ETV Bharat / state

ಹಾವೇರಿ ನುಡಿಹಬ್ಬ: ಕನ್ನಡಾಭಿಮಾನಿಗಳಿಗೆ ಸಿಗಲಿದೆ ವೈವಿಧ್ಯಮಯ ಊಟೋಪಚಾರ

author img

By

Published : Jan 5, 2023, 11:42 AM IST

Updated : Jan 5, 2023, 7:19 PM IST

86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಡೆಯುತ್ತಿರುವ ಸಿದ್ಧತಾ ಕಾರ್ಯಗಳು ಅಂತಿಮ ಹಂತದಲ್ಲಿವೆ. ನುಡಿಹಬ್ಬಕ್ಕೆ ಆಗಮಿಸುವ ಸಾವಿರಾರು ಕನ್ನಡಿಗರಿಗೆ ವಿಶೇಷ ಭೋಜನ ವ್ಯವಸ್ಥೆ ತಯಾರಾಗುತ್ತಿದೆ.

Variety dinner prepared for Kannada Sahitya Sammelana
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವೈವಿಧ್ಯಮಯ ಭೋಜನ

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವೈವಿಧ್ಯಮಯ ಭೋಜನ

ಹಾವೇರಿ: ಏಲಕ್ಕಿ ನಗರಿ ಹಾವೇರಿಯಲ್ಲಿ ಜನವರಿ 6,7 ಮತ್ತು 8 ರಂದು ನಡೆಯಲಿರುವ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತಾ ಕಾರ್ಯ ನಡೆದಿದೆ. ಸಮ್ಮೇಳನಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಇದ್ದು ಎಲ್ಲ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಸಮ್ಮೇಳನಕ್ಕೆ ಹಾಜರಾಗುವ ಸುಮಾರು 5 ಲಕ್ಷ ಜನರಿಗೆ ಆಹಾರ ಸಮಿತಿಯು ಉತ್ತರ ಕರ್ನಾಟಕ ಶೈಲಿಯ ಆಹಾರ ಉಣಬಡಿಸಲು ಸಜ್ಜಾಗಿದೆ.

ದಿನಕ್ಕೊಂದು ವಿಶೇಷ ತಿನಿಸು: ವಿಶೇಷ ಖಾದ್ಯಗಳಾದ ಶೇಂಗಾ ಹೋಳಿಗೆ, ಬೆಸನ್ ಉಂಡಿ, ರವಾ ಉಂಡಿ, ಮೋತಿಚೂರ್, ಗೋಧಿ ಹುಗ್ಗಿ, ಲಡ್ಡು ಮತ್ತು ಲಡಗಿಪಾಕ್ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಬಾಣಸಿಗರು ಸಿದ್ಧಪಡಿಸಲಿದ್ದಾರೆ. ಸುಮಾರು 2 ಲಕ್ಷ 50 ಸಾವಿರ ಶೇಂಗಾ ಹೋಳಿಗೆಗಳನ್ನು ತಯಾರಿಸಲಾಗಿದೆ. 600 ಬಾಣಸಿಗರೂ ಸೇರಿದಂತೆ 1,200 ಮಂದಿ ಅಡುಗೆ ಸಿಬ್ಬಂದಿ ಖಾದ್ಯಗಳ ತಯಾರಿಕೆಯಲ್ಲಿ ತೊಡಗಿದ್ದಾರೆ.

Variety dinner prepared for Kannada Sahitya Sammelana
ಶೇಂಗಾ ಹೋಳಿಗೆ

ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ: ಮೊದಲ ದಿನ(ನಾಳೆ) ಒಂದು ಲಕ್ಷ 50 ಸಾವಿರ, ಎರಡನೇಯ ದಿನ ಒಂದು ಲಕ್ಷ ಮತ್ತು ಮೂರನೇಯ ದಿನ ಒಂದೂವರೆ ಲಕ್ಷ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲು ಆಹಾರ ಸಮಿತಿ ತೀರ್ಮಾನಿಸಿದೆ. ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ವಿಶೇಷ ಸಿಹಿ ಊಟ ಇರಲಿದೆ.

