ETV Bharat / state

ಉಪಚುನಾವಣೆ : ಹಾನಗಲ್‌ನಲ್ಲಿ ಶೇ. 83ರಷ್ಟು ವೋಟಿಂಗ್..

author img

By

Published : Oct 30, 2021, 8:21 PM IST

Updated : Oct 30, 2021, 9:02 PM IST

33 ಸೂಕ್ಷ್ಮ, 3 ಅತಿಸೂಕ್ಷ್ಮ ಮತಗಟ್ಟಿಗಳನ್ನು ಗುರುತಿಸಲಾಗಿತ್ತು. 141 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಕ್ಷೇತ್ರದಲ್ಲಿ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದ್ದು, 13 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ..

ಹಾನಗಲ್​​​​‌ ಕ್ಷೇತ್ರದಲ್ಲಿ ಶಾಂತಿಯುತ ಮತದಾನ
ಹಾನಗಲ್​​​​‌ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ಹಾವೇರಿ : ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಇಂದು ನಡೆಯಿತು. ಸಂಜೆಯ ಏಳು ಗಂಟೆಯವರೆಗೆ ನಡೆದ ಮತದಾನದಲ್ಲಿ ಜನರು ಶಾಂತಿಯುತವಾಗಿ ಮತದಾನ ಮಾಡಿದರು. ಏಳು ಗಂಟೆಯ ವೇಳೆಗೆ ಕ್ಷೇತ್ರದಲ್ಲಿ ಸುಮಾರು ಶೇ.83.44ರಷ್ಟು ಮತದಾನವಾಗಿದೆ.

ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾದ ಮತದಾನ ಬೆಳಗ್ಗೆ 11ಗಂಟೆ ವೇಳೆಗೆ ಬಿರುಸು ಪಡೆಯಿತು. ಬೆಳಗ್ಗೆ 9 ಗಂಟೆಯ ವೇಳೆ ಶೇ. 10.01ರಷ್ಟು ಮತದಾನವಾಗಿತ್ತು. 11ಗಂಟೆ ವೇಳೆಗೆ ಶೇ. 24.11ರಷ್ಟು, ಮಧ್ಯಾಹ್ನ 1 ಗಂಟೆಗೆ ಶೇ.44.59, 3 ಗಂಟೆ ವೇಳೆಗೆ 62.72ರಷ್ಟು ಹಾಗೂ ಸಂಜೆ 5 ಗಂಟೆ ವೇಳೆಗೆ ಶೇ. 77.90ರಷ್ಟು ಮತದಾನ, ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಶೇ. 83.44ರಷ್ಟು ಮತದಾನವಾಗಿದೆ.

ಹಾನಗಲ್‌ನಲ್ಲಿ ಶತಾಯುಶಿ ಈರಮ್ಮ ಹಳೇಕೋಟಿ ಮತದಾನ ಮಾಡುವ ಮೂಲಕ ಆಚ್ಚರಿ ಮೂಡಿಸಿದರು. ಹೊಸದಾಗಿ 18 ವರ್ಷ ವರ್ಷ ತುಂಬಿದ ಯುವಕ-ಯುವತಿಯರು ಸಂಭ್ರಮದಿಂದ ಮತದಾನ ಮಾಡಿದರು. ಇನ್ನು, ವಿಕಲಚೇತನರು ವ್ಹೀಲ್ ಚೇರ್, ತ್ರಿಚಕ್ರವಾಹನಗಳಲ್ಲಿ ಆಗಮಿಸಿ ಮತದಾನ ಮಾಡಿದರು.

ಹಾನಗಲ್‌ನಲ್ಲಿ ಶೇ. 83ರಷ್ಟು ವೋಟಿಂಗ್

ಕೂಡಲದಲ್ಲಿ ಕೂಡಲಗುರುನಂಜೇಶ್ವರ ಮಠದ ಮಹೇಶ ಸ್ವಾಮೀಜಿ ಮತದಾನ ಮಾಡಿದರು. ಹಾನಗಲ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ, ಜೆಡಿಎಸ್ ಅಭ್ಯರ್ಥಿ ನಿಯಾಜ ಶೇಖ್, ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಮತ ಚಲಾವಣೆ ಮಾಡಿದರು.

