ETV Bharat / state

ಬೆಳೆ ಜೊತೆ ರೈತನ ಬಾಳು ನಾಶ ಮಾಡಿದ ಮಳೆರಾಯ: ಕೇಳೋರಿಲ್ಲ ಇವರ ಗೋಳು

author img

By

Published : Oct 22, 2020, 8:31 AM IST

Updated : Oct 22, 2020, 9:24 AM IST

ಜಿಲ್ಲೆಯಲ್ಲಿ ರೈತರು ಬೆಳೆದ ಮೆಕ್ಕೆಜೋಳ, ಸೋಯಾಬಿನ್ ಮಳೆರಾಯನ ಆರ್ಭಟಕ್ಕೆ ಹಾಳಾಗಿವೆ. ಮೆಕ್ಕೆಜೋಳದ ತೆನೆಗಳು ಗಿಡದಲ್ಲಿ ಹಾಳಾಗಲಾರಂಭಿಸಿವೆ. ಸೋಯಾಬಿನ್ ಕೊಳೆಯಲಾರಂಭಿಸಿದೆ.

Heavy rains destroyed soybean, peanuts, maize and cotton crops In Haveri District
ಬೆಳೆ ಜೊತೆ ರೈತನ ಬಾಳು ನಾಶ ಮಾಡಿದ ಮಳೆರಾಯ

ಹಾವೇರಿ: ಜಿಲ್ಲೆಯ ರೈತ ಮಳೆಯಿಂದ ಅಕ್ಷರಶಃ ಹೈರಾಣಾಗಿದ್ದಾನೆ. ರೈತ ಬೆಳೆದ ಸೋಯಾಬಿನ್, ಶೇಂಗಾ, ಮೆಕ್ಕೆಜೋಳ ಹಾಗೂ ಹತ್ತಿ ವರುಣನ ಆರ್ಭಟದಲ್ಲಿ ನೀರುಪಾಲಾಗಿವೆ. ಎಕರೆಗೆ ಸಹಸ್ರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆಗಳನ್ನ ಮಳೆರಾಯ ಹಾಳು ಮಾಡಿದ್ದಾನೆ. ಜಮೀನಿನಲ್ಲಿ ಕಿತ್ತು ಹಾಕಿದ್ದ ಶೇಂಗಾ ಗಿಡಗಳು ನೀರಿನಲ್ಲಿ ತೇಲಿ ಹೋಗಿವೆ. ಇನ್ನೇನು ಶೇಂಗಾ ಬೆಳೆ ಬಂತು ಎನ್ನುವಷ್ಟರಲ್ಲಿ ಮಳೆ ಬಂದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹತ್ತಿ ಬೆಳೆ ಹಾಳಾಗಿದ್ದು, ತಮ್ಮ ಗೋಳು ಕೇಳಲು ಅಧಿಕಾರಿಗಳು, ಜನಪ್ರತಿನಿಧಿಗಳು ಬರದಿರುವುದು ರೈತರಿಗೆ ಬೇಸರ ತರಿಸಿದೆ.