ಬೆಲ್ಲದ ಚಹಾ: ಚಹಾ ಮತ್ತು ಕಾಫಿಪ್ರಿಯರಿಗೆ ಸಾವಯುವ ಬೆಲ್ಲದಿಂದ ತಯಾರಿಸುವ ಟೀ ಮತ್ತು ಕಾಫಿ ನೀಡಲಾಗುತ್ತದೆ. 35 ಎಕರೆ ಜಾಗದಲ್ಲಿ ಕಿಚನ್ ಮತ್ತು ಡೈನಿಂಗ್ ಹಾಲ್ ತೆರೆಯಲಾಗಿದ್ದು, ಆಗತ್ಯವಿರುವ ಸಾಮಗ್ರಿ ಸಂಗ್ರಹಿಸಲಾಗಿದೆ. 200 ಕೌಂಟರ್​​ಗಳಲ್ಲಿ ಊಟ ಮತ್ತು ಉಪಹಾರ ನೀಡುವ ವ್ಯವಸ್ಥೆಯಾಗಿದೆ.

ವಿಶೇಷ ಕೌಂಟರ್​ಗಳು: ಪ್ರತಿ ಕೌಂಟರ್​​ನಲ್ಲಿ ಒಬ್ಬ ಸರ್ಕಾರಿ ಅಧಿಕಾರಿ ಮತ್ತು 20 ಸಹಾಯಕರು ಕಾರ್ಯನಿರ್ವಹಿಸುವರು. 70 ವರ್ಷ ಮೇಲ್ಪಟ್ಟ ವಯೋವೃದ್ದರಿಗೆ, ಸಮ್ಮೇಳನ ಸೇವಾ ನಿರತರಿಗೆ, ವಿಶೇಷಚೇತನರು ಮತ್ತು ಮಹಿಳೆಯರಿಗೆ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ. ಸಮ್ಮೇಳನ ನಡೆಯುವ ಜಾಗದಲ್ಲಿ ಸುಮಾರು 23 ನೀರಿನ ಕೇಂದ್ರಗಳನ್ನು ಗುರುತಿಸಲಾಗಿದೆ. ಅದರಲ್ಲಿ ಕೈ ತೊಳೆಯಲು ಮತ್ತು ಕುಡಿಯುವ ನೀರಿನ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

Variety dinner prepared for Kannada Sahitya Sammelana
ರವೆ ಲಡ್ಡು

'ಸಮ್ಮೇಳನದ ಮೊದಲ ದಿನ ಉಪಹಾರಕ್ಕೆ ಉಪ್ಪಿಟ್ಟು ಮತ್ತು ಕೇಸರಿಬಾತ್ ವ್ಯವಸ್ಥೆ ನಡೆದಿದೆ. ಎರಡನೇ ದಿನ ಉಪಹಾರಕ್ಕೆ ವೆಜಿಟೇಬಲ್ ಪಲಾವ್, ರವಾ ಉಂಡಿ ಇರಲಿದೆ. ಮೂರನೇ ದಿನ ವಾಂಗೀಬಾತ್ ಮತ್ತು ಮೈಸೂರು ಪಾಕ್ ನೀಡಲಾಗುತ್ತದೆ. ಮಧ್ಯಾಹ್ನ ಊಟಕ್ಕೆ ಜೋಳದ ರೊಟ್ಟಿ, ಚಪಾತಿ ಪಲ್ಯ, ಶೇಂಗಾ ಚಟ್ನಿ, ಅನ್ನ-ಸಾರು, ಉಪ್ಪಿನಕಾಯಿ, ಮೊಸರಿನ ವ್ಯವಸ್ಥೆ ನಡೆದಿದೆ. ರಾತ್ರಿ ಊಟಕ್ಕೆ ಒಂದೊಂದು ದಿನ ಒಂದೊಂದು ರೀತಿಯ ಪಾಯಸ ನೀಡುವ ವ್ಯವಸ್ಥೆ ನಡೆದಿದೆ. ಪುಳಿಯೊಗರೆ, ಬಿಸಿಬೇಳೆ ಬಾತ್, ಚಿತ್ರಾನ್ನ ಮತ್ತು ಅನ್ನ-ಸಾಂಬಾರ್‌ ಇರಲಿದೆ' ಎಂದು ಆಹಾರ ಸಮಿತಿ ಅಧಿಕಾರಿ ಮಹ್ಮದ್ ರೋಷನ್ ತಿಳಿಸಿದ್ದಾರೆ.

