ETV Bharat / state

ಸೂಕ್ತ ಮಾಹಿತಿ ಕೊರತೆ.. ಉದ್ದೇಶಗಳ ಈಡೇರಿಕೆಯಲ್ಲಿ ಹಿಂದೆ ಬಿದ್ದ ನಮ್ಮ ಕ್ಲಿನಿಕ್​

author img

By

Published : Jul 4, 2023, 5:11 PM IST

Updated : Jul 4, 2023, 6:06 PM IST

ಹಾವೇರಿಯಲ್ಲಿ ಸೂಕ್ತ ಮಾಹಿತಿಯ ಕೊರತೆಯಿಂದ ಸರ್ಕಾರ ಸ್ಥಾಪಿಸಿದ್ದ ನಮ್ಮ ಕ್ಲಿನಿಕ್ ಉದ್ದೇಶದ ಈಡೇರಿಕೆಯಿಂದ ಹಿಂದೆ ಬಿದ್ದಿದೆ.

ನಮ್ಮ ಕ್ಲಿನಿಕ್​
ನಮ್ಮ ಕ್ಲಿನಿಕ್​

ಜಿಲ್ಲಾ ಆರೋಗ್ಯಾಧಿಕಾರಿ ಡಾ ರಾಘವೇಂದ್ರಸ್ವಾಮಿ ಅವರು ನಮ್ಮ ಕ್ಲಿನಿಕ್ ಬಗ್ಗೆ ಮಾತನಾಡಿದ್ದಾರೆ

ಹಾವೇರಿ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಯೋಜನೆಗಳಲ್ಲಿ ಒಂದು ನಮ್ಮ ಕ್ಲಿನಿಕ್. ಆರಂಭದಲ್ಲಿ ಇದಕ್ಕೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಜಾರಿಗೆ ತಂದ ಮೊಹಲ್ಲಾ ಕ್ಲಿನಿಕ್ ಹೋಲಿಕೆಯ ಆರೋಪ ಕೇಳಿಬಂದಿತ್ತು. ಅಂದು ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯಲ್ಲಿ ಐದು ಕ್ಲಿನಿಕ್​ಗಳನ್ನು ಸ್ಥಾಪಿಸಲಾಗಿತ್ತು. ರಾಣೆಬೆನ್ನೂರು, ಹಾವೇರಿ, ಶಿಗ್ಗಾಂವಿ, ಹಾನಗಲ್ ಮತ್ತು ಬ್ಯಾಡಗಿ ನಗರಗಳಲ್ಲಿ ನಮ್ಮ ಕ್ಲಿನಿಕ್ ಸ್ಥಾಪಿಸಲಾಗಿತ್ತು.

ಉದ್ಘಾಟನೆಯ ದಿನದಿಂದಲೇ ನಮ್ಮ ಕ್ಲಿನಿಕ್‌ಗಳು ಕಾರ್ಯ ಆರಂಭಿಸಿದ್ದವು. ಆದರೆ ಹಾವೇರಿ ಜಿಲ್ಲೆಯಲ್ಲಿರುವ ನಮ್ಮ ಕ್ಲಿನಿಕ್‌ಗಳು ವೈದ್ಯ ಸಿಬ್ಬಂದಿಯ ಕೊರತೆ ಎದುರಿಸಿದ್ದವು. ಹಾನಗಲ್‌ ಪಟ್ಟಣದ ನಮ್ಮ ಕ್ಲಿನಿಕ್‌ನಲ್ಲಿ ಈಗಲೂ ಸಹ ಸಿಬ್ಬಂದಿ ಕೊರತೆ ಇದೆ. ಉಳಿದಂತೆ ನಾಲ್ಕು ಕ್ಲಿನಿಕ್‌ಗಳಲ್ಲಿ ಸಿಬ್ಬಂದಿ ಇದ್ದು, ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಹಾವೇರಿಯ ದೇವದರ ಇಳಿಜಾರಿನಲ್ಲಿ ಉದ್ಘಾಟನೆಯಾಗಿರುವ ನಮ್ಮ ಕ್ಲಿನಿಕ್ ರೋಗಿಗಳ ಕೊರತೆಯನ್ನು ಎದುರಿಸುತ್ತಿದೆ. ಆರಂಭದಿಂದ ಹಿಡಿದು ಇಲ್ಲಿಯವರೆಗೆ ಈ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಬೆರಳೆಣಿಕೆಯ ರೋಗಿಗಳು ತಪಾಸಣೆಗೆ ಒಳಗಾಗಿದ್ದಾರೆ.

