ಸಿಂದಗಿ ಮಠದಲ್ಲಿ ಊರೂಟ.. ವಿವಿಧ ಭಕ್ಷ್ಯಗಳ ಪ್ರಸಾದ ಸ್ವೀಕರಿಸಿದ 50 ಸಾವಿರಕ್ಕೂ ಅಧಿಕ ಭಕ್ತರು

author img

By

Published : Mar 1, 2023, 8:29 AM IST

Updated : Mar 1, 2023, 12:55 PM IST

uruta

ಹಾವೇರಿಯ ಸಿಂದಗಿ ಮಠದಲ್ಲಿ ಲಿಂಗೈಕ್ಯ ಶಾಂತವೀರೇಶ್ವರ ಶ್ರೀಗಳ ಸ್ಮರಣೋತ್ಸವದ ಅಂಗವಾಗಿ ಹಲವಾರು ವರ್ಷದಿಂದ ಊರೂಟ ಎಂಬ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಶಾಂತವೀರೇಶ್ವರ ಶ್ರೀಗಳ ಸ್ಮರಣೋತ್ಸವದ ಅಂಗವಾಗಿ ನಡೆದ ಊರೂಟ ಕಾರ್ಯಕ್ರಮ

ಹಾವೇರಿ: ವೀರಶೈವ ಪರಂಪರೆಯಲ್ಲಿ ಸ್ವಾಮೀಜಿಗಳನ್ನು ಮನೆಗೆ ಕರೆದು ಪ್ರಸಾದ ನೀಡುವುದು ಸಾಮಾನ್ಯ. ಆದ್ರೆ, ಸ್ವಾಮಿಜಿಗಳೇ ಭಕ್ತರನ್ನು ಮಠಕ್ಕೆ ಕರೆದು ಪ್ರಸಾದ ನೀಡುವ ಪರಂಪರೆಯೊಂದು ಹಾವೇರಿಯ ಸಿಂದಗಿ ಮಠದಲ್ಲಿದೆ. ಇಲ್ಲಿನ ಲಿಂಗೈಕ್ಯ ಶಾಂತವೀರೇಶ್ವರ ಶ್ರೀಗಳ ಸ್ಮರಣೋತ್ಸವದ ಅಂಗವಾಗಿ ಊರೂಟ ಎಂಬ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ನಿನ್ನೆ ನಡೆದ ಈ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಅಧಿಕ ಭಕ್ತರು ಬಂದು ಪ್ರಸಾದ ಸೇವಿಸಿದರು.

ಊರೂಟದ ವಿಶೇಷತೆ ಏನು?: ಈ ದಿನ ಮಠದ ವಟುಗಳು ಮನೆಗೆ ಮನೆಗೆ ತೆರಳಿ ಭಕ್ತರನ್ನ ಊರೂಟಕ್ಕೆ ಬರುವಂತೆ ಅಹ್ವಾನಿಸುತ್ತಾರೆ. ಸಿಂದಗಿ ಶಾಂತವಿರೇಶ್ವರರ ಗದ್ದುಗೆಯನ್ನ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗುತ್ತೆ. ವಿದ್ಯುತ್ ದೀಪಗಳಲ್ಲಿ ಮಠವನ್ನ ಅಲಂಕಾರ ಮಾಡಲಾಗಿರುತ್ತದೆ. ಭಕ್ತರು ಶಾಂತವಿರೇಶ್ವರರ ಗದ್ದುಗೆ ದರ್ಶನ ಪಡೆದ ನಂತರ ಪ್ರಸಾದ ಸ್ವೀಕರಿಸುತ್ತಾರೆ. ಅಷ್ಟೇ ಅಲ್ಲದೇ, ಮಠಕ್ಕೆ ಬರುವ ಭಕ್ತರನ್ನ ಮಠದ ವಟುಗಳೇ ಸ್ವಾಗತಿಸುತ್ತಾರೆ. ಜೊತೆಗೆ ಭೋಜನವನ್ನ ತಯಾರಿಸಿ, ಭಕ್ತರಿಗೆ ವಟುಗಳೇ ಬಡಿಸುತ್ತಾರೆ. ಎಲ್ಲಾ ವಟುಗಳು ಸೇರಿ ಈ ದಿನ ಮಠಕ್ಕೆ ಬರುವ ಭಕ್ತರಲ್ಲೇ ದೇವರನ್ನ ಕಾಣುತ್ತಾರೆ. ಜೊತೆಗೆ ಮಠಕ್ಕೆ ಪ್ರಸಾದಕ್ಕೆ ಬರುವ ಭಕ್ತರ ತಟ್ಟೆಯನ್ನ ಸಹ ಅವರೇ ತೊಳೆಯುತ್ತಾರೆ.

