಸೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಮೃತ ಭಾಸ್ಕರ್ ಅವರು ತಮ್ಮ ಕಾರಿನಲ್ಲಿ ಕುಟುಂಬ ಸಮೇತ ಮನುಗನಹಳ್ಳಿಯ ಮಾವನ ಮನೆಗೆ ಹೋಗಿ ವಾಪಸಾಗುತ್ತಿದ್ದರು. ಈ ವೇಳೆ ಹೆದ್ದಾರಿಯ ಬನ್ನಿಕುಪ್ಪೆ ಬಳಿ ಪಿರಿಯಾಪಟ್ಟಣ ಡಿಪೋಗೆ ಸೇರಿದ ಕೆಎಸ್ಆರ್ಟಿಸಿ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಭಾಸ್ಕರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕುಟುಂಬಸ್ಥರಿಗೆ ತೀವ್ರ ಗಾಯಗಳಾಗಿವೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹುಣಸೂರು ಬಸ್ ಡಿಪೋ ಮ್ಯಾನೇಜರ್ ಸುಬ್ರಮಣ್ಯ ಭೇಟಿ ನೀಡಿ ಪರಿಶೀಲಿಸಿದರು.
ಅಪಘಾತದ ನಂತರ ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಗಂಟೆ ಕಾಲ ಟ್ರಾಫಿಕ್ ಜಾಮ್ ಆಗಿದ್ದರಿಂದ ಎರಡೂ ಬದಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಳಿಕ ಪೊಲೀಸರು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇದನ್ನೂ ಓದಿ : ಬೆಂಗಳೂರು: ಭಯ ಹುಟ್ಟಿಸುವಂತೆ ಸ್ಕೂಟರ್ ಚಲಾಯಿಸಿದ ಯುವಕರು... ವಿಡಿಯೋ!