ETV Bharat / state

ಬೊಮ್ಮಾಯಿ ಅಧಿಕಾರವಧಿ ಬಗ್ಗೆ ಭವಿಷ್ಯ ನುಡಿದ ಮೈಲಾರ ಧರ್ಮದರ್ಶಿಗೆ ಸಂಕಷ್ಟ

author img

By

Published : Aug 5, 2021, 7:01 AM IST

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಭವಿಷ್ಯ ನುಡಿದಿದ್ದ ಮೈಲಾರ ಕ್ಷೇತ್ರದ ಧರ್ಮದರ್ಶಿ, ಅವರ ಅಧಿಕಾರವಧಿ ಕೇವಲ 8 ತಿಂಗಳು ಎಂದಿದ್ದರು. ಈ ಹೇಳಿಕೆ ಅವರಿಗೀಗ ಸಂಕಷ್ಟ ತಂದಿಟ್ಟಿದೆ.

Mailara Prediction Controversy
ಮೈಲಾರದ ಧರ್ಮದರ್ಶಿಗೆ ಎದುರಾಯ್ತು ಸಂಕಷ್ಟ

ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿಯವರ ಅಧಿಕಾರಾವಧಿ ಕೇವಲ ಎಂಟು ತಿಂಗಳು ಮಾತ್ರ. ನಂತರ ಗಡ್ಡದಾರಿಯೊಬ್ಬರು ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದ ಧರ್ಮದರ್ಶಿ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.

ಧರ್ಮದರ್ಶಿ ವೆಂಕಪ್ಪ ಒಡೆಯರ್ ಮೈಲಾರದ ಕಾರ್ಣಿಕ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾರ್ಣಿಕ ನುಡಿಯುವ ಗೊರವಜ್ಜ ರಾಮಣ್ಣ ಆರೋಪಿಸಿದ್ದಾರೆ. ಮೈಲಾರಲಿಂಗೇಶ್ವರ ಕಾರ್ಣಿಕ ವರ್ಷಕ್ಕೆ ಒಂದು ಸಲ ಮಾತ್ರ ನಡೆಯುತ್ತದೆ.

ಧರ್ಮದರ್ಶಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಗೊರವಪ್ಪ

ನಾವು 11 ದಿನಗಳ ಕಾಲ ಉಪವಾಸವಿದ್ದು, ದೇವರ ಕೃಪೆ ಪಡೆದು ಕಾರ್ಣಿಕ ನುಡಿಯುತ್ತೇವೆ. ಆದರೆ, ಧರ್ಮದರ್ಶಿ ರಾಜಕೀಯ ನಾಯಕರೆಗೆಲ್ಲ ಭವಿಷ್ಯ ನುಡಿದು ಕಾರ್ಣಿಕ ಎನ್ನುತ್ತಿದ್ದಾರೆ. ಪ್ರಚಾರದ ಆಸೆಯಿಂದ ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ರಾಮಣ್ಣ ಆಕ್ಷೇಪ ವ್ಯಕ್ತಪಡಿಸಿದರು.

ಮೈಲಾರ ಕ್ಷೇತ್ರದ ಬಾಬುದಾರ ನಿಂಗಪ್ಪ ಮಾತನಾಡಿ, ವೆಂಕಪ್ಪಒಡೆಯರ್ ಮೈಲಾರ ಕ್ಷೇತ್ರದ ಹೆಸರಿನಲ್ಲಿ ಭವಿಷ್ಯ ನುಡಿಯುತ್ತಿದ್ದಾರೆ. ಕಳೆದ ಹಲವು ಶತಮಾನಗಳಿಂದ ಗೊರವಪ್ಪಗಳ ಸಂತತಿಯೇ ಕಾರ್ಣಿಕ ನುಡಿಯುತ್ತಿದೆ. ಇದು ರಕ್ತಗತವಾಗಿ ಬಂದಿದೆ. ಅವರ ಸಂತತಿಯವರೇ ಕಾರ್ಣಿಕ ನುಡಿಯಬೇಕು.

ಇದನ್ನೂ ಓದಿ: ಬೊಮ್ಮಾಯಿ ಪೂರ್ಣಾವಧಿ ಪೂರೈಸುವುದಿಲ್ಲ: ಭವಿಷ್ಯ ನುಡಿದ ಮೈಲಾರಲಿಂಗೇಶ್ವರದ ಧರ್ಮಕರ್ತ

ಆದರೆ, ಧರ್ಮದರ್ಶಿ ವೆಂಕಪ್ಪಒಡೆಯರ್ ತಮಗೆ ತಿಳಿದಂತೆ ಭವಿಷ್ಯ ಹೇಳುತ್ತಿದ್ದಾರೆ. ಈ ರೀತಿ ಹೇಳುವ ಬದಲು ಅವರು ಬೇರೆ ಕಡೆ ಭವಿಷ್ಯಕೇಂದ್ರ ತೆರೆದು ರಾಜಕೀಯ ನಾಯಕರ ಭವಿಷ್ಯ ಹೇಳಲಿ ಎಂದಿದ್ದಾರೆ.

ಈ ಕುರಿತಂತೆ ಎಲ್ಲಾ ಬಾಬುದಾರರು ಸೇರಿ ಪ್ರತಿಭಟನೆ ನಡೆಸುವುದಾಗಿ ನಿಂಗಪ್ಪ ತಿಳಿಸಿದ್ದಾರೆ. ಅಲ್ಲದೆ, ಜಿಲ್ಲಾಧಿಕಾರಿ, ತಾಲೂಕು ಅಧಿಕಾರಿ ಮತ್ತು ಮುಜರಾಯಿ ಇಲಾಖೆಗೆ ಈ ಬಗ್ಗೆ ದೂರು ಸಲ್ಲಿಸುವುದಾಗಿಯೂ ನಿಂಗಪ್ಪ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.