ಇದನ್ನೂ ಓದಿ: ಶೃಂಗೇರಿ ಶಾರದಾ ಪೀಠಕ್ಕೆ ಜೆ.ಪಿ ನಡ್ಡಾ ಭೇಟಿ: ಶ್ರೀಗಳ ಜೊತೆ ಸಮಾಲೋಚನೆ

ಈ ಪರಂಪರೆಯನ್ನ ಸಿಂದಗಿ ಮಠದ ಲಿಂಗೈಕ್ಯ ಶಾಂತವೀರೇಶ್ವರ ಶ್ರೀಗಳು ಆಚರಣೆಗೆ ತಂದಿದ್ದರಂತೆ. ಅವರು ಲಿಂಗೈಕ್ಯರಾದ ನಂತರ ಮಠದಲ್ಲಿ ವಟುಗಳು ಆ ಪದ್ದತಿಯನ್ನ ಆಚರಿಸಿಕೊಂಡು ಬರುತ್ತಿದ್ದಾರೆ. ಈ ದಿನ ಉತ್ತರ ಕರ್ನಾಟಕದ ಕಡಕ್ ರೊಟ್ಟಿ, ಕರಿಂಡಿ ಪಾಯಸ ಸೇರಿದಂತೆ ವಿವಿಧ ಭಕ್ಷ್ಯಗಳನ್ನ ಭಕ್ತರಿಗೆ ಉಣಬಡಿಸಲಾಗುತ್ತದೆ. ಭಕ್ತರು ಲಿಂಗೈಕ್ಯ ಶ್ರೀಗಳ ಗದ್ದುಗಿಗೆ ನಮಸ್ಕರಿಸಿ ನಂತರ ಪ್ರಸಾದವನ್ನ ಸ್ವೀಕರಿಸುತ್ತಾರೆ.

ಇದನ್ನೂ ಓದಿ: ಅದ್ಧೂರಿಯಾಗಿ ನೆರವೇರಿದ ಸಿದ್ಧಾರೂಢರ ರಥೋತ್ಸವ.. ಹುಬ್ಬಳ್ಳಿಯಲ್ಲಿ ಮೊಳಗಿತು ಶಿವ ನಾಮಸ್ಮರಣೆ

ಇನ್ನು ಮಠದಲ್ಲಿ ಕಜ್ಜಾಯ ಪರಂಪರೆ ಸಹ ಇದೆ. ಊರೂಟ ಇರುವಾಗ ಕೆಲ ಗ್ರಾಮಗಳ ಭಕ್ತರು ರೊಟ್ಟಿ ಸೇರಿದಂತೆ ಸಿಹಿ ಪದಾರ್ಥಗಳನ್ನು ಮಠಕ್ಕೆ ನೀಡುತ್ತಾರೆ. ಒಂದೇ ದಿನ ಐವತ್ತು ಸಾವಿರ ಜನರಿಗೆ ಎಲ್ಲಿಯೂ ಯಾವುದೇ ರೀತಿಯ ತೊಂದರೆಯಾಗದಂತೆ ಮಠದ ವಟುಗಳು ನೋಡಿಕೊಳ್ಳುತ್ತಾರೆ. ಈ ಬಾರಿ ಹಾವೇರಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಊರೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಸಿಂದಗಿ ಮಠದಲ್ಲಿ ದಿನದ 24 ಗಂಟೆ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಇರುವದು ಮತ್ತೊಂದು ವಿಶೇಷ.

ಇದನ್ನೂ ಓದಿ: ಮಹಾಶಿವರಾತ್ರಿಗೆ ಮುದ್ದೇಬಿಹಾಳ ಭಕ್ತರಿಂದ ಶಿವಲಿಂಗ ತಯಾರಿ: ವಿಡಿಯೋ

Last Updated :Mar 1, 2023, 12:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.