ಬಾಯಲ್ಲಿ ನೀರೂರಿಸುವ ಖಾದ್ಯಗಳು..: 'ಸಾಹಿತ್ಯ ಸಮ್ಮೇಳನಕ್ಕೆ ಬರುವ ಕನ್ನಡಾಭಿಮಾನಿಗಳಿಗೆ ಈಗಾಗಲೇ ಎಲ್ಲ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ವಿಶೇಷವಾಗಿ, ಊಟ ಮತ್ತು ವಸತಿ ಸೇರಿದಂತೆ ಸಂಪೂರ್ಣ ವ್ಯವಸ್ಥೆಯನ್ನು ನಮ್ಮ ಜಿಲ್ಲಾಡಳಿತ ಮಾಡಿದೆ. ಮೂರು ದಿನಗಳ ಕಾಲ ಬರುವ ಅತಿಥಿಗಳಿಗೆ ಯಾವುದೇ ಕೊರತೆ ಕಾಡದಂತೆ ನೋಡಿಕೊಳ್ಳಲಾಗುವುದು. ಸಾರ್ವಜನಿಕರಿಗೆ, ವಿಐಪಿ ಮತ್ತು ವಿವಿಐಪಿ ಎಂಬ ಮೂರು ವಿಭಾಗಗಳನ್ನು ಮಾಡಿಕೊಳ್ಳಲಾಗಿದೆ. ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿದೆ. ಮೆರವಣಿಗೆಗೂ ಸಹ ಬಹಳ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 95 ಕಲಾ ತಂಡಗಳು ಪಾಲ್ಗೊಳ್ಳಲಿವೆ. ಅತಿಥಿಗಳು ಪಾಲ್ಗೊಳ್ಳುವ ವೇದಿಕೆ, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆಗಳು ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದೆ'. -ಲಿಂಗಯ್ಯ ಹಿರೇಮಠ, ಕ.ಸಾ.ಪ ಜಿಲ್ಲಾಧ್ಯಕ್ಷ

Variety dinner prepared for Kannada Sahitya Sammelana
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವೈವಿಧ್ಯಮಯ ಭೋಜನ ವ್ಯವಸ್ಥೆ

ಸ್ಥಳೀಯ ಪದಾರ್ಥಗಳಿಗೆ ಒತ್ತು: 'ಈಗಾಗಲೇ ನಮ್ಮ ಕಸಾಪ ಅಧ್ಯಕ್ಷರು ಹೇಳಿದಂತೆ ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಶುಚಿ-ರುಚಿಯಾದ ಊಟೋಪಹಾರದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನದ ಊಟಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬಹುದು. ಹಾಗಾಗಿ, ಯಾರಿಗೂ ಕೊರತೆ ಆಗದಂತೆ ಮತ್ತು ಎಷ್ಟೇ ಜನರು ಬಂದರೂ ಅವರನ್ನು ನಿಭಾಯಿಸಲು ಊಟದ ಕೌಂಟರ್​ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಸ್ಥಳೀಯ ಪದಾರ್ಥಗಳಿಗೆ ಹೆಚ್ಚು ಒತ್ತು ಕೊಟ್ಟು ಊಟದ ಮೆನು ಸಿದ್ಧಪಡಿಸಲಾಗಿದೆ. ಊಟದ ವ್ಯವಸ್ಥೆ ನಿರ್ವಹಣೆಗಾಗಿ ಅಧಿಕಾರಿಗಳು, ಪಿಡಿಒಗಳು, ಬಿಲ್‌ ಕಲೆಕ್ಟರ್‌ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿಯನ್ನು ನೇಮಿಸಲಾಗಿದೆ.' -ರಘುನಂದನ್ ಮೂರ್ತಿ, ಜಿಲ್ಲಾಧಿಕಾರಿ

ಇದನ್ನೂ ಓದಿ: ನಾಳೆಯಿಂದ ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ; ಅಂತಿಮ ಹಂತದ ಸಿದ್ಧತೆ

Last Updated : Jan 5, 2023, 7:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.