ಸರ್ಕಾರದ ಉದ್ದೇಶ ಇಲ್ಲಿ ಈಡೇರಿಲ್ಲ: ಹಾವೇರಿ ಒಂದನ್ನ ಬಿಟ್ಟು ಉಳಿದ ಕಡೆ ದಿನನಿತ್ಯ ಸರಾಸರಿ 30 ರೋಗಿಗಳನ್ನ ತಪಾಸಣೆ ಮಾಡಲಾಗುತ್ತಿದೆ. ಪ್ರತಿ 30 ಸಾವಿರ ಜನರಿಗೆ ನಮ್ಮ ಕ್ಲಿನಿಕ್ ಇರಬೇಕು. ಕೊಳಗೇರಿ ನಿವಾಸಿಗಳಿಗೆ ದಿನಗೂಲಿ ಕಾರ್ಮಿಕರು ಮತ್ತು ಸಮಾಜದಲ್ಲಿರುವ ಇತರ ದುರ್ಬಲ ವರ್ಗಗಳಿಗೆ ಸುಲಭವಾಗಿ ವೈದ್ಯಕೀಯ ಸೇವೆ ದೊರಕಿಸಬೇಕು ಎನ್ನುವ ದೃಷ್ಟಿಯಿಂದ ನಮ್ಮ ಕ್ಲಿನಿಕ್​ ಸ್ಥಾಪಿಸಲಾಗಿದೆ. ಆದರೆ ಈ ಬಗ್ಗೆ ಜನಸಾಮಾನ್ಯರಿಗೆ ಸಂಪೂರ್ಣ ಮಾಹಿತಿ ಸಿಕ್ಕಿಲ್ಲಾ. ಪರಿಣಾಮ ನಗರ ಪ್ರದೇಶದ ಆರ್ಥಿಕವಾಗಿ ಹಿಂದುಳಿದವರೂ ಸೇರಿದಂತೆ ಎಲ್ಲ ವರ್ಗದ ಜನರಿಗೆ ಆರೋಗ್ಯ ಸೇವೆ ನೀಡುವ ಸರ್ಕಾರದ ಉದ್ದೇಶ ಇಲ್ಲಿ ಈಡೇರಿಲ್ಲಾ ಎಂಬ ಆರೋಪಗಳು ಕೇಳಲಾರಂಭಿಸಿವೆ.