ಭಾರಿ ಮಳೆಗೆ ಬೆಳೆಗಳು ನಾಶ

ಜಿಲ್ಲೆಯ ಪ್ರಮುಖ ಬೆಳೆಗಳೆಂದರೆ ಹತ್ತಿ, ಮೆಕ್ಕೆಜೋಳ, ಶೇಂಗಾ ಹಾಗೂ ಸೋಯಾಬಿನ್. ಈ ಬೆಳೆಗಳು ಬೆಳೆದು ನಿಂತಿದ್ದು, ಇನ್ನೇನು ರೈತರ ಕೈಗೆ ಫಸಲು ಬರಬೇಕಿತ್ತು. ಆದರೆ ರೈತನ ಈ ಆಸೆಗೆ ಮಳೆರಾಯ ತಣ್ಣೀರು ಎರಚಿದ್ದಾನೆ. ಮಳೆರಾಯನ ಆರ್ಭಟಕ್ಕೆ ಈ ಬೆಳೆಗಳು ನೀರುಪಾಲಾಗಿವೆ. ಬಹುತೇಕ ರೈತರು ಶೇಂಗಾ ಕಿತ್ತು ಜಮೀನಿನಲ್ಲಿ ಒಣಗಲು ಹಾಕಿದ್ದಾರೆ. ಇದೇ ಸಮಯದಲ್ಲಿ ಸುರಿದ ಮಳೆಯಿಂದ ಶೇಂಗಾ ಬೆಳೆ ಹಾಳಾಗಿದೆ. ಶೇಂಗಾ ನೀರಿನಲ್ಲಿ ತೋಯ್ದು ಅಲ್ಲಿಯೇ ಮೊಳಕೆ ಒಡೆಯಲಾರಂಭಿಸಿದೆ. ಇನ್ನು ರೈತರ ರಾಸುಗಳಿಗೆ ಮೇವಾಗಬೇಕಿದ್ದ ಶೇಂಗಾ ಸೊಪ್ಪು ನೀರಿನಲ್ಲಿ ತೇಲಿ ಹೋಗಿದೆ. ಇಷ್ಟು ದಿನ ಕಷ್ಟಪಟ್ಟು ಬೆಳೆದ ಶೇಂಗಾ ಇನ್ನೇನು ಕೈಗೆ ಬರುತ್ತಿತ್ತು. ಅಷ್ಟರಲ್ಲಿ ಮಳೆರಾಯ ಅಬ್ಬರಿಸಿದ್ದು, ಬೆಳೆ ನೀರುಪಾಲಾಗಿದೆ ಎನ್ನುತ್ತಿದ್ದಾರೆ ರೈತರು.

ಇನ್ನು ಹತ್ತಿ ಬೆಳೆ ಸಹ ಮಳೆಗೆ ಹಾಳಾಗಿದೆ. ಗಿಡದಲ್ಲಿ ಬಿಟ್ಟ ಹತ್ತಿ ಮಳೆಗೆ ತೊಯ್ದು ಹತ್ತಿ ಬೀಜಗಳು ಸಹ ಮೊಳಕೆ ಒಡೆಯುತ್ತಿವೆ. ಹತ್ತಿ ಗಿಡದಲ್ಲಿರುವ ಕಾಯಿಗಳು ಕೊಳೆತು ಉದುರುತ್ತಿವೆ. ಎಕರೆಗೆ ಸಹಸ್ರಾರು ರೂಪಾಯಿ ಖರ್ಚು ಮಾಡಿ ಹತ್ತಿ ಬೆಳೆದಿದ್ದೇವೆ. ಆಳು, ಬೀಜ, ಗೊಬ್ಬರ ಅಂತಾ ಹಣ ಖರ್ಚು ಮಾಡಿದ್ದೇವೆ. ಈಗ ಮಳೆ ಬಂದು ಎಲ್ಲಾ ಹಾಳಾಯಿತು. ಎಕರೆಗೆ 10 ಕ್ವಿಂಟಾಲ್ ಹತ್ತಿ ನಿರೀಕ್ಷಿಸಿದ್ದ ತಮಗೆ 1 ಕ್ವಿಂಟಾಲ್ ಹತ್ತಿ ಸಹ ಬರದಂತಾಗಿದೆ ಎನ್ನುತ್ತಿದ್ದಾರೆ ರೈತರು.

ಜಿಲ್ಲೆಯಲ್ಲಿ ರೈತರು ಬೆಳೆದ ಮೆಕ್ಕೆಜೋಳ, ಸೋಯಾಬಿನ್ ಮಳೆರಾಯನ ಆರ್ಭಟಕ್ಕೆ ಹಾಳಾಗಿವೆ. ಮೆಕ್ಕೆಜೋಳದ ತೆನೆಗಳು ಗಿಡದಲ್ಲಿ ಹಾಳಾಗಲಾರಂಭಿಸಿವೆ. ಸೋಯಾಬಿನ್ ಕೊಳೆಯಲಾರಂಭಿಸಿದೆ. ಮಳೆರಾಯನ ಆರ್ಭಟದಿಂದ ನಲುಗಿರುವ ರೈತರ ನೆರವಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಧಾವಿಸಬೇಕಿದೆ.

Last Updated : Oct 22, 2020, 9:24 AM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.