ಹಾಗೇ ಶ್ರೀನಿವಾಸ್ ಮಾನೆ ಪತ್ನಿ ಉಷಾ ಸೇರಿ ಇತರರು ಮತ ಚಲಾವಣೆ ಮಾಡಿದರು. ಸಂಸದ ಶಿವಕುಮಾರ್ ಉದಾಸಿ ಪತ್ನಿ ರೇವತಿ, ತಾಯಿ ನೀಲಮ್ಮ ಸಹೋದರಿ ಶಿವಗಂಗ ಮತ್ತು ಮಗಳು ಪಾವನಾ ಜೊತೆ ಆಗಮಿಸಿ ಮತದಾನ ಮಾಡಿದರು.

ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಮತದಾನ ಕ್ಷೇತ್ರದಲ್ಲಿರದ ಕಾರಣ ಶಿವರಾಜ್ ಮತಕೇಂದ್ರಗಳಿಗೆ ಓಡಾಡಿ ಮತದಾರರಿಂದ ಮತದಾನ ಮಾಡಿಸಿದರು. ಕ್ಷೇತ್ರದ 263 ಮತಕೇಂದ್ರಗಳಲ್ಲಿ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ. ಎರಡು ಸಖಿ ಪಿಂಕ್ ಬೂತ್ ಮತ್ತು ಒಂದು ವಿಕಲಚೇತನ ಕೇಂದ್ರಗಳಲ್ಲಿ ಮತದಾನ ನಡೆಯಿತು.

33 ಸೂಕ್ಷ್ಮ, 3 ಅತಿಸೂಕ್ಷ್ಮ ಮತಗಟ್ಟಿಗಳನ್ನು ಗುರುತಿಸಲಾಗಿತ್ತು. 141 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಕ್ಷೇತ್ರದಲ್ಲಿ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದ್ದು, 13 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.

ಮತದಾನ ಮುಗಿಯುತ್ತಿದ್ದಂತೆ ಮತಯಂತ್ರಗಳನ್ನು ಸೀಲ್ ಮಾಡುವ ಮೂಲಕ ಭದ್ರಪಡಿಸಲಾಯಿತು. ನಂತರ ಹಾನಗಲ್ ಕುಮಾರೇಶ್ವರ ಕಾಲೇಜಿನಲ್ಲಿ ಡಿಮಸ್ಟರಿಂಗ್ ಮಾಡಲಾಯಿತು.

ಅಲ್ಲಿಂದ ಮತಯಂತ್ರಗಳನ್ನು ಮತ ಎಣಿಕೆ ನಡೆಯುವ ಹಾವೇರಿಯ ದೇವಗಿರಿ ಹೊರವಲಯದಲ್ಲಿರುವ ಸರ್ಕಾರಿ ಇಂಜನಿಯರಿಂಗ್ ಕಾಲೇಜಿಗೆ ಬಿಗಿ ಭದ್ರತೆಯಲ್ಲಿ ತೆಗೆದುಕೊಂಡು ಹೋಗಲಾಯಿತು. ನಂತರ ಕಾಲೇಜಿನಲ್ಲಿ ಬಿಗಿಭದ್ರತೆಯಲ್ಲಿ ಮತಯಂತ್ರಗಳನ್ನು ಇರಿಸಲಾಗಿದೆ.

ಮತಯಂತ್ರಗಳಿಗೆ ಮೂರು ಹಂತದ ರಕ್ಷಣೆ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಇಲಾಖೆಯ ಸರ್ಪಗಾವಲಿನಲ್ಲಿ ಮತಯಂತ್ರಗಳನ್ನು ಭದ್ರಪಡಿಸಲಾಗಿದೆ. ನವಂಬರ್ ಎರಡರಂದು ಮತ ಏಣಿಕೆ ಕಾರ್ಯ ನಡೆಯಲಿದ್ದು, ಅಂದು ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.

Last Updated : Oct 30, 2021, 9:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.