ETV Bharat / state

ಹಾವೇರಿಯ ಐತಿಹಾಸಿಕ ಹೆಗ್ಗೇರಿ ಕೆರೆಗೆ ಬೇಕಿದೆ ಕಾಯಕಲ್ಪ

author img

By

Published : Sep 3, 2022, 9:08 PM IST

ಹಾವೇರಿ ನಗರದ ಐತಿಹಾಸಿಕ ಹೆಗ್ಗೇರಿ ಕೆರೆ ತುಂಬಿದ್ದು, ಸ್ಥಳೀಯರನ್ನು ಆಕರ್ಷಸುತ್ತಿದೆ. ಜೊತೆಗೆ ಈ ಕೆರೆಯನ್ನು ಅಭಿವೃದ್ಧಿಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

haveris-heggeri-lake-needs-a-development
ಹಾವೇರಿಯ ಐತಿಹಾಸಿಕ ಹೆಗ್ಗೇರಿ ಕೆರೆಗೆ ಬೇಕಿದೆ ಕಾಯಕಲ್ಪ

ಹಾವೇರಿ : ನಗರದ ಸಮೀಪ ಇರುವ ಐತಿಹಾಸಿಕ ಹೆಗ್ಗೇರಿ ಕೆರೆ ಇದೀಗ ಭರಪೂರ ತುಂಬಿದೆ. ಸುಮಾರು 900 ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿರುವ ಕೆರೆ ತುಂಬಿದ್ದು, ಸ್ಥಳೀಯರನ್ನು ಆಕರ್ಷಿಸುತ್ತಿದೆ. ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಇಲ್ಲಿನ ಕೆರೆಕೋಡಿ ಬಿದ್ದಿದೆ.

ಸುಮಾರು 50 ಅಡಿ ಉದ್ದದ ಕಟ್ಟೆಯಿಂದ ನೀರು ಧುಮುಕುತ್ತಿದೆ. ಸುಮಾರು 10 ಅಡಿ ಎತ್ತರದಿಂದ ನೀರು ಬೀಳುವ ದೃಶ್ಯ ನಯನ ಮನೋಹರವಾಗಿದೆ. ಕೆರೆಯಿಂದ ಕೋಡಿ ಬಿದ್ದ ನೀರು ಹರಿದು ಹಳ್ಳವಾಗಿ ಮಾರ್ಪಟ್ಟು ಹಾವೇರಿಯಿಂದ ಅಗಡಿ ಗ್ರಾಮದವರೆಗೆ ಹರಿಯುತ್ತದೆ. ಕೋಡಿ ಬಿದ್ದ ದೃಶ್ಯ ಸುಂದರವಾಗಿದ್ದು ನಗರವಾಸಿಗಳು ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಹೆಗ್ಗೇರಿಗೆ ಆಗಮಿಸುತ್ತಿದ್ದಾರೆ.

ಹಾವೇರಿಯ ಐತಿಹಾಸಿಕ ಹೆಗ್ಗೇರಿ ಕೆರೆಗೆ ಬೇಕಿದೆ ಕಾಯಕಲ್ಪ

ಬಹಳ ವರ್ಷಗಳಿಂದ ಕೆರೆಯಲ್ಲಿ ನೀರು ತುಂಬುತ್ತಿದ್ದು, ಕೆರೆಯ ಹೂಳು ಎತ್ತುವ ಕೆಲಸವೂ ಮಾಡಲಾಗಿಲ್ಲ. ಜೊತೆಗೆ ಈ ಕೆರೆಯನ್ನು ಒತ್ತುವರಿ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಕೆರೆಯ ಸುತ್ತಲೂ ಬೇಲಿ ಹಾಕಬೇಕು. ಅಲ್ಲದೆ ಕೆರೆ ಕೋಡಿ ಬಿದ್ದ ನಂತರ ಹರಿಯುವ ನೀರು ಪೋಲಾಗುತ್ತಿದ್ದು, ಹಾವೇರಿ ನಗರದಲ್ಲಿನ ನೀರಿನ ಸಮಸ್ಯೆಯನ್ನು ನೀಗಿಸಲು ಈ ನೀರು ಬಳಸಲು ಕ್ರಮ ವಹಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

ಕೆರೆಯ ಅಂಚಿನಲ್ಲಿ ನಿರ್ಮಿಸಲಾಗುತ್ತಿರುವ ಗ್ಲಾಸ್ ಹೌಸ್ ನಿರ್ಮಾಣ ಅರ್ಧಕ್ಕೆ ನಿಂತಿದ್ದು ಕೆರೆಯ ಸೌಂದರ್ಯಕ್ಕೆ ಅಡ್ಡಿ ಉಂಟು ಮಾಡುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೆ ಗ್ಲಾಸ್ ಹೌಸ್ ನಿರ್ಮಾಣ ಮಾಡಿದರೆ, ಈ ಪ್ರದೇಶ ಪ್ರವಾಸಿ ತಾಣವಾಗಿ ಇನ್ನಷ್ಟು ಜನರನ್ನು ಸೆಳೆಯುತ್ತದೆ. ಜೊತೆಗೆ ಈ ಕೆರೆಯು ರಾಷ್ಟ್ರೀಯ ಹೆದ್ದಾರಿ ನಾಲ್ಕರ ಪಕ್ಕದಲ್ಲಿಯೇ ಇದ್ದರೂ ಕೆರೆ ವೀಕ್ಷಣೆಗೆ ಬರಲು ಸರಿಯಾದ ಮಾರ್ಗವಿಲ್ಲ. ಈ ಬಗ್ಗೆ ಹಾವೇರಿ ನಗರಸಭೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ರಾಜ್ಯದ ಗಮನ ಸೆಳೆದ ಚಿಕ್ಕಬಳ್ಳಾಪುರ ಮಾದರಿ ಶಾಲೆಯ ಶಿಕ್ಷಕನಿಗೆ ರಾಜ್ಯ ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.