'ಸಮುದಾಯ ಆರೋಗ್ಯ ಕೇಂದ್ರ, ತಾಲೂಕಾಸ್ಪತ್ರೆಗಳು ಮತ್ತು ಜಿಲ್ಲಾ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗಿಲ್ಲ. ನಮ್ಮ ಕ್ಲಿನಿಕ್ ಸ್ಥಾಪನೆಗೆ ಮುನ್ನ ಇದ್ದಂತೆ ಈಗಲೂ ಒತ್ತಡ ಇದೆ. ಮುಖ್ಯವಾಗಿ ಮಧ್ಯಮವರ್ಗ ಮತ್ತು ಬಡವರ್ಗದವರ ಆರ್ಥಿಕ ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ನಮ್ಮ ಕ್ಲಿನಿಕ್ ಸ್ಥಾಪಿಸಲಾಗಿದೆ. ನಮ್ಮ ಕ್ಲಿನಿಕ್‌ಗಳು ಆಸ್ಪತ್ರೆಗಳಿಗೆ ರೋಗಿಗಳ ರೆಫರ್ ಮಾಡುವ ಸೇತುವೆಗಳಾಗಿ ಕಾರ್ಯನಿರ್ವಹಿಸಬೇಕು. ನಮ್ಮ ಕ್ಲಿನಿಕ್‌ಗಳ ಸಾಂಕ್ರಾಮಿಕ ರೋಗಗಳ ಕಣ್ಗಾವಲಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರ ಒದಗಿಸುವ ಮಕ್ಕಳ ಚುಚ್ಚುಮದ್ದು ಸಹ ಇಲ್ಲಿಯೇ ಹಾಕಲಾಗುತ್ತದೆ. ಕೊರೊನಾ ವ್ಯಾಕ್ಸಿನ್‌ಗಳನ್ನ ಸಹ ಈ ನಮ್ಮ ಕ್ಲಿನಿಕ್‌ಗಳಲ್ಲಿ ಹಾಕಲಾಗುತ್ತಿದೆ. ಆದರೆ ಈ ಕುರಿತಂತೆ ಜನಸಾಮಾನ್ಯರಿಗೆ ಮಾಹಿತಿ ಕೊರತೆ ಇದೆ. ನಮ್ಮ ಕ್ಲಿನಿಕ್‌ಗಳ ಬಗ್ಗೆ ಜನಸಾಮಾನ್ಯರಿಗೆ ಸರಿಯಾದ ಮಾಹಿತಿಯಿಲ್ಲ. ಇದರಿಂದ ಕೆಲ ನಮ್ಮ ಕ್ಲಿನಿಕ್‌ಗಳು ರೋಗಿಗಳ ಕೊರತೆ ಎದುರಿಸುತ್ತಿವೆ' ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ ರಾಘವೇಂದ್ರಸ್ವಾಮಿ.

ಕ್ಲಿನಿಕ್‌ಗಳ ಸಿಬ್ಬಂದಿ ಕೊರತೆ ನೀಗಿಸಿ: 'ಈ ಎಲ್ಲ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಸಂಪೂರ್ಣ ಮಾಹಿತಿ ನೀಡುವ ಕಾರ್ಯವನ್ನ ಜಿಲ್ಲಾ ಆರೋಗ್ಯ ಇಲಾಖೆ ಮಾಡುತ್ತಿದೆ. ಬಡವರ ಪಾಲಿನ ಸಂಜೀವಿನಿಯಾಗಿರುವ ನಮ್ಮ ಕ್ಲಿನಿಕ್‌ ಬಗ್ಗೆ ಸಮರ್ಪಕ ಮಾಹಿತಿ ನೀಡುವ ಮೂಲಕ ಬಡರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಸರ್ಕಾರ ಹಲವು ಉದ್ದೇಶಗಳಿಂದ ಸ್ಥಾಪಿಸಿದ್ದ ನಮ್ಮ ಕ್ಲಿನಿಕ್‌ಗಳು ಉದ್ದೇಶಗಳ ಈಡೇರಿಕೆಯಲ್ಲಿ ಹಿಂದೆ ಬಿದ್ದಿವೆ. ಮೊದಲು ಕ್ಲಿನಿಕ್‌ಗಳ ಸಿಬ್ಬಂದಿ ಕೊರತೆ ನೀಗಿಸಿ. ಈ ಕ್ಲಿನಿಕ್‌ಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡಿ ತಪಾಸಣೆಗೆ ಬಂದ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಿದರೆ ಸರ್ಕಾರದ ನಮ್ಮ ಕ್ಲಿನಿಕ್ ಉದ್ದೇಶ ಈಡೇರುತ್ತದೆ' ಎನ್ನುತ್ತಾರೆ ಸ್ಥಳೀಯ ಅಬ್ದುಲ್ ಖಾದರ್ ಧಾರವಾಡ.

ಇದನ್ನೂ ಓದಿ: "ನಮ್ಮ ಕ್ಲಿನಿಕ್"ನಲ್ಲಿ 12 ಆರೋಗ್ಯ ಸೇವೆಗಳ ಪ್ಯಾಕೇಜ್ ಲಭ್ಯ; ರಾಜ್ಯಾದ್ಯಂತ ಒಟ್ಟು 438 "ನಮ್ಮ ಕ್ಲಿನಿಕ್‌" ಓಪನ್​

Last Updated : Jul 4, 2023, 6:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.